ಜ್ಯೋತಿಷ್ಯ ಶಾಸ್ತ್ರ ಸಲಹೆ ನೀಡಲು ಸರ್ಕಾರಿ ಅಧಿಕಾರಿಗೆ ಅನುಮತಿ ನೀಡಿದ ಸರ್ಕಾರ

ಬೆಂಗಳೂರು; ಸರ್ಕಾರಿ ಕಛೇರಿ ಕೆಲಸಕ್ಕೆ ಯಾವುದೇ ತೊಂದರೆಯಾಗದಂತೆ ಬಿಡುವಿನ ವೇಳೆಯಲ್ಲಿ ಜ್ಯೋತಿಷ್ಯ ಶಾಸ್ತ್ರದ ಸಲಹೆ ನೀಡಲು ಸಹಕಾರ ಸಂಘಗಳ ಜಂಟಿ ನಿಬಂಧಕರೊಬ್ಬರಿಗೆ ಸರ್ಕಾರವು ಅನುಮತಿ ನೀಡಿರುವುದು ಇದೀಗ ಬಹಿರಂಗವಾಗಿದೆ.

 

ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮ 2021ರ 18ರಲ್ಲಿ ನಿರ್ದಿಷ್ಟವಾಗಿ ಜ್ಯೋತಿಷ್ಯ ಶಾಸ್ತ್ರದ ಸಲಹೆ ನೀಡುವ ಬಗ್ಗೆ ಏನನ್ನೂ ಸ್ಪಷ್ಟಪಡಿಸದೇ ಮತ್ತು ಉಲ್ಲೇಖಿಸದೇ ಇದ್ದರೂ ಸಹ ಸಹಕಾರ ಇಲಾಖೆಯು ಈ ಅನುಮತಿ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಶಿವಮೊಗ್ಗದ ಮಲವಗೊಪ್ಪದಲ್ಲಿರುವ ಭದ್ರಾ ಕಾಡಾದಲ್ಲಿ ಭೂ ಅಭಿವೃದ್ಧಿ ಅಧಿಕಾರಿಯಾಗಿರುವ ಡಾ ನಾಗೇಶ್‌ ಎಸ್‌ ಡೋಂಗರೆ ಅವರಿಗೆ 2023ರ ಸೆ.27ರಂದು ಈ ಅನುಮತಿ ನೀಡಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಜ್ಯೋತಿಷ್ಯ ಶಾಸ್ತ್ರದ ಸಲಹೆ ನೀಡುವ ಸಂಬಂಧ ಡಾ ನಾಗೇಶ್‌ ಎಸ್‌ ಡೋಂಗರೆ ಅವರು ಅನುಮತಿ ಕೋರಿ ಸರ್ಕಾರಕ್ಕೆ 2023ರ ಆಗಸ್ಟ್‌ 17ರಂದು ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಪರಿಶೀಲಿಸಿದ್ದ ಸಹಕಾರ ಇಲಾಖೆಯು ಜ್ಯೋತಿಷ್ಯ ಶಾಸ್ತ್ರದ ಸಲಹೆ ನೀಡಲು ಅನುಮತಿ ನೀಡಿ (ಸಂ; ಸಿ ಒ / 225/ಇಸಿಎ/2023) ಪತ್ರ ಬರೆದಿದೆ. ಇದಕ್ಕೆ ಸಚಿವ ಕೆ ಎನ್‌ ರಾಜಣ್ಣ ಅವರೂ ಸಹ ಅನುಮೋದಿಸಿದ್ದಾರೆ ಎಂದು ತಿಳಿದು ಬಂದಿದೆ.

 

‘ಮನವಿಯನ್ನು ಪರಿಶೀಲಿಸಲಾಗಿದ್ದು ಸರ್ಕಾರಿ ಕಚೇರಿ ಕೆಲಸಕ್ಕೆ ಯಾವುದೇ ತೊಂದರೆಯಾಗದಂತೆ ತಮಗೆ ಬಿಡುವಿನ ವೇಳೆಯಲ್ಲಿ ಕಚೇರಿ ಕೆಲಸದ ನಂತರ ಜ್ಯೋತಿಷ್ಯ ಶಾಸ್ತ್ರದ ಸಲಹೆ ನೀಡಲು ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮ 2021ರ 18ರ ಅನುಸಾರ ಅನುಮತಿ ನೀಡಲಾಗಿದೆ. ಹಾಗೂ ಸಲಹೆಯಿಂದ ಬರುವ ಗೌರವ ಸಂಭಾವನೆಯನ್ನು ತಮ್ಮ ಆಸ್ತಿ ಮತ್ತು ಹೊಣೆಗಾರಿಕೆ ವಿವರಗಳಲ್ಲಿ ನಮೂದಿಸುವ ಷರತ್ತುಗಳಿಗೆ ಒಳಪಟ್ಟು ಅನುಮತಿ ನೀಡಲಾಗಿದೆ,’ ಎಂದು ಸಹಕಾರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯು ಪತ್ರದಲ್ಲಿ ನಿರ್ದೇಶಿಸಿದ್ದಾರೆ.

 

ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮ 2021ರ 18ರಲ್ಲೇನಿದೆ?

 

ಯಾರೇ ಸರ್ಕಾರಿ ನೌಕರನು, ನಿಯಮಿಸಲಾದ ಪ್ರಾಧಿಕಾರದಿಂದ ಪೂರ್ವ ಮಂಜೂರಾತಿಯನ್ನು ಪಡೆದ ಹೊರತು, ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಯಾವುದೇ ರೀತಿಯ ವ್ಯಾಪಾರದಲ್ಲಿ ಅಥವಾ ವ್ಯವಹಾರದಲ್ಲಿ ತೊಡಗತಕ್ಕದ್ದಲ್ಲ ಅಥವಾ ಯಾವುದೇ ಇತರೆ ಉದ್ಯೋಗಕ್ಕಾಗಿ ಮಾತುಕತೆ ನಡೆಸಬಾರದು. ಅಥವಾ ಯಾವುದೇ ಇತರೆ ಉದ್ಯೋಗ ಕೈಗೊಳ್ಳಬಾರದು.

 

ಸಾಮಾಜಿಕ ಅಥವಾ ಧರ್ಮಾರ್ಥ ಸ್ವರೂಪದ ಗೌರವಾರ್ಥ ಕೆಲಸಗಳನ್ನು ಅಥವಾ ಸಾಹಿತ್ಯ, ಕಲಾತ್ಮಕ ಅಥವಾ ವೈಜ್ಞಾನಿಕ ಸ್ವರೂಪದ ಸಾಂದರ್ಭಿಕ ಕೆಲಸಗಳನ್ನು ಷರತ್ತುಗಳಿಗೊಳಪಟ್ಟು ಕೈಗೊಳ್ಳಬಹುದು.
ಅಂಥ ಯಾವುದೇ ಕೆಲಸಗಳನ್ನು ತಾನು ಕೈಗೊಂಡ ಒಂದು ತಿಂಗಳೊಳಗಾಗಿ ಅವನು ಸರ್ಕಾರಕ್ಕೆ ಅದರ ಸಂಪೂರ್ಣ ವಿವರಗಳನ್ನು ವರದಿ ಮಾಡಬೇಕು. ಅದರಿಂದ ಆತನ ಅಧಿಕೃತ ಕರ್ತವ್ಯಗಳಿಗೆ ತೊಂದರೆಯಾಗಬಾರದು ಮತ್ತು ಯಾವುದೇ ಅಂಥ ಕೆಲಸವನ್ನು ಮುಂದುವರೆಸಬಾರದು ಎಂದು ಸರ್ಕಾರವು ನಿರ್ದೇಶಿಸಿದರೆ ಅಂಥ ಕೆಲಸವನ್ನು ನಿಲ್ಲಿಸಬೇಕು ಎಂದು ಹೇಳಿದೆ.

 

ಯಾವುದೇ ಅಂಥ ಕೆಲಸವು ಚುನಾವಣೀಯ ಪದವನ್ನು ಧಾರಣ ಮಾಡುವುದನ್ನು ಒಳಗೊಂಡಿದ್ದರೇ ಅಥವಾ ನಿಯಮಿಸಲಾದ ಪ್ರಾಧಿಕಾರದ ಪೂರ್ವ ಮಂಜೂರಾತಿಯಿಲ್ಲದೇ ಅಂತಹ ಯಾವುದೇ ಪದದ ಚುನಾವಣೆಗೆ ಸ್ಪರ್ಧಿಸಬಾರದು.

 

ಸರ್ಕಾರಿ ನೌಕರನು ತನ್ನ ಅಥವಾ ತನ್ನ ಪತ್ನಿ ಅಥವಾ ಪತಿಯ ಅಥವಾ ತನ್ನ ಕುಟುಂಬದ ಯಾರೇ ಇತರ ಸದಸ್ಯನ ಒಡೆತನದಲ್ಲಿರುವ ಅಥವಾ ನಿರ್ವಹಣೆಯಲ್ಲಿರುವ ವ್ಯವಹಾರವನ್ನು ಅಥವಾ ವಿಮಾ ಏಜೆನ್ಸಿಯನ್ನು ಅಥವಾ ಕಮಿಷನ್‌ ಏಜೆನ್ಸಿಯನ್ನು ಬೆಂಬಲಿಸಿ ಪ್ರಚಾರ ಮಾಡಿದರೆ ಈ ನಿಯಮದ ಉಲ್ಲಂಘನೆಯಾಗಲಿದೆ.

 

ಪ್ರತಿಯಿಒಬ್ಬ ಸರ್ಕಾರಿ ನೌಕರನು ಅಥವಾ ಅವನ ಕುಟುಂಬದ ಯಾರೇ ಸದಸ್ಯನು ವ್ಯಾಪಾರದಲ್ಲಿ ಅಥವಾ ವ್ಯವಹಾರದಲ್ಲಿ ತೊಡಗಿದ್ದರೆ ಅಥವಾ ವಿಮಾ ಏಜೆನ್ಸಿಯ ಅಥವಾ ಕಮಿಷನ್‌ ಏಜೆನ್ಸಿಯ ಒಡೆತನ ಹೊಂದಿದ್ದರೇ ಅಥವಾ ನರ್ವಿಹಣೆ ಮಾಡುತ್ತಿದ್ದರೇ ಆ ಬಗ್ಗೆ ಪ್ರಾಧಿಕಾರಕ್ಕೆ ವರದಿ ಮಾಡಬೇಕು.

 

ಜಾರಿಯಲ್ಲಿರುವ ಇತರ ಯಾವುದೇ ಕಾನೂನಿನ ಮೇರೆಗೆ ನೋಂದಾಯಿಸಬೇಕಾದ ಅಗತ್ಯವಿರುವ ಯಾವುದೇ ಬ್ಯಾಂಕ್‌ನ್ನು ಅಥವಾ ಇತರ ಕಂಪನಿಯನ್ನು ಅಥವಾ ವಾಣಿಜ್ಯ ಉದ್ದೇಶಕ್ಕಾಗಿ ಯಾವುದೇ ಸಹಕಾರ ಸಂಘವನ್ನು ನಿಯಮಿಸಲಾದ ಪ್ರಾಧಿಕಾರದ ಪೂರ್ವ ಮಂಜೂರಾತಿ ಪಡೆಯದೇ ನೋಂದಾಯಿಸುವ ಉತ್ತೇಜಿಸುವ ಅಥವಾ ನಿರ್ವಹಣೆ ಮಾಡುವ ಕಾರ್ಯದಲ್ಲಿ ಪಾಲ್ಗೊಳ್ಳಬಾರದು.

 

ಯಾರೇ ಸರ್ಕಾರಿ ನೌಕರನು ನಿಯಮಿಸಿದ ಪ್ರಾಧಿಕಾರದಿಂದ ಸಾಮಾನ್ಯ ಅಥವಾ ವಿಶೇಷ ಮಂಜೂರಾತಿ ಪಡೆಯದೇ ಯಾವುದೇ ಸಾರ್ವಜನಿಕರ ಸಂಸ್ಥೆಗೆ ಅಥವಾ ಯಾರೇ ಖಾಸಗಿ ವ್ಯಕ್ತಿಗೆ ಮಾಡಿಕೊಟ್ಟ ಕೆಲಸಕ್ಕಾಗಿ ಯಾವುದೇ ಶುಲ್ಕವನ್ನ ತೆಗೆದುಕೊಳ್ಳಬಾರದು ಎಂದು ಸೂಚಿಸಿದೆ.

the fil favicon

SUPPORT THE FILE

Latest News

Related Posts