ಬೆಂಗಳೂರು; ಗ್ಯಾರಂಟಿ ಯೋಜನೆಗಳಿಗೆ ಸಂಪನ್ಮೂಲ ಕ್ರೋಢೀಕರಿಸುವ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ವಿವಿಧ ಇಲಾಖೆಗಳ ಅನುದಾನ ಮತ್ತು ಕೆಲ ಕಾರ್ಯಕ್ರಮಗಳಿಗೆ ಅನುದಾನ ಕಡಿತಗೊಳಿಸಿರುವ ನಡುವೆಯೇ ಹಲವು ಇಲಾಖೆಗಳ ಸಿಬ್ಬಂದಿ ವೇತನಕ್ಕೂ ಅನುದಾನ ಕೊರತೆಯಾಗಿರುವುದು ಇದೀಗ ಬಹಿರಂಗವಾಗಿದೆ.
ವಿಶೇಷವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶನಾಲಯದ ಅಧಿಕಾರಿಗಳು, ರವೀಂದ್ರ ಕಲಾಕ್ಷೇತ್ರ, ಕನ್ನಡ ಪುಸ್ತಕ ಪ್ರಾಧಿಕಾರದ ಸಿಬ್ಬಂದಿ ವೇತನ, ತುಟ್ಟಿಭತ್ಯೆ, ವೈದ್ಯಕೀಯ ಭತ್ಯೆಗಳನ್ನು ಪಾವತಿಸಲು ಅನುದಾನ ಕೊರತೆಯಾಗಿದೆ. ಈ ಸಂಬಂಧ ಆರ್ಥಿಕ ಇಲಾಖೆಯು (ಎಫ್‌ಆರ್ ಮತ್ತು ಬಿಸಿಸಿ) ಆಯವ್ಯಯ ಪತ್ರದಲ್ಲಿ ಅಥವಾ ಹೆಚ್ಚಿನ ಹಂಚಿಕೆ ಮತ್ತು ಎಲ್ಲಾ ವಿನಿಯೋಗಗಳಿಗೆ ಅಥವಾ ಮಂಜೂರಾತಿಗೆ ಬೇಕಿರುವ ಪುನರ್ ವಿನಿಯೋಗದ ಕುರಿತು ವಿವರಣೆ ಟಿಪ್ಪಣಿಯನ್ನು ಸಿದ್ದಪಡಿಸಿದೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಮುಂಗಡ ಪತ್ರದ ಪ್ರಧಾನ, ಉಪ ಮತ್ತು ವಿವರವಾದ ಶೀರ್ಷಿಕೆಗಳಡಿಯಲ್ಲಿ ಪಟ್ಟಿ ಮಾಡಿರುವ ಆರ್ಥಿಕ ಇಲಾಖೆಯು 2023-24ನೇ ಸಾಲಿನಲ್ಲಿ ಒದಗಿಸಿದ್ದ ಅನುದಾನ, ಇದುವರೆಗೂ ಆಗಿರುವ ವೆಚ್ಚ, ಸಂಭವನೀಯ ವೆಚ್ಚ, ಅಗತ್ಯವಿರುವ ಹೆಚ್ಚುವರಿ ಅನುದಾನದ ಕುರಿತೂ ಲೆಕ್ಕ ಹಾಕಿದೆ.ಈ ಕುರಿತು ಸಚಿವ ಶಿವರಾಜ್ ತಂಗಡಗಿ ಅವರಿಗೂ ಮಾಹಿತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.
2023-24ನೇ ಸಾಲಿನ ಆಯವ್ಯಯದಲ್ಲಿ 9.17 cr ರು.ಗಳನ್ನು ಒದಗಿಸಲಾಗಿದೆ. ಇದುವರೆಗೆ 4.50 ಕೋಟಿ ರು. ವೆಚ್ಚವಾಗಿದೆ. ಮುಂದಿನ ದಿನಗಳಲ್ಲಿ 5.07 ಕೋಟಿ ರು. ವೆಚ್ಚವಾಗಲಿದೆ ಎಂದು ಅಂದಾಜಿಸಿದೆ. 40.24 ಲಕ್ಷ ರು.ಗಳು ಹೆಚ್ಚುವರಿ ಅನುದಾನ ಅಗತ್ಯವಿದೆ ಎಂದು ಆರ್ಥಿಕ ಇಲಾಖೆ ಲೆಕ್ಕ ಹಾಕಿರುವುದು ಗೊತ್ತಾಗಿದೆ.
ಪುರಸ್ಕೃತ ಖಾಲಿ ಹುದ್ದೆಗಳಿಗಾಗಿ ಅನುದಾನ ಮತ್ತು ಇತರೆ ಭತ್ಯೆಗಳಿಗಾಗಿ 4.54 ಕೋಟಿ ರು.ಗಳನ್ನು ಕಡಿಮೆ ಮಾಡಲು ಪ್ರಸ್ತಾವಿಸಲಾಗಿದೆ. ಪುನರ್ ವಿನಿಯೋಗಕ್ಕೆ 40.24 ಲಕ್ಷ ರು. ಲಭ್ಯವಿದೆ ಎಂದು ತಿಳಿದು ಬಂದಿದೆ.
ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಅಧಿಕಾರಿಗಳಿಗೆ (2205-00-001-0-002) 1.34 ಕೋಟಿ ರು. ವೇತನಕ್ಕೆ ವೆಚ್ಚವಾಗಿದೆ. ಮುಂದಿನ ದಿನಗಳಲ್ಲಿ 1.47 ಕೋಟಿ ರು. ವೆಚ್ಚವಾಗಲಿದೆ. ಹೀಗಾಗಿ 14.73 ಲಕ್ಷ ರು. ಹೆಚ್ಚುವರಿ ಅನುದಾನ ಬೇಕಿದೆ. ವೇತನ ಪಾವತಿಸಲು ಕೊರತೆಯಾಗಿರುತ್ತದೆ ಎಂದು ಆರ್ಥಿಕ ಇಲಾಖೆಯು ಪಟ್ಟಿ ಮಾಡಿರುವುದು ಗೊತ್ತಾಗಿದೆ.
ಅದೇ ರೀತಿ ನಿರ್ದೇಶನಾಲಯದ ಸಿಬ್ಬಂದಿಗಳಿಗೆ (2205-00-01-0-01-003) 1.27 ಕೋಟಿ ರು. ಇದುವರೆಗೂ ವೆಚ್ಚವಾಗಿದೆ. ಮುಂದಿನ ದಿನಲ್ಲಿ 1.45 ಕೋಟಿ ವೆಚ್ಚವಾಗಲಿದೆ. 12.26 ಲಕ್ಷ ರು. ಹೆಚ್ಚುವರಿಯಾಗಿ ಬೇಕಿದೆ. ತುಟ್ಟಿ ಭತ್ಯೆಗೆ ಸಂಬಂಧಿಸಿದಂತೆ (2205-00-001-01-011) 94.32 ಲಕ್ಷ ರು. ಈಗಾಗಲೇ ವೆಚ್ಚವಾಗಿದ್ದು ಮುಂದಿನ ದಿನಗಳಲ್ಲಿ 1.32 ಕೋಟಿ ರು. ವೆಚ್ಚವಾಗಲಿದೆ. ಇನ್ನೂ 5.56 ಲಕ್ಷ ರು. ಹೆಚ್ಚುವರಿಯಾಗಿ ಬೇಕಿದೆ ಎಂದು ಅಂದಾಜಿಸಿದೆ.
ಹಾಗೆಯೇ ಇದೇ ನಿರ್ದೇಶನಾಲಯದ ಇತರೆ ಭತ್ಯೆಗಳಿಗೆ (2205-00-001-01-020) 0.72 ಲಕ್ಷ ರು. ವೆಚ್ಚವಾಗಿದ್ದು, 1.30 ಲಕ್ಷ ರು ಮುಂದಿನ ದಿನಗಳಲ್ಲಿ ವೆಚ್ಚವಾಗಲಿದೆ. 0.02 ಲಕ್ಷ ರು. ಹೆಚ್ಚುವರಿಯಾಗಿ ಬೇಕಿದೆ.
ರವೀಂದ್ರ ಕಲಾ ಕ್ಷೇತ್ರದ ಸಿಬ್ಬಂದಿಗೆ ವೇತನ ಪಾವತಿಸಲು 5.51 ಲಕ್ಷ ರು. ವೆಚ್ಚವಾಗಿದ್ದು ಮುಂದಿನ ದಿನಗಳಲ್ಲಿ 4.67 ಲಕ್ಷ ರು. ವೆಚ್ಚವಾಗಲಿದೆ. ಇನ್ನೂ 1.18 ಲಕ್ಷ ರು. ಹೆಚ್ಚುವರಿಯಾಗಿ ಬೇಕಿದೆ. ಕಲಾ ಕ್ಷೇತ್ರದ ಸಿಬ್ಬಂದಿಗೆ ತುಟ್ಟಿ ಭತ್ಯೆ ಪಾವತಿಸಲು 1.83 ಲಕ್ಷ ರು. ಈಗಾಗಲೇ ವೆಚ್ಚವಾಗಿದ್ದು 2.45 ಲಕ್ಷ ರು. ಮುಂದಿನ ದಿನಗಳಲ್ಲಿ ವೆಚ್ಚ ಮಾಡಬೇಕಿದೆ. 0.28 ಲಕ್ಷ ರು. ಹೆಚ್ಚುವರಿಯಾಗಿ ಬೇಕಿದೆ ಎಂಬುದು ತಿಳಿದು ಬಂದಿದೆ.
ಅದೇ ರೀತಿ ಕಲಾಕ್ಷೇತ್ರದ ಸಿಬ್ಬಂದಿಗೆ ಇತರೆ ಭತ್ಯೆ ಪಾವತಿಸಲು 1.70 ಲಕ್ಷ ರು. ಖರ್ಚಾಗಿದ್ದು ಮುಂದಿನ ದಿನಗಳಲ್ಲಿ 2.06 ಲಕ್ಷ ರು. ವೆಚ್ಚವಾಗಲಿದೆ. 0.19 ಲಕ್ಷ ರು. ಹೆಚ್ಚುವರಿಯಾಗಿ ಬೇಕಿದೆ. ವೈದ್ಯಕೀಯ ಭತ್ಯೆ ಪಾವತಿಸಲು 0.02 ಲಕ್ಷ ರು. ಖರ್ಚಾಗಿದ್ದು 0.09 ಲಕ್ಷ ರು. ವೆಚ್ಚವಾಗಲಿದೆ. 0.01 ಲಕ್ಷ ರು. ಹೆಚ್ಚುವರಿಯಾಗಿ ಬೇಕಿದೆ ಎಂದು ಪ್ರಸ್ತಾವಿಸಿದೆ.
ಕನ್ನಡ ಪುಸ್ತಕ ಪ್ರಾಧಿಕಾರದ ಅಧಿಕಾರಿಗಳಿಗೆ 7.44 ಲಕ್ಷ ರು. ವೇತನಕ್ಕೆ ಇದುವರೆಗೆ ವೆಚ್ಚವಾಗಿದೆ. 9.15 ಲಕ್ಷ ರು. ಸಂಭವನೀಯ ವೆಚ್ಚವಾಗಲಿದೆ. 0.59 ಲಕ್ಷ ರು. ಹೆಚ್ಚುವರಿಯಾಗಿ ಬೇಕಿದೆ. ತುಟ್ಟಿ ಭತ್ಯೆಗೆ 2.70 ಲಕ್ಷ ರು.ಖರ್ಚಾಗಿದ್ದರೇ 4.48 ಲಕ್ಷ ರು. ಸಂಭವನೀಯ ವೆಚ್ಚವಾಗಲಿದೆ. 0.18 ಲಕ್ಷ ರು. ಹೆಚ್ಚುವರಿಯಾಗಿ ಬೇಕಿದೆ. ಇತರೆ ಭತ್ಯೆಗಳಿಗೆ ಸಂಬಂಧಿಸಿದಂತೆ 2.46 ಲಕ್ಷ ರು. ವೆಚ್ಚವಾಗಿದ್ದು, 2.66 ಲಕ್ಷ ರು. ಸಂಭವನೀಯ ವೆಚ್ಚವಾಗಲಿದೆ. 0.15 ಲಕ್ಷ ರು. ಹೆಚ್ಚುವರಿಯಾಗಿ ಬೇಕಿದೆ ಎಂದು ವಿವರಣೆ ಪಟ್ಟಿಯಲ್ಲಿ ನಮೂದಿಸಿರುವುದು ಗೊತ್ತಾಗಿದೆ.