ಟಿಬೆಟಿಯನ್‌ ರೈತರಿಗೆ ದೊರಕದ ಬೆಳೆಸಾಲ, ಬೆಳೆವಿಮೆ; ಪುನರ್ವಸತಿ ನೀತಿ ಅನುಷ್ಠಾನದಲ್ಲಿ ಹಿಂದೆ ಬಿದ್ದ ರಾಜ್ಯ

ಬೆಂಗಳೂರು; ಭಾರತ ಸರ್ಕಾರವು ಜಾರಿಗೆ ತಂದಿದ್ದ ಟಿಬೆಟಿಯನ್‌ ಪುನರ್ವಸತಿ ನೀತಿ 2014ನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವಲ್ಲಿ ಕರ್ನಾಟಕ ಸರ್ಕಾರವು ಹಿಂದೆ ಬಿದ್ದಿರುವುದು ಇದೀಗ ಬಹಿರಂಗವಾಗಿದೆ. ಟಿಬೇಟಿಯನ್‌ ಜನಾಂಗದ ರೈತರಿಗೆ ಬೆಳೆಸಾಲ, ಬೆಳೆವಿಮೆ, ಇನ್‌ಪುಟ್‌ ಸಬ್ಸಿಡಿ ಸೇವೆ ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ವಿವಿಧ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ತಿಳಿಸಿದ್ದಾರೆ.

 

ಟಿಬೆಟಿಯನ್‌ ಕಾಲೋನಿ ರೈತರ ಜಮೀನಿನ ಆರ್‌ಟಿಸಿ ಕಲಂ 11ರಲ್ಲಿ ಇವರ ಹೆಸರುಗಳು ದಾಖಲಾಗಿವೆಯೇ ವಿನಃ ಆರ್‌ಟಿಸಿ ಕಲಂ 09ರಲ್ಲಿ ಸೇರ್ಪಡೆಯಾಗಿಲ್ಲ. ಸರ್ಕಾರವು ಸಹ ಈ ಬಗ್ಗೆ ತೀರ್ಮಾನ ಕೈಗೊಂಡಿಲ್ಲ. ಹೀಗಾಗಿ ಇದುವರೆಗೂ ಬೆಳೆ ಸಾಲ, ಬೆಳೆ ವಿಮೆ, ಇನ್ ಪುಟ್‌ ಸಬ್ಸಿಡಿ ಸೇವೆಗಳು ದೊರಕಿಲ್ಲ ಎಂಬ ಸಮರ್ಥನೆ ನೀಡಿದ್ದಾರೆ.

 

ಈ ಕುರಿತಾಗಿ ‘ದಿ ಫೈಲ್‌’ಗೆ ಟಿಪ್ಪಣಿ ಹಾಳೆಗಳು ( ಕಡತ ಸಂಖ್ಯೆ RD-REH-/81/2020, COMPUTER NUMBER 365128) ಲಭ್ಯವಾಗಿವೆ.

 

ಈ ಕುರಿತು 2020ರಿಂದ 2023ರ ಜೂನ್‌ವರೆಗೂ ಕಂದಾಯ ಇಲಾಖೆಯು ಸತತವಾಗಿ ಸಭೆ ನಡೆಸುತ್ತಿದೆಯಾದರೂ ಇದುವರೆಗೂ ಅಂತಿಮ ತೀರ್ಮಾನವನ್ನು ಕೈಗೊಳ್ಳುವಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಟಿಬೆಟಿಯನ್‌ ಪುನರ್ವಸತಿ ನೀತಿ 2014ನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ವೈಯಕ್ತಿಕ ಗಮನಹರಿಸುವಲ್ಲಿ ಜಿಲ್ಲಾಧಿಕಾರಿಗಳೂ ವಿಫಲರಾಗಿದ್ದಾರೆ. ಈ ಕುರಿತು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಇನ್ನಷ್ಟೇ ಈ ಕುರಿತು ಸಭೆ ನಡೆಸಬೇಕಿದೆ.

 

ಇದೇ ಡಿಸೆಂಬರ್‌ನಲ್ಲಿ ದಲೈಲಾಮಾ ಮತ್ತು ಬರಾಕ್‌ ಒಬಾಮಾ ಅವರು ಕರ್ನಾಟಕಕ್ಕೆ ಭೇಟಿ ನೀಡುತ್ತಿರುವ ಬೆನ್ನಲ್ಲೇ ಟಿಬೆಟಿಯನ್‌ ಪುನರ್ವಸತಿ ನೀತಿ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ ಎಂಬುದು ಮಹತ್ವ ಪಡೆದುಕೊಂಡಿದೆ.

 

ಟಿಬೆಟಿಯನ್‌ ಪುನರ್ವಸತಿ ನೀತಿ 2014ನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ ಎಂದು ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಅವರು ಕಂದಾಯ ಇಲಾಖೆಗೆ ಸರಣಿ ಪತ್ರಗಳನ್ನು ಬರೆದಿದ್ದರೂ ಕಂದಾಯ ಇಲಾಖೆಯು ಸಭೆಗಳನ್ನು ನಡೆಸುವುದರಲ್ಲಿಯೇ ಕಾಲಹರಣ ಮಾಡಿರುವುದು ತಿಳಿದು ಬಂದಿದೆ.

 

ಕರ್ನಾಟಕದ ಕಾರವಾರ, ಚಾಮರಾಜನಗರ, ಮೈಸೂರು ಜಿಲ್ಲೆಯ ವಿವಿಧೆಡೆ ನೆಲೆಸಿರುವ ಟಿಬೆಟಿಯನ್‌ ನಿರಾಶ್ರಿತರಿಗಾಗಿ ಟಿಬೆಟಿಯನ್‌ ಪುನರ್ವಸತಿ ನೀತಿ 2014ನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯವು 2020ರ ಫೆ.20ರಂದು ಪತ್ರದಲ್ಲಿ ತಿಳಿಸಿತ್ತು.

 

ಈ ಸಂಬಂಧ ಕೇಂದ್ರ ಗೃಹ ಸಚಿವಾಲಯದಿಂದ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದಿದ್ದ ವಿಡಿಯೋ ಸಂವಾದ ಸಭೆಯಲ್ಲಿಯೂ ಈ ಕುರಿತು ಚರ್ಚೆ ನಡೆದಿತ್ತು. ಈ ವೇಳೆಯಲ್ಲಿ ಟಿಬೆಟಿಯನ್‌ ಪುನರ್ವಸತಿ ನೀತಿ 2014ನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿಲ್ಲ ಎಂಬ ಅಂಶವನ್ನು ಗಮನಿಸಲಾಗಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಟಿಬೆಟಿಯನ್‌ ರೈತರಿಗೆ ದೊರಕದ ಬೆಳೆಸಾಲ, ಬೆಳೆವಿಮೆ

 

ದೊಂಡೆಲಿಂಗ್‌ ಟಿಬೆಟಿಯನ್‌ ಕಾಲೋನಿ ರೈತರು ಬೆಳೆ ಸಾಲ, ಬೆಳೆವಿಮೆ, ಇನ್‌ಪುಟ್‌ ಸಬ್ಸಿಡಿಯ ಸೇವೆಗಳನ್ನು ಪಡೆಯಲು ಬೇಡಿಕೆ ಇರಿಸಿದ್ದಾರೆ. ಟಿಬೆಟಿಯನ್‌ ಕಾಲೋನಿ ರೈತರ ಜಮೀನಿನ ಆರ್‌ಟಿಸಿ ಕಲಂ 11ರಲ್ಲಿ ಇವರ ಹೆಸರುಗಳು ದಾಖಲಾಗಿವೆ. ಆದರೆ ಈ ಎಲ್ಲಾ ಸೌಲಭ್ಯಗಳನ್ನು ಪಡೆಯಬೇಕಾದಲ್ಲಿ ರೈತರ ಜಮೀನಿನ ಆರ್‌ಟಿಸಿ ಕಲಂ 09ರಲ್ಲಿದ್ದಲ್ಲಿ ಮಾತ್ರ ಈ ಸೌಲಭ್ಯಗಳು ದೊರೆಯುತ್ತವೆ. ಪುನರ್ವಸತಿ ನೀತಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಹಂತದಲ್ಲಿ ಪ್ರಮುಖ ಪಾತ್ರ ವಹಿಸುವ ಕಂದಾಯ ಇಲಾಖೆಯು ಇದುವರೆಗೂ ತಾಂತ್ರಿಕ ತೊಡಕನ್ನು ನಿವಾರಿಸಿಲ್ಲ ಎಂಬುದು ತಿಳಿದು ಬಂದಿದೆ.

 

‘ಬೆಳೆ ಸಾಲ, ಬೆಳೆ ವಿಮೆ, ಇನ್‌ಪುಟ್‌ ಸಬ್ಸಿಡಿಯ ಸೇವೆಗಳು ತಂತ್ರಾಂಶಗಳ ಮೂಲಕ ಕಾರ್ಯನಿರ್ವಹಿಸುವುದರಿಂದ ಭೂಮಿ ತಂತ್ರಾಂಶದೊಂದಿಗೆ ಜೋಡಣೆಯಾಗಿರುವುದರಿಂದ ಈ ತಂತ್ರಾಂಶಗಳಲ್ಲಿ ಬದಲಾವಣೆ ಮಾಡಿದಲ್ಲಿ ಟಿಬೆಟಿಯನ್‌ ರೈತರಿಗೆ ಈ ಸೌಲಭ್ಯಗಳು ದೊರೆಯುತ್ತವೆ,’ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವುದು ಗೊತ್ತಾಗಿದೆ.

 

ಚಾಮರಾಜನಗರ ಜಿಲ್ಲೆಯ ಒಡೆಯರ್‌ ಪಾಳ್ಯ ಗ್ರಾಮದ ಟಿಬೆಟಿಯನ್‌ ಕಾಲೋನಿಗೆ ಪುನರ್ವಸತಿ ನೀತಿ ಅಡಿ ಬರುವ ಸವಲತ್ತುಗಳನ್ನು ಒದಗಿಸುವ ಸಂಬಂಧ 2023ರ ಮಾರ್ಚ್‌ 4ರಂದು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆದಿತ್ತು. ಈ ಗ್ರಾಮದ ಒಟ್ಟು 421 ಟೆಬೆಟಿಯನ್‌ ಜನಾಂಗದ ಕುಟುಂಬದವರಿಗೆ ಪಡಿತರ ಚೀಟಿ ವಿತರಿಸಲಾಗಿದೆ ಎಂಬುದು ತಿಳಿದು ಬಂದಿದೆ.

 

ಕೃಷಿ ಇಲಾಖೆಯಿಂದ ಕೃಷಿ ಸಾಲವನ್ನು ಹೊರತುಪಡಿಸಿ ವಿವಿಧ ಯೋಜನೆಗಳಡಿಯಲ್ಲಿ ಹಂಗಾಮುವಾರು ಬಿತ್ತನೆ ಬೀಜ, ಕೃಷಿ ಯಂತ್ರೋಪಕರಣಗಳು, ಕೃಷಿ ಸಂಸ್ಕರಣಾ ಘಟಕಗಳು, ತುಂತುರು ಹನಿನೀರಾವರಿ ಘಟಕಗಳು, ಸಾವಯವ ಗೊಬ್ಬರ, ಲಘು ಪೋಷಕಾಂಶ ಪರಿಕರಗಳನ್ನು ಸಹಾಯ ಧನದ ರೂಪದಲ್ಲಿ ಒದಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಲ್ಲಿಸಿದ್ದ ವರದಿಯಲ್ಲಿ ವಿವರಿಸಲಾಗಿದೆ.

 

‘ಟಿಬೇಟಿಯನ್‌ ಜನಾಂಗದ ರೈತರಿಗೆ ಬೆಳೆಸಾಲ, ಬೆಳೆವಿಮೆ, ಇನ್‌ಪುಟ್‌ ಸಬ್ಸಿಡಿ ಸೇವೆ ಒದಗಿಸುವಂತೆ ಕೋರಲಾಗಿದೆ. ಈ ಸೌಲಭ್ಯಗಳು ತಂತ್ರಾಂಶದ ಮೂಲಕ ಕಾರ್ಯನಿರ್ವಹಿಸುತ್ತಿದೆ. ಹಾಗೂ ಭೂಮಿ ತಂತ್ರಾಂಶದೊಂದಿಗೆ ಜೋಡಣೆಯಾಗಿರುತ್ತದೆ. ಜಮೀನಿನ ಮಾಲೀಕರ, ಸ್ವಾಧೀನದಾರರಹೆಸರು ಪಹಣಿ ಕಲಂ ನಂ 9ರಲ್ಲಿದ್ಧಾಗ ಮಾತ್ರ ಈ ಎಲ್ಲಾ ಸೌಲಭ್ಯಗಳು ಪಡೆಯಬಹುದು. ಈ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುವುದಿಲ್ಲ,’ ಎಂಬ ಅಂಶವನ್ನು ಸರ್ಕಾರಕ್ಕೆ ಜಿಲ್ಲಾಧಿಕಾರಿಗಳು ತಿಳಿಸಿರುವುದು ಗೊತ್ತಾಗಿದೆ.

 

ದಲೈಲಾಮಾ ನೇತೃತ್ವದಲ್ಲಿ ಟಿಬೇಟಿಯನ್ನರು ಅವರ ಕುಟುಂಬದವರೊಂದಿಗೆ ಭಾರತಕ್ಕೆ ಬಂದು ಸುಮಾರು 50 ವರ್ಷಗಳಿಂದ ನೆಲೆಸಿದ್ದಾರೆ. ಇವರ ಸಮಸ್ಯೆಗಳ ಪರಿಹಾರಕ್ಕೆ ಭಾರತ ಸರ್ಕಾರವು ಸೆಂಟ್ರಲ್‌ ಟಿಬೇಟಿಯನ್‌ ರಿಲೀಫ್‌ ಕಮಿಟಿ ರಚಿಸಲಾಗಿದೆ. ಇದರ ಮೂಲಕ ಭಾರತದ ಕೆಲವು ರಾಜ್ಯಗಳಲ್ಲಿ ಟಿಬೇಟಿಯನ್‌ ಜನಾಂಗದವರು ನೆಲೆಸಿರುವ ಸ್ಥಳ, ಜಾಗಗಳಿಗೆ ಲೀಸ್‌ ಅಗ್ರಿಮೆಂಟ್‌ಗಳನ್ನು ಮಾಡಿಕೊಡಲಾಗಿದೆ.

 

ಭಾರತ ಸರ್ಕಾರವು ಟಿಬೆಟಿಯನ್ ಪುನರ್ವಸತಿ ನೀತಿ 2014 ಅನ್ನು ಅಧಿಕೃತಗೊಳಿಸಿತು. ಟಿಬೆಟಿಯನ್ನರು ವಾಸಿಸುವ ಎಲ್ಲಾ ರಾಜ್ಯಗಳಲ್ಲಿ ಏಕರೂಪದ ನೀತಿಯನ್ನು ಒದಗಿಸುವ ಪ್ರಯತ್ನದಲ್ಲಿ ಈ ನೀತಿಯು ಮಾರ್ಗಸೂಚಿಗಳನ್ನು ಒಳಗೊಂಡಿದೆ. ಮತ್ತು ವಿವಿಧ ಭಾರತೀಯ ಸರ್ಕಾರದ ಯೋಜನೆಗಳು ಮತ್ತು ಪ್ರಯೋಜನಗಳಿಗೆ ಪ್ರವೇಶವನ್ನು ಸಾಮಾನ್ಯಗೊಳಿಸುತ್ತದೆ. ಭೂ ಗುತ್ತಿಗೆಗೆ ಸಂಬಂಧಿಸಿದ ವಿಷಯಗಳು ಮತ್ತು ಕೇಂದ್ರ ಮತ್ತು ರಾಜ್ಯಗಳ ಪ್ರಯೋಜನಗಳನ್ನು ವಿಸ್ತರಿಸುವುದು ಸಹ ನಿರ್ದಿಷ್ಟಪಡಿಸಲಾಗಿದೆ.

 

ಟಿಬೆಟಿಯನ್ ನಿರಾಶ್ರಿತರು ವೃತ್ತಿಪರವಾಗಿ ಅರ್ಹತೆ ಹೊಂದಿರುವ ಯಾವುದೇ ಕ್ಷೇತ್ರದಲ್ಲಿ ಉದ್ಯೋಗಗಳನ್ನು ಮುಂದುವರಿಸಲು ಸಹ ಅನುಮತಿ ನೀಡಬಹುದು. ಸೆಂಟ್ರಲ್ ಟಿಬೆಟಿಯನ್ ರಿಲೀಫ್ ಕಮಿಟಿ (CTRC), ಕೇಂದ್ರ ಟಿಬೆಟಿಯನ್ ಆಡಳಿತದ ಗೃಹ ಇಲಾಖೆಯ ಅಡಿಯಲ್ಲಿ, ಭಾರತ, ನೇಪಾಳ ಮತ್ತು ಭೂತಾನ್‌ನಲ್ಲಿರುವ ಸಾವಿರಾರು ಟಿಬೆಟಿಯನ್ ನಿರಾಶ್ರಿತರಿಗೆ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳನ್ನು ಸಂಘಟಿಸುತ್ತದೆ. CTRC ವ್ಯಕ್ತಿಗಳು, ನೆರವು ಏಜೆನ್ಸಿಗಳು ಮತ್ತು ಭಾರತ ಸರ್ಕಾರದ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತದೆ.

the fil favicon

SUPPORT THE FILE

Latest News

Related Posts