ಕೆಎಸ್‌ಡಿಎಲ್‌ ಉತ್ಪನ್ನಗಳ ಸರಬರಾಜು; 4 (ಜಿ) ವಿನಾಯಿತಿ ಪ್ರಸ್ತಾವ ತಿರಸ್ಕರಿಸಿದ ಸರ್ಕಾರ

ಬೆಂಗಳೂರು; ಲ್ಯಾವೆಂಡರ್, ಬೇವು, ಗುಲಾಬಿ, ಅರಿಶಿಣ ಸೇರಿದಂತೆ ವಿಧದ ರೀತಿಯ ಸಾಬೂನು ಸೇರಿದಂತೆ ಇನ್ನಿತರೆ ಉತ್ಪನ್ನಗಳ ಸರಬರಾಜು ಮಾಡಲು ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ(ಕೆಎಸ್‌ಡಿಎಲ್‌)ಕ್ಕೆ 4(ಜಿ) ವಿನಾಯಿತಿ ನೀಡುವ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯು ತಿರಸ್ಕರಿಸಿರುವುದು ಇದೀಗ ಬಹಿರಂಗವಾಗಿದೆ.

 

ಕೆಎಸ್‌ಡಿಎಲ್‌ ಸಂಸ್ಥೆಗೆ ಸಂಪೂರ್ಣ ಹೊಸ ರೂಪ ನೀಡಿ ಕಾರ್ಪೊರೇಟ್ ಶೈಲಿಯಲ್ಲಿ ಅದರ ಚಟುವಟಿಕೆಗಳು ಇರುವ ಹಾಗೆ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್‌ ಹೇಳಿಕೆ ನೀಡಿದ ಬೆನ್ನಲ್ಲೇ 4 (ಜಿ) ವಿನಾಯಿತಿ ಪ್ರಸ್ತಾಪವು ತಿರಸ್ಕೃತಗೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಕರ್ನಾಟಕ ಸೋಪ್ಸ್‌ ಅಂಡ್‌ ಡಿಟರ್ಜೆಂಟ್‌ ಲಿಮಿಟೆಡ್‌ ಉತ್ಪನ್ನಗಳ ಸರಬರಾಜು ಮಾಡಲು ಆರ್ಥಿಕ ಇಲಾಖೆಯಿಂದ 4(ಜಿ) ವಿನಾಯಿತಿ ಕೋರಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಪರಿಗಣಿಸಲು ಅವಕಾಶವೇ ಇಲ್ಲವೆಂದು ಆರ್ಥಿಕ ಇಲಾಖೆಯು, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ 2023ರ ಸೆ.19ರಂದು ತನ್ನ (ಆಇ 322 ವೆಚ್ಚ-1/2023 ಸಿಐ 9 ಸಿಪಿಎಂ 2023) ಅಭಿಪ್ರಾಯ ತಿಳಿಸಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಕರ್ನಾಟಕ ಸೋಪ್ಸ್‌ ಅಂಡ್‌ ಡಿಟರ್ಜೆಂಟ್‌ ಲಿಮಿಟೆಡ್‌ ಉತ್ಪನ್ನಗಳ ಸರಬರಾಜು ಮಾಡಲು ಆರ್ಥಿಕ ಇಲಾಖೆಯಿಂದ 4(ಜಿ) ವಿನಾಯಿತಿ ನೀಡುವ ಕುರಿತು ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಗಣಿಸಲು ಅವಕಾಶವಾಗುವುದಿಲ್ಲವೆಂದು ಹಾಗೂ ಸಂಗ್ರಹಣಾ ಪ್ರಾಧಿಕಾರಗಳು ಕೇಸ್‌ ಟು ಕೇಸ್‌ ಆಧಾರದಲ್ಲಿ ಕೆಎಸ್‌ಡಿಎಲ್‌ ಸಂಸ್ಥೆ ಸೇವೆಯನ್ನು ಪಡೆಯುವ ಕುರಿತು ಸೂಕ್ತ ಸಮರ್ಥನೆಗಳೊಂದಿಗೆ ನಿರ್ದಿಷ್ಟ ಪ್ರಸ್ತಾವನೆ ಸಲ್ಲಿಸಿದಲ್ಲಿ ಪರಿಶೀಲಿಸಲಾಗುತ್ತದೆ,’ ಎಂದು ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ 2023ರ ಸೆ.19ರಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ತಿಳಿಸಿರುವುದು ಗೊತ್ತಾಗಿದೆ.

 

ಡಾಬರ್, ಹಿಂದೂಸ್ಥಾನ್‌ ಲಿವರ್ ಲಿಮಿಟೆಡ್ ಸೇರಿದಂತೆ ಹಲವು ಕಂಪನಿಗಳು ಮಾರುಕಟ್ಟೆಯಲ್ಲಿ ಸಿಂಹಪಾಲು ಪಡೆದಿವೆ. ಈ ಕಂಪನಿಗಳ ಉತ್ಪನ್ನಗಳೊಂದಿಗೆ ಕೆಎಸ್‌ಡಿಎಲ್‌ ಮಾರುಕಟ್ಟೆಯಲ್ಲಿ ಸೆಣಸಬೇಕಿದೆ. ಹಲವು ಬ್ರ್ಯಾಂಡ್‌ಗಳನ್ನು ಹೊಂದಿರುವ ಕೆಎಸ್‌ಡಿಎಲ್‌ ಸಂಸ್ಥೆಯು ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವ ಭಾಗವಾಗಿಯೇ 4 (ಜಿ) ವಿನಾಯಿತಿ ಕೋರಿತ್ತು. ಈ ವಿನಾಯಿತಿ ನೀಡಿದ್ದಲ್ಲಿ ಕೆಎಸ್‌ಡಿಎಲ್‌ನ ಮಾರುಕಟ್ಟೆ ಜಾಲ ವಿಸ್ತರಣೆಗೆ ಅವಕಾಶವಾಗುತ್ತಿತ್ತು. ಆದರೇ ಆರ್ಥಿಕ ಇಲಾಖೆಯು 4(ಜಿ) ವಿನಾಯಿತಿಯನ್ನು ನೀಡುವ ಪ್ರಸ್ತಾವನೆಯನ್ನೇ ತಿರಸ್ಕರಿಸಿರುವುದು ಅದರ ಮಾರುಕಟ್ಟೆ ಜಾಲ ವಿಸ್ತರಣೆಗೆ ತೊಡಕಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

‘ಕೆಎಸ್‌ಡಿಎಲ್ ಅನ್ನು ಕೇವಲ ಸರಕಾರಿ ಉದ್ದಿಮೆಯಾಗಿ ನೋಡುವ ದೃಷ್ಟಿಕೋನಕ್ಕೆ ವಿದಾಯ ಹೇಳಲಾಗುವುದು. ಈ ಸಂಸ್ಥೆ ತಯಾರಿಸುವ ಮೈಸೋಪು, ಊದುಗಡ್ಡಿ ಸೇರಿದಂತೆ ಪ್ರತಿಯೊಂದು ಉತ್ಪನ್ನವೂ ಸಾಮಾನ್ಯ ಕಿರಾಣಿ ಅಂಗಡಿಯಿಂದ ಹಿಡಿದು ಮಾಲ್‌ವರೆಗೆ ಎಲ್ಲೆಡೆಯೂ ಸಿಗುವಂತೆ ಮಾಡಲಾಗುವುದು. ಒಟ್ಟಿನಲ್ಲಿ, ಇಡೀ ಭಾರತದಾದ್ಯಂತ ಮಾರುಕಟ್ಟೆ ಸೃಷ್ಟಿಸಿಕೊಳ್ಳಬೇಕು ಎನ್ನುವುದು ಈಗಿನ ಗುರಿಯಾಗಿದೆ,” ಎಂದು ಸಚಿವ ಎಂ ಬಿ ಪಾಟೀಲ್‌ ಅವರು ಆಡಳಿತ ಮಂಡಳಿ ಸಭೆಯಲ್ಲಿ ಹೇಳಿದ್ದರು.

 

ಕೆಎಸ್‌ಡಿಎಲ್ ಈಗ ಹಲವು ಬ್ರ್ಯಾಂಡ್‌ಗಳನ್ನು ಹೊಂದಿದೆ. ಇವುಗಳ ಜತೆಗೆ ಹೊಸ ಹೊಸ ಬ್ರ್ಯಾಂಡ್ ಉತ್ಪನ್ನಗಳನ್ನೂ ಬಿಡುಗಡೆಗೆ ಉತ್ಸುಕವಾಗಿದೆ. ಲ್ಯಾವೆಂಡರ್, ಬೇವು, ಗುಲಾಬಿ, ಅರಿಶಿಣ ಸೇರಿದಂತೆ ವಿಧದ ರೀತಿಯ ಸಾಬೂನುಗಳನ್ನು ಮಾರುಕಟ್ಟೆಗೆ ಹೊಸದಾಗಿ ಪರಿಚಯಿಸಲು ಅಣಿಯಾಗುತ್ತಿದೆ. ಗುಣಮಟ್ಟ, ದಕ್ಷ ಆಡಳಿತ, ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ವಿಸ್ತರಣೆಗೆ ಸಜ್ಜಾಗುತ್ತಿದೆ.

 

ಕೆಎಸ್‌ಡಿಎಲ್ ಉತ್ಪನ್ನಗಳು ಉತ್ಕೃಷ್ಟ ಗುಣಮಟ್ಟದಿಂದ ಕೂಡಿವೆ. ಆದರೆ, ಮಾರುಕಟ್ಟೆಯಲ್ಲಿ ಡಾಬರ್, ಹಿಂದೂಸ್ಥಾನ್‌ ಯೂನಿಲಿವರ್ ಲಿಮಿಟೆಡ್ ತರಹದ ಕಂಪನಿಗಳು ಸಿಂಹಪಾಲು ಹೊಂದಿವೆ. ಜತೆಗೆ ಕೆಎಸ್‌ಡಿಎಲ್‌ ಕರ್ನಾಟಕವನ್ನು ದಾಟಿ ಆಚೆಗೆ ಹೆಚ್ಚಾಗಿ ಹೋಗಿಲ್ಲ. ಹೀಗಾಗಿ ಕೆಎಸ್‌ಡಿಎಲ್‌ ರಾಜ್ಯದ ಜತೆಗೆ ಇಡೀ ದೇಶದ ಸಾಬೂನು ಮತ್ತು ಮಾರ್ಜಕಗಳ ಮಾರುಕಟ್ಟೆಯಲ್ಲಿ ಅತ್ಯಧಿಕ ಪಾಲು ಹೊಂದಲು ನೀಲನಕ್ಷೆ ತಯಾರಿಸಿದೆ.

 

ರಾಜ್ಯದ ಉದ್ದಗಲಕ್ಕೂ ಇರುವ ಸರಕಾರಿ ಕಚೇರಿಗಳು ಮತ್ತು ವಿದ್ಯಾರ್ಥಿ ನಿಲಯಗಳಿಗೆ ಇನ್ನು ಮುಂದೆ ಕೆಎಸ್‌ಡಿಎಲ್‌ ತಯಾರಿಸುವ ಸಾಬೂನು, ಲಿಕ್ವಿಡ್ ಸೋಪ್, ಹ್ಯಾಂಡ್ ವಾಶ್, ಡಿಶ್ ವಾಶ್‌ಗಳನ್ನೇ ಪೂರೈಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದರ ಜತೆಗೆ ವ್ಯಾಪಕ ಸ್ವರೂಪದಲ್ಲಿ ಬ್ರ್ಯಾಂಡಿಂಗ್ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಮುಂದಾಗಿತ್ತು.

the fil favicon

SUPPORT THE FILE

Latest News

Related Posts