‘ಪ್ರಚೋದನಕಾರಿ ಭಾಷಣದ ತುಣುಕು ಇದ್ದರೆ ತೋರಿಸಿ ನೋಡೋಣ’; ಸವಾಲು ಎಸೆದ ಪುನೀತ್‌ ಕೆರೆಹಳ್ಳಿ

ಬೆಂಗಳೂರು: ಗೂಂಡಾ ಕಾಯ್ದೆಯಡಿ ಬಂಧನಕ್ಕೊಳಗಾಗಿ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿರುವ ʼರಾಷ್ಟ್ರ ರಕ್ಷಣಾ ಪಡೆʼಯ ಅಧ್ಯಕ್ಷ‌ ಪುನೀತ್ ಕೆರೆಹಳ್ಳಿ ಎಂಬಾತನಿಗೆ ಕೊಪ್ಪಳ ಜಿಲ್ಲಾ ಪೊಲೀಸರು ಜಾರಿಗೊಳಿಸಿದ್ದ ನೋಟೀಸ್‌ ಇದೀಗ ಬಹಿರಂಗವಾಗಿದೆ.

 

ಈ ನೋಟೀಸ್‌ಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಪುನೀತ್‌ ಕೆರೆಹಳ್ಳಿ, ‘ಕಾಂಗ್ರೆಸ್ಸಿಗರೆ ಈ ಹಿಂದೆ ನಾನು ಮಾಡಿರುವ ಯಾವುದಾದರೂ ಒಂದು ಪ್ರಚೋದನಕಾರಿ ಭಾಷಣದ ತುಣುಕು ಇದ್ದರೆ ತೋರಿಸಿ ನೋಡೋಣ,’ ಎಂದು ಟ್ವಿಟರ್‍‌ ಎಕ್ಸ್‌.ಕಾಂನಲ್ಲಿ ಸರ್ಕಾರಕ್ಕೇ ಸವಾಲು ಎಸೆದಿದ್ದಾನೆ.

 

ಗಣೇಶೋತ್ಸವ ಕಾರ್ಯಕ್ರಮದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿ ಜನರನ್ನು ಕೆರಳಿಸುವ ಉದ್ದೇಶ ಹೊಂದಿರುವ ಕಾರಣ ಕೊಪ್ಪಳ ನಗರ ಪೊಲೀಸ್‌ ಠಾಣೆಯ ಪೊಲೀಸ್‌ ಇನ್ಸ್‌ಪೆಕ್ಟರ್‍ 2023ರ ಸೆ.26ರಂದು ‌ ಪೊಲೀಸ್ ನೋಟೀಸ್‌ ಜಾರಿಗೊಳಿಸಿದ್ದಾರೆ. ಈ ನೋಟೀಸ್‌ನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ನೋಟೀಸ್‌ನಲ್ಲೇನಿದೆ?

 

ಕೊಪ್ಪಳ ಕಾ ರಾಜಾ ಗಣೇಶೋತ್ಸವ ಗಡಿಯಾರ ಕಂಬದ ಹತ್ತಿರ ಹಮ್ಮಿಕೊಂಡಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸುತ್ತಿರುವ ಬಗ್ಗೆ ಮಾಹಿತಿ ಇರುತ್ತದೆ. ಕೊಪ್ಪಳ ನಗರದಲ್ಲಿ ವಿವಿಧ ಕೋಮಿನ ಜನರು ಶಾಂತಿ ಮತ್ತು ಸೌಹಾರ್ದಯುತವಾಗಿರುತ್ತಾರೆ.

 

ಆದರೆ ನೀವು ಒಬ್ಬ ಪ್ರಚೋದನಕಾರಿ ಭಾಷಣಕಾರರಾಗಿದ್ದು ಅನ್ಯ ಕೋಮಿನ ಜನರನ್ನು ಕೆರಳಿಸಿ ಭಾಷಣ ಮಾಡುವುದರಿಂದ ನಗರದಲ್ಲಿ ವಿವಿಧ ಕೋಮಿನ ಜನರ ನಡುವೆ ಗಲಾಟೆಗಳಾಗಿ ಶಾಂತಿ ಸುವ್ಯವಸ್ಥೆ ಹದಗೆಟ್ಟು ಸಾರ್ವಜನಿಕ ಆಸ್ತಿ  ಹಾಗೂ ಪ್ರಾಣ ಹಾನಿಯಾಗುವ ಸಾಧ್ಯತೆಗಳು ಕಂಡು ಬಂದಿರುತ್ತವೆ. ನಿಮ್ಮ ಮೇಲೆ ಈಗಾಗಲೇ ರಾಜ್ಯದ ವಿವಿಧ ಕಡೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

 

ನೀವು ಈ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡದೇ ಇರಲು ಸೂಚಿಸಲಾಗಿದೆ. ಒಂದು ವೇಳೆ ವ್ಯತಿರಿಕ್ತವಾಗಿ ನಡೆದುಕೊಂಡಲ್ಲಿ ನಿಮ್ಮ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿರುವುದು ನೋಟೀಸ್‌ನಿಂದ ಗೊತ್ತಾಗಿದೆ.

 

ಇದಕ್ಕೆ ಪ್ರತಿಕ್ರಿಯಿಸಿರುವ ಪುನೀತ್‌ ಕೆರೆಹಳ್ಳಿ , ಬ್ರಿಟಿಷ್ ಸರ್ಕಾರದ ಈ ಭಯ ನನಗೆ ಇಷ್ಟ ಆಯ್ತು, ಮಾತು ಆರಂಭಿಸುವ ಮೊದಲೇ ಮುಟ್ಟಿ ನೋಡಿಕೊಂಡ ಕಾಂಗ್ರೆಸ್‌, ಈ ಕಾಂಗ್ರೆಸ್ಸಿಗೆ ನನ್ನ ಕಂಡ್ರೆ ಯಾಕೆ ಇಷ್ಟು ಭಯ! ಕಾಂಗ್ರೆಸ್ಸಿಗರೆ ಈ ಹಿಂದೆ ನಾನು ಮಾಡಿರುವ ಯಾವುದಾದರೂ ಒಂದು ಪ್ರಚೋದನಕಾರಿ ಭಾಷಣದ ತುಣುಕು ಇದ್ದರೆ ತೋರಿಸಿ ನೋಡೋಣ,’ ಎಂದು ಸವಾಲು ಎಸೆದಿದ್ದಾನೆ.

 

ಗೂಂಡಾ ಕಾಯ್ದೆಯಡಿ ಬಂಧನಕ್ಕೊಳಗಾಗಿ ʼರಾಷ್ಟ್ರ ರಕ್ಷಣಾ ಪಡೆʼಯ ಅಧ್ಯಕ್ಷ‌ ಪುನೀತ್ ಕೆರೆಹಳ್ಳಿಯನ್ನು ಜೈಲಿನಿಂದ ಇತ್ತೀಚೆಗಷ್ಟೇ ಬಿಡುಗಡೆ ಮಾಡಿತ್ತು. ತನ್ನನ್ನು ಬಂಧಿಸಿರುವುದು ಅಕ್ರಮವೆಂದು ಆರೋಪಿಸಿ ಪುನೀತ್‌ ಕೆರೆಹಳ್ಳಿ ಹೈಕೋರ್ಟ್‌ ಮೊರೆ ಹೋಗಿದ್ದ. ಇದರ ವಿಚಾರಣೆಗಾಗಿ ಸರ್ಕಾರವು ಸಲಹಾ ಸಮಿತಿ ರಚಿಸಿತ್ತು.

 

ವಿಚಾರಣೆ ನಡೆಸಿದ್ದ ಸಮಿತಿ, ‘ಬಂಧಿಯನ್ನು ಬಂಧನದಲ್ಲಿಡಲು ಸಾಕಷ್ಟು ಕಾರಣಗಳಿಲ್ಲ’ ಎಂದು ಅಭಿಪ್ರಾಯಪಟ್ಟು ವರದಿ ನೀಡಿದೆ. ವರದಿಯನ್ವಯ ಆದೇಶ ಹೊರಡಿಸಿರುವ ಸರ್ಕಾರ, ಕಮಿಷನರ್ ಆದೇಶವನ್ನು ರದ್ದುಪಡಿಸಿ, ಪುನೀತ್ ಬಂಧನಮುಕ್ತಗೊಳಿಸುವಂತೆ ಸೂಚಿಸಿದೆ. ಇದರ ಬೆನ್ನಲ್ಲೇ ಪುನೀತ್‌ನನ್ನು ಜೈಲಿನಿಂದ ಬಿಡುಗಡೆ ಮಾಡಿತ್ತು.

 

ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕೆರೆಹಳ್ಳಿಯ ಪುನೀತ್, ಮಂಡ್ಯದ ಇದ್ರೀಸ್ ಪಾಷಾ ಕೊಲೆ ಆರೋಪಿಯಾಗಿದ್ದಾನೆ. ಸದ್ಯ ಬೆಂಗಳೂರು ನಗರದ ಜೆ.ಪಿ.ನಗರ 7ನೇ ಹಂತದಲ್ಲಿ ವಾಸವಿದ್ದ ಈತನ ವಿರುದ್ಧ ಬೇಗೂರು ಪೊಲೀಸ್ ಠಾಣೆಯಲ್ಲಿ ಎರಡು, ಡಿಜೆ ಹಳ್ಳಿ, ಕಗ್ಗಲೀಪುರ, ಹಂಪಿ, ಮಳವಳ್ಳಿ, ಹಲಸೂರು, ಚಾಮರಾಜಪೇಟೆ, ಎಲೆಕ್ಟ್ರಾನ್ ಸಿಟಿ, ಸಾತನೂರು ಪೊಲೀಸ್ ಠಾಣೆಗಳಲ್ಲಿ ಒಂದೊಂದು ಪ್ರಕರಣ ದಾಖಲಾಗಿವೆ.

 

ಕೆಲ ಪ್ರಕರಣಗಳಲ್ಲಿ ಶಿಕ್ಷೆಯೂ ಆಗಿತ್ತು. ಅಪರಾಧ ಪ್ರಕರಣಗಳಲ್ಲಿ‌ ಪದೇ ಪದೇ ಭಾಗಿಯಾಗುತ್ತಿರುವುದರಿಂದ ಪುನೀತ್‌ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.

 

ಮಾರ್ಚ್ 31 ರಂದು ಪುನೀತ್ ಕೆರೆಹಳ್ಳಿ ಹಾಗೂ ತಂಡ ಗೋವುಗಳನ್ನು ಸಾಗಿಸುತ್ತದ್ದ ಕ್ಯಾಂಟರ್ ತಡೆದು ಜಾನುವಾರು ರಕ್ಷಣೆ ಮಾಡಿದ್ದರು. ಮರು ದಿನ ಕ್ಯಾಂಟರ್ನಲ್ಲಿದ್ದ ಇದ್ರೀಷ್ ಪಾಷ(35) ಶವವಾಗಿ ಪತ್ತೆಯಾಗಿದ್ದರು. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಾತನೂರು ಗ್ರಾಮದ ಬಳಿ ಮಂಡ್ಯದ ಗುತ್ತಲು ನಿವಾಸಿ ಇದ್ರೀಷ್ ಪಾಷ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಮೃತನ ಸಹೋದರ ಸಾತನೂರು ‌ಠಾಣೆಗೆ ಪುನೀತ್ ಕೆರೆಹಳ್ಳಿ ಸೇರಿದಂತೆ ಇತರರರ ವಿರುದ್ಧ ದೂರು ನೀಡಿದ್ದರು. ಐಪಿಸಿ ಸೆಕ್ಷನ್ 341, 504, 506, 324, 302, 34 ರ ಅಡಿ ಕೇಸ್ ದಾಖಲಾಗಿತ್ತು.

 

ಪುನೀತ್ ಬಂಧಿಸುವಂತೆ ಕಮಿಷನರ್ ಆದೇಶ ಹೊರಡಿಸಿದ್ದರು. ಆಗಸ್ಟ್‌ 11 ರಂದು ರಾತ್ರಿ ಪುನೀತ್ ನನ್ನು ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು. ರಾಷ್ಟ್ರ ರಕ್ಷಣಾ ಪಡೆ ಸಂಘಟನೆ ಮುಖಂಡ ಪುನೀತ್‌ ಕುಮಾರ್‌ ಅಲಿಯಾಸ್‌ ಪುನೀತ್‌ ಕೆರೆಹಳ್ಳಿ ವಿರುದ್ಧ ರೌಡಿಪಟ್ಟಿ ತೆರೆಯಲು ನಿರ್ಧರಿಸಿದ್ದ ಇಲಾಖೆಯು ಪುನೀತ್‌ಗೆ ತಿಳಿವಳಿಕೆಯ ನೋಟಿಸ್‌ ಜಾರಿ ಮಾಡಿತ್ತು.

 

ಪುನೀತ್‌ ವಿರುದ್ಧ ಬೆಂಗಳೂರಿನ ಚಾಮರಾಜಪೇಟೆ, ರಾಮನಗರ ಜಿಲ್ಲೆಯ ಸಾತನೂರು ಠಾಣೆ, ವಿಜಯನಗರ ಜಿಲ್ಲೆಯ ಹಂಪಿ ಟೂರಿಸಂ ಪೊಲೀಸ್‌ ಠಾಣೆ ಸೇರಿದಂತೆ ರಾಜ್ಯದ ಹಲವು ಠಾಣೆಗಳಲ್ಲಿ ಕೊಲೆ, ಹಲ್ಲೆ, ಜೀವ ಬೆದರಿಕೆ, ದೊಂಬಿ ಪ್ರಕರಣಗಳು ದಾಖಲಾಗಿವೆ. ಹೀಗಾಗಿ, ಪುನೀತ್‌ ವಿರುದ್ಧ ರೌಡಿಪಟ್ಟಿ ತೆರೆಯಲು ನಿರ್ಧರಿಸಿತ್ತು. ಈ ಸಂಬಂಧ ಚಿಕ್ಕಪೇಟೆ ಉಪ ವಿಭಾಗದ ಎಸಿಪಿ ಪುನೀತ್‌ಗೆ ಈ ಹಿಂದೆಯೂ ನೋಟಿಸ್‌ ನೀಡಿದ್ದರು.

 

ಅಪರಾಧ ಪ್ರಕರಣವೊಂದರಲ್ಲಿ ಬಂಧಿತನಾಗಿ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ತಮ್ಮ ವಿರುದ್ಧ ರೌಡಿಪಟ್ಟಿ ತೆರೆಯಲು ಅನುಮತಿ ಕೋರಿ ಚಾಮರಾಜಪೇಟೆ ಠಾಣೆ ಇನ್‌ಸ್ಪೆಕ್ಟರ್‌ ವರದಿ ಸಲ್ಲಿಸಿದ್ದಾರೆ. ಹಲವು ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿರುವ ತಮ್ಮನ್ನು ಏಕೆ ರೌಡಿಪಟ್ಟಿಗೆ ಸೇರಿಸಬಾರದು ಎಂಬುದಕ್ಕೆ ವಿವರಣೆ ಸಲ್ಲಿಸಬಹುದು. ಇಲ್ಲದಿದ್ದರೆ, ವಿವರಣೆ ಇಲ್ಲವೆಂದು ಪರಿಗಣಿಸಿ ರೌಡಿಪಟ್ಟಿ ತೆರೆಯಲಾಗುವುದು ಎಂದು ಎಸಿಪಿ ಅವರು ಪುನೀತ್‌ಗೆ ಜಾರಿ ಮಾಡಿರುವ ನೋಟಿಸ್‌ನಲ್ಲಿಉಲ್ಲೇಖಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts