ದಸರಾ ಕಾಮಗಾರಿ ಮತ್ತಿತರ ಕಾರ್ಯಗಳಿಗೆ 15 ಕೋಟಿ; ಬಿಜೆಪಿ ಟೀಕೆ ಬೆನ್ನಲ್ಲೇ ಮುನ್ನೆಲೆಗೆ ಬಂದ ಆದೇಶ

ಬೆಂಗಳೂರು; 2023-24ನೇ ಸಾಲಿನ ನಾಡಹಬ್ಬ ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಲು ಮುಂದಾಗಿರುವ ರಾಜ್ಯ ಸರ್ಕಾರವನ್ನು ಬಿಜೆಪಿ ಪಕ್ಷವು ಟೀಕಿಸುತ್ತಿರುವ ಬೆನ್ನಲ್ಲೇ  ಕಾಮಗಾರಿಗಳು ಮತ್ತಿತರ ಕಾರ್ಯಗಳಿಗಾಗಿ 15.00 ಕೋಟಿ ರು.ಗಳನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

 

ದಸರಾ ಆಚರಣೆಗಾಗಿ 1500.00 ಲಕ್ಷ ವೆಚ್ಚದಲ್ಲಿ ಅವಶ್ಯಕ ಸರಕು ಸೇವೆಗಳು ಮತ್ತು ಕಾಮಗಾರಿಗಳ ಸಂಗ್ರಹಣೆಯನ್ನು ಕೈಗೊಳ್ಳಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999ರ ಕಲಂ -4(ಜಿ) ವಿನಾಯಿತಿ ನೀಡಿ  2023ರ ಸೆ.11ರಂದು ಹೊರಡಿಸಿದ್ದ ಆದೇಶವು ಮುನ್ನೆಲೆಗೆ ಬಂದಿದೆ.

 

ರೈತರ ಸಂಕಷ್ಟದ  ಸಂದರ್ಭಕ್ಕೆ ಪೂರಕವಾಗಿ ಸರ್ಕಾರವು ಈ ಬಾರಿ ಸರಳ ದಸರಾವನ್ನು ಆಚರಿಸಲು ನಿರ್ಧರಿಸಿದೆ ಎಂದು ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಅವರು ಸಾಮಾಜಿಕ ಜಾಲತಾಣ ಎಕ್ಸ್‌. ಕಾಂ ನಲ್ಲಿ ಹೇಳಿದ್ದರು.

 

ದಸರಾ ಆಚರಣೆ ಸಂಬಂಧ ಅನುದಾನ ಕೋರಿಕೆಯ ಪ್ರಸ್ತಾವನೆಯನ್ನು ಪರಿಶೀಲಿಸಿರುವ ಆರ್ಥಿಕ ಇಲಾಖೆಯು (ವೆಚ್ಚ 5-7)ಒಟ್ಟಾರೆಯಾಗಿ 15.00 ಕೋಟಿಯನ್ನು ಮಂಜೂರು ಮಾಡಲು ಸಹಮತಿ ನೀಡಿದೆ. ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗೆ 2023ರ ಸೆ.19ರಂದು ಪತ್ರವನ್ನು (ಆಇ 774 ವೆಚ್ಚ-7/2023, ಕೆಸಿಐ-ಕೆಎಸ್‌ಡಿ/289/2023) ಬರೆದಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪತ್ರದಲ್ಲೇನಿದೆ?

 

ಪ್ರಸ್ತಾವನೆಯನ್ನು ಪರಿಶೀಲಿಸಿದೆ. 2023-24ನೇ ಸಾಲಿನ ನಾಡಹಬ್ಬ ದಸರಾ ಮಹೋತ್ಸವ ಆಚರಣೆಗಾಗಿ 1500.00 ಲಕ್ಷ ವೆಚ್ಚದಲ್ಲಿ ಅವಶ್ಯಕ ಸರಕು ಸೇವೆಗಳು ಮತ್ತು ಕಾಮಗಾರಿಗಳ ಸಂಗ್ರಹಣೆಯನ್ನು ಕೈಗೊಳ್ಳಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999ರ ಕಲಂ -4(ಜಿ) ವಿನಾಯಿತಿ ನೀಡಿ  2023ರ ಸೆ.11ರಂದು ಆದೇಶ ಹೊರಡಿಸಿತ್ತು.  2023-24ನೇ ಸಾಲಿಗೆ ನಾಡಹಬ್ಬ ದಸರಾ  2023 ಮಹೋತ್ಸವ ಸಲುವಾಗಿ 850.00 ಲಕ್ಷ ರು (ಲೆಕ್ಕ ಶೀರ್ಷಿಕೆ 2205-00-102-0-12 ಮೈಸೂರು ದಸರಾ ಮತ್ತು ರಾಜ್ಯೋತ್ಸವ ಪ್ರಶಸ್ತಿ-059 ಇತರೆ ಖರ್ಚುಗಳಡಿ ಒದಗಿಸಿರುವ 650 ಲಕ್ಷ ರು. ಸೇರಿಸಿ ಒಟ್ಟಾರೆ 15.00 ಕೋಟಿ ರು.ಗಳನ್ನು ನಾಡಹಬ್ಬ ದಸರಾ 2023 ಮಹೋತ್ಸವಕ್ಕೆ ಒದಗಿಸಲಾಗಿದೆ ಎಂದು ಕನ್ನಡ ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗೆ 2023ರ ಸೆ.19ರಂದು  ಬರೆದಿರುವ ಪತ್ರದಲ್ಲಿ ಆರ್ಥಿಕ ಇಲಾಖೆಯು ತಿಳಿಸಿದೆ.

 

ಅಕ್ಟೋಬರ್‌ 16ರಿಂದ 24ರವರೆಗೆ ದಸರಾ ಆಚರಣೆಗೆ ಸಿದ್ಧತೆ ನಡೆಸಿದ್ದ ಮೈಸೂರು ಜಿಲ್ಲಾಡಳಿತವು ಇದಕ್ಕಾಗಿ ಸರ್ಕಾರಕ್ಕೆ 30 ಕೋಟಿಗೂ ಹೆಚ್ಚು ಅನುದಾನ ಕೋರಿತ್ತು. ಅಲ್ಲದೇ ಈ ಬಾರಿಯ ದಸರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ದಸರಾ ಉನ್ನತ ಮಟ್ಟದ ಸಮಿತಿಯಲ್ಲಿ ತೀರ್ಮಾನ ಕೈಗೊಂಡಿತ್ತು.

 

ಹೀಗಾಗಿ ಅದ್ಧೂರಿ ದಸರಾ ಆಚರಣೆಗೆ 26 ಕೋಟಿ ರೂ. ಅನುದಾನ ನೀಡುವಂತೆ ಕ್ರಿಯಾ ಯೋಜನೆ ರೂಪಿಸಿ (ಡಿಪಿಆರ್‌) ಮೈಸೂರು ಮಹಾನಗರ ಪಾಲಿಕೆಯಿಂದಲೂ ಮನವಿ ಸಲ್ಲಿಸಲಾಗಿತ್ತು.

 

ಕಳೆದ ಬಾರಿ ದಸರಾ ಮಹೋತ್ಸವ ಆಚರಣೆಗೆ ಪಾಲಿಕೆಯಿಂದ 16 ಕೋಟಿ ರೂ. ವೆಚ್ಚ ಮಾಡಲಾಗಿತ್ತು. ಈ ಬಾರಿ ಸಿಎಂ ನಿರ್ದೇಶನದಂತೆ ಹೆಚ್ಚುವರಿಯಾಗಿ 10 ಕೋಟಿ ರೂ. ನೀಡುವಂತೆ ಕೋರಿಕೆ ಸಲ್ಲಿಸಿತ್ತು.

 

ಒಟ್ಟಾರೆಯಾಗಿ ಈ ಬಾರಿಯ ದಸರೆ 26 ಕೋಟಿ ರೂ. ಅನುದಾನ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತ್ತು.

 

ಮೈಸೂರು ಪಾಲಿಕೆಯ ವಲಯ ಕಚೇರಿ 1 ರಿಂದ 9 ರವರೆಗೆ ಕೈಗೊಳ್ಳಲಿರುವ ಕಾಮಗಾರಿಗೆ 22 ಕೋಟಿ ರೂ., ವಿದ್ಯುತ್‌ ಕಾಮಗಾರಿಗೆ 2.50 ಕೋಟಿ ರೂ., ತೋಟಗಾರಿಕೆ ಕಾಮಗಾರಿಗೆ 40 ಲಕ್ಷ ರೂ., ಆರೋಗ್ಯ ಶಾಖೆಯ ಕಾಮಗಾರಿಗೆ 80 ಲಕ್ಷ ರೂ., ನೀರು ಸರಬರಾಜು ಮತ್ತು ಒಳಚರಂಡಿ ವಿಭಾಗದ ಕಾಮಗಾರಿಗಳಿಗೆ 30 ಲಕ್ಷ ರೂ. ಸೇರಿ ಒಟ್ಟು 26 ಕೋಟಿ ರೂ.ಗಳ ಕ್ರಿಯಾ ಯೋಜನೆ ಸಿದ್ಧಪಡಿಸಿತ್ತು.

 

2020 ಹಾಗೂ 2021ರಲ್ಲಿ ಕೊರೊನಾ ಹಿನ್ನೆಲೆ ಸರಳವಾಗಿ ದಸರಾ ಆಚರಣೆ ಮಾಡಲಾಗಿತ್ತು. ಆದರೆ ಈ ಬಾರಿ ಮಳೆ ಕೊರತೆ ಹಿನ್ನೆಲೆ ರಾಜ್ಯದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಈ ಬಾರಿಯೂ ಸರಳ ದಸರಾ ಆಚರಣೆಗೆ ಸರ್ಕಾರ ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

 

ದಸರಾ ಮಹೋತ್ಸವಕ್ಕೆ ದಿ‌ನಗಣನೆ ಆರಂಭವಾಗಿದ್ದು, ಆನೆ ತಾಲೀಮು ಹೊರತುಪಡಿಸಿ ಬೇರೆ ಯಾವುದೇ ತಯಾರಿ ನಡೆಯುತ್ತಿಲ್ಲ. ಇನ್ನು ಚೌತಿ ಹಬ್ಬದ ಹಿನ್ನೆಲೆ ಅರಮನೆ ಆವರಣದಲ್ಲಿ ಆನೆಗಳಿಗೆ ವಿಶೇಷ ಪೂಜೆ ನೆರವೇರಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts