ಒಂದೇ ಒಂದು ಸಭೆ ನಡೆಸದ ಸಿಎಂ ಮುಖ್ಯ ಸಲಹೆಗಾರ, ನೀಡಿದ್ದು ಮೌಖಿಕ ಸಲಹೆಯಷ್ಟೇ

ಬೆಂಗಳೂರು; ಕಾಂಗ್ರೆಸ್‌ನ ಚುನಾವಣಾ ತಂತ್ರಗಾರ ಎಂದೇ ಬಿಂಬಿಸಿಕೊಂಡಿರುವ ಸುನೀಲ್ ಕನುಗೋಲು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಖ್ಯ ಸಲಹೆಗಾರರಾಗಿ ನೇಮಕವಾದ ನಂತರ ಒಂದೇ ಒಂದು ಸಭೆಗಳನ್ನು ನಡೆಸಿಲ್ಲ. ಆದರೆ ವಿಷಯಾಧರಿತವಾಗಿ ಮೌಖಿಕ ಸಲಹೆಗಳನ್ನು ನೀಡಿದ್ದಾರೆ ಎಂದು ಅವರ ಕಚೇರಿಯು ಆರ್‌ಟಿಐ ಅಡಿಯಲ್ಲಿ ಮಾಹಿತಿ ಒದಗಿಸಿದೆ.

 

ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ನಡೆಸಿದ್ದ ಹೋರಾಟ, ತಂತ್ರಗಾರಿಕೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದರು ಎಂದು ಬಿಂಬಿಸಿಕೊಂಡಿದ್ದ ಸುನೀಲ್‌ ಕುನುಗೋಳು ಅವರನ್ನು ಮುಖ್ಯಮಂತ್ರಿಗಳಿಗೆ ಮುಖ್ಯ ಸಲಹೆಗಾರರಾಗಿ ನೇಮಕ ಮಾಡಿದ್ದರೂ ಒಂದೇ ಒಂದು ಸಭೆಯನ್ನೂ ನಡೆಸಿಲ್ಲ ಎಂದು ನೀಡಿರುವ ಮಾಹಿತಿಯು ಚರ್ಚೆಗೆ ಗ್ರಾಸವಾಗಿದೆ.

 

ಮುಖ್ಯಮಂತ್ರಿಯವರಿಗೆ ಮುಖ್ಯ ಸಲಹೆಗಾರರಾಗಿ ನೇಮಕವಾದ ದಿನದಿಂದ ಇದುವರೆಗೂ ನೀಡಿರುವ ಸಲಹೆಗಳ ವಿವರ, ಪ್ರಯಾಣ ಭತ್ಯೆ, ವೇತನ ಪಡೆದಿರುವ ಬಗ್ಗೆ ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಮಾಹಿತಿ ಕೋರಿ ಸಲ್ಲಿಸಿದ್ದ ಅರ್ಜಿಗೆ ಉತ್ತರಿಸಿರುವ ಮುಖ್ಯಮಂತ್ರಿಗಳ ಮುಖ್ಯ ಸಲಹೆಗಾರರ ಕಚೇರಿಯ ವಿಶೇಷ ಕರ್ತವ್ಯಾಧಿಕಾರಿ ಸುನೀಲ್‌ ಕನುಗೋಳು ಅವರು ವಿಷಯಾಧರಿತವಾಗಿ ಮೌಖಿಕ ಸಲಹೆ ನೀಡಿರುತ್ತಾರೆ ಎಂದು ಮಾಹಿತಿ ಒದಗಿಸಿದ್ದಾರೆ.

 

ವಿಷಯಾಧರಿತವಾಗಿ ಮೌಖಿಕ ಸಲಹೆಗಳನ್ನು ನೀಡಿದ್ದಾರೆ ಎಂದು ಮಾಹಿತಿ ಒದಗಿಸಿರುವ ವಿಶೇಷ ಕರ್ತವ್ಯಾಧಿಕಾರಿಯು ಅದರ ವಿವರಗಳನ್ನು ಒದಗಿಸಿಲ್ಲ. ಹಾಗೆಯೇ ಸುನೀಲ್‌ ಕುನಗೋಳು ಅವರು ಮುಖ್ಯಮಂತ್ರಿಯವರಿಗೆ ಮುಖ್ಯ ಸಲಹೆಗಾರರಾಗಿ ನೇಮಕವಾದ ದಿನದಿಂದ ಇದುವರೆಗೂ ಯಾವುದೇ ಸಭೆಗಳನ್ನು ಏರ್ಪಡಿಸಿಲ್ಲ ಎಂದು ಆರ್‌ಟಿಐನಲ್ಲಿ ಮಾಹಿತಿ ಒದಗಿಸಿದೆ.

 

ಅದೇ ರೀತಿ ಸುನೀಲ್‌ ಕುನಗೋಳು ಅವರು ಮುಖ್ಯ ಸಲಹೆಗಾರರಾಗಿ ನೇಮಕವಾದ ದಿನದಿಂದ ಇದುವರೆಗೂ ಯಾವುದೇ ವೇತನ ಹಾಗೂ ಪ್ರಯಾಣ ಭತ್ಯೆಯನ್ನೂ ಪಡೆದಿಲ್ಲ ಎಂದು ಉತ್ತರ ಒದಗಿಸಿದೆ.

 

ಸುನೀಲ್‌ ಕುನುಗೋಲು ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿತ್ತು. ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ನಡೆಸಿದ್ದ ಹೋರಾಟ, ತಂತ್ರಗಾರಿಕೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದರು ಎಂದು ಹೇಳಲಾಗಿತ್ತು. ಹೀಗಾಗಿ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿ ಮುಖ್ಯಮಂತ್ರಿಗಳ ಮುಖ್ಯ ಸಲಹೆಗಾರರನ್ನಾಗಿ ನೇಮಿಸಲಾಗಿತ್ತು. ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೊಠಡಿ ಮತ್ತು ಅವರಿಗೆ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ.

 

ರಾಜಕೀಯ ಕಾರ್ಯದರ್ಶಿ, ಕಾನೂನು, ಮುಖ್ಯ ಸಲಹೆಗಾರರ ನೇಮಕ; ಹೈಕೋರ್ಟ್ ಕೆಂಗಣ್ಣಿಗೆ ಗುರಿಯಾಗುವುದೇ?

 

2024ರ ಲೋಕಸಭೆ ಚುನಾವಣೆಗೆ ಅವರ ನೆರವು ಪಡೆಯಲು ಪಕ್ಷದ ರಾಜ್ಯ ಘಟಕ ನಿರ್ಧರಿಸಿತ್ತು. ರಾಜ್ಯದ 28 ಲೋಕಸಭಾ ಸ್ಥಾನಗಳ ಪೈಕಿ 20 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿರುವ ಕಾಂಗ್ರೆಸ್‌ ಪಕ್ಷವು ಇದರ ಜವಾಬ್ದಾರಿಯನ್ನು ಸುನೀಲ್‌ ಕುನುಗೋಳು ಅವರಿಗೆ ವಹಿಸಿದೆ ಎಂದು ಹೇಳಲಾಗುತ್ತಿದೆ.

 

2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲನ್ನು ಕಂಡಿತ್ತು. ವಿಧಾನಸಭೆ ಚುನಾವಣೆಯಲ್ಲಿ ಅಮೋಘ ಸಾಧನೆ ಮಾಡಿದ ನಂತರ ರಾಜ್ಯದಲ್ಲಿ ಗೆಲುವಿನ ಗತಿಯನ್ನು ಕಾಯ್ದುಕೊಳ್ಳಲು ಉತ್ಸುಕವಾಗಿದೆ. ಬಳ್ಳಾರಿ ಮೂಲದ ಕನುಗೋಳು ಕಾಂಗ್ರೆಸ್ ಪಕ್ಷದ ಮುಖ್ಯ ಚುನಾವಣಾ ತಂತ್ರಗಾರ ಎಂದು ಗುರುತಿಸಲ್ಪಟ್ಟಿದ್ದರು. ಕನುಗೋಲು ಅವರನ್ನು ಸಿಎಂ ಸಲಹೆಗಾರರನ್ನಾಗಿ ನೇಮಿಸಿರುವುದು ಕೂಡ ಆ ಪ್ರಯತ್ನದ ಭಾಗವೇ ಎನ್ನಲಾಗಿತ್ತು.

 

ಸುನಿಲ್ ಕನುಗೋಲು ಅವರನ್ನು ಮುಖ್ಯ ಸಲಹೆಗಾರರನ್ನಾಗಿ ನೇಮಿಸಿರುವುದಕ್ಕೆ ಪಕ್ಷದ ಯಶಸ್ಸಿನಲ್ಲಿ ಅವರ ಪಾತ್ರದ ಮಹತ್ವ ಮತ್ತು ರಾಜಕೀಯ ತಂತ್ರಗಾರಿಕೆಯಲ್ಲಿ ಅವರ ಪರಿಣತಿಯನ್ನು ಸೂಚಿಸುತ್ತದೆ. ಪರಿಣಾಮಕಾರಿ ನಿರ್ಧಾರ ಮತ್ತು ಆಡಳಿತವನ್ನು ಮಾಡಲು ಮುಖ್ಯ ಸಲಹೆಗಾರರಾಗಿ, ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಲಿದ್ದಾರೆ.

the fil favicon

SUPPORT THE FILE

Latest News

Related Posts