ಡಿ ಜೆ ಹಳ್ಳಿ, ಕೆ ಜಿ ಹಳ್ಳಿ ಗಲಭೆ; ವಿಶೇಷ ಸರ್ಕಾರಿ ಅಭಿಯೋಜಕರಿಗೆ 27.52 ಲಕ್ಷ ಪಾವತಿಗೆ ಪತ್ರ

ಬೆಂಗಳೂರು; ಡಿ ಜೆ ಹಳ್ಳಿ ಮತ್ತು ಕೆ ಜೆ ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಪರವಾಗಿ ವಾದ ಮಂಡಿಸಲು ನಿಯೋಜಿತರಾಗಿದ್ದ ವಕೀಲರಿಗೆ 27.52 ಲಕ್ಷ ರು. ಮೊತ್ತದ ಸಂಭಾವನೆ ಪಾವತಿಸಲು ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಬಿಲ್‌ಗಳನ್ನು ಸಲ್ಲಿಸಿದೆ.

 

ಡಿ ಜೆ ಹಳ್ಳಿ ಮತ್ತು ಕೆ ಜೆ ಹಳ್ಳಿ ಸೇರಿದಂತೆ ರಾಜ್ಯದ ವಿವಿಧ ಪ್ರತಿಭಟನೆ ಹಾಗೂ ಗಲಭೆಯಲ್ಲಿ ಬಂಧಿತರಾಗಿರುವ ಅಮಾಯಕ ಯುವಕ ಹಾಗೂ ವಿದ್ಯಾರ್ಥಿಗಳ ಮೇಲಿನ ಪ್ರಕರಣಗಳನ್ನು ಹಿಂಪಡೆಯುವಂತೆ ಶಾಸಕ ತನ್ವೀರ್‍‌ ಸೇಠ್‌ ಅವರು ಬರೆದಿದ್ದ ಪತ್ರವು ವಿವಾದಕ್ಕೀಡಾಗಿದ್ದರ ಬೆನ್ನಲ್ಲೇ ಡಿ ಜೆ ಹಳ್ಳಿ ಮತ್ತು ಕೆ ಜೆ ಹಳ್ಳಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಾದ ಮಂಡಿಸಿದ್ದ ವಿಶೇ‍ಷ ಸರ್ಕಾರಿ ಅಭಿಯೋಜಕರಿಗೆ ಸಂಭಾವನೆ ಪಾವತಿಸಬೇಕಾದ 27.52 ಲಕ್ಷ ರು. ಮೊತ್ತದ ಬಿಲ್‌ಗಳು ಮುನ್ನೆಲೆಗೆ ಬಂದಿವೆ.

 

ಈ ಬಿಲ್‌ಗಳನ್ನು ಸಲ್ಲಿಸಿರುವ ಪೊಲೀಸ್‌ ಇಲಾಖೆಯು ಸಂಭಾವನೆ ನಿಗದಿ ಹಾಗೂ ಇದನ್ನು ಮಂಜೂರು ಮಾಡಲು ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕೋರಿದೆ. ಈ ಸಂಬಂಧ 2023ರ ಜೂನ್‌ 27ರಂದು ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಡಿಜಿಐಜಿ ಪರವಾಗಿ ಉಮೇಶ್‌ ಕುಮಾರ್‍‌ ಅವರು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು (ಸಂ; ಅಪರಾಧ (1) 151/ಬೆಂ ನ /2021). ಅಲ್ಲದೇ 2023ರ ಏಪ್ರಿಲ್‌ 26, ಮೇ 26, ಜೂನ್‌ ಕಳೆದ ಮೂರು ತಿಂಗಳಿನಿಂದಲೂ ಉಪ ಪೊಲೀಸ್‌ ಆಯುಕ್ತರು ಮೇಲಾಧಿಕಾರಿಗಳಿಗೆ ಪತ್ರಗಳನ್ನು ಬರೆದಿದ್ದರು. ಈ ಎಲ್ಲಾ ಪತ್ರಗಳೂ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಾದ ಮಂಡಿಸಲು ಪಿ ಪ್ರಸನ್ನಕುಮಾರ್‍‌, ತೇಜಸ್‌ ಪಿ ಮತ್ತು ಬಿ ಒ ಚಂದ್ರಶೇಖರ್‍‌ ಅವರನ್ನು ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ 2020ರ ನವೆಂಬರ್‍‌ 11ರಂದು ನೇಮಕಗೊಳಿಸಿತ್ತು.

 

‘ಪಿ ಪ್ರಸನ್ನಕುಮಾರ್‍‌, ತೇಜಸ್‌ ಪಿ ಮತ್ತ ಬಿ ಓ ಚಂದ್ರಶೇಖರ್‍‌ ಅವರು ಸಲ್ಲಿಸಿರುವ ಬಿಲ್‌ಗಳಲ್ಲಿ ರಿಟ್‌ ಅರ್ಜಿ ಸಂಖ್ಯೆ 9287/2020ಕ್ಕೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯದಲ್ಲಿ ವಾಧ ಮಂಡಿಸಿದ ಅವಧಿಗೆ ಒಟ್ಟು 27,52,500 ರು.ಗಳನ್ನು ಮಂಜೂರು ಮಾಡುವಂತೆ ಕೋರಿರುತ್ತಾರೆ. ಈ ಪ್ರಸ್ತಾವನೆ ಪರಿಶೀಲಿಸಿದ್ದು ವಿಶೇಷ ಸರ್ಕಾರಿ ಅಭಿಯೋಜಕರು ಸಲ್ಲಿಸಿರುವ ಬಿಲ್‌ಗಳು ಉಚ್ಛ ನ್ಯಾಯಾಲಯದಲ್ಲಿ ವಾದ ಮಂಡಿಸಿದ ದಿನಗಳಿಗೆ ಸಲ್ಲಿಸಲಾಗಿರುವ ಬಿಲ್‌ಗಳಾಗಿರುತ್ತದೆ. ಉಚ್ಛ ನ್ಯಾಯಾಲಯದಲ್ಲಿ ವಾದ ಮಂಡನೆಗಾಗಿ ಸಂಭಾವನೆ ನಿಗದಿ ಮತ್ತು ಮಂಜೂರು ಮಾಡಲು ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ,’ ಎಂದು ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.

 

ಈ ಪ್ರಕರಣ ಕುರಿತು 2020ರ ನವೆಂಬರ್‍‌ 18ರಿಂದ 2021ರ ಅಕ್ಟೋಬರ್‍‌ 29ರವರೆಗೆ ಒಟ್ಟು 63 ವಿಚಾರಣೆಗಳು ನಡೆದಿವೆ.

 

ತಲಾ ವಿಚಾರಣೆಯೊಂದಕ್ಕೆ ಹಾಜರಾಗಿ ಸರ್ಕಾರದ ಪರವಾಗಿ ವಾದ ಮಂಡಿಸಿರುವುದಕ್ಕೆ 7,500 ರು., 40,000 ರು. ಗಳನ್ನು ಗಳನ್ನು ಕ್ಲೈಮ್‌ ಮಾಡಿರುವುದು ಗೊತ್ತಾಗಿದೆ.

 

ಇಸ್ಲಾಂ ಧರ್ಮದ ವಿರುದ್ಧ ಪ್ರಚೋದಕ ಫೇಸ್‌ಬುಕ್ ಪೋಸ್ಟ್ ಕುರಿತು ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದ ಹಿಂಸಾಚಾರದಲ್ಲಿ ಪೊಲೀಸರು ಗುಂಪಿನ ಮೇಲೆ ಗುಂಡು ಹಾರಿಸಿದ್ದರು. ಈ ವೇಳೆಯಲ್ಲಿ ಮೂವರು ಸಾವನ್ನಪ್ಪಿದ್ದರು. ಸುಮಾರು 2,000 ಜನರು ಬೀದಿಗಿಳಿದು ಆಸ್ತಿಯನ್ನು ಧ್ವಂಸಗೊಳಿಸಿದ್ದರು.

 

ಬೆಂಗಳೂರಿನ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ 6 ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದ 29 ಆರೋಪಿಗಳು 2021ರ ಮಾರ್ಚ್‌ನಲ್ಲಿ ರಾತ್ರಿ ಬಿಡುಗಡೆಯಾಗಿದ್ದರು.

 

‘ಡಿಜೆ ಹಳ್ಳಿ, ಕೆಜಿ ಹಳ್ಳಿ ಕೇಸ್ ಬಹಳ ಗಂಭೀರವಾದದ್ದು. ಪೊಲೀಸ್ ಠಾಣೆ ಸುಟ್ಟಿದ್ದಾರೆ, ಶಾಸಕನ ಮನೆ ಸುಟ್ಟಿದ್ದಾರೆ. ಇಂತಹ ಪ್ರಕರಣಗಳನ್ನು ವಾಪಸ್ ಪಡೆಯಲು ಹೋಗುತ್ತಿರುವುದು ಸರಿಯಲ್ಲ,’ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು.

 

ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಗಲಭೆ ಪೊಲೀಸರ ನಿರ್ಲಕ್ಷ್ಯ, ಸರ್ಕಾರದ ವೈಫಲ್ಯದಿಂದಾದದ್ದು, ಹೊಣೆಗೇಡಿ ಸರ್ಕಾರ ತನಗಾದ ಮುಜುಗರ ತಪ್ಪಿಸಿಕೊಳ್ಳಲು ಸಂಪತ್ ಕುಮಾರ್’ರನ್ನು ಸಿಲುಕಿಸಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್‌ ಟೀಕಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts