ಸಿಎಂ ಆಪ್ತ ಶಿವಣ್ಣ ವಿರುದ್ಧದ ಪ್ರಕರಣ; ವರದಿ ಸಲ್ಲಿಸಲು ಪೊಲೀಸ್‌ ಅಧಿಕಾರಿಗಳ ಮೀನಮೇಷ

ಬೆಂಗಳೂರು; ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ  ಸಮಾರಂಭದ ವೇದಿಕೆಯಲ್ಲಿ ಭಾಗವಹಿಸುವ ಮೂಲಕ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂಬ ಗುರುತರವಾದ ಆರೋಪಕ್ಕೆ ಗುರಿಯಾಗಿರುವ ಬಿ ಎಸ್‌ ಶಿವಣ್ಣ ಎಂಬುವರ ವಿರುದ್ಧ ಕ್ರಮ ಜರುಗಿಸುವ ಸಂಬಂಧದ ವರದಿಯನ್ನು ಪೊಲೀಸ್‌ ಅಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಲು ಮೀನಮೇಷ ಎಣಿಸುತ್ತಿರುವುದು ಇದೀಗ ಬಹಿರಂಗವಾಗಿದೆ.

 

ವಿಚಾರಣೆ ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಲಾಗಿರುತ್ತದೆ ಎಂದು ಸಹಾಯಕ ಪೊಲೀಸ್‌ ಕಮಿಷನರ್‌ ಅವರು ವಿಧಾನ ಪರಿಷತ್‌ ಸದಸ್ಯ ಹೆಚ್‌ ವಿಶ್ವನಾಥ್‌ ಅವರಿಗೆ ಹಿಂಬರಹ ನೀಡಿದ್ದಾರಾದರೂ ಈ ವರದಿಯು ಇನ್ನೂ ಸರ್ಕಾರದ ಕೈಸೇರಿಲ್ಲ. ಇದರ ನಡುವೆಯೇ ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಅವರು ವರದಿ ಸಲ್ಲಿಸಲು ಪೊಲೀಸ್‌ ಆಯುಕ್ತರಿಗೆ  2023ರ ಸೆ.1ರಂದು ಪತ್ರ ಬರೆದಿದ್ದಾರೆ.  ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಸಚಿವ ಎನ್‌ ಚೆಲುವರಾಯಸ್ವಾಮಿ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ನಿಯೋಗದಲ್ಲಿ ಬಿ ಎಸ್‌ ಶಿವಣ್ಣ ಅವರು ಕಾಣಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಬೆಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ಒಳಾಡಳಿತ ಇಲಾಖೆಯು ಬರೆದಿರುವ ಪತ್ರವು ಮುನ್ನೆಲೆಗೆ ಬಂದಿದೆ.

 

ಪೊಲೀಸ್‌ ಆಯುಕ್ತರಿಗೆ ಬರೆದಿರುವ ಪತ್ರದಲ್ಲೇನಿದೆ?

 

ಕಾನೂನು ಉಲ್ಲಂಘನೆ ಮಾಡಿ ಭದ್ರತಾ ಲೋಪವೆಸಗಿ ಕಾಣಿಸಿಕೊಂಡಿದ್ದು ಇವರ ವಿರುದ್ಧ ಕಾನೂನು ಕ್ರಮಜರುಗಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌ ವಿಶ್ವನಾಥ್‌  ಅವರು  ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಈ ಕುರಿತು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ವಹಿಸಬೇಕು ಎಂದು ರಾಜ್ಯಪಾಲರ ಅಧೀನ ಕಾರ್ಯದರ್ಶಿ ಕೋರಿದ್ದರು. ಈ ಸಂಬಂಧ ವರದಿ ಸಲ್ಲಿಸಲು 2023ರ ಜೂನ್‌ 7ರಂದು ಪತ್ರ ಬರೆಯಲಾಗಿತ್ತು. ಆದರೆ ತಮ್ಮಿಂದ ವರದಿಯು ಸ್ವೀಕೃತವಾಗಿರುವುದಿಲ್ಲ. ಕೋರಿರುವ ವರದಿಯನ್ನು ಕೂಡಲೇ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಪತ್ರದಲ್ಲಿ ನಿರ್ದೇಶಿಸಿರುವುದು ಗೊತ್ತಾಗಿದೆ.

 

 

ಈ ಪ್ರಕರಣ ಸಂಬಂಧ ವಿಧಾನ ಪರಿಷತ್‌ ಸದಸ್ಯ ಎಚ್‌ ವಿಶ್ವನಾಥ್‌ ಅವರು ಸಲ್ಲಿಸಿದ್ದ  ದೂರಿಗೆ ಸಹಾಯಕ ಪೊಲೀಸ್‌ ಕಮಿಷನರ್ ನಾರಾಯಣಸ್ವಾಮಿ ಅವರು 2023ರ ಜುಲೈ 10ರಂದು ಹಿಂಬರಹ ನೀಡಿದ್ದರು. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಹಿಂಬರಹದಲ್ಲೇನಿದೆ?

 

ಮುಖ್ಯಮಂತ್ರಿಗಳ ಪದಗ್ರಹಣ ವೇದಿಕೆಯ ಸಮಾರಂಭದಲ್ಲಿ ಬಿ ಎಸ್‌ ಶಿವಣ್ಣ ಎಂಬ ಕ್ರಿಮಿನಲ್‌ ಹಿನ್ನೆಲೆಯುಳ್ಳ ವ್ಯಕ್ತಿ ಕಾನೂನುಬಾಹಿರವಾಗಿ ಮತ್ತು ಪೊಲೀಸ್‌ ಅಧಿಕಾರಿಗಳ ಭದ್ರತೆಗಳ ಪಡೆಯನ್ನು ಮರೆ ಮಾಚಿ ಹಾಗೂ ಕಾನೂನು ಶಿಷ್ಟಾಚಾರ ಉಲ್ಲಂಘನೆ ಮಾಡಿರುತ್ತಾರೆ ಎಂದು  ರಾಜ್ಯಪಾಲರಿಗೆ ದೂರು ಅರ್ಜಿ ಸಲ್ಲಿಸಿದ್ದರು. ಈ ದೂರು ಅರ್ಜಿಯ ವಿಚಾರಣೆಗೆ ಸಂಬಂಧಿಸಿದಂತೆ ಬಿ ಎಸ್‌ ಶಿವಣ್ಣ ಅವರನ್ನು ವಿಚಾರಣೆ ಮಾಡಲಾಗಿರುತ್ತದೆ. ನೀವು ಆರೋಪಿಸಿರುವ ಆರೋಪಗಳನ್ನು ಅಲ್ಲಗಳೆದಿರುತ್ತಾರೆ. ಹಾಗೂ ವಿಚಾರಣೆ ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಲಾಗಿರುತ್ತದೆ ಎಂದು ಹಿಂಬರಹದಲ್ಲಿ ತಿಳಿಸಿರುವುದು ಗೊತ್ತಾಗಿದೆ.

 

ಕ್ರಿಮಿನಲ್‌ ಆರೋಪ ಎದುರಿಸುತ್ತಿರುವ ವ್ಯಕ್ತಿ ಮುಖ್ಯಮಂತ್ರಿಗಳ ಪದಗ್ರಹಣ ಪ್ರಮಾಣ ವಚನ ಸ್ವೀಕಾರ ಸಮಾರಂಭದ ರಾಜ್ಯಪಾಲರು ಪ್ರಮಾಣ ವಚನ ಬೋಧಿಸುವ ವೇದಿಕೆಯಲ್ಲಿ ಗಣ್ಯಾತಿಗಣ್ಯರು ಆಸೀನರಾಗಿದ್ದು ಭದ್ರತೆ , ಶಿಷ್ಟಾಚಾರವನ್ನು ಹಾಗೂ ಕಾನೂನನ್ನು ಉಲ್ಲಂಘಿಸಿ ವೇದಿಕೆ ಮೇಲೆ ಕಾಣಿಸಿಕೊಂಡಿರುವ ಆರೋಪ ಕುರಿತು ನಿಯಮಾನುಸಾರ ಪರಿಶೀಲಿಸಿ ಕ್ರಮಕೈಗೊಳ್ಳಬೇಕು ಎಂದು ನಿಯಮ 72ರ ಅಡಿಯಲ್ಲಿ ವಿಧಾನ ಪರಿಷತ್‌ ಅಧಿವೇಶನದಲ್ಲಿ ಎಚ್‌ ವಿಶ್ವನಾಥ್‌ ಅವರು ಗಮನ ಸೆಳೆದಿದ್ದರು.

 

ಇದಕ್ಕೆ ಉತ್ತರಿಸಿದ್ದ ಗೃಹ ಸಚಿವ ಡಾ ಜಿ ಪರಮೇಶ್ವರ ಅವರು, ಪೊಲೀಸ್‌ ಆಯುಕ್ತರು ಈ ದೂರನ್ನು ವಿವಿಐಪಿ ಭದ್ರತೆ ಅವರಿಗೆ ವಹಿಸಿ ಕೂಲಂಕಷವಾಗಿ ವಿಚಾರಣೆ ಕೈಗೊಂಡು ಮುಂದಿನ ಕ್ರಮದ ಬಗ್ಗೆ ವರದಿ ಸಲ್ಲಿಸಲು ಸೂಚಿಸಿರುತ್ತಾರೆ. ವಿವಿಐಪಿ ಭದ್ರತೆ ವಿಭಾಗದಿಂದ ವರದಿ ಬಾಕಿ ಇದ್ದು ವರದಿಯನ್ನು ಸ್ವೀಕರಿಸಿದ ನಂತರ ಮುಂದಿನ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಉತ್ತರ ನೀಡಿದ್ದನ್ನು ಸ್ಮರಿಸಬಹುದು.

 

ಬಿ ಎಸ್‌ ಶಿವಣ್ಣ ಅವರು ಅಲೆಯನ್ಸ್‌ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ ಪಡೆದಿದ್ದು ಕೂಡ ವಿವಾದಕ್ಕೀಡಾಗಿತ್ತು. ಅಲ್ಲದೆ ಸಂಬಂಧ ಉನ್ನತ ಶಿಕ್ಷಣ ಇಲಾಖೆಗೆ ಜಯಲಿಂಗನಗೌಡ ಎಂಬುವರು ದೂರು ಸಲ್ಲಿಸಿದ್ದರು.

 

ಸುಳ್ಳು ಮಾಹಿತಿ ನೀಡಿ ಗೌ ಡಾ ಪಡೆದರೆ ಮಳವಳ್ಳಿ ಶಿವಣ್ಣ?; ತನಿಖೆಗೆ ವಿಧಾನಪರಿಷತ್‌ ಸದಸ್ಯ ಪತ್ರ

 

ಲೋಹಿಯಾ ವಿಚಾರ ವೇದಿಕೆಯನ್ನು ಮುನ್ನೆಡೆಸುತ್ತಿರುವ ಬಿ ಎಸ್‌ ಶಿವಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಿಕಟವಾಗಿ ಗುರುತಿಸಿಕೊಂಡಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts