ಬಡಾವಣೆ ನಕ್ಷೆ ತಿದ್ದುಪಡಿ, ಅಕ್ರಮ ಲಾಭ ಆರೋಪ; ಶ್ಯಾಮ್‌ಭಟ್‌ ಮತ್ತಿತರರ ವಿರುದ್ಧ ತನಿಖೆಗೆ ಅನುಮತಿ

ಬೆಂಗಳೂರು; ನಿವೇಶನದ ಮೂಲ ಹಂಚಿಕೆದಾರರ ಒಪ್ಪಿಗೆ ಪಡೆಯದೇ ಬಡಾವಣೆ ನಕ್ಷೆಯನ್ನೇ ತಿದ್ದುಪಡಿ ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ಟಿ ಶ್ಯಾಮ್‌ ಭಟ್‌, ರೇಷ್ಮೆ ಸಂಶೋಧನಾ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕರಾದ ಐಎಎಸ್‌ ರೂಪ ಅವರ ವಿರುದ್ಧ ವಿಚಾರಣೆ, ತನಿಖೆ ಕೈಗೊಳ್ಳಲು ರಾಜ್ಯ ಕಾಂಗ್ರೆಸ್‌ ಸರ್ಕಾರವು ಪೂರ್ವಾನುಮತಿ ನೀಡಿದೆ.

 

ಮೂಲ ಹಂಚಿಕೆದಾರರಿಗೆ ತೊಂದರೆಯನ್ನುಂಟು ಮಾಡಿ ಸರ್ಕಾರಿ ಅಧಿಕಾರಿಗಳು ಅಕ್ರಮವಾಗಿ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಅಧಿಕಾರ ದುರುಪಯೋಗಪಡಿಸಿಕೊಂಡಿರುವ ಆರೋಪ ಪ್ರಕರಣದಲ್ಲಿ ತನಿಖೆ ವಿಚಾರಣೆ ಕೈಗೊಳ್ಳಲು ಹಿಂದಿನ ಬಿಜೆಪಿ ಸರ್ಕಾರವು ಪೂರ್ವಾನುಮತಿ ನೀಡಿರಲಿಲ್ಲ. ಆದರೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ 100 ದಿನದೊಳಗೇ ಟಿ ಶ್ಯಾಮ್‌ ಭಟ್‌, ಐಎಎಸ್‌ ಅಧಿಕಾರಿ ರೂಪ ಅವರ ವಿರುದ್ಧ ವಿಚಾರಣೆ ಕೈಗೊಳ್ಳಲು ಪೂರ್ವಾನುಮತಿ ನೀಡಿ ಆದೇಶ ಹೊರಡಿಸಿದೆ.

 

ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 2023ರ ಆಗಸ್ಟ್‌ 18ರಂದು ಆದೇಶ ಹೊರಡಿಸಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

2021ರ ಡಿಸೆಂಬರ್‌ 3ರಂದು ಭ್ರಷ್ಟಾಚಾರ ನಿಗ್ರ ದಳದ ಪ್ರಸ್ತಾವನೆಯನ್ನು ಪರಿಶೀಲಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಬಿಡಿಎನ ಅಂದಿನ ಆಯುಕ್ತ ಟಿ ಶ್ಯಾಮ್‌ ಭಟ್‌, ಅಂದಿನ ಉಪ ಕಾರ್ಯದರ್ಶಿ ಐಎಎಸ್‌ ಅಧಿಕಾರಿ ರೂಪಾ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮಗಳನ್ನೆಸಗಿ ಸರ್ಕಾರಕ್ಕೆ ನಷ್ಟವನ್ನುಂಟು ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಬಗ್ಗೆ ಸತ್ಯಾಸತ್ಯತೆ ತಿಳಿಯುವ ಸಲುವಾಗಿ ತನಿಖೆ ನಡೆಸಲು ಪೂರ್ವಾನುಮತಿ ನೀಡಿರುವುದು ಆದೇಶದಿಂದ ತಿಳಿದು ಬಂದಿದೆ.

 

ಪ್ರಕರಣದ ವಿವರ

 

ಬೆಂಗಳೂರು ಆಭಿವೃದ್ಧಿ ಪ್ರಾಧಿಕಾರವು ನಿರ್ಮಿಸಿದ್ದ ಸರ್‌ ಎಂ ವಿಶ್ವೇಶ್ವರಯ್ಯ 5ನೇ ಬಡಾವಣೆಯಲ್ಲಿನ ಭಾಸ್ಕರ್‌ ರೆಡ್ಡಿ ಎಂಬುವರಿಗೆ 60*40 ಅಳತೆಯ ನಿವೇಶನವನ್ನು (ಸಂಖ್ಯೆ 617) ಹಂಚಿಕೆ ಮಾಡಿತ್ತು. ನಂತರ ಭಾಸ್ಕರ್‌ ರೆಡ್ಡಿ ಅವರಿಗೆ ಈ ನಿವೇಶನಕ್ಕೆ ಬದಲಾಗಿ ಸರ್‌ ಎಸ್‌ ವಿಶ್ವೇಶ್ವರಯ್ಯ 5ನೇ ಬಡಾವಣೆಯಲ್ಲಿಯೇ 1607/69 ಕ್ರಮಾಂಕದಲ್ಲಿದ್ದ ನಿವೇಶನವನ್ನು ಹಂಚಿಕೆ ಮಾಡಿ ಹಂಚಿಕೆ ಪತ್ರ ನೀಡಿತ್ತು. ಅಲ್ಲದೇ ಬಿಡಿಎ ಉಪ ಕಾರ್ಯದರ್ಶಿಯಾಗಿದ್ದ ಐಎಎಸ್‌ ಅಧಿಕಾರಿ ರೂಪ ಎಂಬುವರು ಶುದ್ಧ ಕ್ರಯ ಪತ್ರವನ್ನೂ (ದಸ್ತಾವೇಸು ಸಂಖ್ಯೆ; 4505/2005-06) ಮಾಡಿಕೊಟ್ಟಿದ್ದರು.

 

2012ರಲ್ಲಿ ಭಾಸ್ಕರ್‌ ರೆಡ್ಡಿ ಮತ್ತು ಇತರರಿಗೆ ಹಂಚಿಕೆಯಾಗಿದ್ದ 60*40 ಅಳತೆಯ ನಿವೇಶನವನ್ನು ಬಿಡಿಎ ಆಯುಕ್ತರ ಆದೇಶದಂತೆ 30*40 ಅಳತೆ ನಿವೇಶನಗಳನ್ನಾಗಿ ಪರಿವರ್ತಿಸಿ ಒಟ್ಟು 12 ನಿವೇಶನಗಳನ್ನಾಗಿ ವಿಂಗಡಿಸಿ ನಿವೇಶನ ಸಂಖ್ಯೆಗಳನ್ನು ನೀಡಲಾಗಿತ್ತು. ಆದರೆ ಈ ಪ್ರಕ್ರಿಯೆ ಸಂಬಂಧ 60*40 ಅಳತೆಯ ನಿವೇಶನದ ಮೂಲ ಹಂಚಿಕೆದಾರರ ಒಪ್ಪಿಗೆಯನ್ನು ಸಹ ಪಡೆಯದೇ ಬಡಾವಣೆ ನಕ್ಷೆ ತಿದ್ದುಪಡಿ ಮಾಡಲಾಗಿತ್ತು. ಇದಕ್ಕೆ ಅಭಿಯಂತರರ ವಿಭಾಗ ಮತ್ತು ಆಡಳಿತ ವಿಭಾಗದ ಅಧಿಕಾರಿ ಸಿಬ್ಬಂದಿ ಅಧಿಕಾರ ದುರುಪಯೋಗವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

 

ಅಲ್ಲದೇ ಈ ನಿವೇಶನಗಳನ್ನು ವಿಭಾಗ ಮಾಡಿ ನಂತರ ವಿಶೇಷ ಪ್ರೋತ್ಸಾಹ ಯೋಜನೆ ಅಡಿಯಲ್ಲಿ 30*40 ಅಳತೆ ನಿವೇಶನಗಳನ್ನು ವಿವಿಧ ವ್ಯಕ್ತಿಗಳಿಗೆ (ಫಲಾನುಭವಿಗಳಿಗೆ) ಹಂಚಿಕೆ ಮಾಡಲಾಗಿತ್ತು. ಈ ಪೈಕಿ ಭಾಸ್ಕರ್‌ ರೆಡ್ಡಿ ಅವರಿಗೆ ಹಂಚಿಕೆಯಾಗಿದ್ದ ನಿವೇಶನದಲ್ಲಿ 30*40 ಅಳತೆ ವಿಸ್ತೀರ್ಣಕ್ಕೆ ಪರಿವರ್ತಿಸಿದ್ದ ನಿವೇಶನ (ಸಂಖ್ಯೆ 1607/69 ಎ)ವನ್ನು ಪುಟ್ಟಲಕ್ಷ್ಮಮ್ಮ ಎಂಬುವರಿಗೆ ಹಂಚಿಕೆ ಮಾಡಲಾಗಿತ್ತು. ಅದೇ ರೀತಿ 1607/67 ಎ ನಿವೇಶನವನ್ನು ಗಂಗಮ್ಮ ಎಂಬುವರಿಗೆ, 1607/66 ಎ ನಿವೇಶನವನ್ನು ಕೃಷ್ಣ ಎಂಬುವರಿಗೆ, 1607/70 ಎ ನಿವೇಶನವನ್ಉ ನಾಗರತ್ನಮ್ಮ ಅವರಿಗೆ, ನಿವೇಶನ ಸಂಖ್ಯೆ 16073/71ನ್ನು ರಾಮಚಂದ್ರ ಪಣಿಕಲ್‌ ಅವರಿಗೆ ಹಂಚಿಕೆ ಮಾಡಲಾಗಿತ್ತು.

 

ಈ ರೀತಿ ಬಡಾವಣೆ ನಕ್ಷೆಯ ಮಾರ್ಪಾಡು ಮತ್ತು ನಿವೇಶನಗಳ ಅಳತೆಯ ಮಾರ್ಪಾಡಿಕೆಗೆ ಸಂಬಂಧಿಸಿದ ಪ್ರಸ್ತಾವನೆಯು ಬಿಡಿಎ ಎಕ್ಸಿಕ್ಯೂಟಿವ್ ಇಂಜಿನಿಯರ್‌ ಮೂಲಕ ಬಿಡಿಎ ಅಯುಕ್ತರಿಗೆ ಸಲ್ಲಿಕೆಯಾಗಿತ್ತು. ಮೂಲ ಬಡಾವಣೆ ನಕ್ಷೆಯಂತೆ 60*40 ಅಳತೆ ನಿವೇಶನಗಳು ಫಲಾನುಭವಿಗಳಿಗೆ ಹಂಚಿಕೆಯಾಗಿದ್ದರೂ ಸಹ ಅವರಿಗೆ ಬದಲಿ ನಿವೇಶನ ವ್ಯವಸ್ಥೆ ಮಾಡದೇ 30*40 ಅಳತೆ ನಿವೇಶನಗಳನ್ನಾಗಿ ಮಾರ್ಪಡಿಸಲಾಗಿತ್ತು ಎಂಬ ಅಂಶವು ಆದೇಶದಿಂದ ತಿಳಿದು ಬಂದಿದೆ.

 

’30*40 ಅಳತೆಯ ನಿವೇಶನಗಳ ಖಚಿತ ಅಳತೆ ವರದಿ ಪಡೆದು ಬೇರೆ ವ್ಯಕ್ತಿಗಳಿಗೆ ಹಂಚಿಕೆ ಮಾಡಲಾಗಿತ್ತು. ಇದರಿಂದ ಮೂಲ ಹಂಚಿಕೆದಾರರಿಗೆ ತೊಂದರೆಯುಂಟಾಗಿತ್ತು. ಇದರಿಂದ ಸರ್ಕಾರಿ ಅಧಿಕಾರಿಗಳು ಅಕ್ರಮವಾಗಿ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ,’ ಎಂದು ಆದೇಶದಲ್ಲಿ ವಿವರಿಸಲಾಗಿದೆ.

 

ಈ ಪ್ರಕರಣದಲ್ಲಿ ಬಿಡಿಎ ಅಂದಿನ ಅಯುಕ್ತ ಟಿ ಶ್ಯಾಮ್‌ ಭಟ್‌, ಅಂದಿನ ಉಪ ಕಾರ್ಯದರ್ಶಿ ಐಎಎಸ್‌ ಅಧಿಕಾರಿ ರೂಪಾ ಮತ್ತು ಇತರೆ ಅಧಿಕಾರಿಗಳ ವಿರುದ್ಧ ವಿಚಾರಣೆ ಹಾಗೂ ತನಿಖೆ ಕೈಗೊಳ್ಳಲು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ಕಲಂಕ 17(ಎ) ಅನ್ವಯ ಪೂರ್ವಾನುಮತಿ ನೀಡಬೇಕು ಎಂದು ಎಸಿಬಿಯು 2021ರ ಡಿಸೆಂಬರ್‌ 3ರಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಪ್ರಸ್ತಾವನೆಗೆ ಹಿಂದಿನ ಬಿಜೆಪಿ ಸರ್ಕಾರವು ಪೂರ್ವಾನುಮತಿ ನೀಡಿರಲಿಲ್ಲ ಎಂಬುದು ಆದೇಶದಿಂದ ಗೊತ್ತಾಗಿದೆ.

 

2013ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಟಿ ಶ್ಯಾಮ್‌ ಭಟ್‌ ಅವರನ್ನು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಅಧ್ಯಕ್ಷರನ್ನಾಗಿ ನೇಮಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts