204 ಕೋಟಿ ರು. ಮೊತ್ತದ ಕಾಮಗಾರಿಗಳಿಗೆ ಪ್ರಸ್ತಾವನೆ; ಆರ್ಥಿಕ ಇಲಾಖೆ ಸುತ್ತೋಲೆ ಬದಿಗೊತ್ತಿ ಮೌಖಿಕ ಸೂಚನೆ

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರವು ಕೈಗೊಂಡಿದ್ದ ಎಲ್ಲಾ ಇಲಾಖೆಗಳ ಹಾಗೂ ಇಲಾಖೆಗಳ ಅಧೀನಕ್ಕೊಳಪಡುವ ನಿಗಮ, ಮಂಡಳಿ, ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ಆರಂಭವಾಗದಿರುವ ಎಲ್ಲಾ ಕಾಮಗಾರಿಗಳನ್ನು ತಡೆ ಹಿಡಿಯಬೇಕು ಎಂದು ಆರ್ಥಿಕ ಇಲಾಖೆಯ ನಿರ್ದೇಶನವನ್ನು ಬದಿಗೊತ್ತಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ್‌ ಪಾಟೀಲ್‌ ಅವರು 204.25 ಕೋಟಿ ರು ಮೊತ್ತದ ಕಾಮಗಾರಿಗಳನ್ನು ಮುಂದುವರೆಸುವ ಪ್ರಸ್ತಾವನೆ ಸಲ್ಲಿಸಬೇಕು ಅಧಿಕಾರಿಗಳಿಗೆ ಸೂಚಿಸಿರುವುದು ಇದೀಗ ಬಹಿರಂಗವಾಗಿದೆ.

 

ಅಟಲ್‌ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ, ವಿಕ್ಟೋರಿಯಾ ಆಸ್ಪತ್ರೆ ಸೇರಿದಂತೆ ಒಟ್ಟು 15 ವೈದ್ಯಕೀಯ ಸಂಸ್ಥೆ, ಆಸ್ಪತ್ರೆಗಳಲ್ಲಿನ ಕಾಮಗಾರಿಗಳನ್ನು ಮುಂದುವರೆಸಲು ಸಚಿವ ಡಾ ಶರಣ ಪ್ರಕಾಶ್‌ ಪಾಟೀಲ್‌ ಅವರು ಇಲಾಖೆ ಅಧಿಕಾರಿಗಳಿಗೆ ಮೌಖಿಕ ಸೂಚನೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ಗೆ (FILE NUMBER HF2S-CEW/35/2023) ಟಿಪ್ಪಣಿ ಹಾಳೆಗಳು ಲಭ್ಯವಾಗಿವೆ.

 

‘ಕಾಮಗಾರಿಗಳನ್ನು ಸರ್ಕಾರದ ನಿರ್ದೇಶನದಂತೆ ತಡೆಹಿಡಿಯಲಾಗಿದ್ದು, ಈ ಬಗ್ಗೆ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವರೊಂದಿಗೆ ಚರ್ಚಿಸಲಾಗಿದ್ದು ಸಚಿವರು ಕಾಮಗಾರಿಗಳ ಪ್ರಕ್ರಿಯೆಗಳನ್ನು ಮುಂದುವರೆಸುವ ಪ್ರಸ್ತಾವನೆಯನ್ನು ಸಲ್ಲಿಸಲು ಮೌಖಿಕವಾಗಿ ಸೂಚಿಸಿದ್ದಾರೆ,’ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಇಂಜಿನಿಯರಿಂಗ್‌ ಘಟಕದ ಮುಖ್ಯ ಇಂಜಿನಿಯರ್‍‌ ಸಿ ಮಂಜಪ್ಪ ಅವರು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

ಜಲಸಂಪನ್ಮೂಲ ಇಲಾಖೆಯೂ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕಾಮಗಾರಿ ತಡೆಹಿಡಿಯಲು ಮತ್ತು ಕಾಮಗಾರಿ ನಿರ್ವಹಿಸಿರುವ ಗುತ್ತಿಗೆದಾರರು ಬಾಕಿ ಹಣ ಪಾವತಿ ವಿಚಾರವು ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಆರ್ಥಿಕ ಇಲಾಖೆ ನಿರ್ದೇಶನವನ್ನೂ ಉಲ್ಲಂಘಿಸಿ ಕಾಮಗಾರಿ ಮುಂದುವರೆಸಲು ಡಾ ಶರಣ ಪ್ರಕಾಶ್‌ ಪಾಟೀಲ್‌ ಅವರು ನೀಡಿರುವ ಮೌಖಿಕ ಸೂಚನೆಯು ಮುನ್ನೆಲೆಗೆ ಬಂದಿದೆ.

 

ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ಕೆಲವೇ ಕೆಲವು ದಿನಗಳಲ್ಲಿ ಹಿಂದಿನ ಸರ್ಕಾರವು ಕೈಗೊಂಡಿದ್ದ ಎಲ್ಲಾ ಬಗೆಯ ಕಾಮಗಾರಿಗಳನ್ನು ತಡೆಹಿಡಿಯಬೇಕು ಎಂದು ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಏಕ್‌ರೂಪ್‌ ಕೌರ್‍‌ ಅವರು ಇಲಾಖೆಗಳ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಇಲಾಖೆಗಳ ಮುಖ್ಯಸ್ಥರುಗಳಿಗೆ 2023ರ ಮೇ 22ರಂದು ಸುತ್ತೋಲೆ ಹೊರಡಿಸಿದ್ದರು.

 

204.25 ಕೋಟಿ ಮೊತ್ತದ ಕಾಮಗಾರಿಗಳಿಗೆ ಪ್ರಸ್ತಾವನೆ

 

ವೈದ್ಯಕೀಯ ಶಿಕ್ಷಣ ಇಲಾಖೆಯ ಇಂಜಿನಿಯರಿಂಗ್‌ ಘಟಕವು 204.25 ಕೋಟಿ ರು. ಮೊತ್ತದ ಕಾಮಗಾರಿಗಳ ಮುಂದುವರಿಕೆಗೆ ಪ್ರಸ್ತಾವನೆ ಸಲ್ಲಿಸಿದೆ. ಈ ಕಾಮಗಾರಿಗಳಿಗೆ 2022ರ ಆಗಸ್ಟ್‌ 30ರಿಂದ ಮತ್ತು 2023ರ ಜುಲೈ 7ರವರೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿರುವುದು ತಿಳಿದು ಬಂದಿದೆ.

 

ಅಟಲ್‌ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯದಲ್ಲನ ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ಆಸ್ಪತ್ರೆಯಲ್ಲಿ 500 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಹೊಸದಾಗಿ ಮಾಡ್ಯುಲರ್‍‌ ವಿಧಾನದಲ್ಲಿನ 3 ಹಂತದಲ್ಲಿನ ಕಾಮಗಾರಿಗೆ 108.00 ಕೋಟಿ ರು. ರು ಮೊತ್ತಕ್ಕೆ 2023ರ ಫೆ.28ರಂದು ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಆದರೆ ಈ ಕಾಮಗಾರಿಯನ್ನು ಮೂರು ಹಂತದಲ್ಲಿ ಟೆಂಡರ್‍‌ ಕರೆಯುವ ಬದಲು ಒಂದೇ ಹಂತದಲ್ಲಿ ಟೆಂಡರ್‍‌ ಕರೆಯಲು 2023ರ ಜುಲೈ 18ರಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ಸರ್ಕಾರಿ ದಂತ ವೈದ್ಯಕೀಯ ಕಾಲೇಜು, ಸಂಶೋಧನಾ ಸಂಸ್ಥೆಯ ತುರ್ತು ದುರಸ್ತಿ, ನವೀಕರಣ ಕಾಮಗಾರಗೆ 198.00 ಲಕ್ಷ ರು. (202 ಆಗಸ್ಟ್‌ 30ರಂದು ಆಡಳಿತಾತ್ಮ ಅನುಮೋದನೆ) ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ 450.00 ಲಕ್ಷ ರು., ಮೊತ್ತದ ಕಾಮಗಾರಿಗಳ ಟೆಂಡರ್‍‌ ಇನ್ನೂ ಅನುಮೋದನೆ ಹಂತದಲ್ಲಿರುವುದು ತಿಳಿದು ಬಂದಿದೆ.

 

ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ 80.50 ಲಕ್ಷ ರು., ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ 350ರಿಂದ 750 ಹಾಸಿಗೆಗಳ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸಿದ ಬೋಧಕ ಆಸ್ಪತ್ರೆಯ ಕಟ್ಟಡಕ್ಕೆ ಮಳೆ ನೀರು ಸಂಗ್ರಹಣೆ ವ್ಯವಸ್ಥೆಗೆ 99.75 ಲಕ್ಷ ರು., ಹಿಮ್ಸ್‌ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ 450 ಹಾಸಿಗೆಗಳ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ 166.00 ಲಕ್ಷ ರು., ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ಎಂಸಿಹೆಚ್‌ ಆಸ್ಪತ್ರೆಗೆ ಐಸಿಯು ಮತ್ತು ಪಿಐಸಿಯು ಬೆಡ್‌, ಎಂಜಿಪಿಎಲ್‌ಎಸ್‌ ಲೈನ್‌ಗಳು, ಎಲೆಕ್ಟ್ರಿಕಲ್‌ ವರ್ಕ್ಸ್‌, ಸಿವಿಲ್‌ ವರ್ಕ್ಸ್‌ಗಳಿಗೆ 156.00 ಲಕ್ಷ ರು., ಹಿಮ್ಸ್‌ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಎಂಬಿಬಿಎಸ್‌ ಹಾಸ್ಟೆಲ್‌ ಮೇಲ್ಬಾಗದಲ್ಲಿ 840 ಲಕ್ಷ ರು. ವೆಚ್ಚದಲ್ಲಿ 4 ಮತ್ತು 5ನೇ ಅಂತಸ್ತು ನಿರ್ಮಾಣ ಕಾಮಗಾರಿಯೂ ಟೆಂಡರ್‍‌ ಆಹ್ವಾನಿಸುವ ಹಂತದಲ್ಲಿರುವುದು ಗೊತ್ತಾಗಿದೆ.

 

ಇನ್ನು, ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಬಾಲಕಿಯರ ಮತ್ತು ಬಾಲಕರ ವಸತಿ ನಿಲಯದಲ್ಲಿ ಏಳನೇ ಮಹಡಿ ನಿರ್ಮಿಸುವ ಕಾಮಗಾರಿಗೆ 700 ಲಕ್ಷ ರು., ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಆವರಣದಲ್ಲಿ ಯು ಜಿ ಬಾಲಕಿಯರ ವಸತಿ ನಿಲಯದ ದುರಸ್ತಿ ಹಾಗೂ ನವೀಕರಣ ಕಾಮಗಾರಿಗೆ 198 ಲಕ್ಷ ರು., ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ ಸಹಯೋಗದೊಂದಿಗೆ ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಫೆರಿಫೆರಲ್‌ ಕ್ಯಾನ್ಸರ್‍‌ ಕೇಂದ್ರ ನಿರ್ಮಾಣಕ್ಕೆ 5000.00 ಲಕ್ಷ ರು. ವೆಚ್ಚದ ಕಾಮಗಾರಿಯು ಟೆಂಡರ್‍‌ ಅನುಮೋದನೆ ಹಂತದಲ್ಲಿದೆ.

 

ಹಾಗೆಯೇ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಅಗ್ನಿ ಸುರಕ್ಷತಾ ವ್ಯವಸ್ಥೆ ಅಳವಡಿಸಲು 210 ಲಕ್ಷ ರು., ಕಿಮ್ಸ್‌ ಹುಬ್ಬಳ್ಳಿ ಆವರಣದಲ್ಲಿ ಬೋಧನೆ ಹಾಗೂ ತರಬೇತಿಗಾಗಿ ನವೀಕರಿಸುವ ಕಾಮಗಾರಿಗೆ 500 ಲಕ್ಷ ರು., ಕಿಮ್ಸ್‌ ಹುಬ್ಬಳ್ಳಿ ಆವರಣದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರ 6 ವಸತಿ ನಿಲಯಗಳನ್ನು ನವೀಕರಿಸುವ ಕಾಮಗಾರಿಗೆ 480 ಲಕ್ಷ ರು., ಇದೇ ಕಿಮ್ಸ್‌ನಲ್ಲಿ ಅಗ್ನಿ ಸುರಕ್ಷತಾ ವ್ಯವಸ್ಥೆ ಒದಗಿಸಲು 525 ಲಕ್ಷ ರು. ಕಾಮಗಾರಿಗಳಿಗೆ ಟೆಂಡರ್‍‌ ಆಹ್ವಾನಿಸಬೇಕಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಮುಖ್ಯ ಇಂಜಿನಿಯರ್‍‌ ಸಿ ಮಂಜಪ್ಪ ಅವರು ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts