ಬೋಧಕ, ಬೋಧಕೇತರ ಸಿಬ್ಬಂದಿ ವರ್ಗಾವಣೆ; ತರಳಬಾಳು ಸಂಸ್ಥೆ, ಸರ್ಕಾರದ ವಿರುದ್ಧ ಶಿಕ್ಷಕರ ಅಸಮಾಧಾನ

ಬೆಂಗಳೂರು; ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯ ತರಳಬಾಳು ಜಗದ್ಗುರು ವಿದ್ಯಾ ಶಿಕ್ಷಣ ಸಂಸ್ಥೆಯಲ್ಲಿನ ಪ್ರೌಢಶಾಲೆಗಳ 379 ಬೋಧಕ/ಬೋಧಕೇತರ ಸಿಬ್ಬಂದಿ ವರ್ಗಾವಣೆ ಪ್ರಕ್ರಿಯೆ ಕುರಿತು ಸಂಸ್ಥೆಯ ಶಿಕ್ಷಕರ ಸಮೂಹದಿಂದ ಆಕ್ಷೇಪಗಳು ವ್ಯಕ್ತವಾಗಿವೆ.

 

ತರಳಬಾಳು ಶಿಕ್ಷಣ ಸಂಸ್ಥೆಯ ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯು 2023ರ ಆಗಸ್ಟ್‌ 5ರಂದು ಹೊರಡಿಸಿರುವ ಜ್ಙಾಪನ ಪತ್ರಕ್ಕೆ ಸಂಸ್ಥೆಯ ಶಿಕ್ಷಕರು ಸೇರಿದಂತೆ ಇನ್ನಿತರೆ ವರ್ಗದ ನೌಕರರು ಏಕಕಾಲಕ್ಕೆ ಸರ್ಕಾರ ಮತ್ತು ಸಂಸ್ಥೆಯ ಆಡಳಿತ ಮಂಡಳಿಯ ಪದಾಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.

 

ಸರ್ಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆಯಲ್ಲಿಯೂ ಹಲವು ಲೋಪಗಳಾಗಿವೆ ಎಂಬ ಆರೋಪಗಳು ಕೇಳಿ ಬರುತ್ತಿರುವ ನಡುವೆಯೇ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿಯೂ ನಡೆದಿರುವ ವರ್ಗಾವಣೆ ಸಂಬಂಧಿತ ಆಕ್ಷೇಪಗಳು ಮುನ್ನೆಲೆಗೆ ಬಂದಿವೆ.

 

ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯಡಿಯಲ್ಲಿನ ಅನುದಾನಿತ ಪ್ರೌಢಶಾಲೆಗಳ ಬೋಧಕ, ಬೋಧಕತೇರ ಸಿಬ್ಬಂದಿ ವರ್ಗಾವಣೆ ಪ್ರಕ್ರಿಯೆಲ್ಲಿ ಸಂಸ್ಥೆಯಿಂದಲೇ ಹಲವು ಲೋಪಗಳು ನಡೆದಿವೆ ಎಂದು ಹಲವು ಶಿಕ್ಷಕರು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ದೂರು ನೀಡಿದ್ದರು. ಆದರೂ ಸಹ ಇಲಾಖೆಯು ವರ್ಗಾವಣೆಗೆ ಅನುಮತಿ ನೀಡಿರುವುದಕ್ಕೆ ಬೋಧಕ/ಬೋಧಕೇತರ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.

 

‘ಈ ವರ್ಗಾವಣೆಗಳನ್ನು ಇಲಾಖೆ ನಿಯಮಾವಳಿಗಳು ಮತ್ತು ಕರ್ನಾಟಕ ಶಿಕ್ಷಣ ಕಾಯ್ದೆ ಅನುಸಾರವಾಗಿ ಮಾಡಲಾಗಿದೆ. ಯಾವುದೇ ನೌಕರರಿಗೆ ತೊಂದರೆ ಕೊಟ್ಟಿರುವುದಿಲ್ಲ, ಹಾಗೂ ಈ ವರ್ಗಾವಣೆಗಳನ್ನು ಆಡಳಿತ ಹಿತದೃಷ್ಟಿಯಿಂದ ಮಾಡಲಾಗಿದೆ,’ ಎಂದು ಸಂಸ್ಥೆಯು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ವಿವರಿಸಿದ್ದರೂ ಸಂಸ್ಥೆಯ ಶಿಕ್ಷಕರು ಸೇರಿದಂತೆ ಇನ್ನಿತರೆ ನೌಕರರು ಈ ವರ್ಗಾವಣೆ ಕುರಿತಾಗಿ ತಕರಾರುಗಳನ್ನು ಎತ್ತಿರುವುದು ತಿಳಿದು ಬಂದಿದೆ.

 

ಶಿಕ್ಷಕರು ಸಂಸ್ಥೆಯ ಹಿರಿಯ ಜಗದ್ಗುರು ಡಾ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಗಮನಕ್ಕೂ ಈ ವಿಚಾರವನ್ನು ಗಮನಕ್ಕೆ ತಂದಿದ್ದರು. ಆದರೂ ವರ್ಗಾವಣೆಯಲ್ಲಿ ಲೋಪಗಳಾಗಿವೆ ಎಂದು ಬಾಧಿತ ಶಿಕ್ಷಕರು ಆರೋಪಿಸಿದ್ದಾರೆ.

 

ಅನುದಾನಿತ ಪ್ರೌಢಶಾಲೆಗಳ ಬೋಧಕ, ಬೋಧಕೇತರ ಸಿಬ್ಬಂದಿಗಳನ್ನು ಅವರದೇ ಆಡಳಿತ ಮಂಡಳಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಇತರೆ ಅನುದಾನಿತ ಪ್ರೌಢಶಾಲೆಗಳಲ್ಲಿನ ಸರಣಿ ಪರಸ್ಪರ ವರ್ಗಾವಣೆ ಸಂಬಂಧ ಚಿತ್ರದುರ್ಗ ಜಿಲ್ಲೆಯ ಉಪ ನಿರ್ದೇಶಕರು 2023ರ ಜೂನ್‌ 20ರಂದು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ.

 

ಚಿಕ್ಕಮಗಳೂರು ಜಿಲ್ಲೆಯ ಹಿರೇಮಗಳೂರಿನ ಪ್ರಭುಲಿಂಗಸ್ವಾಮಿ, ಹಾವೇರಿಯ ಬ್ಯಾಡಗಿಯ ಗವಿಗೋಳ ಬಸಪ್ಪ ದ್ಯಾವಪ್ಪ, ಅರಸೀಕೆರೆ ತಾಲೂಕಿನ ಬೆಂಡಿಕೆರೆಯ ಮರುಳಸಿದ್ದೇಶ್ವರ ಸ್ಮಾರಕ ನಾಗಸಮುದ್ರ ಶಿಖರಣ್ಣ, ಹರಳಕಟ್ಟೆಯ ಸಾತನಗೆರೆ ಬಸಪ್ಪ ಬಸಮ್ಮ, ಹೊಳಲ್ಕೆರೆಯ ತಾಲೂಕಿನ ಕೆಂಚಾಪುರದ ಶ್ರೀ ರಂಗನಾಥಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯ ಶಿಕ್ಷಕರ ವರ್ಗಾವಣೆ ಪ್ರಸ್ತಾವನೆಯನ್ನು ಅನುಮೋದಿಸಿರುವ ಇಲಾಖೆಯು,  379 ಬೋಧಕ, ಬೋಧಕೇತರ ಸಿಬ್ಬಂದಿಗಳನ್ನು 2023-24ನೇ ಸಾಲಿನಲ್ಲಿ ವರ್ಗಾವಣೆಗೆ ಅನುಮತಿ ನೀಡಿ ಜ್ಞಾಪನ ಪತ್ರ ಹೊರಡಿಸಿದೆ.

 

ಆಡಳಿತ ಮಂಡಳಿಯು ಸಲ್ಲಿಸಿದ್ದ ವರ್ಗಾವಣೆ ಪಟ್ಟಿ ಸಂಬಂಧ ಸರ್ಕಾರಕ್ಕೆ ಹಲವು ಮನವಿ, ದೂರುಗಳು ಸಲ್ಲಿಕೆಯಾಗಿದ್ದವು. ಈ ಕುರಿತು ಆಡಳಿತ ಮಂಡಳಿಯಿಂದ ಇಲಾಖೆಯು ವಿವರಣೆ, ಸ್ಪಷ್ಟನೆ ಕೇಳಿತ್ತು. ಆದರೂ ಇವುಗಳನ್ನು ಪುರಸ್ಕರಿಸದೇ ಆಡಳಿತ ಮಂಡಳಿಯ ಒತ್ತಡಕ್ಕೆ ಮಣಿದು ವರ್ಗಾವಣೆ ಮಾಡಲಾಗಿದೆ ಎಂಬ ಗುರುತರವಾದ ಆರೋಪವೂ ಕೇಳಿ ಬಂದಿದೆ.

 

‘ನಿಯಮಾವಳಿಗಳ ಪ್ರಕಾರ ವರ್ಗಾವಣೆ ಪಟ್ಟಿ ತಯಾರಿಸಿಲ್ಲ. ವರ್ಗಾವಣೆ ಮಾಡುವ ಉದ್ದೇಶದಿಂದ ಹಾಕಿದ್ದ ಹಲವು ನಿಬಂಧನೆಗಳನ್ನು ಸಂಸ್ಥೆಯ ನೌಕರರ ಗಮನಕ್ಕೆ ತಂದಿತ್ತು. ಸಂಸ್ಥೆಯೇ ರೂಪಿಸಿರುವ ನಿಯಮಾವಳಿಗಳ ಪ್ರಕಾರ ವರ್ಗಾವಣೆ ಆಗಿಲ್ಲ. ವರ್ಗಾವಣೆ ಅರ್ಜಿ ಸಲ್ಲಿಸುವ ವೇಳೆ ಪತಿ ಮತ್ತು ಪತ್ನಿ ನೌಕರಿಯಲ್ಲಿದ್ದರೇ ಅವರು ವಿವರಗಳನ್ನು ನೀಡಬೇಕು ಎಂದು ತಿಳಿಸಲಾಗಿತ್ತು. ಅಂತಹ ವಿವರ ಸಲ್ಲಿಸಿದ್ದರೂ ಅದಕ್ಕೆ ವಿರುದ್ಧವಾಗಿ ವರ್ಗಾವಣೆಗಳು ಆಗಿವೆ. ಪತಿ ಪತ್ನಿ ಪ್ರಕರಣದಲ್ಲಿ ಸರ್ಕಾರವೇ ನೀತಿ ರೂಪಿಸಿದೆ. ಆದರೆ ಈ ಸಂಸ್ಥೆಯಲ್ಲಿ ಇದನ್ನು ಧಿಕ್ಕರಿಸಲಾಗಿದೆ.’ ಎಂದು ಹೆಸರು ಹೇಳಲಿಚ್ಛಿಸದ ಶಿಕ್ಷಕರೊಬ್ಬರು ‘ದಿ ಫೈಲ್‌’ಗೆ ಪ್ರತಿಕ್ರಿಯೆ ನೀಡಿದರು.

 

ಪತಿ ಅಥವಾ ಪತ್ನಿ ಸರ್ಕಾರಿ, ಖಾಸಗಿ ಉದ್ಯೋಗಿಗಳಾಗಿದ್ದಲ್ಲಿ ಅವರಿಗೆ ಸಮೀಪದ ಶಾಲೆಗಳಿಗೆ ವರ್ಗಾವಣೆ ಮಾಡಬಹುದಿತ್ತು. ಇಂತಹ ವಿವರಗಳನ್ನು ಪಡೆದಿದ್ದರೂ ಸಹ ಪತಿ ಪತ್ನಿ ಪ್ರಕರಣದಲ್ಲಿಯೂ ವಿರುದ್ಧವಾಗಿ ವರ್ಗಾವಣೆ ಮಾಡಲಾಗಿದೆ. ಒಂದೇ ವಿಭಾಗದೊಳಗೆ ವರ್ಗಾವಣೆ ಇಲ್ಲವೆಂದು ತಿಳಿಸಲಾಗಿತ್ತು. ಆದರೆ ಅದರಂತೆ ನಡೆದುಕೊಂಡಿಲ್ಲ. ಶಕ್ತಿವಂತರಿಗೆ ವರ್ಗಾವಣೆ ಭಾಗ್ಯ ದೊರೆತಿದೆ ಎಂದು ಶಿಕ್ಷಕರು  ಆರೋಪಿಸಿದ್ದಾರೆ.

 

ಐದು ವರ್ಷಗಳಿಗಿಂತ ಹೆಚ್ಚು  ಕಾಲ ಒಂದೇ ಶಾಲೆಯಲ್ಲಿ ಕೆಲಸ ಮಾಡುತ್ತಿರುವವರು ಕಡ್ಡಾಯವಾಗಿ ಅರ್ಜಿ ಕೊಡಬೇಕು ಎಂದು ಹೇಳಿದ್ದರು. ಈಗ ಐದು ವರ್ಷಗಳಿಂದ ಒಂದೇ ಕಡೆ ಇರುವ ಎಲ್ಲಾ ನೌಕರರ ವರ್ಗಾವಣೆ ಮಾಡಿಲ್ಲ. ಆಯ್ದ ನೌಕರರನಷ್ಟೇ ವರ್ಗಾವಣೆ ಮಾಡಲಾಗಿದೆ. ಈ ಸಂಸ್ಥೆಯಲ್ಲಿ ವರ್ಗಾವಣೆ ನೀತಿಯೇ ಇಲ್ಲ ಎಂದು ಶಿಕ್ಷಕರೊಬ್ಬರು ಅಳಲು ತೋಡಿಕೊಂಡಿದ್ದಾರೆ.

the fil favicon

SUPPORT THE FILE

Latest News

Related Posts