ಖೊಟ್ಟಿ ದಾಖಲೆ ಸೃಷ್ಟಿಸಿ ಬೊಕ್ಕಸಕ್ಕೆ 18.12 ಕೋಟಿ ನಷ್ಟ; ವರದಿ ಸಲ್ಲಿಸಿ 2 ತಿಂಗಳಾದರೂ ಕ್ರಮಕೈಗೊಳ್ಳದ ಸರ್ಕಾರ

ಬೆಂಗಳೂರು; ರಾಜ್ಯದ ನಗರಸಭೆ ಮತ್ತು ಪುರಸಭೆಗಳ ವ್ಯಾಪ್ತಿಯಲ್ಲಿ ಖೊಟ್ಟಿ ದಾಖಲೆಗಳ ಸೃಷ್ಟಿಸಿ ಅನಧಿಕೃತವಾಗಿ ಇ-ಖಾತೆ ಮಾಡಿರುವ ಪ್ರಕರಣಗಳಿಂದಾಗಿ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರುಪಾಯಿನಷ್ಟು ನಷ್ಟವುಂಟಾಗಿರುವ ಪ್ರಕರಣವು ಇದೀಗ ಬಹಿರಂಗವಾಗಿದೆ.

 

ಯಾದಗಿರಿ ನಗರಸಭೆ ವ್ಯಾಪ್ತಿಯೊಂದರಲ್ಲೇ ಅನಧಿಕೃತವಾಗಿ ವ್ಯವಸಾಯ ಜಮೀನಿನಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಲಾಗಿದೆ. ಇ-ಆಸ್ತಿ ತಂತ್ರಾಂಶದ ಮೂಲಕ 1,310 ಸಂಖ್ಯೆಯಲ್ಲಿ ಅನಧಿಕೃತವಾಗಿ ಇ-ಖಾತೆ ಮಾಡಿ 18.12 ಕೋಟಿ ರು.ನಷ್ಟು ಬೊಕ್ಕಸಕ್ಕೆ ನಷ್ಟವುಂಟಾಗಿರುವ ಪ್ರಕರಣವನ್ನು ಇದೀಗ ಪೌರಾಯುಕ್ತ ಸಂಗಪ್ಪ ಉಪಾಸೆ ಅವರು ಹೊರಗೆಳೆದಿದ್ದಾರೆ.

 

ಖೊಟ್ಟಿ ದಾಖಲೆ ಸೃಷ್ಟಿ ಮತ್ತು ಇ-ಆಸ್ತಿ ತಂತ್ರಾಂಶದ ಮೂಲಕ ಇ-ಖಾತೆ ಮಾಡಿರುವ ಬಗ್ಗೆ ಸಂಗಪ್ಪ ಉಪಾಸೆ ಅವರು ಕಲ್ಬುರ್ಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಮತ್ತು ಪೌರಾಡಳಿತ ನಿರ್ದೇಶನಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ವರದಿ ಸಲ್ಲಿಸಿ 2 ತಿಂಗಳು ಕಳೆದರೂ ಸಚಿವ ರಹೀಂ ಖಾನ್‌ ಈ ವರದಿಯತ್ತ ಗಮನಹರಿಸಿಲ್ಲ ಎಂದು ಗೊತ್ತಾಗಿದೆ. ಈ ವರದಿ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಯಾದಗಿರಿ ನಗರದ ವ್ಯಾಪ್ತಿಯ ವ್ಯವಸಾಯ (ಹಸಿರು ಮತ್ತು ಹಳದಿ ವಲಯ) ಜಮೀನಿನಲ್ಲಿ ಎನ್ ಎ ಆಗದೇ ಯೋಜನಾ ಪ್ರಾಧಿಕಾರದ ಅನುಮೋದನೆ ಇಲ್ಲದೆಯೇ ಮತ್ತು ಯೋಜನಾ ಪ್ರಾಧಿಕಾರದಿಂದ ನಿವೇಶನಗಳನ್ನು ಬಿಡುಗಡೆ ಮಾಡಿರಲಿಲ್ಲ. ಹಾಗೂ ನಿವೇಶನಗಳನ್ನು ಅಭಿವೃದ್ಧಿಪಡಿಸಿರಲಿಲ್ಲ. ಆದರೂ ಈ ನಿವೇಶನಗಳಿಗೆ ಖೊಟ್ಟಿ ದಾಖಲೆ ಸೃಷ್ಟಿಸಿ ಇ-ಆಸ್ತಿ ತಂತ್ರಾಂಶದಲ್ಲಿ 1,310 ಅನಧಿಕೃತ ಖಾತೆ ಮಾಡಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ಇದರಿಂದ ಸರ್ಕಾರದ ಬೊಕ್ಕಸಕ್ಕೆ 18.12 ಕೋಟಿಯಷ್ಟು ನಷ್ಟ ಉಂಟಾಗಿರುತ್ತದೆ. ಒಂದು ಎಕರೆ ಜಮೀನಿನಲ್ಲಿ ರಸ್ತೆ, ಸಾರ್ವಜನಿಕ ಉಪಯೋಗ ನಿವೇಶನ, ಉದ್ಯಾನವನ ಜಾಗ ಬಿಡದೇ ಅಂದಾಜು 30 ನಿವೇಶನಗಳನ್ನು ರಚಿಸಲಾಗಿದೆ. ಇದನ್ನು ಗಣನೆಗೆ ತೆಗೆದುಕೊಂಡರೇ ಒಟ್ಟು 1,310 ಅನಧಿಕೃತ ಖಾತೆಗಳನ್ನು ಅಂದಾಜು 30*40 ಅಡಿ ಅಳತೆಯ ನಿವೇಶನವೆಂದು ಗಣನೆಗೆ ತೆಗೆದುಕೊಂಡರೇ ಒಟ್ಟು 1,310 ಅನಧಿಕೃತ ಖಾತೆಗಳಿಗೆ 45 ಎಕರೆ ಜಮೀನು ಆಗುತ್ತದೆ ಎಂದು ವರದಿಯಲ್ಲಿ ಅಂದಾಜಿಸಲಾಗಿದೆ.

 

ಒಂದು ಎಕರೆ ಜಮೀನನ್ನು ಎನ್‌ ಎ ಮಾಡಲು ಸರ್ಕಾರಿ ಶುಲ್ಕ ಅಂದಾಜು 30,000 ರು.ನಂತೆ ಪರಿಗಣಿಸಿದರೆ 45 ಎಕರೆಗೆ ಸುಮಾರು 13,50,000 ರು., ಲೇ ಔಟ್‌ ಶುಲ್ಕಕ್ಕೆ ಸಂಬಂಧಿಸಿದಂತೆ ಒಂದು ಎಕರೆ ಜಮೀನಿಗೆ ಅಂದಾಜು 1,25,000 ರು.ನಂತೆ ಪರಿಗಣಿಸಿದರೆ 45 ಎಕರೆಗೆ ಸುಮಾರು 56,25,000 ರು. , ಲೇ ಔಟ್ ಅಭಿವೃದ್ಧಿಪಡಿಸಲು ಒಂದು ಎಕರೆ ಜಮೀನಿಗೆ ಅಂದಾಜು 30,00,000 ರು.ನಂತೆ ಪರಿಗಣಿಸಿದರೆ 45 ಎಕರೆಗೆ 13,50,000 ರು., , ಕಟ್ಟಡ ಪರವಾನಿಗೆ 30*40 ಅಳತೆ ನಿವೇಶನಕ್ಕೆ ಅಂದಾಜು 15 ಲಕ್ಷ ರು.ನಂತೆ (ಶುಲ್ಕ 30,000 ರು.ನಂತೆ (ಲೇಬರ್‍‌ ಸೆಸ್, 15,000 ನಗರಸಭೆ ಶುಲ್ಕ 10,000 ಮತ್ತು ನಗರಾಭಿವೃದ್ಧಿ ಶುಲ್ಕ 5,000 ರು.) ಲೆಕ್ಕ ಹಾಕಿದರೇ 1,310 ನಿವೇಶನಗಳಿಗೆ ಒಟ್ಟು 3,93,00,000 ಆಗಲಿದೆ ಎಂದು ವರದಿಯಲ್ಲಿ ಲೆಕ್ಕಚಾರ ಮಾಡಿರುವುದು ತಿಳಿದು ಬಂದಿದೆ.

 

‘ಒಟ್ಟಾರೆ 1,310 ಅನಧಿಕೃತ ಖಾತೆಗಳಿಂದ ಸರ್ಕಾರಕ್ಕೆ ಅಂದಾಜು 18,12,75,000 ರು. ನಷ್ಟ ಉಂಟಾಗಿರುತ್ತದೆ. ಈ ಎಲ್ಲಾ 1,310 ಅನಧಿಕೃತ ಖಾತಾ ನಕಲುಗಳ ಕರ ನಿರ್ಧರಣೆ ಆದೇಶಕ್ಕೆ ಪೌರಾಯುಕ್ತರಾಗಿದ್ದ ಎ ಡಿ ಮನಗೂಳಿ ಅವರು ಕಾರ್ಯನಿರ್ವಹಿಸಿದ ಅವಧಿಯ ದಿನಾಂಕವನ್ನು ನಮೂದಿಸಿ ಖೊಟ್ಟಿ ಸಹಿ ಮಾಡಿಸಿ ಹಿಂದಿನ ಕಂದಾಯ ಅಧಿಕಾರಿ ಪವನ್‌ ಕುಮಾರ್‍‌ ಅವರ ಅವಧಿಯ ಕೈ ಬರಹ ಖಾತೆಗಳನ್ನು ಸೃಷ್ಟಿಸಿ ನಂತರ ತಹಶೀಲ್ದಾರ್‍‌ ಅವರಿಂದ ಅರ್ಜಿದಾರರಿಗೆ ಭೂಮಿ, ಜಮೀನು ವರ್ಗಾವಣೆಯಾಗಿವೆ,’ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ನಂತರ ಇ-ಆಸ್ತಿ ತಂತ್ರಾಂಶದಲ್ಲಿ ಅನಧಿಕೃತ ಖಾತೆಗಳನ್ನು ನೀಡಲಾಗಿದೆ. ಈ ಎಲ್ಲಾ ಅನಧಿಕೃತ ಖಾತೆಗಳಿಗೆ ಯಾವುದೇ ಕೃಷಿ ಜಮೀನಿನಿಂದ ಕೃಷಿಯೇತರ ಜಮೀನಾಗಿ ಜಿಲ್ಲಾಧಿಕಾರಿಗಳಿಂದ ಮಾರ್ಪಾಡು ಆಗಿರುವುದಿಲ್ಲ. ಮತ್ತು ನಗರ ಯೋಜನಾ ಪ್ರಾಧಿಕಾರದಿಂದ ಮತ್ತು ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಲೇ ಔಟ್‌ ಮಂಜೂರಾಗಿರುವುದಿಲ್ಲ.

 

ಪೌರಾಯುಕ್ತರೇ ಕಾರಣರು

 

1,310 ಅನಧಿಕೃತ ಖಾತೆಗಳಿಗೆ 2019ರ ಫೆ.25ರಿಂದ 2023ರ ಮಾರ್ಚ್‌ 18ರವರೆಗೆ ಕಾರ್ಯನಿರ್ವಹಿಸಿದ ಪೌರಾಯುಕ್ತರಾದ ರಮೇಶ್‌ ಸುಣಗಾರ, ಹೆಚ್‌ ಬಕ್ಕಪ್ಪ, ಭೀಮಣ್ಣ ಟಿ, ಶರಣಪ್ಪ ಎಸ್‌ , ಕಂದಾಯ ಅಧಿಕಾರಿಗಳಾದ ವಿಶ್ವ ಪ್ರತಾಪ ಅಲೆಕ್ಸಾಂಡರ್‍‌, ರಿಯಾಜುದ್ದೀನ್‌, ನರಸಿಂಹರೆಡ್ಡಿ ಕೂಡ ಕಾರಣಕರ್ತರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

‘ಈಗ ಯಾದಗಿರಿ ನಗರಸಭೆಯಲ್ಲಿ ಸಂಪೂರ್ಣವಾಗಿ ಅನಧಿಕೃತ ಖಾತೆ ಮತ್ತು ವರ್ಗಾವಣೆಗಳನ್ನು ನಿಲ್ಲಿಸಲಾಗಿದೆ. ಖಾತೆ, ಫಾರಂ 3 ಗಳನ್ನು ರದ್ದುಪಡಿಸದೇ ಇದ್ದಲ್ಲಿ ಮುಂದಿ ದಿನಗಳಲ್ಲಿ ಇನ್ನೂ ಹೆಚ್ಚಿನ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಅನಧಿಕೃತ ದಾಖಲೆಗಳನ್ನು ನೀಡಿ ಖಾತೆ ಸೃಷ್ಟಿಸಿ, ವರ್ಗಾವಣೆ ಮಾಡಿಕೊಂಡು ಸರ್ಕಾರಕ್ಕೆ ಇನ್ನೂ ಹೆಚ್ಚಿನ ಆರ್ಥಿಕ ನಷ್ಟ ಉಂಟು ಮಾಡುವ ಸಂಭವವಿರುತ್ತದೆ,’ ಎಂದು ಪೌರಾಯುಕ್ತ ಸಂಗಪ್ಪ ಉಪಾಸೆ ಅವರು ಸರ್ಕಾರದ ಗಮನ ಸೆಳೆದಿದ್ದಾರೆ.

 

ಈ ಹಿಂದೆ ಕಾರ್ಯನಿರ್ವಹಿಸಿದ ಪೌರಾಯುಕ್ತರುಗಳು, ಕಂದಾಯ ಅಧಿಕಾರಿಗಳು, ಕಂದಾಯ ನಿರೀಕ್ಷಕರುಗಳೂ, ಕಿರಿಯ ಅಭಿಯಂತರರರು, ಕರವಸೂಲಿಗಾರರು, ಹಾಗೂ ಇತರೆ ಸಿಬ್ಬಂದಿಗಳಿಂದ ನಷ್ಟದ ಹಣವನ್ನು ವಸೂಲಿ ಮಾಡಬೇಕು. ಮತ್ತು ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದು ಸರ್ಕಾರದ ಆಡಳಿತ ಹಿತದೃಷ್ಟಿಯಿಂದ ತುಂಬಾ ಅವಶ್ಯಕವಿರುತ್ತದೆ ಎಂದು ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ.

 

ಅಲ್ಲದೇ ‘ಅನಧಿಕೃತವಾಗಿ ಖೊಟ್ಟಿ ದಾಖಲೆ ಸೃಷ್ಟಿಸಿ ಅನಧಿಕೃತ ಬಡಾವಣೆ ನಿರ್ಮಿಸಿ ನಿವೇಶನ ಮಾರಾಟ ಮಾಡಿದ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ. ಮತ್ತು ಆದಷ್ಟು ಬೇಗ ಅನಧಿಕೃತ ಖಾತೆ, ಫಾರಂ-3ಗಳನ್ನು ರದ್ದುಪಡಿಸಬೇಕು,’ ಎಂದು ಪೌರಾಯುಕ್ತರು ವರದಿಯಲ್ಲಿ ಕೋರಿದ್ದಾರೆ.

the fil favicon

SUPPORT THE FILE

Latest News

Related Posts