ಅಕ್ರಮವಾಗಿ 11 ಲಕ್ಷ ರು ಸಾಗಣೆ; ಅಬಕಾರಿ ಹೆಚ್ಚುವರಿ ಆಯುಕ್ತರ ವಿರುದ್ಧ ಇಲಾಖೆ ವಿಚಾರಣೆಗೆ ಆದೇಶ

ಬೆಂಗಳೂರು; ಹನ್ನೊಂದು ಲಕ್ಷ ರುಪಾಯಿ ಮೊತ್ತದಷ್ಟು ಲಂಚದ ಹಣವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆಯಲ್ಲಿ ಎಸಿಬಿ ದಾಳಿಗೊಳಗಾಗಿದ್ದ ಅಬಕಾರಿ ಹೆಚ್ಚುವರಿ  ಆಯುಕ್ತ ಎಲ್‌ ಎನ್‌ ಮೋಹನ್‌ ಕುಮಾರ್‍‌ ಅವರ ವಿರುದ್ಧ ಇಲಾಖೆ ವಿಚಾರಣೆ ನಡೆಸಲು ಲೋಕಾಯುಕ್ತಕ್ಕೆ ವಹಿಸಿ ಆದೇಶ ಹೊರಡಿಸಿದೆ.

 

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮೋಹನ್‌ ಕುಮಾರ್‍‌ ವಿರುದ್ಧ  ನ್ಯಾಯಾಲಯದಲ್ಲಿ  ವಿಚಾರಣೆ ನಡೆಸಲು ಅಬಕಾರಿ ಇಲಾಖೆಯು 2  ವರ್ಷಗಳ ಹಿಂದೆಯೇ ಅಂದರೆ 2021ರ ಏಪ್ರಿಲ್‌ 26ರಂದು  ಮಂಜೂರಾತಿ ನೀಡಿತ್ತು. ಇದೀಗ ಇಲಾಖೆ ವಿಚಾರಣೆ ನಡೆಸಲು ಲೋಕಾಯುಕ್ತ ಸಂಸ್ಥೆಗೆ ವಹಿಸಿ 2023ರ ಆಗಸ್ಟ್‌ 19ರಂದು  ಆದೇಶಿಸಿರುವುದು ಮುನ್ನೆಲೆಗೆ ಬಂದಿದೆ.

 

 

ಬಳ್ಳಾರಿ, ಕೊಪ್ಪಳ, ಗದಗ್‌ ಮತ್ತು ದಾವಣಗೆರೆ ಜಿಲ್ಲೆಯಲ್ಲಿನ ಬಾರ್‍‌ ಅಂಡ್‌ ರೆಸ್ಟೋರೆಂಟ್‌ಗಳ ಮಾಲೀಕರಿಂದ ಪ್ರತಿ ತಿಂಗಳು ವಸೂಲು ಮಾಡಿದ್ದ ಲಂಚದ ಹಣವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆಯಲ್ಲಿ ಎಸಿಬಿ ದಾಳಿಗೊಳಗಾಗಿದ್ದರು. ಈ ಸಂಬಂಧ ಆರೋಪಿತ ಅಧಿಕಾರಿ ಎಲ್‌ ಎನ್‌ ಮೋಹನ್‌ ಕುಮಾರ್‍‌ ಅವರ ವಿರುದ್ಧ 2019ರ ಜುಲೈ 20ರಂದು ಎಫ್‌ಐಆರ್‍‌ ದಾಖಲಿಸಲಾಗಿತ್ತು.

 

 

ಆರೋಪಿತ ಅಧಿಕಾರಿ ವಿರುದ್ಧ ಲಂಚ ಪ್ರತಿಬಂಧಕ ಕಾಯ್ದೆ 1988ರ ಕಲಂ 7(ಎ) ಯಡಿಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಬಳ್ಳಾರಿ ಘಟಕವು (ಸಂಖ್ಯೆ 16/2019) ಕ್ರಮ ಕೈಗೊಂಡಿತ್ತು. ಅಲ್ಲದೇ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳು 1957ರ ನಿಯಮ 14(ಎ) ಅಡಿ ಇಲಾಖೆ ವಿಚಾರಣೆ ನಡೆಸಲು ಪೂರ್ವಾನುಮತಿಗಾಗಿ 2020ರ ಡಿಸೆಂಬರ್‍‌ 31ರಂದು ಸರ್ಕಾರಕ್ಕೆ ಎಸಿಬಿಯ ಎಡಿಜಿಪಿ ಪತ್ರ ಬರೆದಿದ್ದರು ಎಂದು ಗೊತ್ತಾಗಿದೆ.

 

 

ಇಲಾಖೆ ವಿಚಾರಣೆ ನಡೆಸಲು ಪ್ರಕರಣವನ್ನು  ಲೋಕಾಯುಕ್ತರಿಗೆ ವಹಿಸಲು ಸಚಿವ ಆರ್‍‌ ಬಿ ತಿಮ್ಮಾಪುರ್‍‌ ಅವರು ಅನುಮೋದನೆ ನೀಡಿದ ನಂತರ (2023ರ ಆಗಸ್ಟ್ 19ರಂದು) ಆದೇಶ ಹೊರಡಿಸಲಾಗಿದೆ ಎಂದು ಅಬಕಾರಿ ಆಯುಕ್ತರ ಕಚೇರಿಯ ಉನ್ನತ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ಖಚಿತಪಡಿಸಿದ್ದಾರೆ.

 

‘ಎಲ್‌ ಎನ್‌ ಮೋಹನ್‌ ಕುಮಾರ್‍‌ ಅವರ ಕಾರ್ಯವ್ಯಾಪ್ತಿಯಲ್ಲಿ ಬರುವ ಅಬಕಾರಿ ವಲಯಗಳು ಹಾಗೂ ವಿವಿಧ ಬಾರ್‍‌ ಶಾಪ್‌ ಮಾಲೀಕರ ಹೆಸರುಗಳನ್ನು ನಮೂದಿಸಿರುವುದು ಮತ್ತು ಈ ನಮೂದಿನ ಕೈ ಬರಹವು ಎಲ್‌ ಎನ್‌ ಮೋಹನ್‌ ಕುಮಾರ್‍‌ ಇವರದ್ದೇ ಆಗಿರುತ್ತದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿರುತ್ತದೆ. 11,36,500 ರು.ಗಳ ಬೃಹತ್‌ ಮೊತ್ತವು ಎಲ್‌ ಎನ್‌ ಮೋಹನ್‌ ಕುಮಾರ್‍‌ ಇವರ ಕಾರಿನಲ್ಲಿದ್ದ ಸೂಟ್‌ಕೇಸ್‌ನಿಂದ ಜಫ್ತಿಪಡಿಸಿಕೊಂಡಿದ್ದು ಇಷ್ಟು ಬೃಹತ್ ಮೊತ್ತ ಸದರಿ ಕಾರಿನಲ್ಲಿ ಹೇಗೆ ದೊರೆಯಿತು ಎಂಬ ಬಗ್ಗೆ ಆರೋಪಿತ ಅಧಿಕಾರಿಯು ನೀಡಿರುವ ಹೇಳಿಕೆಯಲ್ಲಿ ಹಣವನ್ನು ಯಾರೋ ತಿಳಿಗೇಡಿಗಳು ಇಟ್ಟಿದ್ದ ಹಣವಾಗಿರಬೇಕು ಎಂಬುದಾಗಿ ಮತ್ತು ಇದರ ಬಗ್ಗೆ ತಮಗೆ ಯಾವುದೇ ಮಾಹಿತಿ ಇರಲಿಲ್ಲವೆಂದು ತಿಳಿಸಿದ್ದು, ಕಿಂಚಿತ್ತೂ ನಂಬಲರ್ಹ ಸಾಕ್ಷ್ಯವಾಗಿರುವುದಿಲ್ಲ. ಆದ್ದರಿಂದ ಪರಿಶೀಲಿಸಲಾದ ಸಾಕ್ಷಿ ಪುರಾವೆಗಳಿಂದ ಈ ಹಣವು ಎಲ್‌ ಎನ್‌ ಮೋಹನ್‌ಕುಮಾರ್‍‌ ಇವರು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಮದ್ಯದಂಗಡಿ ಮಾಲೀಕರಿಂದ ತಿಂಗಳ ಮಾಮೂಲಿಯಾಗಿ ಅಕ್ರಮವಾಗ ವಸೂಲಿ ಮಾಡಿದ ಹಣವಾಗಿರುತ್ತದೆ ಎಂಬುದು ಮೇಲ್ನೋಟಕ್ಕೆ  ಸ್ಪಷ್ಟವಾಗುತ್ತದೆ, ‘ಎಂದು ಆದೇಶದ ನಡವಳಿಯಲ್ಲಿ ವಿವರಿಸಲಾಗಿದೆ ಎಂದು ತಿಳಿದು ಬಂದಿದೆ.

 

ಹೀಗಾಗಿ ಕರ್ನಾಟಕ ನಾಗರಿಕ ಸೇವಾ ನಿಯಮಗಳು 2021ರ ನಿಯಮ ಅನ್ವಯ ದುರ್ನಡತೆಯನ್ನು ಎಸಗಿರುವುದರಿಂದ ಈ ಅಪರಾಧಕ್ಕಾಗಿ ಲೋಕಾಯುಕ್ತ ಕಾಯ್ದೆ ಕಲಂ 12(3) ರ ವರದಿಯಲ್ಲಿ ಶಿಫಾರಸ್ಸಿನಂತೆ ಇಲಾಖೆ ವಿಚಾರಣೆ ನಡೆಸಲು ತೀರ್ಮಾನಿಸಲಾಗಿದೆ ಎಂಬುದು ಗೊತ್ತಾಗಿದೆ.

 

 

ಪ್ರಕರಣದ ವಿವರ

 

ಅಬಕಾರಿ ಇಲಾಖೆಯ ಜಂಟಿ ಆಯುಕ್ತ ಎಲ್‌ ಎನ್‌ ಮೋಹನ್‌ ಕುಮಾರ್‍‌ ಅವರು ಹೊಸಪೇಟೆಯ ಕಾರ್ಯವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಬಾರ್‍‌ ಮತ್ತು ರೆಸ್ಟೊರೆಂಟ್‌ಗಳಿಗೆ ಪರವಾನಿಗೆ ನೀಡುವುದು, ಪರವಾನಿಗೆ ನವೀಕರಿಸುವುದು ಮತ್ತು ಮದ್ಯದ ಅಂಗಡಿಗಳನ್ನು ಹೆಚ್ಚಿನ ಸಮಯ ತೆರೆಯಲು ಅನುಮತಿ ನೀಡುವುದು, ಅಲ್ಲದೇ ಅಕ್ರಮವಾಗಿ ಡಾಬಾದವರಿಗೆ ಹಳ್ಳಿಗಳಿಗೆ ಮಾರಾಟ ಮಾಡಲು ಅವಕಾಶ ಮಾಡಿಕೊಡುವ ಸಲುವಾಗಿ ಪ್ರತಿ ತಿಂಗಳು ಲಂಚದ ಹಣ ಪಡೆದುಕೊಳ್ಳುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

 

ಹಣ ನೀಡದೇ ಇದ್ದವರಿಗೆ ಬೆದರಿಕೆ ಹಾಕುತ್ತಿದ್ದರು ಎಂದು ದೂರಲಾಗಿತ್ತಲ್ಲದೇ ಹಣ ನೀಡದೇ ಇದ್ದಲ್ಲಿ ಪರವಾನಿಗೆ ಹಿಂಪಡೆಯುವುದಾಗಿಯೂ ಬೆದರಿಕೆ ಹಾಕುವ ಮೂಲಕ ಪ್ರತಿ ತಿಂಗಳೂ ಮಾಮೂಲಿಯನ್ನು ಪಡೆಯುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.

 

ಈ ಸಂಬಂಧ ಜಾಲ ಬೀಸಿದ್ದ ಭ್ರಷ್ಟಾಚಾರ ನಿಗ್ರಹ ದಳದ ಪಡೆಯು ಎಲ್‌ ಎನ್‌ ಮೋಹನ್‌ ಕುಮಾರ್‍‌ ಅವರು ಅಕ್ರಮವಾಗಿ ಸರ್ಕಾರಿ ವಾಹನ (ಕೆಎ 01 ಜಿ 5932) ದಲ್ಲಿ ಹಣ ಸಾಗಿಸುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿ ವಾಹನ ತಪಾಸಣೆ ನಡೆಸಿ 11  ಲಕ್ಷ ರು.ಗಳನ್ನು ಜಫ್ತಿ ಮಾಡಿದ್ದರು ಎಂದು ತಿಳಿದು ಬಂದಿದೆ.

 

ಚೀಟಿ ಸುತ್ತಿದ್ದರಲ್ಲಿತ್ತು ನೋಟಿನ ಕಂತೆಗಳು

 

ವಾಹನ ತಪಾಸಣೆ ನಡೆಸಿ ಜಫ್ತಿ ನಡೆಸಿದ್ದ ಸಂದರ್ಭದಲ್ಲಿ ಸರ್ಕಾರಿ ಕಾರಿನೊಳಗೆ ಚೀಟಿಗಳು, ಖಾಕಿ ಕವರ್‍‌ಗಳಿದ್ದವು. ಈ ಖಾಕಿ ಕವರ್‍‌ಗಳಲ್ಲಿ ಅಂದಾಜು 12 ಲಕ್ಷ ರು.ಗಳ ಹಣದ ಕಂತೆಗಳಿದ್ದವು. ಕೆಲ ಚೀಟಿಗಳಲ್ಲಿ ಕೊಪ್ಪಳ ರೇಂಜ್‌ ಆರ್‍‌ ಎನ್‌ -2 ಎಂದು ಬರೆಯಲಾಗಿತ್ತು. ಅದರಲ್ಲಿ 3,50,000 ರು, ಬಳ್ಳಾರಿ 1*2 ಗುಂಪು ಸನ್ನದು ಎಂದು ಬರೆದಿದ್ದ ಚೀಟಿಯಲ್ಲಿದ್ದ ಕವರ್‍‌ನಲ್ಲಿ 58,000 ರು, ಸೇರಿ ಒಟ್ಟಾರೆ 80,000 ರು.ಗಳಿದ್ದವು ಎಂದು ಗೊತ್ತಾಗಿದೆ.

 

ಅದೇ ರೀತಿ ರಿನೀವಲ್‌ 3.5 ಕೊಪ್ಪಳ ರೇಂಜ್‌ ಮೇ ಎಂದು ಬರೆದಿದ್ದ ಚೀಟಿಯಲ್ಲಿ 67,000 ರು., ಹೊಸಪೇಟೆ ರೇಂಜ್‌-1 ಎಂದು ಬರೆದಿದ್ದ ಖಾಕಿ ಕವರ್‍‌ನಲ್ಲಿ 24,000 ರು., ಸೇರಿ ಒಟ್ಟಾರೆ 45,600 ರು.ಗಳಿದ್ದವು
ಸಖ್ಯ 40 ಎಂದು ಬರೆದಿದ್ದ ಖಾಕಿ ಕವರ್‍‌ನಲ್ಲಿ 40,000 ರು. ಇತ್ತು. ಹಡಗಲಿ ಹೆಚ್‌ ಡಿ ಎಲ್‌ ಎಂದು ಬರೆದಿದ್ದ ಖಾಕಿ ಕವರ್‍‌ನಲ್ಲಿ 24,700 ರು. ಹೆಚ್‌ ಬಿ ಹಳ್ಳಿ ಎಂದು ಬರೆದಿದ್ದ ಖಾಕಿ ಕವರ್‍‌ನಲ್ಲಿ ದೊರೆತ ಹಣ ಮತ್ತು ವೈನ್‌ ಶಾಪ್‌ಗಳ ಲೀಸ್ಟ್‌ ಮತ್ತು ಅವರು ನೀಡಿದ ಹಣದ ವಿವರದ ಚೀಟಿಯನ್ನೂ ದಾಳಿ ವೇಳೆಯಲ್ಲಿ ಒಟ್ಟು 24,700 ರು., ಜಫ್ತಿ ಮಾಡಿಕೊಳ್ಳಲಾಗಿತ್ತು.

 

ಬಿಎಲ್‌ವೈ 2 ಅಂಗಡಿಗಳು ಎಂದು ಬರೆದಿದ್ದ ಖಾಕಿ ಕವರ್‍‌ನಲ್ಲಿ 66,500 ರು.ಗಳಿದ್ದವು. ಏನನ್ನೂ ನಮೂದಿಸದೇ ಇದ್ದ ಖಾಕಿ ಕವರ್‍‌ನಲ್ಲಿ 1,75,000 ರು.,, ಕಪ್ಪು ಪ್ಲಾಸ್ಟಿಕ್‌ ಕವರ್‍‌ನಲ್ಲಿ 2,000, ಕೂಡ್ಲಿಗಿ ವಲಯ ಎಂದು ಬರೆದಿದ್ದ ಖಾಕಿ ಕವರ್‍‌ನಲ್ಲಿ ಒಟ್ಟು 26,300 ರು., ರೇಂಜ್‌ 1 ಬಳ್ಳಾರಿ ಎಂದು ಬರೆದಿದ್ದ ಖಾಕಿ ಕವರ್‍‌ನಲ್ಲಿ 81,700 ರು., ಸಿರಗುಪ್ಪ(20) ಎಂದು ಬರೆದಿದ್ದ ಖಾಕಿ ಕವರ್‍‌ನಲ್ಲಿ 38,000 ರು., ಸತೀಶ್‌ ಬಾಬು ಎಂದು ಬರೆದಿದ್ದ ಖಾಕಿ ಕವರ್‍‌ನಲ್ಲಿ 56,000 ರು.,ಗಳಿದ್ದವು ಎಂದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts