ವಕೀಲರ ನೇಮಕಾತಿಯಲ್ಲಿ ಆರೆಸ್ಸೆಸ್‌ ಹಿನ್ನೆಲೆಯವರಿಗೆ ಮನ್ನಣೆ; ಸಿಎಸ್‌ಗೆ ಸಲ್ಲಿಸಿದ್ದ ದೂರು ಬಹಿರಂಗ

ಬೆಂಗಳೂರು; ಈ ಹಿಂದಿನ ಬಿಜೆಪಿ ಸರ್ಕಾರದ ಅಧಿಕಾರಾವಧಿಯಲ್ಲಿ ಆರ್‍‌ಎಸ್‌ಎಸ್‌ ಹಿನ್ನೆಲೆ ಹೊಂದಿರುವ 250 ಮಂದಿ ವಕೀಲರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿತ್ತು. ಹಾಗೆಯೇ ಕಾನೂನು ಇಲಾಖೆಯ ವಿಶೇಷ ಕಾರ್ಯದರ್ಶಿಯಾಗಿದ್ದ ಹೆಚ್‌ ಕೆ ಜಗದೀಶ್‌ ಎಂಬುವರು  ಬಿಜೆಪಿ ಹಾಗೂ ಜನತಾದಳದವರು ಸೂಚಿಸಿದಂತೆ ಇಲಾಖೆಯಲ್ಲಿನ  ಕ್ರಿಮಿನಲ್ ಪ್ರಕರಣಗಳಲ್ಲಿ ಅನುಕೂಲವಾಗುವ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದರು.

 

ಆರೋಪಿಗಳು ಬಿಡುಗಡೆ ಹೊಂದಲು ಜಗದೀಶ್ ಅವರು ಅನುಕೂಲ ಮಾಡಿಕೊಟ್ಟಿದ್ದರು  ಎಂದು ಗುರುತರವಾದ ಆರೋಪವನ್ನು ಹೊರಿಸಿರುವ  ಅಭಿಯೋಜನಾ ಇಲಾಖೆಯ ಅಧಿಕಾರಿ, ನೌಕರರೇ  ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಿದ್ದ  ದೂರನ್ನು  ‘ದಿ ಫೈಲ್‌’ ಇದೀಗ ಬಹಿರಂಗಪಡಿಸುತ್ತಿದೆ.

 

ಅಲ್ಲದೇ ಆರ್‍‌ಎಸ್‌ಎಸ್‌ ಅಣತಿಯಂತೆಯೇ ಹಿಂದಿನ ಬಿಜೆಪಿ ಸರ್ಕಾರವು ಹೆಚ್‌ ಕೆ ಜಗದೀಶ್‌ ಅವರನ್ನು  ಕಾನೂನು ಇಲಾಖೆಯ ವಿಶೇಷ ಕಾರ್ಯದರ್ಶಿ ಹುದ್ದೆಗೆ ನೇಮಿಸಿತ್ತು ಎಂದು ಆರೋಪಿಸಿ ಮುಖ್ಯ ಕಾರ್ಯದರ್ಶಿಗಳಿಗೆ ಅಭಿಯೋಜನಾ ಇಲಾಖೆಯ ಅಧಿಕಾರಿ ಮತ್ತು ನೌಕರರು ಸಲ್ಲಿಸಿರುವ ದೂರು ಮಹತ್ವ ಪಡೆದುಕೊಂಡಿದೆ.

 

ಅಭಿಯೋಜನಾ ಇಲಾಖೆಯ ಅಧಿಕಾರಿ, ನೌಕರರೇ ಸರ್ಕಾರಕ್ಕೆ ಸಲ್ಲಿಸಿರುವ ದೂರು, ಜೆ ಸಿ ಮಾಧುಸ್ವಾಮಿ ಅವರು ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿನ ಕಾನೂನು ಇಲಾಖೆಯ ಮತ್ತೊಂದು ಮುಖವಾಡವನ್ನು ಬಯಲು ಮಾಡಿದೆ.

 

ಕಾನೂನು ಇಲಾಖೆಯ ವಿಶೇಷ ಕಾರ್ಯದರ್ಶಿಯಾಗಿ ಪ್ರಭಾರ ಹುದ್ದೆಯಲ್ಲಿಯೇ ಮುಂದುವರೆದಿದ್ದ ಹೆಚ್‌ ಕೆ ಜಗದೀಶ್‌ ಅವರನ್ನು ಸಿದ್ದರಾಮಯ್ಯ ಅವರು 2023ರ ಜೂನ್ 23ರಂದು ಪ್ರಭಾರವನ್ನು ರದ್ದುಪಡಿಸಿ ಟಿಪ್ಪಣಿ ಹೊರಡಿಸಿದ್ದರು. ಅಲ್ಲದೇ ಹೆಚ್‌ ಕೆ ಪಾಟೀಲ್‌ ಅವರು ಕಾನೂನು ಇಲಾಖೆ ಸಚಿವರಾಗಿ ಒಂದು ತಿಂಗಳ ಅವಧಿಯನ್ನು ಪೂರ್ಣಗೊಳಿಸುತ್ತಿದ್ದಂತೆಯೇ  ಗುತ್ತಿಗೆ ವಕೀಲರ ನೇಮಕಾತಿ ಮತ್ತು ವಿಶೇಷ ಕಾರ್ಯದರ್ಶಿಯಾಗಿದ್ದ ಹೆಚ್‌ ಕೆ ಜಗದೀಶ್‌ ವಿರುದ್ಧ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿರುವ ದೂರು ಮುನ್ನೆಲೆಗೆ ಬಂದಿದೆ.

 

ಅಭಿಯೋಜನಾ ಇಲಾಖೆಯ ಅಧಿಕಾರಿ ಮತ್ತು ನೌಕರರು ಹೆಚ್‌ ಕೆ ಜಗದೀಶ್‌ ವಿರುದ್ಧ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ 2022ರ ಡಿಸೆಂಬರ್‍‌ 22 ಮತ್ತು 2023ರ ಜೂನ್‌ 7ರಂದೇ ಲಿಖಿತ ದೂರು ಸಲ್ಲಿಸಿದ್ದರು.

 

ಈ ದೂರನ್ನಾಧರಿಸಿ ಕಾನೂನು ಇಲಾಖೆಯು ( ಕಡತ ಸಂಖ್ಯೆ; LAW-LC3/19/2023-ADMIN-LAW SEC (COMPUTER NUMBER 1006157) ವಿಚಾರಣೆ ನಡೆಸುತ್ತಿದೆ. ಇಲಾಖೆಯ ಅಧಿಕಾರಿ ನೌಕರರು ಸಲ್ಲಿಸಿರುವ ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಬಿಜೆಪಿ ಹಾಗೂ ಜನತಾದಳದವರು ಸೂಚಿಸಿದಂತೆ ಇಲಾಖೆಯಲ್ಲಿನ ಕ್ರಿಮಿನಲ್ ಪ್ರಕರಣಗಳಲ್ಲಿ ಅನುಕೂಲವಾಗುವ ರೀತಿಯಲ್ಲಿ ಕಾರ್ಯನಿರ್ವಹಿಸಿ ಆರೋಪಿಗಳು ಬಿಡುಗಡೆ ಹೊಂದಲು ಅನುಕೂಲ ಮಾಡಿಕೊಡಲಾಗಿತ್ತು,’ ಎಂದು ಅಧಿಕಾರಿ, ನೌಕರರು ವಿವರಿಸಿರುವುದು ದೂರಿನಿಂದ ಗೊತ್ತಾಗಿದೆ.

 

ಹಿಂದಿನ ಬಿಜೆಪಿ ಸರ್ಕಾರವು ಹೆಚ್‌ ಕೆ ಜಗದೀಶ್‌ ಇವರನ್ನು ಕಾನೂನು ಇಲಾಖೆಯ ವಿಶೇಷ ಕಾರ್ಯದರ್ಶಿಯನ್ನಾಗಿ 2019ರ ಆಗಸ್ಟ್‌ 6ರಿಂದ 6 ತಿಂಗಳ ಅವಧಿಗೆ ಹೆಚ್ಚುವರಿ ಪ್ರಭಾರದಲ್ಲಿ ನೇಮಿಸಿತ್ತು.ಯಾವುದೇ ಸಕಾರಣಗಳನ್ನು ನೀಡದೇ ಹಿಂದಿನ ಸರ್ಕಾರವು . 2023ರ ಜೂನ್‌ 7ರವರೆಗೆ ಪ್ರಭಾರದಲ್ಲಿ ಆರ್‍‌ಎಸ್‌ಎಸ್‌ ಅಣತಿಯಂತೆಯೇ ಮುಂದುವರೆಸಿಕೊಂಡು ಬಂದಿತ್ತು. ಪ್ರಭಾರಿ ನಿರ್ದೇಶಕರು ಅಭಿಯೋಜನಾ ಇಲಾಖೆಯಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ 2022ರ ಡಿಸೆಂಬರ್‍‌ 29 ಮತ್ತು 2023ರ ಜನವರಿ 2ರ ಪತ್ರಗಳಲ್ಲಿ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಸಹ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಅಧಿಕಾರಿ, ನೌಕರರು ದೂರಿನಲ್ಲಿ ಆಪಾದಿಸಿರುವುದು ತಿಳಿದು ಬಂದಿದೆ.

 

ಆರ್‍‌ಎಸ್‌ಎಸ್‌ ಹಿನ್ನೆಲೆಯ ವಕೀಲರ ನೇಮಕ

 

ಅಭಿಯೋಜನಾ ಇಲಾಖೆಯಲ್ಲಿ ಖಾಲಿ ಇದ್ದ ಸಹಾಯಕ ಸರ್ಕಾರಿ ಅಭಿಯೋಜಕರ ಹುದ್ದೆಗೆ ಸುಮಾರು 250 ವಕೀಲರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ನೇಮಕವಾಗಿರುವ ಎಲ್ಲಾ ಗುತ್ತಿಗೆ ವಕೀಲರು ಬಿಜೆಪಿ ಮತ್ತು ಆರ್‍‌ಎಸ್‌ಎಸ್‌ ಕಡೆಯವರಾಗಿದ್ದಾರೆ. ಈ ನೇಮಕಾತಿಯಲ್ಲಿ ಕೋಟ್ಯಂತರ ರುಪಾಯಿಗಳ ಅಕ್ರಮ ಅವ್ಯವಹಾರವಾಗಿದೆ. ಈ ಅಕ್ರಮ ನೇಮಕಾತಿಗೆ ಸಂಬಂಧಪಟ್ಟಂತೆ ಬಿ ಕೆ ಪುಷ್ಪಲತಾ ಇವರು ಆಯ್ಕೆಯಾಗಿದ್ದು ಈ ಅಭ್ಯರ್ಥಿಯು, ಹೆಚ್‌ ಕೆ ಜಗದೀಶ್‌ ಅವರ ಅಣ್ಣನ ಮಕ್ಕಳಾದ ವೀಣಾ ಮತ್ತು ವಾಣಿ ಇವರ ಸ್ನೇಹಿತರಾಗಿದ್ದಾರೆ. ಇವರ ಪ್ರಭಾವದಿಂದ ಬಿ ಕೆ ಪುಷ್ಪಲತಾ ಅವರು ಎಪಿಪಿಯಾಗಿ ಆಯ್ಕೆಯಾಗಿರುತ್ತಾರೆ ಎಂದು ಅಕ್ರಮ ನಡೆದಿದೆ ಎನ್ನುವುದಕ್ಕೆ ನಿದರ್ಶನವೊಂದನ್ನು ಅಧಿಕಾರಿ, ನೌಕರರು ದೂರಿನಲ್ಲಿ ಒದಗಿಸಿರುವುದು ಗೊತ್ತಾಗಿದೆ.

 

 

ಹೊರಗುತ್ತಿಗೆಯಿಂದ 5 ಲಕ್ಷ ಲಂಚ

 

ಅಭಿಯೋಜನಾ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಗ್ರೂಪ್‌ ಸಿ ಮತ್ತು ಡಿ ಬೆರಳಚ್ಚುಗಾರರು ಮತ್ತು ದಲಾಯತ್‌ ಅವರ ಸೇವೆ ಒದಗಿಸುತ್ತಿರುವ ಬಾಹ್ಯ ಮೂಲ ಸಂಸ್ಥೆಯಾದ ಶಾರ್ಪ್ ವಾಚ್‌ ಇಂಟೆಲಿಜೆನ್ಸ್‌ ಸೆಕ್ಯೂರಿಟಿ ಸರ್ವಿಸ್‌ (ಸ್ವಿಸ್‌) ಸಂಸ್ಥೆಯು ಹೆಚ್‌ ಕೆ ಜಗದೀಶ್‌ ಇವರ ಸಂಬಂಧಿಕರಿಗೆ ಸೇರಿದೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.
‘ಈ ಸಂಸ್ಥೆಯನ್ನು ಟೆಂಡರ್‍‌ ಮೂಲಕ ಆಯ್ಕೆ ಮಾಡಲು ಅನೇಕ ಅಕ್ರಮ ದಾರಿಗಳನ್ನು ಅನುಸರಿಸಿ ಪ್ರತಿ ತಿಂಗಳು 5 ಲಕ್ಷ ರುಪಾಯಿಗಳ ಮಾಮೂಲಿ ಪಡೆಯುತ್ತಿರುತ್ತಾರೆ. ಅಲ್ಲದೇ ಇಲಾಖೆಗೆ ಸಂಬಂಧಪಟ್ಟ ಗ್ರಂಥ ಪುಸ್ತಕಗಳ ಸರಬರಾಜಿನಲ್ಲಿ ಶೇ.25ರಷ್ಟು ಕಮಿಷನ್‌ನನ್ನು ಗ್ರಂಥ ಪುಸ್ತಕ ಸರಬರಾಜುದಾರರಾದ ಎಂಪಿಪಿ ಹೌಸ್‌ ಮತ್ತು ಪುಲಿಯಾನಿ ಅಂಡ್‌ ಪುಲಿಯಾನಿ ಇವರಿಂದ ಪಡೆಯುತ್ತಿರುತ್ತಾರೆ,’ ಎಂದು ಅಧಿಕಾರಿ, ನೌಕರರು ಆರೋಪಿಸಿರುವುದು ದೂರಿನಿಂದ ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts