ಸಾಲ ಮರುಪಾವತಿ ಹೊರೆ, ಬಡ್ಡಿ ಹೆಚ್ಚಳ, ಹಣಕಾಸಿನ ಹೊಣೆಗಾರಿಕೆ 4,90,256 ಕೋಟಿಗೆ ಏರಿಕೆ;ಸಿಎಜಿ

ಬೆಂಗಳೂರು; ರಾಜ್ಯವು ತನ್ನ ವೆಚ್ಚದ ಹೊಣೆಯನ್ನು ಪೂರೈಸಲು ಹೆಚ್ಚುವರಿ ಸಾಲವನ್ನು ಪಡೆಯುವುದು ಅಗತ್ಯವಾಗಿದ್ದರೂ ಇದು ಮುಂದಿನ ದಿನಗಳಲ್ಲಿ ಸಾಲ ಮರು ಪಾವತಿಯು ರಾಜ್ಯಕ್ಕೆ ಹೊರೆಯಾಗುತ್ತದೆ ಎಂದು ಸರ್ಕಾರವು ಒಪ್ಪಿಕೊಂಡಿದ್ದರೇ, ಹೆಚ್ಚುತ್ತಿರುವ ಸಾಲದ ಮಟ್ಟವು ಬದ್ಧ ವೆಚ್ಚದ ಭಾಗವಾದ ಬಡ್ಡಿ ಪಾವತಿಗಳು ಹೆಚ್ಚಾಗಲು ಕಾರಣವಾಗುತ್ತವೆ. 2025-26ರವರೆಗೂ ಬಡ್ಡಿ ಮರುಪಾವತಿಯು ಅಸಲಿಗಿಂತ ಹೆಚ್ಚಾಗಲಿದೆ ಎಂದು ಮಹಾಲೇಖಪಾಲರು ಅಂದಾಜಿಸಿದ್ದಾರೆ.

 

ಅಲ್ಲದೇ ಆಯವ್ಯಯದ ಹೊರಗಿನ ಸಾಲಗಳು ವಿತ್ತೀಯ ಪಾರದರ್ಶಕತೆಯ ಸೂತ್ರಗಳಿಗೆ ಪ್ರತಿಕೂಲವಾಗಿದ್ದು ವಿತ್ತೀಯ ಸುಸ್ಥಿರತೆಗೆ ಹಾನಿಕಾರಕ. ಹೀಗಾಗಿ ಆಯವ್ಯಯದ ಹೊಣೆಗಳಿಗೆ ಮತ್ತಷ್ಟು ಹೊರೆಯನ್ನು ತಪ್ಪಿಸಲು ಕಟ್ಟುನಿಟ್ಟಾದ ಶಿಸ್ತನ್ನು ಪಾಲಿಸಬೇಕು ಎಂದು ಮಹಾಲೇಖಪಾಲರು ಶಿಫಾರಸ್ಸು ಮಾಡಿದ್ದಾರೆ.

 

ಕಾಂಗ್ರೆಸ್‌ ಪಕ್ಷವು ಅಧಿಕಾರಕ್ಕೆ ಬರುವ ಪೂರ್ವದಲ್ಲಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದಂತೆ ಐದು ಗ್ಯಾರಂಟಿಗಳಿಗೆ ಸಂಪನ್ಮೂಲ ಕ್ರೋಢೀಕರಣ ಮಾಡುವುದು ಮತ್ತು ಸಾಲದ ಮೂಲಕ ಈ ಎಲ್ಲಾ ಐದೂ ಗ್ಯಾರಂಟಿಗಳಿಗೆ ಅನುದಾನ ಒದಗಿಸಲಾಗುವುದು ಎಂದು ಅರ್ಥ ಸಚಿವ ಸಿದ್ದರಾಮಯ್ಯ ಅವರು ಸದನಕ್ಕೆ ಉತ್ತರ ನೀಡಿರುವ ಬೆನ್ನಲ್ಲೇ ಸಾಲ ಮರುಪಾವತಿಯು ರಾಜ್ಯಕ್ಕೆ ಹೊರೆಯಾಗಲಿದೆ ಎಂದು ಮಹಾಲೇಖಪಾಲರ ವರದಿಯು ಹೇಳಿರುವುದು ಮುನ್ನೆಲೆಗೆ ಬಂದಿದೆ.

 

ರಾಜ್ಯ ಸರ್ಕಾರದ ಸಾಲವನ್ನು ಪರಿಶೀಲಿಸಿದಾಗ ಕರ್ನಾಟಕ ವಿತ್ತೀಯ ಸುಧಾರಣೆ ಕಾಯಿದೆ ಸೂಚಿಸಿದ ಹಣಕಾಸಿನ ಮಾನದಂಡದೊಳಗೆ ಸಾಲದ ಮಟ್ಟವನ್ನು ತಗ್ಗಿಸಲು ಬದ್ಧ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಏಕಕಾಲದಲ್ಲಿ ರಾಜ್ಯದ ರಾಜಸ್ವವನ್ನು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆರ್ಥಿಕ ಇಲಾಖೆಗೆ ಮಹಾಲೇಖಪಾಲರು ಸೂಚಿಸಿದ್ದರು.

 

ಕಳೆದ ಐದು ವರ್ಷದ ಅವಧಿಗೆ ಸಂಬಂಧಿಸಿದಂತೆ ಮಹಾಲೇಖಪಾಲರು ನೀಡಿರುವ ರಶಾಜ್ಯ ಹಣಕಾಸಿನ ವ್ಯವಹಾರಗಳ ಲೆಕ್ಕ ಪರಿಶೋಧನಾ ವರದಿಯು ರಾಜ್ಯದ ಒಟ್ಟಾರೆ ಹಣಕಾಸಿನ ಸ್ಥಿತಿಗತಿಯ ಚಿತ್ರಣವನ್ನು ಒದಗಿಸಿದೆ.

 

2017-18ನೇ ಸಾಲಿನಲ್ಲಿ 2,46,231 ಕೋಟಿ ಇದ್ದ ರಾಜ್ಯದ ಹಣಕಾಸಿನ ಹೊಣೆಗಾರಿಕೆಗಳು 2021-22ರಲ್ಲಿ 4,90, 256 ಕೋಟಿಗಳಿಗೆ ಹೆಚ್ಚಳವಾಗಿದೆ. ಕಳೆದ 5 ವರ್ಷಗಳಲ್ಲಿ 2,44,025 ಕೋಟಿ ರು. ಪ್ರಮಾಣದಲ್ಲಿ ಹಣಕಾಸಿನ ಹೊಣೆಗಾರಿಕೆ ಹೊಂದುವ ಮೂಲಕ ಶೇಕಡ 87ರಷ್ಟು ಏರಿಕೆ ಕಂಡು ಬಂದಿರುವುದು ಸಿಎಜಿ ವರದಿಯಿಂದ ಗೊತ್ತಾಗಿದೆ.

 

ಅದೇ ರೀತಿ ರಾಜ್ಯದ ಬಾಕಿ ಇರುವ ಸಾರ್ವಜನಿಕ ಋಣವು 1,63,136 ಕೋಟಿಯಿಂದ 3,74,427 ಕೋಟಿಗೆ ಏರಿಕೆಯಾಗಿದೆ. ಅದರಂತೆ ಕಳೆದ ಐದು ವರ್ಷದಲ್ಲಿ ಸಾರ್ವಜನಿಕ ಋಣವು 2,11,291 ಕೋಟಿಯಷ್ಟು ಹೆಚ್ಚಳ ಕಂಡಿದೆ.

 

ಹಾಗೆಯೇ ರಾಜ್ಯದ ಆಯವ್ಯಯದ ಹೊರಗಿನ ಸಾಲಗಳನ್ನು ಗಣನೆಗೆ ತೆಗೆದುಕೊಂಡರೇ ಮಾರ್ಚ್‌ 2022ರ ಅಂತ್ಯದ ವೇಳೆಗೆ ಒಟ್ಟು ಹೊಣೆಗಾರಿಕೆಗಳು 4,90,256 ಕೋಟಿಗಳಾಗುತ್ತವೆ. ಇನ್ನು, ಆಂತರಿಕ ಋಣವು 2017-18ರಲ್ಲಿದ್ದ 1,48,581 ಕೋಟಿಗಳಿಂದ 2021-22ರಲ್ಲಿ 3,29,042 ಕೋಟಿಗಳಿಗೆ ಏರಿಕೆಯಾಗಿದೆ. ಕಳೆದ ಐದು ವರ್ಷದಲ್ಲಿ 1,80,461 ಕೋಟಿಯಷ್ಟು ಹೆಚ್ಚಳ ಕಂಡುಕೊಳ್ಳುವ ಮೂಲಕ ಏರಿಕೆಯು ಶೇ.121ರಷ್ಟಾಗಿದೆ ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.

 

2017-18ರಿಂದ 2021-22ರ ಅವಧಿಯಲ್ಲಿ ಬಾಕಿ ಉಳಿದಿರುವ ಸಾಲ ಮತ್ತು ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಅದರ ಶತಾಂಶವು ಹೆಚ್ಚುತ್ತಿರುವ ಪ್ರವೃತ್ತಿಯಲ್ಲಿದೆ. 2017-18ರಲ್ಲಿದ್ದ ಶೇ.18.46ರಿಂದ 2021-22ರ ಅವಧಿಯಲ್ಲಿ ಶೇ.24.03ಕ್ಕೆ ಹೆಚ್ಚಳವಾಗಿದೆ.

 

2021-22ರ ಅವಧಿಯಲ್ಲಿ ಕರ್ನಾಟಕ ವಿತ್ತೀಯ ಸುಧಾರಣೆ ಕಾಯ್ದೆ/ರಾಜ್ಯದ ಮಧ್ಯಮಾವಧಿ ವಿತ್ತೀಯ ಯೋಜನೆಗಳ ಗುರಿಗಿಂತ ಹೆಚ್ಚಳವಾಗಿ ಅದು ಶೇ.26.71ರಷ್ಟಿತ್ತು. ಇದು ಪ್ರಮುಖವಾಗಿ ರಾಜ್ಯದ ಆಂತರಿಕ ಸಾಲದಿಂದಾಗಿದೆ ಎಂದು ಸಿಎಜಿ ವರದಿಯಲ್ಲಿ ವಿಶ್ಲೇಷಿಸಲಾಗಿದೆ.

 

ರಾಜ್ಯ ಸರ್ಕಾರದ ಸಾಲವನ್ನು ಪರಿಶೀಲಿಸಿದಾಗ ಕರ್ನಾಟಕ ವಿತ್ತೀಯ ಸುಧಾರಣೆ ಕಾಯಿದೆ ಸೂಚಿಸಿದ ಹಣಕಾಸಿನ ಮಾನದಂಡದೊಳಗೆ ಸಾಲದ ಮಟ್ಟವನ್ನು ತಗ್ಗಿಸಲು ಬದ್ಧ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಏಕಕಾಲದಲ್ಲಿ ರಾಜ್ಯದ ರಾಜಸ್ವವನ್ನು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆರ್ಥಿಕ ಇಲಾಖೆಗೆ ಸೂಚಿಸಿತ್ತು.

 

ರಾಜ್ಯದ ಹಣಕಾಸಿನ ಹೊಣೆಗಾರಿಕೆಗಳು 2017-18ರಲ್ಲಿನ 2,46,231 ಕೋಟಿಗಳಿಂದ 2021-22ರಲ್ಲಿ 4,90, 256 ಕೋಟಿಗಳಿಗೆ ಏರಿ ಶೇಕಡ 87ರಷ್ಟು ಏರಿಕೆಯಾಗಿದೆ. ರಾಜ್ಯದ ಬಾಕಿ ಇರುವ ಸಾರ್ವಜನಿಕ ಋಣವು 1,63,136 ಕೋಟಿಯಿಂದ 3,74,427 ಕೋಟಿಗೆ ಏರಿಕೆಯಾಗಿದೆ.

 

ಋಣ ಸ್ವೀಕೃತಿಗಳಡಿಯಲ್ಲಿ ರಾಜ್ಯಕ್ಕೆ 2020-21 ಮತ್ತು 2021-22ರ ಅವಧಿಯಲ್ಲಿ ಬ್ಯಾಕ್‌ ಟು ಬ್ಯಾಕ್‌ ಸಾಲವಾಗಿ ನೀಡಲಾದ 12,407 ಕೋಟಿ ಮತ್ತು 18,109 ಕೋಟಿ ಸರಕು ಮತ್ತು ಸೇವಾ ತೆರಿಗೆ ಪರಿಹಾರವನ್ನು,ಹಣಕಾಸು ಆಯೋಗವು ಸೂಚಿಸಬಹುದಾದ ಯಾವುದೇ ಮಾನದಂಡಗಳಿಗೆ ರಾಜ್ಯದ ಸಾಲವೆಂದು ಪರಿಗಣಿಸಲಾಗುವುದಿಲ್ಲ ಎಂದು ಭಾರತ ಸರ್ಕಾರದ ವೆಚ್ಚದ ಇಲಾಖೆಯು ನಿರ್ಧರಿಸಿರುವುದರಿಂದ ಪರಿಣಾಮಕಾರಿ ಬಾಕಿ ಇರುವ ಸಾರ್ವಜನಿಕ ಋಣವು 4,59,740 ಕೋಟಿಗಳಾಗಿವೆ.

 

ಸಾಲ ವಿಮೋಚನೆ ಅನುಪಾತವು 2018-19ರಿಂದಲೂ ಕಡಿಮೆ ಆಗುತ್ತಿರುವ ಪ್ರವೃತ್ತಿಯಲ್ಲಿತ್ತು ಮತ್ತು 2021-22ರ ಅವಧಿಯಲ್ಲಿ ಕರ್ನಾಟಕ ವಿತ್ತೀಯ ಜವಾಬ್ದಾರಿ ಕಾಯ್ದೆಯನ್ನು ಮೀರಿತ್ತು. 2021-22ರಲ್ಲಿ ರಾಜ್ಯಕ್ಕೆ ಲಭ್ಯವಿರುವ ಒಟ್ಟು ಸಾಲವು ಹಿಂದಿನ ವರ್ಷಕ್ಕೆ ಹೋಲಿಸಿದರೆ 6,843 ಕೋಟಿಗಳಷ್ಟು ಇಳಿಕೆಯಾಯಿತು. ಇದು ಆಂತರಿಕ ಸಾರ್ವಜನಿಕ ಸಾಲ ಸ್ವೀಕೃತಿಗಳ ಇಳಿಕೆ ಹಾಗೂ ಸಾಲಗಳ ಮರುಪಾವತಿಯಲ್ಲಿ ಹೆಚ್ಚಳದ ಕಾರಣದಿಂದ ಆಗಿದೆ ಎಂದು ಲೆಕ್ಕಚಾರ ಮಾಡಿದೆ.

 

ಒಟ್ಟು ಬಾಕಿಯಿರುವ ಸಾಲದಲ್ಲಿ ಮಾರುಕಟ್ಟೆ ಸಾಲಗಳು, ನಬಾರ್ಡ್‌, ಭಾರತೀಯ ಜೀವ ನಿಗಮ, ಜಿಐಸಿ ಮತ್ತು ಕೇಂದ್ರ ಸರ್ಕಾರದ ಎನ್‌ಎಸ್‌ಎಸ್‌ಎಫ್‌ಗೆ ನೀಡಲಾದ ವಿಶೇಷ ಭದ್ರತೆಗಳ ಸಾಲಗಳನ್ನು ಒಳಗೊಂಡಿರುವ ಆಂತರಿಕ ಋಣವು ಸೇ.67.12ರಷ್ಟಿದೆ. (3,29,042 ಕೋಟಿ), ಸಾರ್ವಜನಿಕ ಲೆಕ್ಕದ ಹೊಣೆಗಾರಿಕೆಗಳು ಶೇ.20.22ರಷ್ಟಿದೆ. ಭಾರತ ಸರ್ಕಾರದಿಂದ ಪಡೆದ ಸಾಲಗಳು ಶೇ.9.26 ಮತ್ತು ಆಯವ್ಯಯದ ಹೊರಗೆ ಪಡೆದ ಸಾಲಗಳು ಶೇ.3.40ರಷ್ಟಿದೆ.

 

ರಾಜ್ಯ ಸಂಚಿತ ನಿಧಿಯ ಬಾಧ್ಯತೆಗಳ ಭಾಗವಾಗಿರುವ ಆಂತರಿಕ ಋಣವು 2017-18ರಲ್ಲಿದ್ದ 1,48,581 ಕೋಟಿಗಳಿಂದ 2021-22ರಲ್ಲಿ 3,29,042 ಕೋಟಿಗಳಿಗೆ ಏರಿಕೆಯಾಗಿದೆ. ಏರಿಕೆಯು ಶೇ.121ರಷ್ಟಾಗಿದೆ. ಭಾರತ ಸರ್ಕಾರದಿಂದ ಪಡೆದ ಸಾಲಗಳು ಮತ್ತು ಮುಂಗಡಗಳು 2017-18ರಲ್ಲಿದ್ದ 14,555 ಕೋಟಿಗಳಿದ್ದು 2021-22ರಲ್ಲಿ 14,869 ಕೋಟಿಗಳಿಗೆ (ಸರಕು ಸೇವಾ ತೆರಿಗೆ ಪರಿಹಾರಕ್ಕೆ3 ಪ್ರತಿಯಾಗಿ ಭಾರತ ಸರ್ಕಾರದಿಂದ ಸ್ವೀಕರಿಸಿದ 30,156 ಕೋಟಿ ಬ್ಯಾಕ್‌ ಟು ಬ್ಯಾಕ್‌ ಸಾಲಗಳನ್ನು ಬಿಟ್ಟು) ಅಂತರ ವರ್ಷದ ವ್ಯತ್ಯಾಸಗಳೊಂದಿಗೆ ಶೇ. ಎರಡರ ಹೆಚ್ಚಳವನ್ನು ತೋರಿಸಿದೆ.

 

5 ಗ್ಯಾರಂಟಿಗಳ ಪರಿಶೀಲಿಸದ ವಿತ್ತೀಯ ಸುಧಾರಣೆ ಕೋಶ; ಸಾಲದ ಮೂಲಕ ಅನುದಾನ ಒದಗಿಸಲಿರುವ ಸರ್ಕಾರ

 

2021-22ರ ಅವಧಿಯಲ್ಲಿನ 52,038 ಕೋಟಿಗಳ ಬಂಡವಾಳ ವೆಚ್ಚದಲ್ಲಿ ಆಯವ್ಯಯ ಹೊರಗಿನ ಸಾಲಗಳ ಅಸಲು ಮರು ಪಾವತಿಯು 4,089.27 ಕೋಟಿಗಳು ಸೇರಿವೆ. ಪ್ರಸ್ತುತ ವರ್ಷದ ಬಡ್ಡಿ ಪಾವತಿಯು 1,292.26 ಕೋಟಿಗಳಷ್ಟಾಗಿತ್ತು.

 

ರಾಜ್ಯದ ಆಯವ್ಯಯದ ಹೊರಗಿನ ಸಾಲಗಳನ್ನು ಗಣನೆಗೆ ತೆಗೆದುಕೊಂಡರೇ ಮಾರ್ಚ್‌ 2022ರ ಅಂತ್ಯದ ವೇಳೆಗೆ ಒಟ್ಟು ಹೊಣೆಗಾರಿಕೆಗಳು 4,90,256 ಕೋಟಿಗಳಾಗುತ್ತವೆ. ವರ್ಷದ ಕೊನೆಯಲ್ಲಿ ರಾಜ್ಯದ ಆಂತರಿಕ ಉತ್ಪನ್ನಕ್ಕೆ ಬಾಕಿ ಉಳಿದಿರುವ ಹೊಣೆಗಾರಿಎಕಗಳ ದರವು ಶೇ.26.71ರಷ್ಟಾಗುತ್ತದೆ. ಮತ್ತು ಇದು ಭಾರತ ಸರ್ಕಾರದಿಂದ ಪಡೆದ ಸರಕು ಮತ್ತು ಸೇವಾ ತೆರಿಗೆಯ ಬದಲಾಗಿ ಬ್ಯಾಕ್‌ ಟು ಬ್ಯಾಕ್‌ ಸಾಲವಾದ 30,516 ಕೋಟಿಗಳಷ್ಟು ಹೊರತುಪಡಿಸಿ ಆಗಿರುವುದು ಸಿಎಜಿ ವರದಿಯಿಂದ ತಿಳಿದು ಬಂದಿದೆ.

 

‘ಯಾವಾಗಲೂ ರಾಜ್ಯ ಸರ್ಕಾರವು ಈ ಸರ್ಕಾರದ ಸ್ವಂತ ಯೋಜನೆಗಳನ್ನು ಅನುಷ್ಠಾನಗೊಳಿಸಲೂ ಸಾಲ ಪಡೆಯುವಂತೆ ಪ್ರೋತ್ಸಾಹಿಸುತ್ತದೆ. ಏಕೆಂದರೆ ಅವು ವಿತ್ತೀಯ ಕರತೆ ಅಥವಾ ಬಾಕಿ ಸಾಲದ ಮೇಲೆ ಹೇರಿದ ಮಿತಿಯನ್ನು ಮೀರಿದ್ದಕ್ಕಾಗಿ ಯಾವುದೇ ವ್ಯತಿರಿಕ್ತ ಪರಿಶೀಲನೆಯನ್ನು ಆಕರ್ಷಿಸುವುದಿಲ್ಲ,’ ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.

 

ಆಯವ್ಯಯದ ಹೊರಗಿನ ಸಾಲಗಳು ವಿತ್ತೀಯ ಪಾರದರ್ಶಕತೆಯ ಸೂತ್ರಗಳಿಗೆ ಪ್ರತಿಕೂಲವಾಗಿದ್ದು ವಿತ್ತೀಯ ಸುಸ್ಥಿರತೆಗೆ ಹಾನಿಕಾರಕವಾಗಿರುವುದರಿಂದ ಆಯವ್ಯಯದ ಹೊಣೆಗಳಿಗೆ ಮತ್ತಷ್ಟು ಹೊರೆಯನ್ನು ತಪ್ಪಿಸಲು ಕಟ್ಟುನಿಟ್ಟಾದ ಶಿಸ್ತನ್ನು ಪಾಲಿಸಲು ಶಿಫಾರಸ್ಸು ಮಾಡಿದೆ. ಅಲ್ಲದೇ ಈ ಜವಾಬ್ದಾರಿಗಳನ್ನು ಸಮಯಬದ್ಧತೆ ರೀತಿಯಲ್ಲಿ ನಿವಾರಿಸಬೇಕಕು ಎಂದು ಏಳಿದೆ. ಆದರೆ ಇದನ್ನು ಚುಕ್ತಾ ಮಾಡಲು ಸಂಪನ್ಮೂಲಗಳು ಸಾಮಾನ್ಯ ತೆರಿಗೆ ಮತ್ತು ತೆರಿಗೆಯೇತರ ಆದಾಯಗಳಲ್ಲದೇ ಸರ್ಕಾರದಿಂದ ಸಜ್ಜುಗೊಳಿಸಿದ ಹೆಚ್ಚುವರಿ ಸಂಪನ್ಮೂಲಗಳಾಗಿರಬೇಕು ಎಂದು ಶಿಫಾರಸ್ಸು ಮಾಡಿದೆ.

 

31 ಮಾರ್ಚ್‌ 2022ರಲ್ಲಿದ್ದಂತೆ ಸಾರ್ವಜನಿಕ ಋಣದ ಅವಧಿ ಪೂರ್ಣತೆ ವಿವರವು 3,74,426.81 ಕೋಟಿಗಳ ಸಾರ್ವಜನಿಕ ಸಾಲದ ಪೈಕಿ 29.70 ಪ್ರತಿಶತವು (1,11,180.67 ಕೋಟಿ) 1-6 ವರ್ಷಗಳ ಮತ್ತು 40.21 ಪ್ರತಿಶತವು (1,50,575.36 ಕೋಟಿ) 6-10 ವರ್ಷಗಳು ಮ್ತು 30.09 ಪ್ರತಿಶತವು (1,12,670.78 ಕೋಟಿ) ಹತ್ತು ವರ್ಷಗಳಿಗೂ ಹೆಚ್ಚಿನ ತೀರಿಕೆ ಅವಧಿ ಹೊಂದಿದೆ.

 

‘ರಾಜ್ಯವು ತನ್ನ ವೆಚ್ಚದ ಹೊಣೆಯನ್ನು ಪೂರೈಸಲು ಹೆಚ್ಚುವರಿ ಸಾಲವನ್ನು ಪಡೆಯುವುದು ಅಗತ್ಯವಾಗಿದ್ದರೂ ಇದು ಮುಂದಿನ ದಿನಗಳಲ್ಲಿ ಸಾಲ ಮರು ಪಾವತಿಯು ರಾಜ್ಯಕ್ಕೆ ಹೊರೆಯಾಗುತ್ತದೆ ಎಂದು ಸರ್ಕಾರವು ಒಪ್ಪಿಕೊಂಡಿದೆ. ವಿತ್ತೀಯ ನಿರ್ವಹಣಾ ಪರಿಶೀಲನಾ ಸಮಿತಿಯು ಬದ್ಧ ವೆಚ್ಚವನ್ನುಕಡಿಮೆ ಮಾಡಲು ಸಲಹೆ ನೀಡಿದ್ದರೂ ವೆಚ್ಚದ ಪಾಲಿನಲ್ಲಿ ಬದ್ಧ ವೆಚ್ಚಗಳು ಒಂದು ಪ್ರಮುಖ ಪಾಲು ಆಗಿರುವುದರಿಂದ ಹೆಚ್ಚುತ್ತಿರುವ ಸಾಲದ ಮಟ್ಟವು ಬದ್ಧ ವೆಚ್ಚದ ಭಾಗವಾದ ಬಡ್ಡಿ ಪಾವತಿಗಳು ಹೆಚ್ಚಾಗಲು ಕಾರಣವಾಗುತ್ತವೆ. 2025-26ರವರೆಗೂ ಬಡ್ಡಿ ಮರುಪಾವತಿಯು ಅಸಲಿಗಿಂತ ಹೆಚ್ಚಾಗಿದೆ. ನಂತರದ ಎರಡು ವರ್ಷಗಳಲ್ಲಿ ಕಡಿಮೆಯಾಗುತ್ತಿದ್ದರೂ ಅದು ಅಸಲಿಗಿಂತ ಶೇ.50ರಷ್ಟು ಹೆಚ್ಚಾಗಿದೆ,’ ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.

 

ಸಾಲವು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಅನುಪಾತವು ಕ್ರಮವಾಗಿ 26.22 ಮತ್ತು 32.60 ಶತಾಂಶಕ್ಕಿಂತ ಕಡಿಮೆ ಇರಬೇಕು. ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ವಿತ್ತೀಯ ಕೊರತೆಯು ಕ್ರಮವಾಗಿ ಶೇ.3.25 (2019-20ರವರೆಗೆ) ಒತ್ತು ಶೇ.4 (2024-25ರವರೆಗೆ) ಇರಬೇಕು. ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಋಣಾತ್ಮಕ ಬೆಳವಣಿಗೆಯಿಂದಾಗಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಸಾರ್ವಜನಿಕ ಋಣವು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇಕಡವಾರಿನಂತೆ 2021-22ರಲ್ಲಿ ಹೆಚ್ಚಳವಾಗಿದೆ.

 

2017-18ರಿಂದ 2021-22ರ ಅವಧಿಯಲ್ಲಿ ಸಾರ್ವಜನಿಕ ಋಣದ ಸ್ವೀಕೃತಿಗಳಿಗೆ ಸಾರ್ವಜನಿಕ ಋಣ ಮರುಪಾವತಿಯ ಶತಾಂಶವು 13.03 ಮತ್ತು 32.92ರ ನಡುವೆ ಇದೆ. 2020-21ರಲ್ಲಿ ಅತೀ ಕಡಿಮೆ ಇದ್ದ ಈ ಅನುಪಾತವು ಮುಖ್ಯವಾಗಿ ಸಾರ್ವಜನಿಕ ಋಣ ಸ್ವೀಕೃತಿಗಳಲ್ಲಿನ ಹೆಚ್ಚಳದಿಂದಾಗಿ ಏರಿಕೆ ಕಂಡಿದೆ. ಮತ್ತು 2021-222ರಲ್ಲಿ ಇದ ಶೇ.27.69ರಷ್ಟಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದುಇ ಪ್ರಮುಖವಾಗಿ ಮರುಪಾವತಿಯ ಹೆಚ್ಚಳ ಹಾಗೂ ಸಾಲ ಪಡೆಯುವುದಲ್ಲಿಇಳಿಕೆಯ ಕಾರಣದಿಂದಾಗಿದೆ ಎಂಬುದು ಸಿಎಜಿ ವರದಿಯಿಂದ ಗೊತ್ತಾಗಿದೆ.

 

ಅಂತರಿಕ ಋಣವು 2018-19ರಲ್ಲಿದ್ದ 40,470 ಕೋಟಿಗಳಿಂದ 2019-20ರಲ್ಲಿ 49,784 ಕೋಟಿಗಳಿಗೆ ಮತ್ತು 2020-21ರಲ್ಲಿ 70,414 ಕೋಟಿಗಳಿಗೆ ಏರಿಕೆಯಾಗಿದೆ. ಮತ್ತು 2021-22ರಲ್ಲಿ 60,462 ಕೋಟಿಗಳಿಗೆ ಇಳಿಕೆಯಾಗಿದೆ. ಪ್ರಮಾಣ ಹರವು ಮತ್ತು ಪ್ರಾಥಮಿಕ ಕೊರತೆಯ ಋಣಾತ್ಮಕ ಮೊತ್ತವು ಅಸ್ಥಿರ ಸಾಲದ ಕಡೆಗೆ ಪ್ರವೃತ್ತಿಯನ್ನು ಸೂಚಿಸುತ್ತದೆ.

 

ಸಾಲದ ರೂಪದಲ್ಲಿ ಪಡೆದ ಹಣವನ್ನು ಬಂಡವಾಳ ಸೃಷ್ಠಿ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಬಳಸಬೇಕು. ಪ್ರಸಕ್ತ ವೆಚ್ಚಗಳಿಗೆ ಮತ್ತು ಬಾಕಿ ಇರುವ ಸಾಲಗಳ ಮೇಲಿನ ಬಡ್ಡಿ ಮರು ಪಾವತಿಗೆ ಸಾಲದ ಹಣವನ್ನು ಬಳಸುವುದು ಸಮರ್ಥನೀಯವಲ್ಲ. ಆದರೆ 2021-22ರಲ್ಲಿ ರಾಜಸ್ವ ಸ್ವೀಕೃತಿಯನ್ನು ಭಾರೀ ಬೆಳವಣಿಗೆ ಕಂಡುಬಂದರೂ ಅದು ರಾಜಸ್ವ ವೆಚ್ಚವನ್ನು ಭರಿಸಲು ಸಾಕಷ್ಟು ಇರಲಿಲ್ಲ. ಇದರಿಂದಾಗಿ ಎರವಲು ಪಡೆದ ಹಣವನ್ನು ರಾಜಸ್ವ ವೆಚ್ಚಕ್ಕೆ ಬಳಸಲಾಗಿತ್ತು.

 

2021-22ರಲ್ಲಿ ರಾಜ್ಯವಯ ತೆರಿಗೆಯೇತರ ಆದಾಯದ ಬೆಳವಣಿಗೆ ದರದಲ್ಲೂ ಏರಿಕೆ ಕಂಡಿತು. ಪ್ರಸ್ತುತ ವರ್ಷದಲ್ಲಿ ಸ್ವಂತ ತೆರಿಗೆ ಮತ್ತು ತೆರಿಗೆಯೇತರ ಆದಾಯದಲ್ಲಿ ಗಣನೀಯ ಹೆಚ್ಚಳವನ್ನು ಹೊಂದಿದ್ದರೂ ರಾಜ್ಯವು 13,666 ಕೋಟಿ ಆದಾಯ ಕೊರತೆ ಕಂಡಿದೆ ಎಂಬುದು ಸಿಎಜಿ ವರದಿಯಿಂದ ಗೊತ್ತಾಗಿದೆ.

 

ರಾಜ್ಯದ ಒಟ್ಟು ಹಣಕಾಸಿನ ಹೊಣೆಗಾರಿಕೆಗಳಲ್ಲಿ ಮುಕ್ತ ಮಾರುಕಟ್ಟೆ ಸಾಲಗಳು ಪ್ರಮುಖ ಪಾಲನ್ನು (ಶೇ.68) ಹೊಂದಿದ್ದವು. ಬಡ್ಡಿ ಪಾವತಿ ಹೊರೆಯನ್ನು ಅಳೆಯುವ ರಾಜಸ್ವ ಸ್ವೀಕೃತಿ ಮತ್ತು ಬಡ್ಡಿ ಪಾವತಿಗಳ ಅನುಪಾತವು ಹೆಚ್ಚುತ್ತಿರುವ ಪ್ರವೃತ್ತಿಯಲ್ಲಿದೆ. ಮತ್ತು 2021-22ರಲ್ಲಿ ಇದು ಶೇ.13.42ರಷ್ಟಿದೆ.

 

ವಿತ್ತೀಯ ನಿರ್ವಹಣಾ ಪರಿಶೀಲನಾ ಸಮಿತಿಯ ಸಮೀಕ್ಷೆಯಂತೆ ರಾಜ್ಯ ಸರ್ಕಾರವು ಬದ್ಧ ವೆಚ್ಚಗಳನ್ನು ಮಿತಗೊಳಿಸಲು ಬದ್ಧ ವೆಚ್ಚಗಳನ್ನು ಮಧ್ಯಮಗೊಳಿಸುವುದರ ಜೊತೆಗೆ ಸಾಲದ ಹಂತವನ್ನು ಕಡಿಮೆ ಮಾಡಲು ರಾಜ್ಯದ ಆದಾಯವನ್ನು ಸಜ್ಜುಗೊಳಿಸಲು ವೆಚ್ಚಕ್ಕೆ ಸಂಬಂಧಿಸಿದಂತೆ ಮಧ್ಯಂತರ ತಿದ್ದುಪಡಿಗಳನ್ನು ಮಾಡಬೇಕಾಗಿದೆ.

 

ಹೆಚ್ಚುವರಿ ಮಾರುಕಟ್ಟೆಗಳ ಎರವಲುಗಳ ಕಾರಣದಿಂದಾಗಿ ವರ್ಷದ ಅಂತ್ಯದಲ್ಲಿ ರಾಜ್ಯದ ನಗದು ಶಿಲ್ಕು ಹಿಂದಿನವರ್ಷಕ್ಕಿಂತ ಶೇ.35ರಷ್ಟು ಹೆಚ್ಚಾಗಿದೆ. ಹೀಗಾಗಿ ನಿಷ್ಫಲ ನಗದು ಶಿಲ್ಕನ್ನು ಹೊಂದಿರುವುದು ವಿವೇಕಯುಕ್ತ ನಗದು ನಿರ್ವಹಣೆಯಲ್ಲ. ಆದ್ದರಿಂದ ಸರ್ಕಾರವು ಮಾರುಕಟ್ಟೆ ಸಾಲಗಳನ್ನು ತನ್ನ ಅಗತ್ಯಕ್ಕೆ ತಕ್ಕಂತೆ ಸೀಮಿತಗೊಳಿಸಿಕೊಳ್ಳಬೇಕಾಗಿದೆ ಎಂದು ಸಿಎಜಿ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ.

the fil favicon

SUPPORT THE FILE

Latest News

Related Posts