ಬೆಂಗಳೂರು; ಕೇಂದ್ರದ ತೆರಿಗೆಗಳ ಪಾಲು ಕಡಿಮೆಯಾಗುತ್ತಿರುವುದು, ಕೇಂದ್ರದ ತೆರಿಗೆ ವರ್ಗಾವಣೆಯಲ್ಲಿನ ಕುಸಿತ, ಬಳಕೆದಾರ ಚೇತರಿಸಿಕೊಳ್ಳದ ಶುಲ್ಕದಲ್ಲಿ ಸಹಾಯಧನ ಹೆಚ್ಚುತ್ತಿರುವುದು, ಹೆಚ್ಚುತ್ತಿರುವ ಬಾಕಿ ಸಾಲ, ಬಡ್ಡಿ ಪಾವತಿ ಹೊರೆಯಲ್ಲಿನ ಮತ್ತಷ್ಟು ಏರಿಕೆಯು ಇದು ರಾಜಸ್ವ ವೆಚ್ಚವನ್ನು ಹೆಚ್ಚಿಸಿ ರಾಜ್ಯದ ಹಣಕಾಸಿನ ಪರಿಸ್ಥಿತಿಯನ್ನು ದುರ್ಬಲಗೊಳಿಸಲಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಕರ್ನಾಟಕ ಆರ್ಥಿಕ ಸಮೀಕ್ಷೆಯು ಹೊರಗೆಡವಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆ ಮಂಡಿಸಿರುವ ಕರ್ನಾಟಕ ಆರ್ಥಿಕ ಸಮೀಕ್ಷೆ (2022-23)ಯು ಕರ್ನಾಟಕದ ಹಣಕಾಸಿನ ಸ್ಥಿತಿ ಹೇಗಿದೆ ಎಂಬುದಕ್ಕೆ ಕೈಗನ್ನಡಿ ಹಿಡಿದಿದೆಯಲ್ಲದೇ ತೀವ್ರ ಕಳವಳ , ಆತಂಕ ಮತ್ತು ಮುಂದಿನ ಐದು ವರ್ಷಗಳಲ್ಲಿ ತೀವ್ರ ಮತ್ತು ಗಂಭೀರವಾದ ಸವಾಲನ್ನು ಎದುರಿಸಬೇಕಾಗಲಿದೆ ಎಂಬ ಅನಿವಾರ್ಯತೆಯನ್ನೂ ಎತ್ತಿ ಹಿಡಿದಿದೆ.
ವಿತ್ತೀಯ ಅಭಿವೃದ್ಧಿ ಹಾಗೂ ರಾಜ್ಯ ಹಣಕಾಸಿಗೆ ಸಂಬಂಧಿಸಿದಂತೆ ತೆರಿಗೆ, ತೆರಿಗೆಯೇತರ ರಾಜಸ್ವ, ನಿವ್ವಳ ಮಾರುಕಟ್ಟೆ ಸಾಲ, ಬಡ್ಡಿ ಪಾವತಿ, ಬದ್ಧತಾ ವೆಚ್ಚಗಳ ಕುರಿತು ಚರ್ಚಿಸಿರುವ ಕರ್ನಾಟಕ ಆರ್ಥಿಕ ಸಮೀಕ್ಷೆಯು ಕೇಂದ್ರದ ಅನುದಾನ, ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನದಲ್ಲಿನ ಕಡಿತದಿಂದಾಗಿ ರಾಜ್ಯ ಹಣಕಾಸಿನ ಸ್ಥಿತಿ ಮೇಲೆ ಆಗುವ ಗಂಭೀರ ಪರಿಣಾಮಗಳ ಕುರಿತು ವಿಶ್ಲೇಷಿಸಿದೆ.
‘ಕಳೆದ ಐದು ವರ್ಷಗಳಲ್ಲಿ ರಾಜ್ಯದ ಸ್ವಂತ ತೆರಿಗೆಯ ವಾರ್ಷಿಕ ಸರಾಸರಿ ಪಾಲು ಶೇ.7..2ರಷ್ಟಿದೆ. ಆದರೂ ಕಳವಳಕ್ಕೆ ಗಂಭೀರವಾದ ಕಾರಣವೆಂದರೆ ಕೇಂದ್ರದ ತೆರಿಗೆಗಳ ಪಾಲು ಕಡಿಮೆಯಾಗುತ್ತಿರುವುದು. ಕಳವಳಕ್ಕೆ ಗಂಭೀರವಾದ ಕಾರಣವೆಂದರೆ ಕೇಂದ್ರದ ತೆರಿಗೆಗಳ ಪಾಲು ಕಡಿಮೆಯಾಗುತ್ತಿರುವುದು. ಆಯವ್ಯಯ ಸಂಖ್ಯೆಗಳಿಗೆ ಹೋಲಿಸಿದರೆ ಆದಾಯದ ಕೊರತೆ ಕೇಂದ್ರದ ತೆರಿಗೆಗಳನ್ನು ಭಾಗಿಸಬಹುದಾದ ಗುಣಕದಲ್ಲಿ ರಾಜ್ಯದ ಪಾಲು ಕುಸಿತವಾಗಿದೆ. ಕರ್ನಾಟಕವು ಕೇಂದ್ರ ತೆರಿಗೆ ವರ್ಗಾವಣೆಯಲ್ಲಿ ಶೇ.24.5ರಷ್ಟು ಕುಸಿತವನ್ನು ನೋಡಬಹುದು. ಇದು ಮುಂದಿನ ಐದು ವರ್ಷಗಳಲ್ಲಿ ರಾಜ್ಯವನ್ನು ನಿಭಾಯಿಸಲು ತೀವ್ರ ಸವಾಲನ್ನು ಒಡ್ಡಲಿದೆ,’ ಎಂದು ಅಂದಾಜಿಸಿದೆ.
ಹಾಗೆಯೇ ತೆರಿಗೆಯೇತರ ರಾಜಸ್ವ 2021-22ರಲ್ಲಿ 9,000 ಕೋಟಿಗಳಿಂದ 2022-23ರಲ್ಲಿ 10,940.56 ಕೋಟಿಗೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದಿರುವ ಸಮೀಕ್ಷೆಯು ಒಟ್ಟು ರಾಜಸ್ವದಲ್ಲಿ ಕೆಲವು ವರ್ಷಗಳಿಂದ ಕಡಿಮೆಯಾಗುತ್ತ ಬಂದಿದೆ. ಬಳಕೆದಾರ ಚೇತರಿಸಿಕೊಳ್ಳದ ಶುಲ್ಕದಲ್ಲಿ ಸಹಾಯಧನ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ. ಇದು ರಾಜ್ಯದ ಹಣಕಾಸಿನ ಬಲಕ್ಕೆ ಗಂಭೀರ ಸವಾಲಾಗಬಹುದು ಎಂದು ಲೆಕ್ಕಚಾರ ಮಾಡಿದೆ.
ಅದೇ ರೀತಿ ಬಡ್ಡಿ ಮರುಪಾವತಿಗಳು 2022-23ರಲ್ಲಿ ಶೇ. 1.56ರಷ್ಟು ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಇದೇ ಅವಧಿಯಲ್ಲಿ ಶೇ.21.35ರಿಂದ ಶೇ.26.64ಕ್ಕೆ ಹೆಚ್ಚುತ್ತಿರುವ ಬಾಕಿ ಸಾಲದ ಜೊತೆಗೆ ರಾಜ್ಯಕ್ಕೆ ಬಡ್ಡಿ ಪಾವತಿ ಹೊರೆ ಮತ್ತಷ್ಟು ಏರಿಕೆಯಾಗಿದೆ. ಇದು ರಾಜಸ್ವ ವೆಚ್ಚವನ್ನು ಹೆಚ್ಚಿಸಿ ರಾಜ್ಯದ ಹಣಕಾಸಿನ ಪರಿಸ್ಥಿತಿಯನ್ನು ದುರ್ಬಲಕ್ಕೆ ದೂಡಬಹುದು ಎಂದು ವಿಶ್ಲೇಷಿಸಿದೆ.
ಇದೇ ರೀತಿಯಾಗಿ ಕೇಂದ್ರ ಸರ್ಕಾರದಿಂದ ಬರುವ ಅನುದಾನದ ಪ್ರವೃತ್ತಿಯು 2017-18ರಲ್ಲಿ ಶೇ.1.17ರಿಂದ 2020-21ರಲ್ಲಿ ಶೇ.0.90ಕ್ಕೆ ಇಳಿಕೆಯಾಗಿದೆ. ರಾಜಸ್ವ ಜಮೆಗಳ ಇತರ ಮೂಲಗಳು ಅಂದರೆ ತೆರಿಗೆಯೇತರ ರಾಜಸ್ವ ಸುಮಾರು 0.50 ಪ್ರತಿಶತದಷ್ಟಿದ್ದು ಹೆಚ್ಚುವರಿ ತೆರಿಗೆಯೇತರ ಆದಾಯವನ್ನು ಸಜ್ಜುಗೊಳಿಸುವಲ್ಲಿ ಸರ್ಕಾರವು ನಿರ್ಬಂಧಗಳನ್ನು ಎದುರಿಸಬೇಕಾಗಿದೆ ಎಂದಿದೆ.
ಕರ್ನಾಟಕಕ್ಕೆ ಹಣಕಾಸು ಆಯೋಗದ ಅನುದಾನದ ಒಟ್ಟಾರೆ ಪಾಲು ಶೇ.3.7ರಷ್ಟಿದೆ. ಇದು 14ನೇ ಹಣಕಾಸು ಆಯೋಗಕ್ಕೆ ಶೇ. 4.71ರಷ್ಟು ಕಡಿಮೆಯಾಗಿದೆ. 2022-23ರಲ್ಲಿ ರಾಜಸ್ವ ಜಮೆಗಳೂ ಬೆಳವಣಿಗೆ ದರವು ಶೇ.0.16ರಷ್ಟಿದ್ದರೇ ಇದೇ ವರ್ಷದಲ್ಲಿ ಬಂಡವಾಳ ಜಮೆಗಳ ಬೆಳವಣಿಗೆಯು ಶೇ. 8.26ರಷ್ಟಾಗಿದೆ. ಒಟ್ಟಾರೆ ಜಮೆಗಳು ಶೇ.2.34ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಒಟ್ಟು ರಾಜಸ್ವ ಮತ್ತು ಬಂಡವಾಳದ ಜಮೆಗಳ ಪಾಲು ಶೇ.71.56 ಮತ್ತು ಶೇ.28.44ರಷ್ಟಾಗಿರುತ್ತದೆ ಎಂದು ವಿವರಿಸಿದೆ.
ವೆಚ್ಚಗಳ ಲೆಕ್ಕದಲ್ಲಿ 2022-23ರಲ್ಲಿ ರಾಜಸ್ವ ವೆಚ್ಚವು ಶೇ.4.48ರಷ್ಟು, ಬಂಡವಾಳ ವೆಚ್ಚವು ಶೇ.8.48ರಷ್ಟು ಮತ್ತು ಒಟ್ಟಾರೆ ವೆಚ್ಚವು ಶೇ.5.36ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ದೊಡ್ಡ ಪ್ರಮಾಣದ ರಾಜಸ್ವ ಜಮೆಗಳು ರಾಜ್ಯದ ಸ್ವಂತ ತೆರಿಗೆ ಆದಾಯದಿಂದ 2022-23ನಲ್ಲಿ ಶೇ.69.45 ಎಂದು ಅಂದಾಜಿಸಿದೆ. ಭಾರತ ಸರ್ಕಾರದಿಂದ ತೆರಿಗೆ ವಿಕೇಂದ್ರೀಕರಣವು 15.68 ಪ್ರತಿಶತ ರಾಜಸ್ವ ಜಮೆ ಹೊಂದಿದೆ. ತೆರಿಗೆಯೇತರ (ಶೇ.5.76) ರಾಜಸ್ವ ಜಮೆಗಳಿಗೆ ಕಡಿಮೆ ಕೊಡುಗೆ ನೀಡುತ್ತಿದೆ ಎಂದು ವಿಶ್ಲೇಷಿಸಿದೆ.
2020-21ರಲ್ಲಿ ಶೇ.8.99ಕ್ಕೆ ಕುಸಿದಿರುವ ಅಭಿವೃದ್ಧಿ ವೆಚ್ಚವನ್ನ ಶೇ.9.19ಕ್ಕೆ ಹೆಚ್ಚಿಸಲು ಆಯವ್ಯಯ ಮಾಡಲಾಗಿದೆ. ಸಾಮಾಜಿಕ ಮತ್ತು ಸಾಮಾನ್ಯ ಸೇವೆಗಳಂತಹ ಇತರ ಸೇವೆಗಳಲ್ಲಿ ಇದೇ ರೀತಿಯ ಪ್ರವೃತ್ತಿಯನ್ನು ನಿರೀಕ್ಷಿಸಿದೆ ಎಂದಿರುವ ಸಮೀಕ್ಷೆಯು 2020-21ರಲ್ಲಿ ಶೇ. 1.22ರ ಬಡ್ಡಿ ಮರುಪಾವತಿಗಳು 2022-23ರಲ್ಲಿ ಶೇ. 1.56ರಷ್ಟು ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ ಎಂದಿದೆ.
‘ಅಭಿವೃದ್ಧಿಯೇತರ ವೆಚ್ಚದ ಪಾಲಿನ ಹೆಚ್ಚಳವು ಮುಂಬರುವ ವರ್ಷಗಳಲ್ಲಿ ಹಣಕಾಸಿನ ಬಲಕ್ಕೆ ಗಮನಾರ್ಹ ಸವಾಲಾಗಿರುತ್ತದೆ. ಈ ಹೆಚ್ಚಳವು ಹೆಚ್ಚಾಗಿ ಬಡ್ಡಿ ಪಾವತಿಗಳು ಮತ್ತು ವೇತನ, ಪಿಂಚಣಿ ಬಿಲ್‌ಗಳ ಹೆಚ್ಚಳದಿಂದಾದ ಕೊಡುಗೆಯಾಗಿದೆ. ಇದು ಮಧ್ಯಮ ಅವಧಿಯಲ್ಲಿ ದೊಡ್ಡ ಸಾಲದ ಪರಿಸ್ಥಿತಿಯಿಂದಾಗಿ ಹೆಚ್ಚಾಗುವ ನಿರೀಕ್ಷೆಯಿದೆ. 2022-23ರಲ್ಲಿ ಸಾಲದ ಸೇವೆಯು ಶೇ.7.66ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ,’ ಎಂದು ವಿವರಿಸಿದೆ.
ಕೇಂದ್ರದ ಅನುದಾನವು ರಾಜ್ಯ ಆಯವ್ಯಯದ ಪ್ರಮುಖ ಅಂಶವಾಗಿದೆ. 14ನೇ ಹಣಕಾಸು ಆಯೋಗದ ಅವಧಿಯಿಂದ ಒಟ್ಟಾರೆ ಡೆವ್ಯೂಲಷನ್‌ನಲ್ಲಿ ರಾಜ್ಯಗಳ ಪಾಲು ಶೇ. 32ರಿಂದ 42ಕ್ಕೆ ಏರಿಕೆಯಾಗಿದೆ. ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳ ನಿರ್ಬಂಧದೊಂದಿಗೆ ಸಾಮಾನ್ಯವಾಗಿ ರಾಜ್ಯಗಳಿಗೆ ಕೇಂದ್ರದ ಅನುದಾನದ ವರ್ಗಾವಣೆಯಲ್ಲಿ ಕಡಿತವಾಗಿದೆ. ಕರ್ನಾಟಕ ರಾಜ್ಯಕ್ಕೆ ಅಂತಹ ಅನುದಾನಗಳು 2020-21ರಲ್ಲಿ ಒಟ್ಟು ರಾಜಸ್ವದ ಜಮೆಯು ಶೇ. 19.19ರಿಂದ 2022-23ರ ಅವಧಿಯಲ್ಲಿ ಶೇ.11.73ಕ್ಕೆ ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದೆ.
ಮಧ್ಯಮಾವಧಿ ವಿತ್ತೀಯ ಯೋಜನೆ 2022-26ರಲ್ಲಿದ್ದಂತೆ ರಾಜಸ್ವದ ಖಾತೆಯಲ್ಲಿ ಹೆಚ್ಚಳವನ್ನು ಅನುಭವಿಸಿದ ರಾಜ್ಯವು ಶೇ.1ಕ್ಕಿಂತ ಹೆಚ್ಚಿನ ರಾಜಸ್ವ ಕೊರತೆಯನ್ನು ಪ್ರಾರಂಭಿಸಿದೆ. ಮತ್ತು ಮಧ್ಯಮ ಅವಧಿಯಲ್ಲಿ ಮುಂದುವರೆಯುವ ನಿರೀಕ್ಷೆಯಿದೆ. ಆದಾಯದ ವೆಚ್ಚಗಳನ್ನು ಸಮೀಕರಣಗೊಳಿಸುವುದಕ್ಕೆ ಸಂಬಂಧಿಸಿದಂತೆ ರಾಜ್ಯವು ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಾಗಿದೆ ಎಂದು ವಿವರಿಸಿದೆ.
‘ಇದು ಮಧ್ಯಾಮಾವಧಿಯಲ್ಲಿ ಬಾಕಿ ಉಳಿದಿರುವ ಹೊಣೆಗಾರಿಕೆಗಳ ಮೇಲೆ ಪರಿಣಾಮಗಳನ್ನು ಬೀರಬಹುದು. ಸಂಭಾವ್ಯ ಒಟ್ಟು ರಾಜ್ಯದ ಆಂತರಿಕ ಉತ್ಪನ್ನವನ್ನು ಸುಧಾರಿಸಲು ರಾಜ್ಯವು ವೆಚ್ಚದ ವಿಚಾರಗಳಲ್ಲಿನ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳುವುದು ವಿವೇಕಯುತವಾಗಿದೆ,’ ಎಂದು ಸಲಹೆ ನೀಡಿದೆ.