ಬೆಂಗಳೂರು; ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ಪಡೆದುಕೊಂಡು 3 ವರ್ಷಗಳಾದರೂ ಬೃಹತ್ ಮತ್ತು ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಅವರ ಕುಟುಂಬ ಸದಸ್ಯರ ಒಡೆತನದ ನಿರಾಣಿ ಶುಗರ್ಸ್ ಪ್ರೈ ಲಿಮಿಟೆಡ್ ಗುತ್ತಿಗೆ ಒಪ್ಪಂದವನ್ನು ನೋಂದಣಿ ಮಾಡಿಸಿಲ್ಲ. 90 ದಿನದೊಳಗೆ ನೋಂದಣಿ ಆಗದೇ ಇರುವ ಕಾರಣ ಗುತ್ತಿಗೆ ಒಪ್ಪಂದವನ್ನು ನೋಂದಾಯಿಸಲು ಅವಕಾಶವಿಲ್ಲ ಎಂದು ಸ್ಪಷ್ವವಾಗಿ ನಿಲುವು ತಳೆದಿರುವ ನೋಂದಣಿ ಮಹಾಪರಿವೀಕ್ಷಕರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಗುತ್ತಿಗೆ ಒಪ್ಪಂದವನ್ನು ನೋಂದಣಿ ಮಾಡಿಸದಿದ್ದರೂ ಕಬ್ಬು ಅರೆಯುತ್ತಿರುವ ನಿರಾಣಿ ಶುಗರ್ಸ್ ಪ್ರೈವೈಟ್ ಲಿಮಿಟೆಡ್ ಗುತ್ತಿಗೆ ಒಪ್ಪಂದದಲ್ಲಿನ ಕೆಲ ಷರತ್ತುಗಳನ್ನು ಕೈಬಿಡಲು ಸರ್ಕಾರದ ಮೇಲೆ ಒತ್ತಡ ಮುಂದುವರೆಸಿದೆ. ಅದೇ ರೀತಿ 2020-25ರ ಹೊಸ ಕೈಗಾರಿಕೆ ನೀತಿಯನ್ನು ಮುಂದಿರಿಸಿ 24.00 ಕೋಟಿ ರು. ಮೊತ್ತದ ಮುದ್ರಾಂಕ ಶುಲ್ಕದಿಂದ ವಿನಾಯಿತಿ ನೀಡಲು ಸರ್ಕಾರದ ಹೆಗಲಿಗೇರಿ ಕುಳಿತಿದೆ.
ಗುತ್ತಿಗೆ ಒಪ್ಪಂದವನ್ನು 3 ವರ್ಷಗಳಿಂದ ನೋಂದಣಿ ಮಾಡಿಸದೆಯೇ ಚಟುವಟಿಕೆ ಮುಂದುವರೆಸಲು ಅವಕಾಶ ಮಾಡಿಕೊಟ್ಟಿರುವ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ನಡೆಯು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ. ಈ ಕುರಿತು ‘ದಿ ಫೈಲ್’ಗೆ ಕೆಲ ದಾಖಲೆಗಳು ಲಭ್ಯವಾಗಿವೆ.
ನಿರಾಣಿ ಶುಗರ್ಸ್ ಪ್ರೈವೈಟ್ ಲಿಮಿಟೆಡ್ ಗುತ್ತಿಗೆ ಒಪ್ಪಂದ ನೋಂದಣಿ ಮಾಡದ ಕಾರಣ ಗುತ್ತಿಗೆ ಮೊತ್ತದ ಪೈಕಿ 24 ಕೋಟಿಯೂ ಸರ್ಕಾರದ ಕೈಸೇರಿಲ್ಲ. ಹೀಗಾಗಿ ನೌಕರರಿಗೆ ಬಾಕಿ ಮೊತ್ತವನ್ನು ಪಾವತಿಸಲಾಗಿಲ್ಲ. ಗುತ್ತಿಗೆ ಒಪ್ಪಂದವು 2020ರ ಜುಲೈ 10ರಂದು ಏರ್ಪಟ್ಟಿರುವುದರಿಂದ 90 ದಿನದೊಳಗೆ ನೋಂದಣಿ ಆಗದೇ ಇರುವ ಕಾರಣ ಗುತ್ತಿಗೆ ಒಪ್ಪಂದವನ್ನು ನೋಂದಾಯಿಸಲು ಅವಕಾಶವಿಲ್ಲ ಎಂದು ನೋಂದಣಿ ಮಹಾ ಪರಿವೀಕ್ಷಕರು 2022ರ ಡಿಸೆಂಬರ್ 21ರಂದೇ ಪತ್ರ ಬರೆದಿದ್ದಾರೆ. ಆದರೂ ನಿರಾಣಿ ಶುಗರ್ಸ್ ಕೆಲ ಪ್ರಮುಖ ಷರತ್ತುಗಳನ್ನು ಕೈಬಿಡುವ ಸಂಬಂಧ ತನ್ನ ಒತ್ತಡವನ್ನು ಮುಂದುವರೆಸಿದೆ ಎಂದು ತಿಳಿದು ಬಂದಿದೆ.
ರಾಯಭಾಗ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಭಾಗ್ಯಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಕರಣಗಳಂತೆ ಮುದ್ರಾಂಕ ಶುಲ್ಕವನ್ನು ಲೆಕ್ಕಚಾರ ಮಾಡುವ ಕುರಿತಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ನಿರ್ದೇಶನದಂತೆ ಕಾರ್ಖಾನೆಯ ಸ್ಥಿರ ಮತ್ತು ಚರ ಆಸ್ತಿಗಳ ಮೌಲ್ಯಮಾಪನ ಮಾಡಿಸಲು ಸರ್ಕಾರವು ಕ್ರಮವಹಿಸಿದೆ ಎಂದು ಗೊತ್ತಾಗಿದೆ.
ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು 2020-21ನೇ ಹಂಗಾಮಿನಿಂದ 40 ವರ್ಷಗಳ ಅವಧಿಗೆ ನಿರಾಣಿ ಶುಗರ್ಸ್‌ಗೆ ಗುತ್ತಿಗೆ ನೀಡುವ ಸಂಬಂಧ 2020ರ ಜೂನ್ 25ರಂದು ಸಚಿವ ಸಂಪುಟ ಸಭೆಯು ಅನುಮೋದಿಸಿತ್ತು. ಇದಾದ ನಂತರ 2020ರ ಜುಲೈ 4ರಂದು ಅನುಮತಿ ನೀಡಿದ್ದ ಕೈಗಾರಿಕೆ ಇಲಾಖೆಯು ಆದೇಶ ಹೊರಡಿಸಿತ್ತು.
2020ರ ಜುಲೈ 10ರಂದು ಪಾಂಡವಪುರ ಸಕ್ಕರೆ ಕಾರ್ಖಾನೆ ಮತ್ತು ನಿರಾಣಿ ಶುಗರ್ಸ್ ಪ್ರೈ ಲಿ ನಡುವೆ ಗುತ್ತಿಗೆ ಒಪ್ಪಂದ ಏರ್ಪಟ್ಟಿತ್ತು. ಗುತ್ತಿಗೆ ಒಪ್ಪಂದವನ್ನು 90 ದಿನಗಳವರೆಗೆ ನೋಂದಾವಣೆ ಮಾಡಿಕೊಳ್ಳಬೇಕಿತ್ತು. ಆದರೆ ಕೆಲ ಷರತ್ತುಗಳನ್ನು ಕೈಬಿಡಲು ಸರ್ಕಾರದ ಮೇಲೆ ಒತ್ತಡ ಹೇರುವುದರಲ್ಲಿಯೇ ತೊಡಗಿಸಿಕೊಂಡಿರುವ ನಿರಾಣಿ ಶುಗರ್ಸ್ 3 ವರ್ಷಗಳಾದರೂ ನೋಂದಣಿ ಮಾಡಿಸಿಕೊಂಡಿಲ್ಲ.
ಗುತ್ತಿಗೆ ಒಪ್ಪಂದ ಪಾಲನೆ, ಸಾಲ ಮತ್ತು ಜವಾಬ್ದಾರಿಗಳ ಕುರಿತಂತೆ 2021ರ ಜುಲೈ 8ರಂದು ಸರ್ಕಾರದ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು. ಸಭೆ ನಡೆದ ಒಂದು ವರ್ಷದ ಬಳಿಕ ನಿರಾಣಿ ಶುಗರ್ಸ್ ಪ್ರೈ ಲಿ., ಗುತ್ತಿಗೆ ಒಪ್ಪಂದದ ಮುದ್ರಾಂಕ ಶುಲ್ಕದಿಂದ ವಿನಾಯಿತಿ ಪಡೆಯಲು ಹಾಗೂ 2020ರ ಜುಲೈ 10ರಂದು ಮಾಡಿಕೊಳ್ಳಲಾದ ಒಪ್ಪಂದ ಷರತ್ತುಗಳನ್ನು ಬದಲಾಯಿಸಲು/ಮಾರ್ಪಾಡಿಸಲು 2022ರ ಸೆಪ್ಟಂಬರ್ 20ರಂದು ಮನವಿ ಸಲ್ಲಿಸಿತ್ತು. ಈ ಮನವಿಯನ್ನು ತಿರಸ್ಕರಿಸಿದ್ದ ಆರ್ಥಿಕ ಇಲಾಖೆಯು 2022ರ ಅಕ್ಟೋಬರ್ 6ರಂದೇ ಗುತ್ತಿಗೆ ಒಪ್ಪಂದಗಳ ಷರತ್ತುಗಳ ಬದಲಾವಣೆಗೆ ಈ ಹಂತದಲ್ಲಿ ಅವಕಾಶವಿರುವುದಿಲ್ಲ ಎಂದು ಅಭಿಪ್ರಾಯ ನೀಡಿತ್ತು ಎಂದು ಗೊತ್ತಾಗಿದೆ.
ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯು ಸಹಕಾರಿ ಸಕ್ಕರೆ ಕಾರ್ಖಾನೆಯಾಗಿದೆ. ರಾಜ್ಯ ಸರ್ಕಾರವು ಷೇರು ಬಂಡವಾಳ ಹೊಂದಿದೆ. ಗುತ್ತಿಗೆದಾರರು ಪ್ರಸ್ತಾಪಿಸಿರುವ ಗುತ್ತಿಗೆ ಒಪ್ಪಂದದ ತಿದ್ದುಪಡಿ/ಬದಲಾವಣೆಗಳು ಕಾರ್ಖಾನೆಯ ಆಸ್ತಿ ಮತ್ತು ಅಸ್ತಿತ್ವದ ಪ್ರಶ್ನೆ ಒಳಗೊಂಡಿರುವುದರಿಂದ ಈ ಪ್ರಸ್ತಾವನೆಗೆ ಪುನಃ ಆರ್ಥಿಕ ಇಲಾಖೆ ಮತ್ತು ಸಚಿವ ಸಂಪುಟದ ಅನುಮೋದನೆ ಪಡೆದುಕೊಳ್ಳಬೇಕಿದೆ ಎಂದು ಅಧಿಕಾರಿಯೊಬ್ಬರು ‘ದಿ ಫೈಲ್’ಗೆ ತಿಳಿಸಿದ್ದಾರೆ.
ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ಗುತ್ತಿಗೆ ಬರುತ್ತಿದ್ದಂತೆ ವರಾತ ತೆಗೆದಿದ್ದ ನಿರಾಣಿ ಶುಗರ್ಸ್ ಕಂಪನಿಯು ಗುತ್ತಿಗೆ ಕರಾರುಗಳನ್ನು ತಿದ್ದುಪಡಿಗೆ ಒತ್ತಡ ಹೇರಿತ್ತು. ಈ ಕುರಿತು ‘ದಿ ಫೈಲ್’ 2020ರ ಆಗಸ್ಟ್ 24ರಂದು ವರದಿ ಪ್ರಕಟಿಸಿತ್ತು.
ಪಿಎಸ್‌ಎಸ್‌ಕೆ ಕಾರ್ಖಾನೆ ಕೈಗೆ ಬರುತ್ತಿದ್ದಂತೆ ವರಾತ ತೆಗೆದ ನಿರಾಣಿ; ಗುತ್ತಿಗೆ ಕರಾರಿಗೆ ತಿದ್ದುಪಡಿಗೆ ಒತ್ತಡ
ಪಿಎಸ್‌ಎಸ್‌ಕೆ ಸಹಕಾರಿ ಸಕ್ಕರೆ ಕಾರ್ಖಾನೆ ನೋಂದಣಿ ಶುಲ್ಕ ಮನ್ನಾ ಮಾಡುವ ಪ್ರಸ್ತಾವನೆಯನ್ನು ಸರ್ಕಾರವು ತಿರಸ್ಕರಿಸಿತ್ತು. ಈ ಕುರಿತು ‘ದಿ ಫೈಲ್’ 2020ರ ಅಕ್ಟೋಬರ್ 20ರಂದೇ ವರದಿ ಪ್ರಕಟಿಸಿತ್ತು.
ಪಿಎಸ್‌ಎಸ್‌ಕೆ ಕಾರ್ಖಾನೆ ನೋಂದಣಿ ಶುಲ್ಕ ಮನ್ನಾ; ನಿರಾಣಿಗೆ ಭಾರೀ ಮುಖಭಂಗ
ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯು ದುಡಿಯುವ ಬಂಡವಾಳದ ಕೊರತೆಯಿಂದಾಗಿ ಕಳೆದ 5-6 ಸಾಲುಗಳಿಂದ ಕಬ್ಬು ನುರಿಸಿರಲಿಲ್ಲ. ಈ ಕಾರ್ಖಾನೆ ವ್ಯಾಪ್ತಿಯ ಕಬ್ಬು ಬೆಳೆದ ರೈತರ, ಕಾರ್ಮಿಕರ, ಕಾರ್ಖಾನೆ ಆರ್ಥಿಕ ಹಿತದೃಷ್ಟಿಯಿಂದ 2020-21ನೇ ಸಾಲಿನಲ್ಲಿ ಕಬ್ಬು ನುರಿಸಬೇಕಾಗಿದ್ದರಿಂದಾಗಿ ನಿರಾಣಿ ಶುಗರ್ಸ್‌ಗೆ 405 ಕೋಟಿ ರು.ಗೆ ಗುತ್ತಿಗೆ ನೀಡಲಾಗಿತ್ತು.