4 ವರ್ಷದ ಅವಧಿಯಲ್ಲಿ ರೌಡಿಶೀಟರ್‌ ಪಟ್ಟಿಯಿಂದ 20,455 ಮಂದಿ ಕೈಬಿಟ್ಟ ಬಿಜೆಪಿ ಸರ್ಕಾರ

photo credit-economictimes

ಬೆಂಗಳೂರು; ಕಳೆದ 5 ವರ್ಷಗಳಲ್ಲಿ ಒಟ್ಟು 26,139 ಜನರನ್ನು ರೌಡಿಶೀಟರ್‌ ಪಟ್ಟಿಯಿಂದ ಹಿಂಪಡೆದುಕೊಂಡಿರುವ ರಾಜ್ಯ ಸರ್ಕಾರವು ಇದೇ ಅವಧಿಯಲ್ಲಿ ಮಂದಿಯನ್ನು 13,563 ರೌಡಿಪಟ್ಟಿಗೆ ಸೇರಿಸಲಾಗಿದೆ. ಬಿಜೆಪಿ ಸರ್ಕಾರದ 4 ವರ್ಷದ ಅವಧಿಯೊಂದರಲ್ಲೇ 20,455 ಮಂದಿಯನ್ನು ರೌಡಿಶೀಟರ್ ಪಟ್ಟಿಯಿಂದ ಕೈಬಿಟ್ಟಿರುವುದು ಬಹಿರಂಗವಾಗಿದೆ.

 

ವಿಧಾನಪರಿಷತ್‌ನಲ್ಲಿ ಸದಸ್ಯ ಅರವಿಂದ ಕುಮಾರ ಅರಳಿ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ರೌಡಿಶೀಟರ್‌ ಪಟ್ಟಿ ಕುರಿತಾಗಿ ಅಂಕಿ ಅಂಶಗಳನ್ನು ಬಹಿರಂಗಪಡಿಸಿದ್ದಾರೆಯೇ ಹೊರತು ಯಾರ್ಯಾರನ್ನು ರೌಡಿಶೀಟರ್‌ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ ಮತ್ತು ಕೈಬಿಡಲಾಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನೂ ಹಂಚಿಕೊಂಡಿಲ್ಲ.

 

ಈ ಅವಧಿಯಲ್ಲಿ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಗೃಹ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.

 

 

‘ಬಿಜೆಪಿ ರೌಡಿ ಮೋರ್ಚಾ ಆರಂಭಿಸಿದ್ದು, 150 ರೌಡಿಗಳನ್ನು ಸೇರಿಸಿಕೊಳ್ಳಲು ಪಟ್ಟಿ ಮಾಡಿದೆ. 60 ರೌಡಿಗಳು ಆ ಮೋರ್ಚಾ ಸೇರಲು ಮುಂದಾಗಿದ್ದಾರೆ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಲಕ್ಷ್ಮಣ್ ಅವರು ಆರೋಪಿಸಿದ್ದರ ಬೆನ್ನಲ್ಲೇ ರೌಡಿ ಶೀಟರ್‌ಗಳ ಸೇರ್ಪಡೆ ಮತ್ತು ಕೈಬಿಟ್ಟಿರುವ ಅಂಕಿ ಅಂಶಗಳು ಮುನ್ನೆಲೆಗೆ ಬಂದಿವೆ.

 

2023ರ ಜನವರಿ ಮತ್ತು ಫೆಬ್ರುವರಿಯ ಈವರೆಗೆ ಒಟ್ಟು 7,361, 2021ರಲ್ಲಿ 8,062 ಮಂದಿಯನ್ನು ರೌಡಿಪಟ್ಟಿಯಿಂದ ಕೈಬಿಟ್ಟಿರುವುದು ಸಚಿವ ಆರಗ ಜ್ಞಾನೇಂದ್ರ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

 

2018ರಲ್ಲಿ 3,489, 2019ರಲ್ಲಿ 2,195, 2020ರಲ್ಲಿ 1,718, 2021ರಲ್ಲಿ 8,062, 2022ರಲ್ಲಿ 3,314, 2023ರ ಈವರೆಗೆ 7,361 ಮಂದಿಯನ್ನು ರೌಡಿಪಟ್ಟಿಯಿಂದ ಹಿಂಪಡೆದುಕೊಳ್ಳಲಾಗಿದೆ.

 

ಉತ್ತರಕನ್ನಡ ಜಿಲ್ಲೆಯಲ್ಲಿ 2023ರ ಫೆಬ್ರುವರಿಯ ಇದುವರೆಗೆ 529, ಬೀದರ್‌ ಜಿಲ್ಲೆಯಲ್ಲಿ 519, ಬೆಂಗಳೂರು ಜಿಲ್ಲೆಯಲ್ಲಿ 354, ಮೈಸೂರು ಜಿಲ್ಲೆಯಲ್ಲಿ 350, ಮಂಡ್ಯದಲ್ಲಿ 610, ಹಾಸನದಲ್ಲಿ 350, ವಿಜಯಪುರದಲ್ಲಿ 215, ಚಿತ್ರದುರ್ಗದಲ್ಲಿ 319, ಹಾವೇರಿಯಲ್ಲಿ 266, ಮಂದಿಯನ್ನು ರೌಡಿಪಟ್ಟಿಯಿಂದ ಹಿಂಪಡೆದುಕೊಂಡಿರುವುದು ಉತ್ತರದಿಂದ ಗೊತ್ತಾಗಿದೆ.

 

ಕಳೆದ 5 ವರ್ಷಗಳಲ್ಲಿ (2018ರಿಂದ 2023)13,563 ರೌಡಿಪಟ್ಟಿಗೆ ಸೇರಿಸಲಾಗಿದೆ. 2018ರಲ್ಲಿ 3,008, 2019ರಲ್ಲಿ 2,259, 2020ರಲ್ಲಿ 3,175, 2021ರಲ್ಲಿ 2,569, 2022ರಲ್ಲಿ 2,389, 2023ರ ಈವರೆಗೆ 186 ಮಂದಿಯನ್ನು ರೌಡಿಪಟ್ಟಿಗೆ ಸೇರಿಸಲಾಗಿದೆ ಎಂದು ಸಚಿವ ಆರಗ ಜ್ಞಾನೇಂದ್ರ ಅವರು ಉತ್ತರ ಒದಗಿಸಿದ್ದಾರೆ.

 

ಒಬ್ಬ ಆಸಾಮಿಯನ್ನು ಪೊಲೀಸ್‌ ಮ್ಯಾನ್ಯುಯಲ್‌ ಸ್ಥಾಯಿ ಆದೇಶ ಹಾಗೂ ಉಚ್ಛ ನ್ಯಾಯಾಲಯದ ರಿಟ್‌ ಅರ್ಜಿ ಸಂಖ್ಯೆ 4504/2021 (ದಿನಾಂಕ 22.04.2022) ರಲ್ಲಿ ನೀಡಿರುವ ತೀರ್ಪಿನ ಮಾರ್ಗಸೂಚಿಗಳನ್ವಯ ರೌಡಿಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ ಂದು ವಿವರಿಸಿದ್ದಾರೆ.

 

ರೌಡಿ ಆಸಾಮಿಯು 65 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಾಗಿದ್ದು ನಿಷ್ಕ್ರೀಯನಾಗಿದ್ದರೇ ರೌಡಿ ಆಸಾಮಿಯು ಮೃತನಾಗಿದ್ದಲ್ಲಿ ಮರಣ ಹೊಂದಿದ್ದಲ್ಲಿ ಅಥವಾ ಮಾನಸಿಕ ಅಸ್ವಸ್ಥನಾಗಿದ್ದಲ್ಲಿ, ರೌಢಿ ಆಸಾಮಿಯು ಕಳೆದ 10 ವರ್ಷದಲ್ಲಿ ಯಾವುದೇ ಪ್ರಕರಣದಲ್ಲಿ ಭಾಗವಹಿಸದೇ ಸನ್ನಡತೆಯಿಂದ ಇರುವುದು ಕಂಡು ಬಂದಲ್ಲಿ ರೌಡಿ ಪಟ್ಟಿಯಿಂದ ಹೆಸರು ತೆಗೆಯಲಾಗುತ್ತಿದೆ ಎಂಬ ಮಾಹಿತಿ ಒದಗಿಸಿದ್ದಾರೆ.

 

ಯೋಗೇಶ್ವರ್‌ ಅವರು ಮುಂಬರುವ ವಿಧಾನಸಭೆ ಚುನಾವಣೆ ಕುರಿತಂತೆ ಮಾತನಾಡುತ್ತಾ, ‘ಹೊಂದಾಣಿಕೆ ರಾಜಕಾರಣ ಬೇಡ, ಅದು ತಾಯಿಗೆ ದ್ರೋಹ ಮಾಡಿದ ಹಾಗೇ ಎಂದು ಅಮಿತ್ ಶಾ ಈಗಾಗಲೇ ನಮ್ಮನ್ನು ಎಚ್ಚರಿಸಿದ್ದಾರೆ. ಅವರದ್ದು ಒಂಥರ ರೌಡಿಸಂ. ಆ ವ್ಯಕ್ತಿ ಮೇಲ್ನೋಟಕ್ಕೆ ಇರುವುದೇ ಬೇರೆ. ಮಾತನಾಡುವುದೇ ಬೇರೆ. ಬೇರೆ ಯಾವ ಪಕ್ಷದವರ ಜೊತೆ ಒಪ್ಪಂದ ಮಾಡಿಕೊಂಡಿದ್ದು ಕಂಡುಬಂದರೆ ಅವರು ಬಿಡುವುದಿಲ್ಲ’ ಎಂದಿದ್ದ ಆಡಿಯೋ ಸಾಕಷ್ಟು ವೈರಲ್‌ ಆಗಿತ್ತು.

 

ಪ್ರತಿಪಕ್ಷ ಕಾಂಗ್ರೆಸ್‌ ಈ ಆಡಿಯೋವನ್ನು ಮುಂದಿರಿಸಿ ಬಿಜೆಪಿ ರೌಡಿ ಮೋರ್ಚಾ ಆರಂಭಿಸಿದೆಯೇ ಎಂದೂ ಕಾಲಳೆದಿತ್ತು. ಆಡಿಯೊ ಉಲ್ಲೇಖಿಸಿ ಬಿಜೆಪಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಸರಣಿ ಟ್ವೀಟ್‌ ಮಾಡಿ ಟೀಕಾ ಪ್ರಹಾರ ನಡೆಸಿತ್ತು. ಪ್ರೀತಿಯ ಬಿಜೆಪಿಯವರೇ, ‘ಅಮಿತ್ ಶಾ ರೌಡಿ ಇದ್ದಂಗೆ’ ಎಂಬ ನಿಮ್ಮದೇ ಪಕ್ಷದವರ ಮಾತನ್ನು ಒಪ್ಪುವಿರಾ? ಅಮಿತ್ ಶಾ ಪ್ರೇರಣೆಯಿಂದಲೇ ಜೈಲಲ್ಲಿರಬೇಕಾದ ರೌಡಿಗಳನ್ನು ಕರೆದು ರೌಡಿ ಮೋರ್ಚಾ ಕಟ್ಟುತ್ತಿದ್ದೀರಾ? ಬಿಜೆಪಿಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿರುವ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌

 

ಅವರು ಯೋಗೇಶ್ವರ್‌ ಹೇಳಿಕೆಗಳ ಬಗ್ಗೆ ತುಟಿ ಬಿಚ್ಚುತ್ತಿಲ್ಲವೇಕೆ? ಎಂದು ಪ್ರಶ್ನಿಸಿದ್ದನ್ನು ಸ್ಮರಿಸಬಹುದು.
ರೌಡಿಗಳ ಪೈಕಿ 10 ಮಂದಿಗೆ ವಿಧಾನಸಭೆ ಚುನಾವಣೆ ಟಿಕೆಟ್, 26 ಜನರಿಗೆ ಬಿಬಿಎಂಪಿ ಚುನಾವಣೆಯಲ್ಲಿ ಟಿಕೆಟ್ ನೀಡಲು ನಿರ್ಧರಿಸಲಾಗಿದೆ. ರೌಡಿಗಳಿಂದ ರೌಡಿಗಳಿಗಾಗಿ, ರೌಡಿಗಳಿಗೋಸ್ಕರ ಇದು ಬಿಜೆಪಿ ರೌಡಿ ಮೋರ್ಚಾದ ಘೋಷವಾಕ್ಯವಾಗಿದೆ’ ಎಂದೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್‌ ಅವರು ದೂರಿದ್ದರು.

the fil favicon

SUPPORT THE FILE

Latest News

Related Posts