ಹಿಜಾಬ್‌ ಪ್ರಕರಣದಲ್ಲಿ ಅಡ್ವೊಕೇಟ್‌ ಜನರಲ್‌ಗೆ 45 ಲಕ್ಷ ರು. ಪಾವತಿಗೆ ಬಿಲ್‌ ಸಲ್ಲಿಕೆ;ನಿಯಮ ಮೀರಲಿದೆಯೇ ಸರ್ಕಾರ?

photo credit;verdictum

ಬೆಂಗಳೂರು; ಹಿಜಾಬ್‌ ಧರಿಸಿ ಕಾಲೇಜಿಗೆ ಪ್ರವೇಶಿಸುವ ಸಂಬಂಧ ಅನುಮತಿ ಕೋರಿ ಕುಂದಾಪುರದ ಸರ್ಕಾರಿ ಪಿಯು ಕಾಲೇಜಿನ ರೇಷಂ ಉಡುಪಿ ಮತ್ತಿತರರು ಸಲ್ಲಿಸಿದ್ದ ರಿಟ್‌ ಅರ್ಜಿ ಪ್ರಕರಣದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯಕ್ಕೆ ಹಾಜರಾಗಿದ್ದ ರಾಜ್ಯ ಅಡ್ವೋಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರಿಗೆ 45 ಲಕ್ಷ ರು. ವಿಶೇಷ ಸಂಭಾವನೆ ಪಾವತಿಸುವ ಸಂಬಂಧ ಕಾನೂನು ಇಲಾಖೆಯು ಕೆ.ಎಲ್‌.ಓ. ನಿಯಮಾವಳಿಗಳನ್ನು ಬದಿಗಿರಿಸಲು ಮುಂದಾಗಿರುವುದು ಇದೀಗ ಬಹಿರಂಗವಾಗಿದೆ.

 

45 ಲಕ್ಷ ರು. ವಿಶೇಷ ಸಂಭಾವನೆ ಪಾವತಿ ಸಂಬಂಧ ಅಡ್ವೋಕೇಟ್‌ ಜನರಲ್‌ ಕಛೇರಿ ಆಡಳಿತಾಧಿಕಾರಿಗಳು ಬಿಲ್‌ಗಳನ್ನು ಸಲ್ಲಿಸಿರುವುದು ಕಾನೂನು ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

 

ಕೆ.ಎಲ್‌.ಓ. ನಿಯಮಾವಳಿಗಳ ಪ್ರಕಾರ ಪ್ರತಿ ದಿನದ ಹಾಜರಾತಿಗೆ 42,500 ರು.ನಂತೆ 15 ದಿನಗಳಿಗೆ 6,37,500 ರು.ಗಳನ್ನು ಅಡ್ವೋಕೇಟ್‌ ಜನರಲ್‌ ಅವರಿಗೆ ಪಾವತಿಸಬೇಕೇ ಅಥವಾ ಈ ಪ್ರಕರಣದಲ್ಲಿ ಅವರನ್ನು ವಿಶೇಷ ವಕೀಲರೆಂದು ನೇಮಕಗೊಳಿಸಿ 45 ಲಕ್ಷ ರು. ಸಂಭಾವನೆ ಪಾವತಿಸಬೇಕೇ ಎಂಬ ಕುರಿತು (ಇಡಿ 14 ಡಿಜಿಡಬ್ಲ್ಯೂ 2022 (ಪಿ-2) ಕಾನೂನು ಸಚಿವರ ಆದೇಶವನ್ನು ಕೋರಿದೆ. ಈ ಸಂಬಂಧ ಕಾನೂನು ಇಲಾಖೆಯ ಸರ್ಕಾರದ ಅಪರ ಕಾರ್ಯದರ್ಶಿ ಕಚೇರಿಯು ಕಡತ ಸಲ್ಲಿಸಿದೆ ಎಂದು ಗೊತ್ತಾಗಿದೆ.

 

ಒಂದೊಮ್ಮೆ ಈ ಪ್ರಕರಣದಲ್ಲಿ ಅಡ್ವೋಕೇಟ್‌ ಜನರಲ್‌ ಅವರನ್ನು ವಿಶೇಷ ವಕೀಲರು ಎಂದು ಪರಿಗಣಿಸಲು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಅವರು ಒಪ್ಪಿದರೆ ಕೆಎಲ್‌ಒ ನಿಯಮಾವಳಿಗಳನ್ನು ಮೀರಿದಂತಾಗುವುದಲ್ಲದೇ ಹೆಚ್ಚುವರಿಯಾಗಿ 38,62,500 ರು. ಪಾವತಿಸಿದಂತಾಗುತ್ತದೆ.

 

ಇದೇ ಹಿಜಾಬ್‌ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್‌ ಜನರಲ್‌ ಮತ್ತು ಅಡಿಷನಲ್‌ ಸಾಲಿಸಿಟರ್‌ ಜನರಲ್‌ ಆಫ್‌ ಇಂಡಿಯಾ ಇವರಿಗೆ 88.00 ಲಕ್ಷ ರು. ಸಂಭಾವನೆ ನೀಡಲು ಪ್ರಸ್ತಾವನೆ ಸಲ್ಲಿಕೆಯಾಗಿರುವ ಬೆನ್ನಲ್ಲೇ ಉಚ್ಛ ನ್ಯಾಯಾಲಯದಲ್ಲಿನ ಪ್ರಕರಣದಲ್ಲಿ ಹಾಜರಾಗಿದ್ದ ರಾಜ್ಯ ಅಡ್ವೋಕೇಟ್‌ ಜನರಲ್‌ ಅವರಿಗೆ ವಿಶೇಷ ಶುಲ್ಕ ಪಾವತಿಸಲು ಬಿಲ್‌ಗಳು ಸಲ್ಲಿಕೆಯಾಗಿರುವುದು ಮುನ್ನೆಲೆಗೆ ಬಂದಿವೆ.

 

ಈ ಸಂಬಂಧ ಕಾನೂನು ಇಲಾಖೆಯ ಸರ್ಕಾರದ ಅಪರ ಕಾರ್ಯದರ್ಶಿ(1) ಸಂತೋಷ್‌ ಗಜಾನನ ಭಟ್‌ ಅವರು ಕಾನೂನು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮುಖಾಂತರ ಕಾನೂನು ಸಚಿವರಿಗೆ ಕಡತ ಮಂಡಿಸಿದ್ದಾರೆ. ಈ ಕುರಿತು ಕಾನೂನು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ಖಚಿತಪಡಿಸಿದ್ದಾರೆ. ಈ ಸಂಬಂಧ ಕೆಲ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಹಿಜಾಬ್‌ ಧರಿಸಿ ಕಾಲೇಜಿಗೆ ಪ್ರವೇಶಿಸಲು ಅನುಮತಿ ನೀಡಬೇಕು ಎಂದು ರೇಷಂ ಮತ್ತಿತರರು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ರಿಟ್‌ ಅರ್ಜಿ (ಸಂಖ್ಯೆ 2347/2022, 2146/2022, 2880/2022, 3038/2022, 3424/2022, 4309/2022, 4338/2022) ಸಲ್ಲಿಸಿದ್ದರು. ಈ ಅರ್ಜಿಗಳ ಸಂಬಂಧ ರಾಜ್ಯ ಸರ್ಕಾರದ ಪರ ನ್ಯಾಯಾಲಯಕ್ಕೆ 2022ರ ಫೆಬ್ರುವರಿ 3ರಿಂದ ಮಾರ್ಚ್‌ 15ರವರೆಗೆ ಒಟ್ಟು 15 ದಿನಗಳವರೆಗೆ ( 03.02.2022, 08.02.2022, 09.02.2022, 10.02.2022, 14.02.2022, 15.02.2022, 16.02.2022, 17.02.2022, 18.02.2022, 21.02.2022, 22.02.2022, 23.02.2022, 24.02.2022, 25.02.2022, 15.03.2022) ರಾಜ್ಯ ಅಡ್ವೋಕೇಟ್‌ ಜನರಲ್‌ ಹಾಜರಾಗಿದ್ದರು.

 

ಒಟ್ಟು 15 ದಿನಗಳವರೆಗೆ ನಡೆದ ವಿಚಾರಣೆಗೆ ಹಾಜರಾಗಿದ್ದ ಅಡ್ವೋಕೇಟ್‌ ಜನರಲ್‌ ಅವರು ಒಟ್ಟು 45 ಲಕ್ಷ ರು. ಸಂಭಾವನೆ ಪಾವತಿಸಲು ಅಡ್ವೋಕೇಟ್‌ ಜನರಲ್‌ ಕಚೇರಿಯ ಆಡಳಿತಾಧಿಕಾರಿಗಳು ಬಿಲ್‌ ದೃಢೀಕರಿಸಿ ಸರ್ಕಾರಕ್ಕೆ ಸಲ್ಲಿಸಿದ್ದರು ಎಂದು ಗೊತ್ತಾಗಿದೆ.

 

ಕೆಎಲ್‌ಒ ನಿಯಮಾವಳಿಗಳಲ್ಲೇನಿದೆ?

 

ಕೆಎಲ್‌ಒ ನಿಯಮಾವಳಿಗಳು (2017ರ ತಿದ್ದುಪಡಿ) 1977ರ ಅನ್ವಯ ಅಡ್ವೋಕೇಟ್‌ ಜನರಲ್‌ ಅವರು ಉಚ್ಛ ನ್ಯಾಯಾಲಯದಲ್ಲಿ ಹಾಜರಾದ ಬಗ್ಗೆ ಒಂದು ದಿನದ ಹಾಜರಾತಿಗೆ ಒಂದು ಪ್ರಕರಣಕ್ಕೆ 20,000 ರು ಮತ್ತು ಒಗ್ಗೂಡಿದ ಪ್ರಕರಣಗಳಿಗೆ ಮೊದಲನೇ ಪ್ರಕರಣಕ್ಕೆ ಒಂದು ದಿನದ ಹಾಜರಾತಿಗೆ 15,000 ರು ಮತ್ತು ಉಳಿದ ಒಗ್ಗೂಡಿದ ಪ್ರಕರಣಗಳಿಗೆ ಪ್ರತಿ ಪ್ರಕರಣಕ್ಕೆ 1,500 ರು.ನಂತೆ ಗರಿಷ್ಠ 50,000 ರು. ಸಂಭಾವನೆ ಪಡೆಯಲು ಅರ್ಹರಾಗಿರುತ್ತಾರೆ.

 

ಈ ಕುರಿತು ಕಾನೂನು ಇಲಾಖೆಯು ‘ ಸದರಿ ಹಿಜಾಬ್‌ ಪ್ರಕರಣದಲ್ಲಿ ಅಡ್ವೋಕೇಟ್‌ ಜನರಲ್‌ ಅವರು ಉಚ್ಛ ನ್ಯಾಯಾಲಯದಲ್ಲಿ ಹಾಜರಾದ ಬಗ್ಗೆ ಕೆಎಲ್‌ಒ ನಿಯಮಾವಳಿಗಳು (2017ರ ತಿದ್ದುಡಪಿ) 1977ರ ಅನ್ವಯ ಪ್ರತಿ ದಿನದ ಹಾಜರಾತಿಗೆ 42,500 (20,000+15,000+5X1,500) ರಂತೆ ಒಟ್ಟು 15 ದಿನಗಳ ಹಾಜರಾತಿಗೆ 6,37,500 ರು.ಗಳ ಸಂಭಾವನೆ ಪಡೆಯಲು ಅರ್ಹರಾಗಿದ್ದಾರೆ,’ ಎಂದು ಅಭಿಪ್ರಾಯಿಸಿದೆ ಎಂದು ತಿಳಿದು ಬಂದಿದೆ.

 

 

ಆದರೆ ಹಿಜಾಬ್‌ ಪ್ರಕರಣವು ವಿಶೇಷ ಎಂದು ಅಡ್ವೋಕೇಟ್‌ ಜನರಲ್‌ ಕಚೇರಿ ಪರಿಗಣಿಸಿತ್ತು. ಅದರಂತೆ ವಿಶೇಷ ಶುಲ್ಕ ಪಾವತಿಸಬೇಕು ಎಂದು ಬಿಲ್‌ಗಳನ್ನು ಸಲ್ಲಿಸಿದ್ದಾರೆ. ‘ಅಡ್ವೋಕೇಟ್‌ ಜನರಲ್‌ ಅವರು ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ವಿಶೇಷ ಸಂಭಾವನೆಯಾದ 45,00,000 ರು.ಗಳನ್ನು ಪಾವತಿಸುವಂತೆ ಕೋರಿರುತ್ತಾರೆ. ಈ ವಿಶೇಷ ಪ್ರಕರಣದಲ್ಲಿ ವಿಶೇಷ ಸಂಭಾವನೆ ಮಂಜೂರುಮಾಡುವ ಮೊದಲಿಗೆ ಅಡ್ವೋಕೇಟ್‌ ಜನರಲ್‌ ಅವರನ್ನು ಈ ಪ್ರಕರಣದಲ್ಲಿ ವಿಶೇಷ ವಕೀಲರೆಂದು ನೇಮಕ ಮಾಡುವುದು ಅವಶ್ಯಕವಾಗಿರುತ್ತದೆ,’ ಎಂದೂ ಕಾನೂನು ಇಲಾಖೆಯು ಅಭಿಪ್ರಾಯಿಸಿರುವುದು ಗೊತ್ತಾಗಿದೆ.

 

ಹೀಗಾಗಿ ಕಾನೂನು ಇಲಾಖೆಯು ಕೆಎಲ್‌ಒ ನಿಯಮಾವಳಿಗಳನ್ವಯ ಪ್ರತಿ ದಿನದ ಹಾಜರಾತಿಗೆ 42,500 ರು.ನಂತೆ 15 ದಿನಗಳಿಗೆ 6,37,500 ರು.ನಂತೆ ಪಾವತಿಸಬೇಕೇ ಅಥವಾ ಅಡ್ವೋಕೇಟ್‌ ಜನರಲ್‌ ಅವರನ್ನೇ ಈ ಪ್ರಕರಣದಲ್ಲಿ ವಿಶೇಷ ವಕೀಲರೆಂದು ನೇಮಕ ಮಾಡಿ ಅವರಿಗೆ 45,00,000 ರು. ಸಂಭಾವನೆ ಪಾವತಿಸಬೇಕೇ ಎಂಬ ಬಗ್ಗೆ ಕಾನೂನು ಸಚಿವರಿಗೆ ಕಡತವನ್ನು ಸಲ್ಲಿಸಿದೆ ಎಂದು ತಿಳಿದು ಬಂದಿದೆ.

 

ಕುಂದಾಪುರದ ಸರಕಾರಿ ಪಿಯು ಕಾಲೇಜಿನ ರೇಷಂ ಸೇರಿದಂತೆ ಮತ್ತಿತರೆ ಹಿಜಾಬ್‌ ಧರಿಸಿ ಪ್ರವೇಶಿಸಲು ಮುಂದಾಗಿದ್ದಾಗ ತಮ್ಮ ಕಾಲೇಜಿನ ಆವರಣದ ಒಳಗೆ ಬರದಂತೆ ಅವರ ಶಿಕ್ಷಕರೇ ತಡೆದಿದ್ದರು. ಇದು ವಿವಾದದ ಸ್ವರೂಪ ಪಡೆದುಕೊಂಡು ಜಗತ್ತಿನಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಕಡೆಗಿದು ಹೈಕೋರ್ಟ್‌ ಮೆಟ್ಟಿಲೇರಿತ್ತು.

 

ಸಮವಸ್ತ್ರ ಸಂಹಿತೆ ಕುರಿತಂತೆ 2022ರ ಫೆಬ್ರುವರಿ 5ರಂದು ಸುತ್ತೋಲೆ ಹೊರಡಿಸುವುದಕ್ಕೂ ಮುನ್ನವೇ ಉಡುಪಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಆರು ಜನ ಮುಸ್ಲಿಂ ವಿದ್ಯಾರ್ಥಿನಿಯರು ಹೈಕೋರ್ಟ್‌ ಮೆಟ್ಟಿಲೇರಿ ಹಿಜಾಬ್‌ ಧರಿಸಲು ಅವಕಾಶ ನೀಡಬೇಕು ಎಂದು ಕೋರಿದ್ದರು.

 

ಕಾಲೇಜು ತರಗತಿಗಳಲ್ಲಿ ಹಿಜಾಬ್‌ ಧರಿಸಲು ಅವಕಾಶ ನೀಡುವಂತೆ ನಿರ್ದೇಶಿಸಬೇಕು’ ಎಂಬ ಕೋರಿಕೆಯ ಎಲ್ಲ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಹೈಕೋರ್ಟ್‌, ‘ಈ ವಿಷಯವನ್ನು ದೇಶದಾದ್ಯಂತ ವಿವಾದದ ವಿಷಯವನ್ನಾಗಿ ಮಾಡಿರುವ ಹಿಂದೆ ಕಾಣದ ಕೈಗಳು ಅಡಗಿವೆ’ ಎಂದು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಋತುರಾಜ್‌ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಜೈಬುನ್ನೀಸಾ ಮೊಹಿಯುದ್ದೀನ್ ಖಾಜಿ ಅವರನ್ನು ಒಳಗೊಂಡ ವಿಸ್ತೃತ ನ್ಯಾಯಪೀಠವು ಬಲವಾದ ಸಂಶಯ ವ್ಯಕ್ತಪಡಿಸಿತ್ತು.

 

ಕುಂದಾಪುರ ಮೂಲದ ಫಾತಿಮಾ ಬುಷಾರ್‌ ಎಂಬುವರೂ ಸಹ ಸುಪ್ರೀಂ ಕೋರ್ಟ್‌ (ರಿಟ್‌ ಅರ್ಜಿ (ಸಿ) ಸಂಖ್ಯೆ; 95/2022) ಮೆಟ್ಟಿಲೇರಿದ್ದರು. ಈ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಪರವಾಗಿ ವಕಾಲತ್ತು ವಹಿಸಿದ್ದ ತುಷಾರ್‌ ಮೆಹ್ತಾ (ಸಾಲಿಸಿಟರ್‌ ಜನರಲ್‌ ಅಫ್‌ ಇಂಡಿಯಾ) ಅವರಿಗೆ ಒಂದು ದಿನದ ಹಾಜರಾತಿಗೆ 4,40,000 ರು. ನಂತೆ ಒಟ್ಟು 9 ದಿನಗಳಿಗೆ (2022ರ ಆಗಸ್ಟ್‌ 29ರಿಂದ ಸೆ.22ರವರೆಗೆ) 39,60,000 ರು. ಮತ್ತು ಕೆ ಎಂ ನಟರಾಜ್‌ (ಅಡಿಷನಲ್‌ ಸಾಲಿಸಿಟರ್‌ ಜನರಲ್‌ ಆಫ್‌ ಇಂಡಿಯಾ) ಇವರಿಗೆ ಪ್ರತಿ ದಿನ ಹಾಜರಾತಿಗೆ 4,40,000 ರು.ನಂತೆ ಒಟ್ಟು 11 ದಿನಗಳಿಗೆ (2022ರ ಅಗಸ್ಟ್‌ 29ರಿಂದ ಸೆ.22ರವರೆಗೆ) ಒಟ್ಟು 48,40,000 ರು. ಗಳನ್ನು ಪಾವತಿಸಲು ಸಲ್ಲಿಕೆಯಾಗಿದ್ದ ಪ್ರಸ್ತಾವನೆ ಕುರಿತು ದಾಖಲೆ ಸಹಿತ ‘ದಿ ಫೈಲ್‌’ ವರದಿ ಪ್ರಕಟಿಸಿತ್ತು.

 

ಹಿಜಾಬ್‌ ವಿವಾದ; ಸಾಲಿಸಿಟರ್‌,ಅಡಿಷನಲ್‌ ಸಾಲಿಸಿಟರ್‌ ಜನರಲ್‌ಗೆ 88 ಲಕ್ಷ ರು. ಸಂಭಾವನೆ ಪ್ರಸ್ತಾವ

 

ಶಿರವಸ್ತ್ರ ಹಾಕಿಕೊಂಡು ಅಥವಾ ತಲೆಯನ್ನು ಮುಚ್ಚಿಕೊಂಡು ಶಾಲೆಗೆ ಬರದಂತೆ ವಿದ್ಯಾರ್ಥಿಗಳನ್ನು ತಡೆದರೆ, ಅದು ಸಂವಿಧಾನದ ಅನುಚ್ಛೇದ 25 ಉಲ್ಲಂಘನೆ ಅಲ್ಲ ಎಂದು ಸುಪ್ರೀಂ ಕೋರ್ಟ್‌ ಮತ್ತು ವಿವಿಧ ರಾಜ್ಯಗಳ ಹೈಕೋರ್ಟ್‌ಗಳು ಈಗಾಗಲೇ ತೀರ್ಪು ನೀಡಿವೆ. ಹೀಗಾಗಿ, ಈ ಆದೇಶ ಹೊರಡಿಸಲಾಗಿದೆ’ ಎಂದು ಆದೇಶದಲ್ಲಿ ಸರ್ಕಾರ ಸಮರ್ಥನೆಯನ್ನೂ ನೀಡಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts