ಕಾಕಂಬಿ ರಫ್ತು ಪರವಾನಿಗೆ ಪ್ರಕ್ರಿಯೆಯಲ್ಲಿ ಸಿಎಂ, ಕೇಂದ್ರ ಸಚಿವರ ಪ್ರಭಾವ ಆರೋಪ; ಆಡಿಯೋ ಸಾಕ್ಷ್ಯ ಸಲ್ಲಿಕೆ

ಬೆಂಗಳೂರು; ಅನಧಿಕೃತ ಲಾಭ ಪಡೆಯುವ ಉದ್ದೇಶದಿಂದ ಅಗತ್ಯ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಉಲ್ಲಂಘಿಸಿ ಮುಂಬೈ ಮೂಲದ ಕೆ ಎನ್‌ ರಿಸೋರ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ 2 ಲಕ್ಷ ಮೆಟ್ರಿಕ್‌ ಟನ್‌ ಪ್ರಮಾಣದ ಕಾಕಂಬಿಯನ್ನು ಕರ್ನಾಟಕದಿಂದ ಗೋವಾಕ್ಕೆ ರಫ್ತು ಪರವಾನಗಿಗಳನ್ನು ಮಂಜೂರು ಮಾಡಿರುವ ಪ್ರಕ್ರಿಯೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಆರ್ಥಿಕ ಸಚಿವರೂ ಪ್ರಭಾವ ಬೀರಿದ್ದಾರೆ ಎಂಬ ಅಂಶ ಪ್ರಸ್ತಾಪವಾಗಿದೆ ಎನ್ನಲಾಗಿರುವ ಆಡಿಯೋ ಒಳಗೊಂಡ ಪೆನ್‌ ಡ್ರೈವ್‌, ಹಲವು ದಾಖಲೆಗಳ ಸಹಿತ ಲೋಕಾಯುಕ್ತ ಎಸ್‌ ಪಿ ಅವರಿಗೆ ದೂರೊಂದು ಸಲ್ಲಿಕೆಯಾಗಿದೆ.

 

ಲಂಚಮುಕ್ತ ಕರ್ನಾಟಕ ವೇದಿಕೆಯು 2023ರ ಫೆ.7ರಂದು ಒಟ್ಟು 12 ಪುಟಗಳ ದೂರನ್ನು ನೀಡಿದ್ದು ಅಬಕಾರಿ ಹಗರಣವನ್ನು ಭ್ರಷ್ಟಾಚಾರ ತಡೆ ಕಾಯ್ದೆ 2018ರ ಕಾಯ್ದೆ, ಕರ್ನಾಟಕ ಅಬಕಾರಿ ಕಾಯ್ದೆ 1965, ಕರ್ನಾಟಕ ನಿಷೇಧ ಕಾಯ್ದೆ 1961, ಭಾರತೀಯ ದಂಡ ಸಂಹಿತೆ 1860ರ ಸೆಕ್ಷನ್‌ಗಳ ವಿವಿಧ ಕಲಂಗಳ ಅಡಿಯಲ್ಲಿ ಸೂಕ್ತ ಕಾನೂನುಕ್ರಮ ಜರುಗಿಸಬೇಕು ಎಂದು ಕೋರಿದೆ.

 

ಲಂಚಮುಕ್ತ ಕರ್ನಾಟಕ ವೇದಿಕೆಯು ದೂರು ಸಲ್ಲಿಸಿದೆ ಎಂದು ಲೋಕಾಯುಕ್ತ ಎಸ್‌ಪಿ ಅಶೋಕ್‌ ಕೆ ವಿ ಅವರು ‘ದಿ ಫೈಲ್‌’ಗೆ ಖಚಿತಪಡಿಸಿದ್ದಾರೆ. ದೂರರ್ಜಿಯನ್ನು ತನಿಖಾಧಿಕಾರಿಗೆ ಹಸ್ತಾಂತರಿಸಲಾಗಿದೆ. ಪ್ರಾಥಮಿಕ ವಿಚಾರಣೆ ನಡೆದ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದಷ್ಟೇ ಪ್ರತಿಕ್ರಿಯಿಸಿದರು. ಈ ದೂರಿನ ಪ್ರತಿಯೂ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಲಂಚಮುಕ್ತ ಕರ್ನಾಟಕ ವೇದಿಕೆಯು ಲೋಕಾಯುಕ್ತಕ್ಕೆ ನೀಡಿರುವ ದೂರಿನ ಪ್ರತಿ

 

ಅಬಕಾರಿ ಸಚಿವ ಕೆ ಗೋಪಾಲಯ್ಯ, ಅರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಸ್‌ಎನ್‌ ಪ್ರಸಾದ್‌, ಅರ್ಥಿಕ ಇಲಾಖೆಯ ಕಾರ್ಯದರ್ಶಿ ಡಾ ಏಕರೂಪ್‌ ಕೌರ್‌, ಅಬಕಾರಿ ಆಯುಕ್ತ ರವಿಶಂಕರ್‌, ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮಂಜುಳ ನಟರಾಜ್‌, ಆರ್ಥಿಕ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಅರುಳ್‌ ಕುಮಾರ್‌, ಕೆ ಎನ್‌ ರಿಸೋರ್ಸ್‌ ಪ್ರೈವೈಟ್‌ ಲಿಮಿಟೆಡ್‌ನ ನಿರ್ದೇಶಕರು ರಾಜ್ಯದ ಬೊಕ್ಕಸಕ್ಕೆ ಅರ್ಥಿಕ ನಷ್ಟವುಂಟು ಮಾಡಿದ್ದಾರೆ ಎಂದು ಆಪಾದಿಸಿರುವುದು ದೂರಿನಿಂದ ಗೊತ್ತಾಗಿದೆ.

 

ಇಬ್ಬರು ಸಂಸದರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಹಣಕಾಸು ಸಚಿವರು ಈ ಪ್ರಕರಣದಲ್ಲಿ ಪ್ರಭಾವ ಬೀರಿದ್ದಾರೆ ಎಂದು ಟ್ರಾನ್ಸ್‌ಪೋರ್ಟ್‌ವೊಂದರ ಸಾರಿಗೆ ಏಜೆಂಟ್‌ ಮತ್ತು ಮುಂಬೈ ಮೂಲದ ಕಂಪನಿಯ ಲಾಜಿಸ್ಟಿಕ್‌ ಮ್ಯಾನೇಜರ್‌ ನಡುವೆ ನಡೆದಿದೆ ಎನ್ನಲಾಗಿರುವ ಸಂಭಾಷಣೆಯಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ ಎಂದು ತಿಳಿದು ಬಂದಿದೆ.

 

ದೂರಿನಲ್ಲಿ ಬಸವರಾಜ ಬೊಮ್ಮಾಯಿ ಮತ್ತಿತರ ಹೆಸರು ಪ್ರಸ್ತಾಪವಾಗಿರುವ ಪ್ರತಿ

 

ಬಜೆಟ್‌ ಅಧಿವೇಶನಕ್ಕೆ ಇನ್ನೆರಡು ದಿನಗಳಿರುವಾಗಲೇ ಇಬ್ಬರ ನಡುವಿನ ಸಂಭಾಷಣೆಯನ್ನು ಪೆನ್‌ ಡ್ರೈವ್‌ನೊಂದಿಗೆ ಲಗತ್ತಿಸಿ ನೀಡಿರುವ ದೂರು, ಅಬಕಾರಿ ಹಗರಣವನ್ನು ಮತ್ತೊಂದು ಮಗ್ಗುಲಿಗೆ ಹೊರಳಿಸಿದಂತಾಗಿದೆ.

 

‘ಅಬಕಾರಿ ಸಚಿವ ಕೆ ಗೋಪಾಲಯ್ಯ, ಸರ್ಕಾರಿ ಅಧಿಕಾರಿಗಳು ಮತ್ತು ಕೆ ಎನ್‌ ರಿಸೋರ್ಸ್‌ ಪ್ರೈ ಲಿಮಿಟೆಡ್‌ ಭ್ರಷ್ಟಾಚಾರ ತಡೆ ಕಾಯ್ದೆ 2018ರ ಸೆಕ್ಷನ್‌ 7, 7 ಎ, 8, 9, 10, 12, ಮತ್ತು 13ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಸಗಿದ್ದಾರೆ. ಇದರ ಜತೆಗೆ ಕರ್ನಾಟಕ ಅಬಕಾರಿ ಕಾಯ್ದೆ 1965 ಮತ್ತು ಸಂಬಂಧಿತ ಕರ್ನಾಟಕ ಅಬಕಾರಿ ನಿಯಮಗಳ ಅಡಿಯಲ್ಲಿ ಜೊತೆಗೆ ಭಾರತೀಯ ದಂಡ ಸಂಹಿತೆ 1860ರ ಸೆಕ್ಷನ್‌ 406, 418, 420, 477-ಎ ರೆಡ್‌ ವಿತ್‌ ಸೆಕ್ಷನ್‌ 120-ಬಿ ಅಡಿಯಲ್ಲಿ ಹಲವು ಅಪರಾಧಗಳನ್ನು ಎಸಗಿದ್ದಾರೆ. ಅಲ್ಲದೇ ಕರ್ನಾಟಕ ನಿಷೇಧ ಕಾಯ್ದೆ 1961 ಮತ್ತು ಸಂಬಂಧಿತ ಕರ್ನಾಟಕ ನಿಷೇಧ ನಿಯಮಗಳ ಅಡಲಿಯಲ್ಲಿಯೂ ಹಲವು ಅಪರಾಧಗಳನ್ನು ಎಸಗಿದ್ದಾರೆ,’ ಎಂದು ದೂರಿನಲ್ಲಿ ವಿವರಿಸಲಾಗಿದೆ.

 

ಅದೇ ರೀತಿ ‘ಅನಧಿಕೃತ ಲಾಭ ಪಡೆಯುವ ಉದ್ದೇಶದಿಂದ ಕರ್ನಾಟಕದಿಂದ ಗೋವಾಕ್ಕೆ ಕಾಕಂಬಿ ರಫ್ತು ಪರವಾನಗಿಗಳನ್ನು ಮಂಜೂರು ಮಾಡುವಲ್ಲಿ ಅಗತ್ಯ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಉಲ್ಲಂಘಿಸಿ ಕಂಪನಿಗೆ ಒಲವು ತೋರಿರುವ ಸಾರ್ವಜನಿಕ ಸೇವಕರ ಕ್ರಮಗಳು ಗಂಭೀರ ದುಷ್ಕೃತ್ಯಕ್ಕೆ ಸಮಾನವಾಗಿದೆ. ನ್ಯಾಯ ಮತ್ತು ಸಮಾನತೆಯ ಹಿತಾಸಕ್ತಿಯಲ್ಲಿ ಈ ದೂರಿನಲ್ಲಿ ಅನ್ವಯವಾಗುವ ಕಾನೂನು ನಿಬಂಧನೆಗಳು ಮತ್ತು ಕಾರ್ಯ ವಿಧಾನಗಳ ಪ್ರಕಾರ ಆಪಾದಿತ ಅಪರಾಧಗಳ ತನಿಖೆ ಆರಂಭಿಸಿ ಸೂಕ್ತ ಕಾನೂನುಕ್ರಮ ಜರುಗಿಸಬೇಕು,’ ಎಂದು ದೂರಿನಲ್ಲಿ ವೇದಿಕೆಯು ಒತ್ತಾಯಿಸಿದೆ.

 

ಕರ್ನಾಟಕ ಅಬಕಾರಿ ಕಾಯಿದೆ ಮತ್ತು ನಿಯಮಗಳು ಹಾಗೂ ಕರ್ನಾಟಕ ನಿಷೇಧ ಕಾಯಿದೆ ಮತ್ತು ನಿಯಮಗಳ ನಿಬಂಧನೆಗಳ ಅಡಿಯಲ್ಲಿ ಕಡ್ಡಾಯ ಅವಶ್ಯಕತೆಗಳನ್ನು ಬದಿಗಿರಿಸಿ ಈ ಕಂಪನಿಯಿಂದ ಲಂಚದ ಮೊತ್ತವನ್ನು ಸ್ವೀಕರಿಸಿರುವುದು ಸೇರಿದಂತೆ ಅನಗತ್ಯ ಲಾಭ ಪಡೆಯುವ ಮೂಲಕ ಅರ್ಜಿದಾರ ಕಂಪನಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ ಎಂದೂ ದೂರಿನಲ್ಲಿ ವೇದಿಕೆಯು ಆಪಾದಿಸಿದೆ.

 

ದೂರಿನಲ್ಲಿ ಇರುವ ಇತರೆ ಅಂಶಗಳಿವು

 

ಕೆ ಎನ್‌ ರಿಸೋರ್ಸ್‌ ಪ್ರೈವೈಟ್‌ ಲಿಮಿಟೆಡ್‌ ರಾಜ್ಯ ಅಬಕಾರಿ ಆಯುಕ್ತರಿಗೆ ಬರೆದಿದ್ದ ಪತ್ರದಲ್ಲಿ ಮುರ್ಮಗೋವ್ ಬಂದರಿನಿಂದ 2 ಲಕ್ಷ ಮೆಟ್ರಿಕ್‌ ಟನ್‌ ಕಾಕಂಬಿಯನ್ನು ಸಾಗರೋತ್ತರ ರಫ್ತು ಮಾಡಲು 2022ರ ಆಗಸ್ಟ್‌ 28ರಂದು ಅನುಮತಿ ಕೋರಿದ್ದರು. ಇದರಲ್ಲಿ ಕಂಪನಿಯು 3 ಸ್ಟಾರ್‌ ರಫ್ತು ಕೇಂದ್ರ ಮಾನ್ಯತೆ ಪಡೆದಿದ್ದು 4 ಲಕ್ಷ ಮೆಟ್ರಿಕ್‌ ಟನ್‌ ಕಾಕಂಬಿಯನ್ನು ರಫ್ತು ಮಾಡಿರುವ ಇತಿಹಾಸ ಹೊಂದಿದೆ ಎಂದು ಹೇಳಿಕೊಂಡಿದೆ.

 

ಆದರೆ ಈ ಪತ್ರದ ಜತೆಗೆ ಸಲ್ಲಿಸಬೇಕಾಗಿದ್ದ ಯಾವುದೇ ಸಂಬಂಧಿತ ದಾಖಲೆಗಳನ್ನು ಲಗತ್ತಿಸಿಲ್ಲ. ಕಂಪೊನಿಯು ಈಗಾಗಲೇ ಗೋವಾ ರಾಜ್ಯ ಅಬಕಾರಿ ಅಧಿಕಾರಿಗಳಿಗೆ ಕಾಕಂಬಿ ಸ್ವಾಧೀನ ಮತ್ತು ರಫ್ತು ಪರವಾನಿಗೆಗಾಗಿ ಅರ್ಜಿ ಸಲ್ಲಿಸಿದೆ ಎಂದಷ್ಟೇ ಹೇಳಲಾಗಿದೆ. ಆದರೆ ಪತ್ರದ ಜತೆಗೆ ಇವುಗಳ ವಿವರಗಳನ್ನು ಲಗತ್ತಿಸಿಲ್ಲ ಎಂದು ಲಂಚಮುಕ್ತ ಕರ್ನಾಟಕ ವೇದಿಕೆಯು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಕಬ್ಬಿನ ಕಾಕಂಬಿಯ ಲಭ್ಯತೆ ಬಗ್ಗೆ ನೀಡುವ ಕಾಕಂಬಿ ಸಂಗ್ರಹನೆ ವರದಿಯನ್ನು ಲಗತ್ತಿಸುವಾಗ ಆಗಸ್ಟ್‌ ಅಥವಾ ಸೆಪ್ಟಂಬರ್‌ 2022ರ ವರದಿಯನ್ನು ಕರ್ನಾಟಕ ಅಬಕಾರಿ ಇಲಾಖೆಯ ಆಯುಕ್ತರು ಮತ್ತು ಕಬ್ಬು ಅಭಿವೃದ್ದಿ ಆಯೋಗ, ಸಕ್ಕರೆ ನಿರ್ದೇಶಕರು ಉದ್ದೇಶಪೂರ್ವಕವಾಗಿ ಮರೆಮಾಚಿದ್ದಾರೆ ಎಂದು ದೂರಿರುವ ವೇದಿಕೆಯು ಕರ್ನಾಟಕ ರಾಜ್ಯದ ಕಾಕಂಬಿಯನ್ನು ಕರ್ನಾಟಕದಿಂದ ಗೋವಾಕ್ಕೆ ಅಥವಾ ಗೋವಾ ಬಂದರಿನಿಂದ ಸಾಗರೋತ್ತರ ಸ್ಥಳಕ್ಕೆ ರಫ್ತು ಮಾಡುವ ವಿಷಯವನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟಿದ್ದಾರೆ ಎಂದು ಆಪಾದಿಸಿದೆ.

 

ಕಾಕಂಬಿ ಹಂಚಿಕೆಗೆ ಅನುಮತಿ ಕೋರಿಕೆ ಪತ್ರದಲ್ಲಿ ಕರ್ನಾಟಕ ರಾಜ್ಯದ ಕಾಕಂಬಿಯನ್ನು ಸ್ಥಳೀಯ ಬಳಕೆಗೆ ಅಥವಾ ಸಾಗರೋತ್ತರ ರಫ್ತಿಗೆ ಅಗತ್ಯವಿದೆ ಎಂದು ನಿರ್ದಿಷ್ಟಪಡಿಸಿಲ್ಲ. ಕಚೇರಿಯ ಟಿಪ್ಪಣಿ ಹಾಳೆಗಳಲ್ಲೂ ಸಹ ಈ ಅಂಶದ ಬಗ್ಗೆ ಏನೂ ಉಲ್ಲೇಖಗೊಂಡಿಲ್ಲ. ಈ ಬಗ್ಗೆ ಅಧಿಕಾರಿಗಳು ಯಾವುದೇ ಆಕ್ಷೇಪಣೆಗಳನ್ನು ಎತ್ತದೆಯೇ ನೇರವಾಗಿ ಅಬಕಾರಿ ಸಚಿವರಿಗೆ ಕಡತವನ್ನು ಮಂಡಿಸಿದ್ದರು. ಆದರೂ ಅಬಕಾರಿ ಸಚಿವರು ಸಾಗರೋತ್ತರ ರಫ್ತಿಗೆ ಎಂಬ ಅನುಮೋದನೆಯನ್ನು ನಿರ್ದಿಷ್ಟವಾಗಿ ಬರೆದಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

 

‘ಇದಕ್ಕೆ ಸಂಬಂಧಿಸಿದ ಕಡತದ ಟಿಪ್ಪಣಿ ಹಾಳೆಗಳಲ್ಲಿ ಅಬಕಾರಿ ಸಚಿವರೂ ಸಹ ಕಡತದಲ್ಲಿ ಅಗತ್ಯ ದಾಖಲೆಗಳು ಮತ್ತು ಸೂಕ್ತ ಅನುಮತಿ ಇದೆಯೇ ಎಂಬುದನ್ನೂ ನೋಡದೆಯೇ ಸಾಗರೋತ್ತರ ರಫ್ತು ಮಾಡಲು ಪರವಾನಿಗೆ ನೀಡಲು ಅನುಮತಿ ನೀಡಿದ್ದಾರೆ. ಗೋವಾದಿಂದ ಸಾಗರೋತ್ತರ ರಫ್ತಿಗೆ ಅನುಮತಿ ಪಡೆಯುವ ಕಂಪನಿಯ ಅಗತ್ಯತೆಯ ಬಗ್ಗೆ ಸಚಿವರಿಗೆ ಪೂರ್ವಭಾವಿಯಾಗಿ ತಿಳಿದಿತ್ತು ಎಂಬುದನ್ನು ಇದು ತೋರಿಸುತ್ತದೆ,’ ಎಂದು ವೇದಿಕೆಯ ಉಪಾಧ್ಯಕ್ಷ ಮಂಜುನಾಥ್‌ ಅವರು ದೂರಿನಲ್ಲಿ ಆಪಾದಿಸಿದ್ದಾರೆ.

 

ಸಚಿವರ ಅನುಮೋದನೆ ದೊರಕುತ್ತಿದ್ದಂತೆ 2022ರ ನವೆಂಬರ್‌ 5ರಂದು ಸಂಬಂಧಪಟ್ಟ ಪ್ರಾಧಿಕಾರಗಳಿಂದ ನೀಡಲಾದ ಪೂರ್ವಾನುಮತಿಗಳ ಆಧಾರದ ಮೇಲೆ ಕೆ ಎನ್‌ ರಿಸೋರ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ ಕರ್ನಾಟಕದ ವಿವಿಧ ಸಕ್ಕರೆ ಕಾರ್ಖಾನೆಗಳಿಂದ 2 ಲಕ್ಷ ಮೆಟ್ರಿಕ್‌ ಟನ್‌ ಕಾಕಂಬಿಯನ್ನು ಎತ್ತುವಳಿ ಮಾಡಲು 2022-23 ಮತ್ತು 2023-24ನೇ ಸಾಲಿಗೆ ರಫ್ತು ಮಾಡಲು ಮಿಂಚಿನ ವೇಗದಲ್ಲಿ ಅಬಕಾರಿ ಆಯುಕ್ತರು ಅನುಮತಿ ನೀಡಿದ್ದಾರೆ ಎಂದು ವೇದಿಕೆಯು ಆರೋಪಿಸಿರುವುದು ದೂರಿನಿಂದ ತಿಳಿದುಬಂದಿದೆ.

 

ಅದರಂತೆ ಈ ಕಂಪನಿಯು 2022ರ ನವೆಂಬರ್‌ 13ರಂದು ಕಾಕಂಬಿಯನ್ನು ಎತ್ತುವಳಿ ಮತ್ತು ಸಾಗಾಣಿಕೆ ಮಾಡಲು ಎನ್‌ಒಸಿಗೆ ಅಬಕಾರಿ ಆಯುಕ್ತರಿಗೆ ಅರ್ಜಿ ಸಲ್ಲಿಸಿತ್ತು. ಈ ಪೈಕಿ ಲೈಲಾ ಶುಗರ್‌ ಪ್ರೈವೈಟ್‌ ಲಿಮಿಟೆಡ್‌ನಿಂದ 5,000 ಮೆಟ್ರಿಕ್‌ ಟನ್‌ ಮತ್ತು ಬಾಗಲಕೋಟೆಯ ರನ್ನ ನಗರದಲ್ಲಿರುವ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ 7,500 ಮೆಟ್ರಿಕ್‌ ಟನ್‌ ಕಾಕಂಬಿ ರಫ್ತು ಮಾಡಲು ನವೆಂಬರ್‌ 16 ಮತ್ತು ಡಿಸೆಂಬರ್‌ 24ರಂದು ಕೋರಿತ್ತು.

 

ಈ ಪೈಕಿ ಲೈಲಾ ಶುಗರ್ಸ್‌ನಿಂದ 10,000 ಮೆಟ್ರಿಕ್‌ ಟನ್‌, ರನ್ನ ಶುಗರ್ಸ್‌ ಕಾರ್ಖಾನೆಯಿಂದ 5,000 ಮೆಟ್ರಿಕ್‌ ಟನ್‌, ಮುಧೋಳದ ಉತ್ತೂರಿನಲ್ಲಿರುವ ಕೇನ್‌ ಪವರ್‌ ಲಿಮಿಟೆಡ್‌ನಿಂದ 10,000 ಮೆಟ್ರಿಕ್‌ ಟನ್‌ ಸೇರಿದಂತೆ ಒಟ್ಟಾರೆ 25,000 ಮೆಟ್ರಿಕ್‌ ಕಾಕಂಬಿ ಎತ್ತುವಳಿ ಮಾಡಲು ಅನುಮತಿ ನೀಡಲಾಗಿತ್ತು ಎಂದು ವಿವರಿಸಿದೆ.

 

‘ಇಲ್ಲಿ ಸಾಂಸ್ಥಿಕ ಭ್ರಷ್ಟಾಚಾರ ಮತ್ತು ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ವ್ಯಕ್ತಿಗೂ ಕಿಕ್‌ಬ್ಯಾಕ್‌ ರೂಪದಲ್ಲಿ ದೊಡ್ಡ ಮೊತ್ತವನ್ನು ನೀಡಿರುವ ಸಾಧ್ಯತೆ ಇದೆ. ಅಲ್ಲದೆ ಕರ್ನಾಟಕ ಸರ್ಕಾರಕ್ಕೆ ಭಾರೀ ಆದಾಯದ ನಷ್ಟವುಂಟಾಗಿದೆ. ಈ ಕಂಪನಿಗೆ ರಾಜ್ಯದ ಹೊರಗೆ ತೆಗೆದುಕೊಂಡು ಹೋಗಿ ಕರ್ನಾಟಕದ ಕಾಕಂಬಿಯನ್ನು ರಫ್ತು ಮಾಡಲು ನೀಡುವ ಬಲು ಇದನ್ನು ಕರ್ನಾಟಕದ ಬಂದರುಗಳಿಮದ ಸರಕುಗಳನ್ನು ರಫ್ತು ಮಾಡಿದ್ದರೆ ಪ್ರತಿ ಮೆಟ್ರಿಕ್‌ ಟನ್‌ಗೆ 458 ರು.ನಂತೆ ನೇರ ಆದಾಯ ಲಭಿಸುತ್ತಿತ್ತು.

 

ಆದರೆ ಇಲ್ಲಿಯವರೆಗೆ ಈ ಕಂಪನಿಗೆ ಗೋವಾ ರಾಜ್ಯದ ಬಂದರಿನಿಂದ ರಫ್ತು ಮಾಡಲು ಅನುಮತಿ ನೀಡಿರುವುದರಿಂದ ರಾಜ್ಯದ ಬೊಕ್ಕಸಕ್ಕೆ ಇದೊಂದೇ ಪ್ರಕರಣದಲ್ಲಿ ಸುಮಾರು 9.16 ಕೋಟಿ ರು. ನಷ್ಟವಾಗಿದೆ,’ ಎಂದು ದೂರಿನಲ್ಲಿ ಉಲ್ಲೇಖಿಸಿದೆ.

the fil favicon

SUPPORT THE FILE

Latest News

Related Posts