ಬೆಂಗಳೂರು; ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಉಚಿತ ಬೈಸಿಕಲ್, ಶೂ, ಸಾಕ್ಸ್ ವಿತರಣೆಗೆ ಅನುದಾನದ ಕೊರತೆ ಎಂದು ನೆಪವೊಡ್ಡಿರುವ ಶಿಕ್ಷಣ ಇಲಾಖೆಯು ಹಿಜಾಬ್ ಧರಿಸುವ ವಿಷಯದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಿದ್ದ ಸಾಲಿಸಿಟರ್ ಜನರಲ್ ಮತ್ತು ಅಡಿಷನಲ್ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಇವರಿಗೆ 88.00 ಲಕ್ಷ ರು. ಸಂಭಾವನೆ ನೀಡಲು ಪ್ರಸ್ತಾವನೆ ಸಲ್ಲಿಸಿದೆ ಎಂದು ತಿಳಿದು ಬಂದಿದೆ.
ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆಯು ವಿವಾದ ಸ್ವರೂಪ ಪಡೆದುಕೊಂಡಿದ್ದ ಹೊತ್ತಿನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿಢೀರ್ ಎಂದು ಹಿಜಾಬ್ ಪ್ರಕರಣವೂ ಮುನ್ನೆಲೆಗೆ ಬಂದಿತ್ತು. ಈ ಸಂಬಂಧ ಕುಂದಾಪುರ ಮೂಲದ ಫಾತಿಮಾ ಬುಷಾರ್ ಎಂಬುವರು ಸುಪ್ರೀಂ ಕೋರ್ಟ್ (ರಿಟ್ ಅರ್ಜಿ (ಸಿ) ಸಂಖ್ಯೆ; 95/2022) ಮೆಟ್ಟಿಲೇರಿದ್ದರು.
ಈ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಪರವಾಗಿ ವಕಾಲತ್ತು ವಹಿಸಿದ್ದ ತುಷಾರ್ ಮೆಹ್ತಾ (ಸಾಲಿಸಿಟರ್ ಜನರಲ್ ಅಫ್ ಇಂಡಿಯಾ) ಅವರಿಗೆ ಒಂದು ದಿನದ ಹಾಜರಾತಿಗೆ 4,40,000 ರು. ನಂತೆ ಒಟ್ಟು 9 ದಿನಗಳಿಗೆ (2022ರ ಆಗಸ್ಟ್ 29ರಿಂದ ಸೆ.22ರವರೆಗೆ) 39,60,000 ರು. ಮತ್ತು ಕೆ ಎಂ ನಟರಾಜ್ (ಅಡಿಷನಲ್ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ) ಇವರಿಗೆ ಪ್ರತಿ ದಿನದ ಹಾಜರಾತಿಗೆ 4,40,000 ರು.ನಂತೆ ಒಟ್ಟು 11 ದಿನಗಳಿಗೆ (2022ರ ಅಗಸ್ಟ್ 29ರಿಂದ ಸೆ.22ರವರೆಗೆ) ಒಟ್ಟು 48,40,000 ರು. ನಿಗದಿಪಡಿಸಲಾಗಿತ್ತು ಎಂಬುದು ಗೊತ್ತಾಗಿದೆ. ಈ ಕುರಿತು ದಾಖಲೆಗಳು ‘ದಿ ಫೈಲ್’ಗೆ (ಕಡತ ಸಂಖ್ಯೆ; ಇಡಿ 34 ಡಿಜಿಡಬ್ಲ್ಯೂ 2022) ಲಭ್ಯವಾಗಿವೆ.
ರಾಜ್ಯದ ಎಲ್ಲ ಸರ್ಕಾರಿ ಶಾಲೆ– ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯಗೊಳಿಸಿ ಪದವಿಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಆ ಮೂಲಕ ಹಿಜಾಬ್ ಮತ್ತು ಕೇಸರಿ ಶಾಲು ಧರಿಸುವುದಕ್ಕೆ ನಿರ್ಬಂಧ ವಿಧಿಸಿತ್ತು. ಖಾಸಗಿ ಕಾಲೇಜುಗಳಲ್ಲಿ ಕೂಡ ಆಯಾ ಆಡಳಿತ ಮಂಡಳಿ ನಿರ್ಧರಿಸುವ ಸಮವಸ್ತ್ರವನ್ನೇ ವಿದ್ಯಾರ್ಥಿಗಳು ಧರಿಸಬೇಕು ಎಂದೂ ಆದೇಶದಲ್ಲಿ ಸ್ಪಷ್ಟಪಡಿಸಿತ್ತು.
ಕರಾವಳಿ ಜಿಲ್ಲೆಗಳಲ್ಲಿ ಆರಂಭವಾಗಿದ್ದ ಹಿಜಾಬ್ – ಕೇಸರಿ ಶಾಲು ವಿವಾದವು ರಾಜ್ಯವ್ಯಾಪಿ ಹರಡಿತ್ತು. ಹಾಗೆಯೇ ಹಿಜಾಬ್ ಧರಿಸಿ ಬಂದಿದ್ದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಪ್ರವೇಶ ದ್ವಾರದಲ್ಲೇ ತಡೆದಿದ್ದ ಕುಂದಾಪುರ ಸರ್ಕಾರಿ ಪದವಿಪೂವರ್ವ ಕಾಲೇಜಿನ ಪ್ರಾಂಶುಪಾಲರು, ಪ್ರವೇಶ ನಿರಾಕರಿಸಿದ್ದರು. ಹಿಜಾಬ್ ಧರಿಸಿದವರಿಗೆ ಪ್ರವೇಶ ನಿರ್ಬಂಧಿಸಿದ ವಿಷಯ ಹೈಕೋರ್ಟ್ ಮೆಟ್ಟಿಲೇರಿತ್ತು.
ಉಡುಪಿ, ಕುಂದಾಪುರದಲ್ಲಿ ಶುರುವಾಗಿದ್ದ ವಿವಾದವು ಬೆಳಗಾವಿ, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಗೂ ವ್ಯಾಪಿಸಿತ್ತು. ‘ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿ– ವಿದ್ಯಾರ್ಥಿನಿಯರು ತಮ್ಮ ಧರ್ಮದ ಅನುಸಾರ ಆಚರಣೆಗಳನ್ನು ಪಾಲಿಸುತ್ತಿದ್ದಾರೆ. ಇದರಿಂದಾಗಿ ಶಾಲಾ ಕಾಲೇಜುಗಳಲ್ಲಿ ಸಮಾನತೆ ಮತ್ತು ಏಕತೆಗೆ ಧಕ್ಕೆ ಉಂಟಾಗುತ್ತಿದೆ’ಎಂದು ಆದೇಶದಲ್ಲಿ ಸರ್ಕಾರ ತಿಳಿಸಿತ್ತು.
’ಶಿರವಸ್ತ್ರ ಹಾಕಿಕೊಂಡು ಅಥವಾ ತಲೆಯನ್ನು ಮುಚ್ಚಿಕೊಂಡು ಶಾಲೆಗೆ ಬರದಂತೆ ವಿದ್ಯಾರ್ಥಿಗಳನ್ನು ತಡೆದರೆ, ಅದು ಸಂವಿಧಾನದ ಅನುಚ್ಛೇದ 25 ಉಲ್ಲಂಘನೆ ಅಲ್ಲ ಎಂದು ಸುಪ್ರೀಂ ಕೋರ್ಟ್ ಮತ್ತು ವಿವಿಧ ರಾಜ್ಯಗಳ ಹೈಕೋರ್ಟ್‌ಗಳು ಈಗಾಗಲೇ ತೀರ್ಪು ನೀಡಿವೆ. ಹೀಗಾಗಿ, ಈ ಆದೇಶ ಹೊರಡಿಸಲಾಗಿದೆ’ ಎಂದು ಆದೇಶದಲ್ಲಿ ಸರ್ಕಾರ ಸಮರ್ಥನೆಯನ್ನೂ ನೀಡಿತ್ತು. ಆದೇಶವನ್ನು ಯಥಾವತ್ತಾಗಿ ಪಾಲಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿ ಸಿ ನಾಗೇಶ್ ಅವರು ಹೇಳಿಕೆ ನೀಡಿದ್ದನ್ನು ಸ್ಮರಿಸಬಹುದು.
‘ಪದವಿಪೂರ್ವ ಶಿಕ್ಷಣ ಇಲಾಖೆಯ ವ್ಯಾಪ್ತಿಯ ಎಲ್ಲ ಕಾಲೇಜುಗಳಲ್ಲಿ ಆಯಾ ಕಾಲೇಜುಗಳ ಕಾಲೇಜು ಅಭಿವೃದ್ಧಿ ಮಂಡಳಿ (ಸಿಡಿಸಿ) ಅಥವಾ ಆಡಳಿತ ಮಂಡಳಿಯ ಮೇಲ್ವಿಚಾರಣಾ ಸಮಿತಿ ನಿರ್ಧರಿಸುವ ಸಮವಸ್ತ್ರವನ್ನು ವಿದ್ಯಾರ್ಥಿಗಳು ಧರಿಸಬೇಕು. ಆಡಳಿತ ಮಂಡಳಿಗಳು ಸಮವಸ್ತ್ರಗಳನ್ನು ನಿಗದಿಪಡಿಸದೇ ಇದ್ದರೆ ಸಮಾನತೆ ಮತ್ತು ಏಕತೆಯನ್ನು ಕಾಪಾಡಿಕೊಂಡು ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಆಗದಂತೆ ಉಡುಪು ಧರಿಸಬೇಕು’ ಎಂದೂ ಈ ಆದೇಶದಲ್ಲಿ ಹೇಳಲಾಗಿತ್ತು.
ಆದರೆ, ಆದೇಶದಲ್ಲಿ ಎಲ್ಲಿಯೂ ಹಿಜಾಬ್ ಎಂಬ ಪದವನ್ನು ಬಳಸಿರಲಿಲ್ಲ. ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿ–ವಿದ್ಯಾರ್ಥಿನಿಯರು ತಮ್ಮ ಧರ್ಮದ ಆಚರಣೆಗಳನ್ನು ಪಾಲಿಸುತ್ತಿದ್ದಾರೆ. ಇದರಿಂದ ಸಮಾನತೆಗೆ ಧಕ್ಕೆಯಾಗುತ್ತಿದೆ ಎಂದು ಉಲ್ಲೇಖಿಸಿರುವ ಆದೇಶ, ಶಿರವಸ್ತ್ರ(ಹೆಡ್ ಸ್ಕಾರ್ಫ್) ಅಥವಾ ತಲೆಗೆ ಮುಚ್ಚಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿತ್ತು.
ಪ್ರತ್ಯೇಕ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಮತ್ತು ವಿವಿಧ ರಾಜ್ಯಗಳ ಹೈಕೋರ್ಟ್‌ಗಳು ವೈಯಕ್ತಿಕ ವಸ್ತ್ರ ಸಂಹಿತೆಗಿಂತ ಏಕರೂಪದ ವಸ್ತ್ರ ಸಂಹಿತೆಗೆ ಸಂಬಂಧಿಸಿದಂತೆ ತೀರ್ಪು ನೀಡಿವೆ. ಸರ್ಕಾರ ಹೊರಡಿಸಿರುವ ಆದೇಶದ ಪ್ರಸ್ತಾವನೆಯಲ್ಲಿ ಈ ತೀರ್ಪುಗಳನ್ನು ಉಲ್ಲೇಖಿಸಿತ್ತು.
ಆಶಾ ರೆಂಜನ್ ಹಾಗೂ ಇತರರು ಮತ್ತು ಬಿಹಾರ ರಾಜ್ಯ ಪ್ರಕರಣದಲ್ಲಿ, ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳ ವಿಚಾರದಲ್ಲಿ ವೈಯಕ್ತಿಯ ಹಿತಾಸಕ್ತಿಗಿಂತ ಸಾರ್ವಜನಿಕ ಹಿತಾಸಕ್ತಿ ಮುಖ್ಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು. ಕೇರಳ ಹೈಕೋರ್ಟ್ 2018ರಲ್ಲಿ ನೀಡಿದ ತೀರ್ಪು ಒಂದರಲ್ಲಿ ಸುಪ್ರೀಂ ಕೋರ್ಟ್‌ನ ಈ ತೀರ್ಪನ್ನು ಉಲ್ಲೇಖಿಸಿತ್ತು.
ಸುಪ್ರೀಂ ಕೋರ್ಟ್‌ನ ಇದೇ ತೀರ್ಪು ಉಲ್ಲೇಖಿಸಿ ವಿ. ಕಮಲಮ್ಮ ವಿರುದ್ಧ ಡಾ.ಎಂ.ಜಿ.ಆರ್. ವೈದ್ಯಕೀಯ ವಿಶ್ವವಿದ್ಯಾಲಯ ಮತ್ತು ಇತರರು ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್, ವಿಶ್ವವಿದ್ಯಾಲಯದ ನಿಗದಿಪಡಿಸಿದ್ದ ವಸ್ತ್ರ ಸಂಹಿತೆ ನಿರ್ಧಾರವನ್ನು ಎತ್ತಿಹಿಡಿದಿತ್ತು. ಎಂ. ವೆಂಕಟಸುಬ್ಬರಾವ್ ಮೆಟ್ರಿಕುಲೇಷನ್ ಹೈಯರ್ ಸೆಕೆಂಡರಿ ಸ್ಕೂಲ್ ಆಫ್ ಸ್ಟಾಫ್ ಅಸೋಸಿಯೇಷನ್ ವಿರುದ್ಧ ಎಂ. ವೆಂಕಟಸುಬ್ಬರಾವ್ ಮೆಟ್ರಿಕುಲೇಷನ್ ಹೈಯರ್ ಸೆಕೆಂಡರಿ ಸ್ಕೂಲ್ ಪ್ರಕರಣದಲ್ಲಿಯೂ ಮದ್ರಾಸ್ ಹೈಕೋರ್ಟ್ ಇದೇ ರೀತಿಯ ತೀರ್ಪು ನೀಡಿತ್ತು.
ನ್ಯಾಯಮೂರ್ತಿ ಧುಲಿಯಾ, ಮೇಲ್ಮನವಿ ಸಲ್ಲಿಕೆಯನ್ನು ಪುರಸ್ಕರಿಸಿ ಕರ್ನಾಟಕ ಸರ್ಕಾರದ ಫೆಬ್ರವರಿ 5ರ ಆದೇಶವನ್ನು ತಳ್ಳಿಹಾಕಿದರು. ಹಿಜಾಬ್ ಧರಿಸುವುದು ಅಂತಿಮವಾಗಿ ವ್ಯಕ್ತಿಯ ವೈಯಕ್ತಿಕ ಆಯ್ಕೆ. ಬಿಜೊಯ್ ಎಮೆನ್ಯುಯೆಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ ಹಾಕಿರುವ ಅನುಪಾತ ಇದನ್ನು ಸೂಚಿಸುತ್ತದೆ. ಇಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ನನಗೆ ಮುಖ್ಯವಾಗಿ ಕಾಣುತ್ತದೆ. ಹೆಣ್ಣು ಮಕ್ಕಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ಇನ್ನೂ ಹಲವು ಸಮಸ್ಯೆಗಳು ಆಕೆಗಿರುತ್ತವೆ, ಹಾಗಿರುವಾಗ ನಾವು ಶಿಕ್ಷಣದಲ್ಲಿ ಮತ್ತಷ್ಟು ನಿರ್ಬಂಧ ಹಾಕಿ ಅವಳ ಜೀವನವನ್ನು ಉತ್ತಮಗೊಳಿಸುತ್ತೇವೆಯೇ ಎಂದು ಪ್ರಶ್ನಿಸಿದ್ದನ್ನು ಸ್ಮರಿಸಬಹುದು.