ಕಲ್ಬುರ್ಗಿಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದ ಕೆಲಗಂಟೆಗಳ ಕಾರ್ಯಕ್ರಮಕ್ಕೆ 11.18 ಕೋಟಿ ರು. ವೆಚ್ಚ

photo credit;BasavarajBommai official twitter

ಬೆಂಗಳೂರು; ಕಲ್ಬುರ್ಗಿಯ ಸೇಡಂ ತಾಲೂಕಿನ ಮಳಖೇಡದಲ್ಲಿ ಸಾಂಕೇತಿಕವಾಗಿ ಐದು ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿದ್ದ ಪ್ರಧಾನಿ ಮೋದಿ ಅವರ ಕಾರ್ಯಕ್ರಮಕ್ಕೆ ಬರೋಬ್ಬರಿ 11.18 ಕೋಟಿ ರು. ವೆಚ್ಚವಾಗಿರುವುದನ್ನು ‘ದಿ ಫೈಲ್‌’ ಇದೀಗ ಹೊರಗೆಡವುತ್ತಿದೆ.

 

2023-24ನೇ ಸಾಲಿನ ಬಜೆಟ್‌ನಲ್ಲಿ ಹೊಸ ಕಾರ್ಯಕ್ರಮಗಳ ಘೋಷಣೆ ಮಾಡಲು ಹಣಕಾಸನ್ನು ಹೊಂದಿಸಲು ತಿಣುಕಾಡುತ್ತಿರುವ ಹೊತ್ತಿನಲ್ಲಿಯೇ ಕೇವಲ ಕೆಲವೇ ಕೆಲವು ಗಂಟೆಗಳಷ್ಟೇ ಪ್ರಧಾನಿ ಮೋದಿ ಅವರು ಭಾಗವಹಿಸಿದ್ದ ಕಾರ್ಯಕ್ರಮಕ್ಕೆ 11.18 ಕೋಟಿ ರು. ವೆಚ್ಚವಾಗಿರುವುದು ಸರ್ಕಾರದ ಬೊಕ್ಕಸದಲ್ಲಿನ ಹಣವನ್ನು ಬೇಕಾಬಿಟ್ಟಿಯಾಗಿ ಖರ್ಚು ಮಾಡುತ್ತಿದೆ ಎಂಬ ಆರೋಪಗಳಿಗೆ ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ.

 

ಕಲ್ಬುರ್ಗಿ ಕಾರ್ಯಕ್ರಮಕ್ಕೂ ಮುನ್ನ ಯಾದಗಿರಿಯಲ್ಲಿಯೂ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಿದ್ದ ಕಂದಾಯ ಇಲಾಖೆಯು 7 ಕೋಟಿ ರು.ವೆಚ್ಚ ಮಾಡಲು ಆರ್ಥಿಕ ಇಲಾಖೆಯಿಂದ 4(ಜಿ) ವಿನಾಯಿತಿ ಪಡೆದುಕೊಂಡಿತ್ತು. ಆದರೆ ಯಾದಗಿರಿಯಲ್ಲಿ ಕಾರ್ಯಕ್ರಮ ನಡೆಯದ ಕಾರಣ ಅದೇ ಹಣವನ್ನು ಕಲ್ಬುರ್ಗಿ ಕಾರ್ಯಕ್ರಮಕ್ಕೆ ಮರು ಹಂಚಿಕೆ ಮಾಡಲಾಗಿದೆ. ಹೀಗಾಗಿ ಕಲ್ಬುರ್ಗಿ ಕಾರ್ಯಕ್ರಮಕ್ಕೆ ಯಾದಗಿರಿ ಜಿಲ್ಲೆಗೆ ಹಂಚಿಕೆಯಾಗಿದ್ದ 7 ಕೋಟಿ ಸೇರಿಸಿ ಒಟ್ಟು 11.18 ಕೋಟಿ ರು. ವೆಚ್ಚವಾಗಿದೆ ಎಂದು ಕಂದಾಯ ಇಲಾಖೆ ಮೂಲಗಳು ‘ದಿ ಫೈಲ್‌’ಗೆ ಖಚಿತಪಡಿಸಿವೆ.

 

ನೂತನವಾಗಿ ರಚಿಸಿರುವ ಕಂದಾಯ ಗ್ರಾಮಗಳಿಗೆ ಹಕ್ಕುಪತ್ರ ವಿತರಣೆ ಮತ್ತು ಸರ್ಕಾರದ ವಿವಿಧ ಕಾರ್ಯಕ್ರಮಗಳ ಲೋಕಾರ್ಪಣೆ ಮಾಡುವ ಕಾರ್ಯಕ್ರಮಕ್ಕೆ ಕೆಟಿಪಿಪಿ ಕಾಯ್ದೆ 4 (ಜಿ) ವಿನಾಯಿತಿ ಕೋರಿದ್ದ ಕಲ್ಬುರ್ಗಿ ಜಿಲ್ಲಾಧಿಕಾರಿಗಳು ಕಾರ್ಯಕ್ರಮಕ್ಕೆ ಒಟ್ಟಾರೆ 11,18,57,000 ರು.ಗಳ ಅನುದಾನ ಕೋರಿಕೆ ಸಲ್ಲಿಸಿದ್ದರು. ಈ ಸಂಬಂಧ 2023ರ ಜನವರಿ 12ರಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಬರೆದಿದ್ದ ಪತ್ರ ಮತ್ತು ಸಲ್ಲಿಸಿದ್ದ ಅಂದಾಜು ಪಟ್ಟಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕಲ್ಬುರ್ಗಿ ಜಿಲ್ಲಾಧಿಕಾರಿ ಬರೆದಿರುವ ಪತ್ರದ ಪ್ರತಿ

 

‘ದಿನಾಂಕ 19.01.2023ರಂದು ಸನ್ಮಾನ್ಯ ಪ್ರಧಾನಮಂತ್ರಿಗಳು ಕಲಬುರಗಿ ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಕಾರ್ಯಕ್ರಮ ಆಯೋಜಿಸುವ ಸಲುವಾಗಿ ಕಾರ್ಯಕ್ರಮಕ್ಕೆ ತಗುಲುವ ವೆಚ್ಚವನ್ನು ಭರಿಸಲು 11,18,57,000 ಕೋಟಿ ರು.ಗಳ ಅನುದಾನವನ್ನು ಲೆಕ್ಕ ಶೀರ್ಷಿಕೆ 2053-00-093-1-01 ಸಾಮಾನ್ಯ ವೆಚ್ಚ 051ರಡಿ ಬಿಡುಗಡೆ ಮಾಡಬೇಕು,’ ಎಂದು ಕಲ್ಬುರ್ಗಿ ಜಿಲ್ಲಾಧಿಕಾರಿಗಳು ಅಂದಾಜು ಪಟ್ಟಿಯನ್ನೂ ಸಲ್ಲಿಸಿದ್ದರು.

 

ಖರ್ಚಿನ ವಿವರ

 

ಮುಖ್ಯ ವೇದಿಕೆಗೆ 3.75 ಕೋಟಿ ರು., (ಏಜೆನ್ಸಿ- ಉಡುಪ ಬೆಂಗಳೂರು ) ವೆಚ್ಚದ ಅಂದಾಜು ಪಟ್ಟಿ ಸಲ್ಲಿಸಲಾಗಿತ್ತು. ಜರ್ಮನ್‌ ಹ್ಯಾಂಗರ್‌ ವಿತ್‌ ವಾಟರ್‌ ಪ್ರೂಫ್‌, ಸೌಂಡ್‌ ಲೈಟಿಂಗ್‌ ವ್ಯವಸ್ಥೆ, ಎಲ್‌ಇಡಿ ಸ್ಕ್ರೀನ್‌ ಅಳವಡಿಕೆ,ಹೂವಿನ ಅಲಂಕಾರ, ಗ್ರೀನ್‌ ರೂಂ, ಸೇಫ್‌ ರೂಂ ನಿರ್ಮಾಣ, ಫಲಾನುಭವಿಗಳಿಗೆ ಊಟದ ಕೌಂಟರ್‌ನ ವೆಚ್ಚವೂ 3.75 ಕೋಟಿ ರು. ನಲ್ಲಿ ಸೇರಿತ್ತು.

 

2023ರ ಜನವರಿ 19ರಂದು ಕಾರ್ಯಕ್ರಮಕ್ಕೆ ಆಗಮಿಸಿದ್ದ 2 ಲಕ್ಷ ಫಲಾನುಭವಿಗಳಿಗೆ ಊಟದ ವ್ಯವಸ್ಥೆಗಾಗಿ ತಲಾ ಫಲಾನುಭವಿಗೆ 82.06 ರು. ದರದಲ್ಲಿ ಒಟ್ಟು 1.23 ಕೋಟಿ ರು., ಅರ್ಧ ಲೀಟರ್‌ ಕುಡಿಯುವ ನೀರಿನ ಬಾಟಲ್‌ಗಳನ್ನು 6 ರು.ನಂತೆ ಒಟ್ಟು 4 ಲಕ್ಷ ಬಾಟಲ್‌ಗಳಿಗೆ 24 ಲಕ್ಷ, 1 ಲಕ್ಷ ಮಜ್ಜಿಗೆ ಪ್ಯಾಕ್‌ಗಳಿಗೆ 6.67 ಲಕ್ಷ ರು., ಜಿಲ್ಲಾವಾರು 1 ಲಕ್ಷ ಫಲಾನುಭವಿಗಳಿಗೆ ಅಲ್ಪೊಪಹಾರಕ್ಕೆ 40 ರು.ನಂತೆ ಒಟ್ಟು 40 ಲಕ್ಷ, ವಿಐಪಿ ಊಟದ ವ್ಯವಸ್ಥೆಗಾಗಿ 300 ರು.ನಂತೆ ಒಟ್ಟು 5000 ಮಂದಿಗೆ 15 ಲಕ್ಷ ರು., (ದೇಸಿ ಮಸಾಲಾ ಏಜೆನ್ಸಿ) ಮುಖ್ಯ ವೇದಿಕೆಯಲ್ಲಿ ಡ್ರೈ ಫ್ರೂಟ್ಸ್‌, ನೀರು, ಸ್ನ್ಯಾಕ್ಸ್‌ ಮತ್ತು ಹಣ್ಣುಗಳ ವ್ಯವಸ್ಥೆಗಾಗಿ 10,000 ರು.., ಶಾಲು, ಹೂವಿನ ಹಾರ, ವಿವಿಐಪಿ ಮೊಮೆಂಟ್‌ಗಳು, ಬ್ಯಾಡ್ಜ್‌ಗಳಿಗೆ 20,000 ರು ವೆಚ್ಚವಾಗಿದೆ.

 

ಅದೇ ರೀತಿ ಕಲ್ಬುರ್ಗಿ (1,090), ಬೀದರ್‌ (300), ಯಾದಗಿರಿ (448) ವಿಜಯಪುರ (104) ಹೆಚ್ಚುವರಿ 500 ಸೇರಿ ಒಟ್ಟು 2,582 ಮಂದಿಗೆ ವಾಹನ ವ್ಯವಸ್ಥೆ ಕಲ್ಪಿಸಿದ್ದ 3.40 ಕೋಟಿ ರು., ವಿಡಿಯೋ ಚಿತ್ರೀಕರಣ, (ರಿಶಿ ಫಿಲಮ್ಸ್‌ ಬೀದರ್‌) ಫೋಟೋ, ಆಹ್ವಾನ ಪತ್ರಿಕೆಗೆ 1.96 ಲಕ್ಷ ರು., ಕಾರ್ಯಕ್ರಮದ ಸ್ಥಳದಲ್ಲಿ ಹಾಗೂ ಪಾರ್ಕಿಂಗ್‌ ಸ್ಥಳದಲ್ಲಿ ಲೆವಲಿಂಗ್‌ ಮತ್ತು ರೋಲಿಂಗ್‌, ಮುರುಮ್‌ ಫಿಲಿಂಗ್‌, ರಸ್ತೆ ನಿರ್ಮಾಣ, ವಿದ್ಯುತ್ ಕಂಬಗಳ ಸ್ಥಳಾಂತರ, ಹೆಲಿಪ್ಯಾಡ್‌ ನಿರ್ಮಾಣ ಸೇರಿದಂತೆ ಇನ್ನಿತರೆ ವ್ಯವಸ್ಥೆಗಳಿಗಾಗಿ 1.50 ಕೋಟಿ, ಸಾಂಸ್ಕೃತಿ ಹಾಗೂ ಜಾನಪದ ಕಾರ್ಯಕ್ರಮ, ಕಲಾವಿದರಿಗೆ ಸಂಭಾವನೆಗಾಗಿ ಒಟ್ಟು 25 ಲಕ್ಷ ರು. ಸೇರಿ ಒಟ್ಟು 11,18,57,000 ರು.ಗಳ ಅಂದಾಜು ವೆಚ್ಚವನ್ನು ಕಲ್ಬುರ್ಗಿ ಜಿಲ್ಲಾಧಿಕಾರಿಗಳು ಸಲ್ಲಿಸಿದ್ದರು ಎಂಬುದು ಪತ್ರದಿಂದ ತಿಳಿದು ಬಂದಿದೆ.

 

ಯಾದಗಿರಿಯಲ್ಲಿಯೂ ಹಕ್ಕುಪತ್ರ ವಿತರಣೆ ಕಾರ್ಯಕ್ರಮಕ್ಕೆ 7.00 ಕೋಟಿ ರು.ವೆಚ್ಚ ಮಾಡಲು ಆರ್ಥಿಕ ಇಲಾಖೆಯು ಸಮ್ಮತಿ ವ್ಯಕ್ತಪಡಿಸಿತ್ತಾದರೂ ಕಡೆಯಲ್ಲಿ ಸಚಿವ ಸಂಪುಟವು ಈ ಮೊತ್ತವನ್ನು ಅನುಮೋದಿಸಿತ್ತು.

ಹಕ್ಕುಪತ್ರ ವಿತರಣೆ ಹೆಸರಿನಲ್ಲಿ 7.00 ಕೋಟಿ ದುಂದುವೆಚ್ಚ; 4(ಜಿ)ವಿನಾಯಿತಿಗೆ ಆರ್ಥಿಕ ಇಲಾಖೆ ಸಮ್ಮತಿ

 

 

ಹಕ್ಕುಪತ್ರ ವಿತರಿಸಲು ಇಲಾಖೆ ಅಧಿಕಾರಿಗಳು ಮೂರು ತಿಂಗಳಿನಿಂದ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ತಾಂಡಾ ನಿವಾಸಿಗಳ ಮಾಹಿತಿ ಸಂಗ್ರಹಿಸಿದ್ದರು.  ಸೇಡಂ ತಾಲ್ಲೂಕಿನ ಮಳಖೇಡನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 52,072 ಬಂಜಾರ ಸಮುದಾಯದ ಕುಟುಂಬಗಳಿಗೆ ಏಕಕಾಲಕ್ಕೆ ನಿವೇಶನ ಹಕ್ಕುಪತ್ರ ವಿತರಿಸುವ ಮೂಲಕ ಕಂದಾಯ ಇಲಾಖೆಯ ಹೆಸರಿನಲ್ಲಿ ದಾಖಲೆ ಬರೆಯಲಾಗಿದೆ ಎಂದು ಹೆಗ್ಗಳಿಕೆಯಿಂದ ಸರ್ಕಾರವು ಬೀಗುತ್ತಿದೆ.

 

ಅಲ್ಲದೇ ಬೆಂಗಳೂರು ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಗತಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಭಾಗವಹಿಸಿದ್ದ ಕಾರ್ಯಕ್ರಮಕ್ಕೆ 48 ಕೋಟಿ ರು. ವೆಚ್ಚವಾಗಿತ್ತು. ಈ ಕುರಿತೂ ‘ದಿ ಫೈಲ್‌’ 2022ರ ನವೆಂಬರ್‌ 11ರಂದು ವರದಿ ಪ್ರಕಟಿಸಿತ್ತು.

ಪ್ರಗತಿ ಪ್ರತಿಮೆ ಅನಾವರಣ; ಮೋದಿ ಕಾರ್ಯಕ್ರಮ, ಕಾಮಗಾರಿ, ವ್ಯವಸ್ಥೆಗೆ 48.44 ಕೋಟಿ ವೆಚ್ಚ!

 

ಉತ್ಸವಗಳಿಗೆ ಸರ್ಕಾರ ಖರ್ಚು ಮಾಡುತ್ತಿರುವ ಹಣದ ಬಗ್ಗೆ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts