ಆಡಳಿತಾಧಿಕಾರಿ ನೇಮಕ; ರಿಟ್‌ ಅರ್ಜಿಯಲ್ಲಿ ಹುರುಳಿಲ್ಲ, ಸೆಕ್ಷನ್‌ 92ರಲ್ಲಿ ದಾವೆ ಹೂಡಲು ಮುಕ್ತರೆಂದ ಕೋರ್ಟ್‌

photo credit;thenewsminute

ಬೆಂಗಳೂರು; ಹೊಸನಗರದ ರಾಮಚಂದ್ರಾಪುರ ಮಠದ ಪೀಠಾಧ್ಯಕ್ಷ ಸ್ಥಾನದಿಂದ ರಾಘವೇಶ್ವರ ಸ್ವಾಮೀಜಿ ಅವರನ್ನು ಪದಚ್ಯುತಗೊಳಿಸಿ ಆಡಳಿತಾಧಿಕಾರಿ ನೇಮಕಕ್ಕೆ ಸಂಬಂಧಿಸಿದಂತೆ ಎದುರ್ಕುಳ ಈಶ್ವರ್‌ ಭಟ್‌ ಮತ್ತಿತರರು ಸಲ್ಲಿಸಿದ್ದ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲವೆಂದು ಹೈಕೋರ್ಟ್‌ ಅಭಿಪ್ರಾಯಿಸಿರುವುದು ಇದೀಗ ಬಹಿರಂಗವಾಗಿದೆ.

 

ಅದೇ ರೀತಿ ಸಂವಿಧಾನದ ಅನುಚ್ಛೇಧ 226ರ ಅಡಿಯಲ್ಲಿ ಕ್ರಮ ಜರುಗಿಸಲು ಸಾಧ್ಯವಿಲ್ಲ. ಆದರೂ ರಾಘವೇಶ್ವರ ಭಾರತಿ ಶ್ರೀಗಳ ವಿರುದ್ಧ ಸಿಪಿಎಸಿ ಸೆಕ್ಷನ್‌ 92ರ ಅಡಿಯಲ್ಲಿ ದಾವೆ ಹೂಡಲು ಅರ್ಜಿದಾರರು ಮುಕ್ತರಾಗಿದ್ದಾರೆ ಎಂದು ರಿಟ್‌ ಅರ್ಜಿ ವಿಲೇ ಮಾಡಿ ಇತ್ಯರ್ಥಗೊಳಿಸಿದೆ. ಈ ಪ್ರಕರಣ ಕುರಿತು ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಸಮಗ್ರ ದಾಖಲಾತಿಗಳನ್ನು ಪಡೆದುಕೊಂಡಿದೆ.

 

ಚಿತ್ರುದುರ್ಗದ ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿರುವ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಹೊತ್ತಿನಲ್ಲೇ ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ನೀಡಿರುವ ತೀರ್ಪು ಮುನ್ನೆಲೆಗೆ ಬಂದಿದೆ.

 

ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಿಸುವ ಸಂಬಂಧ ಹೈಕೋರ್ಟ್‌ನ ತಡೆಯಾಜ್ಞೆ ತೆರವುಗೊಳಿಸಲು ಧಾರ್ಮಿಕ ದತ್ತಿ ಇಲಾಖೆಯು ಕಳೆದ 4 ವರ್ಷಗಳಿಂದಲೂ ಅಸಕ್ತಿ ವಹಿಸಿರಲಿಲ್ಲ. ಈ ಸಂಬಂಧದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್‌, 2022ರ ಸೆ.29ರಂದು ಅರ್ಜಿ ವಿಲೇ ಮಾಡಿದೆ.

 

 

 

 

ಹೈಕೋರ್ಟ್‌ ನೀಡಿರುವ ತೀರ್ಪಿನಲ್ಲೇನಿದೆ?

 

ರಾಘವೇಶ್ವರ ಭಾರತಿ ಕ್ರಿಮಿನಲ್‌ ಆರೋಪದಿಂದ ಡಿಸ್ಜಾರ್ಜ್‌ ಆಗಿರುವ ಹಿನ್ನೆಲೆಯಲ್ಲಿ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಆರೋಪಕ್ಕೆ ಗುರಿಯಾಗಿರುವ ಪ್ರಕರಣದಲ್ಲಿ ತಡೆಯಾಜ್ಞೆ ಇದೆ. ಮತ್ತು ಈಗಾಗಲೇ ಟಿ ಟಿ ಹೆಗ್ಡೆ ಮತ್ತು ಪ್ರಶಾಂತಕುಮಾರ್‌ ಇನ್ನಿತರರು ಸಲ್ಲಿಸಿದ್ದ ಸಿಪಿಸಿ ಸೆಕ್ಷನ್‌ 92ರ ಅಡಿಯಲ್ಲಿ ಸಲ್ಲಿಸಿದ್ದ ದಾವೆಗಳು ವಜಾಗೊಂಡಿರುವ ಹಿನ್ನೆಲೆಯಲ್ಲಿ ಅರ್ಜಿದಾರರ ವಾದದಲ್ಲಿ ಯಾವುದೇ ಹುರುಳಿಲ್ಲ ಎಂದು ಕಂಡುಬಂದಿದ್ದು ಸಂವಿಧಾನದ ಅನುಚ್ಛೇಧ 226ರಡಿಯಲ್ಲಿ ಕ್ರಮ ಜರುಗಿಸಲು ಸಾಧ್ಯವಿಲ್ಲ. ಅದಾಗ್ಯೂ ಅರ್ಜಿದಾರರು ಪ್ರತಿವಾದಿ (1) ರಾಘವೇಶ್ವರ ವಿರುದ್ಧ ಸಿಪಿಸಿ ಸೆಕ್ಷನ್‌ 92ರಡಿಯಲ್ಲಿ ದಾವೆ ಹೂಡಲು ಮುಕ್ತರು ಎಂಬ ಅಭಿಪ್ರಾಯದೊಂದಿಗೆ ರಿಟ್‌ ಅರ್ಜಿಯನ್ನು ವಿಲೇ ಮಾಡಿ ಇತ್ಯರ್ಥಗೊಳಿಸಿದೆ.

 

‘ಉಚ್ಛ ನ್ಯಾಯಾಲಯದಲ್ಲಿ ದಾಖಲಾಗಿರುವ ರಿಟ್‌ ಅರ್ಜಿ (ಸಂಖ್ಯೆ 25124-129/2016) ಪಿಐಎಲ್‌ ಎದುರ್ಕುಳ ಈಶ್ವರ್‌ ಭಟ್‌ ಮತ್ತು ಇತರರು ರಾಜ್ಯ ಸರ್ಕಾರ ಹಾಗೂ ಇತರರು ಪ್ರಕರಣಕ್ಕೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯವು 29.09.2022ರಂದು ತೀರ್ಪನ್ನು ನೀಡಿ ಪ್ರಕರಣವನ್ನು ಇತ್ಯರ್ಥಪಡಿಸಿರುತ್ತದೆ. ಈ ಕುರಿತು ಸರ್ಕಾರಿ ವಕೀಲರು ಸದರಿ ಆದೇಶದ ವಿರುದ್ಧ ಅಪೀಲನ್ನು ದಾಖಲಿಸಲು ಅರ್ಹ ಪ್ರಕರಣವಲ್ಲವೆಂದು ಅಭಿಪ್ರಾಯ ನೀಡಿರುತ್ತಾರೆ,’ ಎಂಬುದು ಮುಜುರಾಯಿ ಇಲಾಖೆಯ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಅಲ್ಲದೇ ಈ ಆದೇಶದ ವಿರುದ್ಧ ಅಪೀಲು ದಾಖಲಿಸಲು ಅರ್ಹ ಪ್ರಕರಣವಲ್ಲವೆಂದು ಸರ್ಕಾರಿ ವಕೀಲರು ನೀಡಿದ್ದ ಅಭಿಪ್ರಾಯವನ್ನು ಮುಜುರಾಯಿ ಸಚಿವರಾದ ಶಶಿಕಲಾ ಜೊಲ್ಲೆ ಅವರು ಅನುಮೋದಿಸಿರುವುದು ಇದೀಗ ಬಹಿರಂಗವಾಗಿದೆ.

 

ಅರ್ಜಿದಾರರ ಕೋರಿಕೆ ಏನಿತ್ತು?

 

ಮೊದಲನೇ ಪ್ರತಿವಾದಿ ರಾಘವೇಶ್ವರ ಭಾರತಿ ಸ್ವಾಮೀಜಿ ಅವರನ್ನು ಮಠಾಧಿಪತಿ ಸ್ಥಾನದಿಂದ ಪದಚ್ಯುತಗೊಳಿಸಿ ಅವರು ಸ್ಥಾನವನ್ನು ದುರುಪಯೋಗಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಎರಡನೇ ಪ್ರತಿವಾದಿಯಾಗಿರುವ ರಾಮಚಂದ್ರಾಪುರ ಮಠದ ವ್ಯವಹಾರವನ್ನು ಮೂರನೇ ಪ್ರತಿವಾದಿ ಕರ್ನಾಟಕ ಸರ್ಕಾರದಿಂದ ನಿಯಂತ್ರಿಸುವ ಕಾರ್ಯಾದೇಶವನ್ನು ಹೊರಡಿಸಬೇಕು ಎಂದು ಎದುರ್ಕುಳ ಈಶ್ವರ್‌ ಭಟ್‌ ಮತ್ತಿತರರು ಅರ್ಜಿಯಲ್ಲಿ ಕೋರಿದ್ದರು.

 

ಎರಡನೇ ಪ್ರತಿವಾದಿ ರಾಮಚಂದ್ರಾಪುರ ಮಠದ ಆಡಳಿತವನ್ನು ಸಮರ್ಪಕವಾಗಿ ನಡೆಸುವ ನಿಟ್ಟಿನಲ್ಲಿ ದಕ್ಷ ಭಕ್ತರನ್ನು, ಸರ್ಕಾರದ ಪ್ರತಿನಿಧಿಗಳನ್ನೊಳಗೊಂಡಂತೆ ಸುಪ್ರೀಂ ಮತ್ತು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಒಳಗೊಂಡ ಸಮಿತಿ ರಚಿಸಬೇಕು. ಒಂದನೇ, ಎರಡನೇ ಮತ್ತು ಐದನೇ ಪ್ರತಿವಾದಿ ವಿರುದ್ಧದ ತೆರಿಗೆ ಉಲ್ಲಂಘನೆ ಕುರಿತಂತೆ ಸಮಗ್ರ ಕ್ರಮಕೈಗೊಳ್ಳಬೇಕು.

 

ಒಂದನೇ ಪ್ರತಿವಾದಿ ವಿರುದ್ಧ ಇಲ್ಲಿಯವರೆಗೂ ದಾಖಲಾಗಿರುವ ಎಲ್ಲಾ ಬಗೆಯ ದೂರುಗಳು ಮತ್ತು ಭವಿಷ್ಯದಲ್ಲಿ ದಾಖಲಾಗುವ ಎಲ್ಲಾ ದೂರುಗಳ ಕುರಿತಂತೆ ನಿಗಾ ವಹಿಸಲು ಆದೇಶ ಹೊರಡಿಸಬೇಕು ಎಂದು ಅರ್ಜಿದಾರ ಎದುರ್ಕುಳ ಈಶ್ವರ್‌ ಭಟ್‌ ಮತ್ತಿತರರು ರಿಟ್‌ ಅರ್ಜಿಯಲ್ಲಿ ಕೋರಿದ್ದರು.

 

ಮುಖ್ಯ ಕಾರ್ಯದರ್ಶಿಗೆ ನೀಡಿದ್ದ ದೂರಿನಲ್ಲೇನಿತ್ತು?

 

ಶ್ರೀ ರಾಮಚಂದ್ರಾಪುರ ಮಠವು ಒಂದು ಧಾರ್ಮಿಕ ಸಂಸ್ಥೆಯಾಗಿದ್ದು, ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಈ ಮಠದ ಶಾಖೆಗಳು ಹಲವಾರು ಕಡೆ ಇದ್ದು, ಇವುಗಳು ಬೆಲೆಬಾಳುವ ಸ್ಥಿರ-ಚರ ಆಸ್ತಿಗಳನ್ನು ಹೊಂದಿವೆ. ಇವೆಲ್ಲವೂ ಪ್ರಸ್ತುತ ಈ ಮಠದ ಪೀಠಾಧಿಪತಿಗಳಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳ ನಿಯಂತ್ರಣದಲ್ಲಿರುತ್ತವೆ. ಆದರೆ ಪ್ರಸ್ತುತ ಮಠಾಧಿಪತಿಗಳಾದ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಮಠದ ಆಡಳಿತವನ್ನು ಅಮಸರ್ಪಕವಾಗಿ ನಿರ್ವಹಿಸುತ್ತಿದ್ದಾರೆ.

 

ಇವರ ನಡತೆ-ನಡವಳಿಕೆ ಸರಿ ಇಲ್ಲವೆಂದು ಮಠಕ್ಕೆ ಸಂಬಂಧಿಸಿದ ದಾಖಲೆ, ಲೆಕ್ಕಪತ್ರಗಳನ್ನು ಸರಿಯಾಗಿ ನಿರ್ವಹಿಸಿರುವುದಿಲ್ಲ. ಮಠದ ಆಸ್ತಿ ಪಾಸ್ತಿಗಳನ್ನು ತನ್ನ ಸಂಬಂಧಿಕರಿಗೆ ವರ್ಗಾಯಿಸಿದ್ದಾರೆ. ಹಾಗೂ ಮಠದ ರೂಢಿ ಸಂಪ್ರದಾಯಗಳಿಗೆ ಧಕ್ಕೆಯಾಗುವ ರೀತಿ ವರ್ತಿಸಿದ್ದಾರೆ. ಮಠದಲ್ಲಿ ಅನೇಕ ಅವ್ಯವಹಾರಗಳನ್ನು ನಡೆಸಿರುವುದರಿಂದ ಇವರು ಮಠದ ಪೀಠಾಧಿಕಾರಿಯಾಗಿ ಮುಂದುವರೆಯಲು ಅರ್ಹರಿರುವುದಿಲ್ಲವೆಂದು ದೂರಿನಲ್ಲಿ ಉಲ್ಲೇಖಿಸಿದ್ದರು.

 

ಅಲ್ಲದೆ ಈ ಎಲ್ಲರ ಹಿನ್ನೆಲೆಯಲ್ಲಿ ರಾಘವೇಶ್ವರ ಭಾರತೀ ಸ್ವಾಮೀಜಿ ಅವರನ್ನು ಪೀಠಾಧಿಪತಿ ಸ್ಥಾನದಿಂದ ವಜಾಗೊಳಿಸಬೇಕು ಮತ್ತು ಇವರು ಮಠಕ್ಕೆ ಅಥವಾ ಶಾಖಾ ಮಠಗಳಿಗೆ ಭೇಟಿ ನೀಡದಂತೆ ನಿರ್ಬಂಧಿಸಬೇಕು ಎಂದು ದೂರರ್ಜಿಯಲ್ಲಿ ಕೋರಿದ್ದರು. ಅದೇ ರೀತಿ ಮಠಕ್ಕೆ ಸಂಬಂಧಿಸಿದ ಚರ, ಸ್ಥಿರ ಆಸ್ತಿಗಳನ್ನು, ಹಣಕಾಸು ವ್ಯವಹಾರ, ಆಡಳಿತ ನಿರ್ವಹಣೆ ಮಾಡಲು ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಆಡಳಿತಾಧಿಕಾರಿ ನೇಮಿಸಬೇಕು ಎಂದು ಕೋರಿದ್ದರು.

 

ಈ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಯನ್ನು ಪುರಸ್ಕರಿಸಿದ್ದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮಠಕ್ಕೆ ಆಡಳಿತಾಧಿಕಾರಿ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ 2017ರ ಮೇ 23ರಂದು ಆದೇಶ ಹೊರಡಿಸಿತ್ತು. ಈ ಆದೇಶಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿತ್ತು. ಇದನ್ನು ತೆರವುಗೊಳಿಸುವ ಸೂಚನೆ ಸಂಬಂಧ ಕೈಗೊಂಡಿರುವ ವರದಿಯನ್ನು ಜರೂರಾಗಿ ಸಲ್ಲಿಸಬೇಕು ಎಂದು ಸರ್ಕಾರವು ಹಲವು ನೆನಪೋಲೆಗಳನ್ನು ಬರೆದಿದ್ದರೂ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ವರದಿಯನ್ನೇ ಸಲ್ಲಿಸಿಲ್ಲ. ಈ ಸಂಬಂಧ ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ 400ಕ್ಕೂ ಹೆಚ್ಚು ಪುಟಗಳಿರುವ ಸಮಗ್ರ ಕಡತವನ್ನು ಪಡೆದು 2022ರ ಮಾರ್ಚ್‌ 21ರಂದು ವರದಿ ಪ್ರಕಟಿಸಿತ್ತು.

ಆಡಳಿತಾಧಿಕಾರಿ ನೇಮಕ; ಹೈಕೋರ್ಟ್‌ ತಡೆಯಾಜ್ಞೆ ತೆರವಿಗೆ 4 ವರ್ಷಗಳಾದರೂ ವರದಿ ಸಲ್ಲಿಸದ ಸರ್ಕಾರ

 

ಪ್ರಧಾನಕಾರ್ಯದರ್ಶಿ ಫೆ.11ರಂದು ಬರೆದ ಪತ್ರದಲ್ಲೇನಿತ್ತು?

 

‘ಎದುರ್ಕುಳ ಈಶ್ವರ್‌ ಭಟ್‌ ಮತ್ತು ಇತರರು ರಾಜ್ಯ ಸರ್ಕಾರ ಹಾಗೂ ಇತರರು ಪ್ರಕರಣದಲ್ಲಿ 2017ರ ಮೇ 23ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ (ಕಂಇ 66 ಮುದಾಪ್ರ 2108, ದಿನಾಂಕ 23-05-2017) ಹೊರಡಿಸಿದ್ದ ಆದೇಶಕ್ಕೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯವು ತಡೆಯಾಜ್ಞೆ ನೀಡಿರುತ್ತದೆ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಸರ್ಕಾರದ ಅಡ್ವೋಕೇಟ್‌ ಜನರಲ್‌ರ ಮಾರ್ಗದರ್ಶನ ಮೂಲಕ ಸದರಿ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಸೂಚಿಸಿರುತ್ತಾರೆ.

 

ಅದರನ್ವಯ ಕ್ರಮ ಕೈಗೊಂಡು ಜರೂರಾಗಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ 2018ರ ಜುಲೈ 11ರಂದು ವರದಿ ಸಲ್ಲಿಸುವಂತೆ 2018ರ ಜುಲೈ 11ರಂದು ಪತ್ರದಲ್ಲಿ ಕೋರಲಾಗಿತ್ತು. ಅದರಂತೆ ಕೋರಲಾದ ಮಾಹಿತಿ ಇದುವರೆವಿಗೂ ಸ್ವೀಕೃತವಾಗಿರುವುದಿಲ್ಲ. ಆದ್ದರಿಂದ ಈ ಪ್ರಕರಣದಲ್ಲಿ ಕೈಗೊಂಡಿರುವ ಕ್ರಮದ ವರದಿಯನ್ನು ಜರೂರಾಗಿ ಸಲ್ಲಿಸಬೇಕು,’ ಎಂದು ನಿರ್ದೇಶಿಸಿರುವ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ 2022ರ ಫೆ.11ರಂದು ಪತ್ರ ಬರೆದಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts