ಪತ್ರಕರ್ತರಿಗೆ ಲಂಚ; ಸಿಎಂ ಸಚಿವಾಲಯದಲ್ಲಿಲ್ಲ ಪ್ರಜಾವಾಣಿ-ಡೆಕ್ಕನ್‌ ಹೆರಾಲ್ಡ್‌ ಪತ್ರ

ಬೆಂಗಳೂರು; ದೀಪಾವಳಿ ಉಡುಗೊರೆ ನೆಪದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಶಂಕರ ಪಾಗೋಜಿ ಎಂಬುವರು ಪತ್ರಕರ್ತರಿಗೆ ಲಕ್ಷಾಂತರ ರುಪಾಯಿಗಳ ನಗದನ್ನಿರಿಸಿ ನೀಡಿದ್ದಾರೆ ಎಂದು  ಆರೋಪಿಸಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ  ಡೆಕ್ಕನ್‌ ಹೆರಾಲ್ಡ್‌ ಮತ್ತು ಪ್ರಜಾವಾಣಿ ಸಂಸ್ಥೆಯು ಮುಖ್ಯಮಂತ್ರಿಗೆ ಬರೆದಿದೆ ಎನ್ನಲಾದ ಪತ್ರವೇ ಮುಖ್ಯಮಂತ್ರಿಯ ಸಚಿವಾಲಯದಲ್ಲಿ ಲಭ್ಯವಿಲ್ಲ ಎಂದು ಆರ್‌ಟಿಐ ಅಡಿಯಲ್ಲಿ ಮುಖ್ಯಮಂತ್ರಿಗಳ ಸಚಿವಾಲಯದ ಅಧೀನ ಕಾರ್ಯದರ್ಶಿ 2 ತಿಂಗಳ ನಂತರ ಲಿಖಿತ ಉತ್ತರ ಒದಗಿಸಿದ್ದಾರೆ.

 

ಲಕ್ಷಾಂತರ ರುಪಾಯಿ ನಗದನ್ನು ಒಳಗೊಂಡಿತ್ತು ಎನ್ನಲಾದ ದೀಪಾವಳಿ ಸಿಹಿತಿನಿಸು ಬಾಕ್ಸ್‌ ಮತ್ತು ನಗದು ಹಣವನ್ನು   ಹಿಂದಿರುಗಿಸಿ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿತ್ತು ಎಂದು ಪ್ರಜಾವಾಣಿಯ ಮುಖ್ಯ ವರದಿಗಾರ ವೈ ಗ ಜಗದೀಶ್‌ ಅವರು ಮಾಧ್ಯಮ ವಾಟ್ಸಾಪ್‌ ಗುಂಪೊಂದಕ್ಕೆ ಸ್ಪಷ್ಟೀಕರಣ ನೀಡಿದ್ದರು ಎಂದು ಕೇಳಿಬಂದಿತ್ತು.

 

ಸ್ಪಷ್ಟೀಕರಣದಲ್ಲಿ ಏನಿತ್ತು?

 

ದುಡ್ಡು ಕಳಿಸಿದ್ದು ಹೌದು. ಆದರೆ ದುಡ್ಡು ಎಷ್ಟಿತ್ತೆಂದು ನಾನು ನೋಡಿಲ್ಲ. ದುಡ್ಡಿರುವುದು ಗಮನಕ್ಕೆ ಬಂದಕೂಡಲೇ ತಲುಪಿಸಿದವರಿಗೆ ವಾಪಸ್‌ ಮಾಡಲಾಗಿದೆ. ಅದರ ಬಗ್ಗೆ ಸಿಇಒ ಕೇಳಿದ ನಂತರ ನಾನು ವಾಪಸ್‌ ಮಾಡಿದೆನೆಂಬುದು ನಿಜವಲ್ಲ. ಸಿಇಒ ಮತ್ತು ಸಂಪಾದಕರಿಗೆ ಎಲ್ಲ ಮಾಹಿತಿ ನೀಡಲಾಗಿದೆ. ಸಿಎಂಗೂ ಲಿಖಿತ ಪತ್ರ ಬರೆದು ಗಂಭೀರವಾಗಿ ಅಸಮಾಧಾನ ವ್ಯಕ್ತಪಡಿಸಲಾಗಿದೆ. ಅವರು ಸಾರಿ ಕೇಳಿಯೂ ಆಗಿದೆ ಎಂದು ವೈ ಗ ಜಗದೀಶ್‌ ಅವರು ಸ್ಪಷ್ಟೀಕರಣ ನೀಡಿದ್ದರು ಎಂದು ಮಾಧ್ಯಮ ವಾಟ್ಸಾಪ್‌ ಗ್ರೂಪ್‌ವೊಂದರಿಂದ ಗೊತ್ತಾಗಿತ್ತು.

 

ಈ ಸಂಬಂಧ ಮುಖ್ಯಮಂತ್ರಿಗೆ ಪ್ರಜಾವಾಣಿ-ಡೆಕ್ಕನ್‌ ಹೆರಾಲ್ಡ್‌ ಸಂಸ್ಥೆಯು ಬರೆದಿದೆ ಎನ್ನಲಾದ ಪತ್ರ ಕೋರಿದ್ದ   ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ 2022ರ ಅಕ್ಟೋಬರ್‌ 28 ರಂದೇ ಮುಖ್ಯಮಂತ್ರಿ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿತ್ತು.

 

ಈ ಅರ್ಜಿಗೆ 30 ದಿನದೊಳಗೆ ಉತ್ತರಿಸಬೇಕಿದ್ದ ಮುಖ್ಯಮಂತ್ರಿಗಳ ಸಚಿವಾಲಯವು ಗಡುವು ಮೀರಿದ್ದರೂ ಮಾಹಿತಿಯನ್ನು ಒದಗಿಸಿರಲಿಲ್ಲ.

ಪತ್ರಕರ್ತರಿಗೆ ಆಮಿಷ; ಸಿಎಂಗೆ ಬರೆದ ಪತ್ರವನ್ನು ಗಡುವು ಮೀರಿದರೂ ಒದಗಿಸದೇ ಮುಚ್ಚಿಟ್ಟ ಸಚಿವಾಲಯ

 

ಅಲ್ಲದೇ ಈ ಅರ್ಜಿಯನ್ನು  70 ದಿನಗಳವರೆಗೂ ತನ್ನ ಬಳಿಯೇ ಇರಿಸಿಕೊಂಡಿದ್ದ ಮುಖ್ಯಮಂತ್ರಿಗಳ ಸಚಿವಾಲಯವು ‘ ಉಲ್ಲೇಖೀತ ಮಾಹಿತಿ ಅರ್ಜಿಯನ್ನು ಪರಿಶೀಲಿಸಲಾಯಿತು. ತಾವು ಕೋರಿರುವ ಮಾಹಿತಿಯು ಮುಖ್ಯಮಂತ್ರಿಯವರ ಸಚಿವಾಲಯದಲ್ಲಿ ಲಭ್ಯವಿರುವುದಿಲ್ಲ,’ ಎಂದು  2023ರ ಜನವರಿ 10ರಂದು ಮಾಹಿತಿ ಒದಗಿಸಿದೆ.

 

ಪತ್ರಕರ್ತರಿಗೆ ಉಡುಗೊರೆ ನೀಡಲಾಗಿದೆ ಎಂಬ ಪ್ರಕರಣವನ್ನು ಜನಾಧಿಕಾರ ಸಂಘರ್ಷ ಪರಿಷತ್‌ ಲೋಕಾಯುಕ್ತ ಮೆಟ್ಟಿಲೇರಿಸಿತ್ತು. ಭ್ರಷ್ಟಾಚಾರ ನಿಗ್ರಹ ಕಾಯ್ದೆ (ತಿದ್ದುಪಡಿ) ಅಡಿಯಲ್ಲಿ ದೂರು ಸಲ್ಲಿಸಿತ್ತು. ಈ ದೂರನ್ನಾಧರಿಸಿ ಲೋಕಾಯುಕ್ತ ಪೊಲೀಸ್‌ ವಿಭಾಗವು ಇದುವರೆಗೂ ಯಾರ ವಿರುದ್ಧವೂ ಎಫ್‌ಐಆರ್‌ ದಾಖಲಿಸಿಲ್ಲ ಮತ್ತು ತನಿಖೆ  ಪ್ರಗತಿಯ ಮಾಹಿತಿಯೂ ಬಹಿರಂಗಗೊಂಡಿಲ್ಲ.

 

ಈ ಬೆಳವಣಿಗೆ ನಡುವೆ ಜನಾಧಿಕಾರ ಸಂಘರ್ಷ ಪರಿಷತ್‌, ನೈಜ ಹೋರಾಟಗಾರರ ವೇದಿಕೆ ಸೇರಿದಂತೆ ಇನ್ನಿತರೆ ಸಂಘಟನೆಗಳ ನಿಯೋಗವು ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್‌ ಸಂಸ್ಥೆಯ ಮುಖ್ಯಸ್ಥರನ್ನು ಎರಡು ಬಾರಿ ಭೇಟಿ ಮಾಡಿತ್ತು ಎಂದು ಗೊತ್ತಾಗಿದೆ. ಆದರೆ ಭೇಟಿಯ ವಿವರಗಳು ‘ದಿ ಫೈಲ್‌’ ಗೆ ಲಭ್ಯವಾಗಿಲ್ಲ. ಹಾಗೆಯೇ ಇದೇ ನಿಯೋಗವು ಲೋಕಾಯುಕ್ತ ಬಿ ಎಸ್‌ ಪಾಟೀಲ್‌, ಎಡಿಜಿಪಿಯನ್ನು ಭೇಟಿ ಮಾಡಿ ದೂರನ್ನಾಧರಿಸಿ ಎಫ್‌ಐಆರ್‌ ದಾಖಲಿಸಬೇಕು ಎಂದು ಒತ್ತಾಯಿಸುತ್ತಲೇ ಬಂದಿದೆ.

 

ಪ್ರಜಾವಾಣಿಯ ಮುಖ್ಯ ವರದಿಗಾರರೇ ಸಂಸ್ಥೆಯಿಂದ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದೆ ಎಂದು ಮಾಧ್ಯಮದ ವಾಟ್ಸಾಪ್‌ ಗ್ರೂಪ್‌ವೊಂದಕ್ಕೆ ಸ್ಪಷ್ಟೀಕರಣ ನೀಡಿದ್ದರೂ ಸಹ ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಯು ನಿಜವಾಗಿಯೂ ಮುಖ್ಯಮಂತ್ರಿಗೆ ಪತ್ರವನ್ನು ಬರೆದಿದ್ದರೇ ಹೆಮ್ಮೆಯಿಂದ ಅದನ್ನು ಬಹಿರಂಗಪಡಿಸಬೇಕಿತ್ತು.

 

ತನ್ನನ್ನು ತಾನು ವಿಶ್ವಾಸಾರ್ಹ ಎಂದು ಕರೆದುಕೊಳ್ಳುವ ಸಂಸ್ಥೆಯು ಪತ್ರ ಬರೆದಿದ್ದು ನಿಜವಾಗಿದ್ದರೂ ಆ ಪತ್ರವನ್ನು ತಮ್ಮ ಮುಖಪುಟದಲ್ಲಿ ಏಕೆ ಪ್ರಕಟಿಸಲಿಲ್ಲ ಎಂಬುದು  ಸರ್ಕಾರಿ ವಲಯ ಮತ್ತು ಮಾಧ್ಯಮ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಒಬ್ಬ ಮುಖ್ಯಮಂತ್ರಿಯನ್ನು ಪೇಚಿಗೆ ಸಿಕ್ಕಿಸುವ ಕೆಲಸ ಪತ್ರಕರ್ತರು ಮತ್ತು ಪತ್ರಿಕೆಗಳಿಗೆ ಹೊಸದಲ್ಲ. ಅದು ಅವರ ವೃತ್ತಿಧರ್ಮದ ಭಾಗವೇ ಆಗಿರುತ್ತದೆ.

 

ಜನಾಧಿಕಾರ ಸಂಘರ್ಷ ಪರಿಷತ್‌ ನೀಡಿದ್ದ ದೂರರ್ಜಿ ಸಂಬಂಧ ಶೀಘ್ರಗತಿಯಲ್ಲಿ ಕಾನೂನು ಸಲಹೆ ನೀಡಬೇಕು ಎಂದು ಲೋಕಾಯುಕ್ತ ಬಿ ಎಸ್‌ ಪಾಟೀಲ್‌ ಅವರು ಸಂಬಂಧಿಸಿದ ಅಧಿಕಾರಿಗೆ ನಿರ್ದೇಶನ ನೀಡಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts