ನಾರಾಯಣಪುರ ಎಡದಂಡೆ ಕಾಲುವೆ; ಯೋಜನಾ ಮೊತ್ತ ಪರಿಷ್ಕರಣೆಯಿಂದ ಬೊಕ್ಕಸಕ್ಕೆ 700 ಕೋಟಿ ಹೊರೆ

ಬೆಂಗಳೂರು; ನಾರಾಯಣಪುರ ಎಡದಂಡೆ ಕಾಲುವೆಯ ಆಧುನೀಕರಣ, ವಿಸ್ತರಣೆ, ನವೀಕರಣ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಂದಾಜಿಸಿದ್ದ ಯೋಜನಾ ಮೊತ್ತವನ್ನು ಪರಿಷ್ಕರಿಸಿರುವ ಪರಿಣಾಮ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಒಟ್ಟಾರೆ 700.15 ಕೋಟಿ ರು. ಆರ್ಥಿಕ ಹೊರೆಯಾಗಲಿದೆ.

 

ಸರ್ಕಾರದ ಅನುಮೋದನೆ ಪಡೆಯದಿರುವುದು ಮತ್ತು ನಿಯಮ ಉಲ್ಲಂಘಿಸಿ 465 ಕೋಟಿ ರು. ಮೊತ್ತದ ಕಾಮಗಾರಿಗಳಿಗೆ ಗುತ್ತಿಗೆ ನೀಡಿರುವುದು ಬಹಿರಂಗವಾದ ಬೆನ್ನಲ್ಲೇ ಬೊಕ್ಕಸಕ್ಕೆ 700 ಕೋಟಿಯಷ್ಟು ಆರ್ಥಿಕ ಹೊರೆಯಾಗಿದೆ ಎಂದು ಆರ್ಥಿಕ ಇಲಾಖೆಯು ಹೇಳಿರುವ ಅಂಶವು ಮುನ್ನೆಲೆಗೆ ಬಂದಿದೆ.
ಈ ಕುರಿತು ‘ದಿ ಫೈಲ್‌’ 500ಕ್ಕೂ ಹೆಚ್ಚು ಪುಟಗಳನ್ನೊಳಗೊಂಡಿರುವ ಸಮಗ್ರ ಕಡತವನ್ನು ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

 

ಈ ಹಿಂದೆ ಇದೇ ಪ್ರಸ್ತಾಪಿತ ಯೋಜನೆಗೆ ರಾಜ್ಯ ಸರ್ಕಾರದಿಂದ 4,233.98 ಕೋಟಿ ಮೊತ್ತದ ಪರಿಷ್ಕೃತ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿತ್ತು. ಇದರಲ್ಲಿ ಕೇಂದ್ರ ಸರ್ಕಾರದ ಪಾಲು 1,245.63 ಕೋಟಿ ರು ಮತ್ತು ರಾಜ್ಯದ ಪಾಲು 2,988.35 ಕೋಟಿ ರು.ಗಳಾಗಿತ್ತು. ನಂತರ ಮಾರ್ಗಸೂಚಿಗಳು ಪರಿಷ್ಕೃತಗೊಂಡ ನಂತರ ಕೇಂದ್ರ ಸರ್ಕಾರವು ತನ್ನ ಪಾಲನ್ನು 1,010.50 ಕೋಟಿ ರು.ಗಳಿಗೆ ಇಳಿಕೆ ಮಾಡಿತ್ತು. ಇದರಿಂದ ರಾಜ್ಯ ಸರ್ಕಾರಕ್ಕೆ ಒಟ್ಟಾರೆಯಾಗಿ 235.13 ಕೋಟಿಗಳಷ್ಟು ಹೆಚ್ಚುವರಿ ಹೊರೆಯಾಗಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಪ್ರಸ್ತಾಪಿತ ಯೋಜನೆಗೆ ಇಲ್ಲಿಯವರೆಗೂ 4,209.59 ಕೋಟಿಗಳಷ್ಟು ವೆಚ್ಚವಾಗಿರುತ್ತದೆ. ಇದರಲ್ಲಿ ಮಾರ್ಚ್‌ 2022ರವರೆಗೆ ಎಐಬಿಪಿ ಅಡಿಯಲ್ಲಿ 999.396 ಕೋಟಿ ರು., ಎಐಬಿಪಿಯೇತರ ಅಡಿಯಲ್ಲಿ 3,210.20 ಕೋಟಿ ರು. ವೆಚ್ಚವಾಗಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

‘ಪ್ರಸ್ತುತ ಕಾಮಗಾರಿಯ ಪರಿಷ್ಕೃತ ಅಂದಾಜು ಮೊತ್ತ 4,233.98 ಕೋಟಿಗಳಿಂದ 4,699.00 ಕೋಟಿಗಳಿಗೆ ಮರುಪರಿಷ್ಕರಣೆಗೊಂಡಿದ್ದು ಇದರಿಂದ 465 ಕೋಟಿಗಳಷ್ಟು ಹೆಚ್ಚುವರಿಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಮೊತ್ತ  235.13 ಕೋಟಿ (ಕಂಡಿಕೆ 4(3)ರಲ್ಲಿ ಇದ್ದಂತೆ) ಗಳನ್ನು ಒಳಗೊಂಡಂತೆ ಪ್ರಸ್ತಾಪಿತ ಯೋಜನೆಗೆ ಒಟ್ಟಾರೆ 700.15 ಕೋಟಿಗಳಷ್ಟು ರಾಜ್ಯ ಸರ್ಕಾರಕ್ಕೆ ಹೆಚ್ಚುವರಿ ಆರ್ಥಿಕ ಹೊರೆಯಾಗಲಿದೆ.

 

2,988.35 ಕೋಟಿ ಇದ್ದದ್ದು 700.15 ಕೋಟಿಗೆ ಏರಿರುವುದರಿಂದ ಪ್ರಸ್ತಾಪಿತ ಯೋಜನೆಗೆ ಒಟ್ಟಾರೆ ರಾಜ್ಯ ಸರ್ಕಾರದ ಪಾಲು 3,688.50 ಕೋಟಿಗಳಷ್ಟಾಗಲಿದೆ,’ ಎಂದು ಟಿಪ್ಪಣಿಯಲ್ಲಿ ವಿವರಿಸಲಾಗಿದೆ.

 

ಅನುಮೋದಿತ ಅಂದಾಜಿನಲ್ಲಿ ಇಂಡಿ ಶಾಖಾ ಕಾಲುವೆ 0.00 ಇಂದ 64 ಕಿ ಮೀ ವರೆಗಿನ ಸ್ಕಾಡಾ (SCADA-AUTOMATION) ಆಳವಡಿಸಲು ಅನುವು ಮಾಡಿಕೊಳ್ಳಲಾಗಿತ್ತು. ಆದರೆ ಪ್ರಸ್ತುತ ಇಂಡಿ ಶಾಖಾ ಕಾಲುವೆ 64 ಕಿ ಮೀ ನಿಂದ 172 ಕಿ ಮೀ ವರೆಗಿನ 2ನೇ ಹಂತದ ಸ್ಕಾಡಾ ಕಾಮಗಾರಿ ಕೈಗೊಳ್ಳಲಾಗಿದೆ. ಸ್ಕಾಡಾ ಆಟೋಮೇಷನ್‌ಗೆ ಅನುಮೋದಿತಗೊಂಡ ಅಂದಾಜಿನಲ್ಲಿ 3,352 ಸಂಖ್ಯೆಯ ಗೇಟುಗಳಿದ್ದು ಪ್ರಸ್ತುತ ಅಂದಾಜಿನಲ್ಲಿ 4,753 ಸಂಖ್ಯೆಯ ಗೇಟುಗಳನ್ನು ಅಳವಡಿಸಿಕೊಳ್ಳಲಾಗಿದೆ. ಇದರಿಂದ 1,401 ಸಂಖ್ಯೆಯ ಗೇಟುಗಳು ಹೆಚ್ಚಾಗಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಈ ಯೋಜನೆಗೆ 2019ರ ಮಾರ್ಚ್‌ವರೆಗೆ ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಮೊತ್ತ 635.86 ಕೋಟಿಗಳೆಂದು ನಮೂದಿಸಲಾಗಿತ್ತು. ಆದರೆ 2022ರ ಜೂನ್‌ 7ವರೆಗೆ 999.39 ಬಿಡುಗಡೆಯಾಗಿತ್ತು.

 

ಅಡಳಿತ ಇಲಾಖೆಯು ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದೇ, ಅರ್ಥಿಕ ಇಲಾಖೆಯ ಗಮನಕ್ಕೂ ತರದೇ ರೂ 465.00 ಕೋಟಿ ರು.ಗಳ ಕಾಮಗಾರಿಗಳಿಗೆ ಗುತ್ತಿಗೆ ನೀಡಿ ಕೈಗೆತ್ತಿಕೊಂಡಿರುವುದು ನಿಯಮಗಳ ಉಲ್ಲಂಘನೆಯಾಗಿದ್ದು ಈ ಸಂಬಂಧ ಸದರಿ ಪ್ರಕ್ರಿಯೆಯಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಆರ್ಥಿಕ ಇಲಾಖೆ ಸೂಚಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts