ವಿದ್ಯಾರ್ಥಿಗಳಿಗೆ ಕಳಪೆ, ತುಕ್ಕು, ಹಳೆಯ, ಗುಣಮಟ್ಟವಿಲ್ಲದ ಬೈಸಿಕಲ್‌; ಮೌಲ್ಯಮಾಪನ ವರದಿ ಬಹಿರಂಗ

ಬೆಂಗಳೂರು; ರಾಜ್ಯದಲ್ಲಿ 2006-07 ರಿಂದ 2017-18ನೇ ಸಾಲಿನವರೆಗೆ ಪ್ರೌಢಶಾಲೆ ಮಕ್ಕಳಿಗೆ ಉಚಿತ ಬೈಸಿಕಲ್‌ ಯೋಜನೆಯಡಿಯಲ್ಲಿ  ನೀಡಿದ್ದ ಬಹುತೇಕ ಬೈಸಿಕಲ್‌ಗಳು ಗುಣಮಟ್ಟದಿಂದ ಕೂಡಿರಲಿಲ್ಲ ಎಂಬುದನ್ನು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ಬಾಹ್ಯ ಸಂಸ್ಥೆ ಮೂಲಕ ನಡೆಸಿರುವ ಅಧ್ಯಯನ ವರದಿಯು ಬಹಿರಂಗಗೊಳಿಸಿದೆ.

ಶಾಲಾ ದಾಖಲಾತಿ, ಹಾಜರಾತಿ ಪ್ರಮಾಣ ಹೆಚ್ಚಿಸುವ ಮೂಲಕ ಕಲಿಕಾ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ  ಹಿಂದಿನ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರ ಅವಧಿಯಲ್ಲಿ ಉಚಿತ ಬೈಸಿಕಲ್ ಯೋಜನೆ ಜಾರಿಗೊಳಿಸಲಾಗಿತ್ತು. ಆ ನಂತರ ಬಂದ ಮುಖ್ಯಮಂತ್ರಿಗಳೂ ಈ ಯೋಜನೆಯನ್ನು ಮುಂದುವರೆಸಿದ್ದರು. ಆದರೆ ಆ ಅವಧಿಯಲ್ಲಿ ನೀಡಿದ್ದ ಬೈಸಿಕಲ್‌ಗಳು ಕಳಪೆಯಿಂದ ಕೂಡಿದ್ದವು.

 

ಶೂ, ಸಾಕ್ಸ್‌ ಮತ್ತು ಬೈಸಿಕಲ್ ನೀಡದ ಕುರಿತು ಪ್ರತಿಪಕ್ಷ ಕಾಂಗ್ರೆಸ್‌, ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಮುಗಿಬಿದ್ದಿರುವ ಹೊತ್ತಿನಲ್ಲಿಯೇ ಉಚಿತ ಬೈಸಿಕಲ್ ಯೋಜನೆಯ ಮತ್ತೊಂದು ಮುಖವನ್ನು  ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ  ವರದಿಯು  ಅನಾವರಣಗೊಳಿಸಿದೆ.

 

 

ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್‌ ಪೂರೈಕೆ ಯೋಜನೆ ಕುರಿತು ಗ್ರಾಸ್‌ರೂಟ್ಸ್‌ ರಿಸರ್ಚ್ ಅಂಡ್‌ ಅಡ್ವೊಕಸಿ ಮೂವ್‌ಮೆಂಟ್‌ ಸಂಸ್ಥೆಯ ಮೂಲಕ ನಡೆಸಿದ್ದ ಮೌಲ್ಯಮಾಪನ ವರದಿಯು 2021ರ ನವೆಂಬರ್‌ನಲ್ಲಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಈ ವರದಿಯನ್ನಾಧರಿಸಿ ಬೈಸಿಕಲ್‌ ಯೋಜನೆ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯು 2022ರ ಏಪ್ರಿಲ್‌ 19ರಂದೇ ತಿರಸ್ಕರಿಸಿದೆ. ಆದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉಚಿತ ಬೈಸಿಕಲ್‌ ನೀಡುವುದಾಗಿ ಹುಸಿ  ಭರವಸೆ ನೀಡಿದ್ದಾರೆ. ಈ ಕುರಿತು ‘ದಿ ಫೈಲ್‌’ 2022ರ ಮೇ 24ರಂದೇ ವರದಿ ಪ್ರಕಟಿಸಿತ್ತು.

ವಿದ್ಯಾರ್ಥಿಗಳಿಗೆ ಬೈಸಿಕಲ್‌; ಶಿಕ್ಷಣ ಇಲಾಖೆಯ ಪ್ರಸ್ತಾವನೆ ತಿರಸ್ಕರಿಸಿ, ಹುಸಿ ಭರವಸೆ ನೀಡಿದ ಮುಖ್ಯಮಂತ್ರಿ

 

ಬೈಸಿಕಲ್‌ಗಳ ಗುಣಮಟ್ಟ ಪರೀಕ್ಷೆಯಲ್ಲಿ ಹೊಸದಾಗಿ ಪಡೆದಿರುವ ಬೈಸಿಕಲ್‌ಗಳ ಭಾಗಗಳು ಇರಲಿಲ್ಲ. ಹೆಚ್ಚಿನ ವಿದ್ಯಾರ್ಥಿಗಳು ಬೈಸಿಕಲ್‌ನ್ನು ತಡವಾಗಿ ಸ್ವೀಕರಿಸಿದ್ದರು.  ಶೈಕ್ಷಣಿಕ ವರ್ಷದ ಮೊದಲ ಎರಡು ತಿಂಗಳಲ್ಲಿ(ಜೂನ್‌ ಅಥವಾ ಜುಲೈ) ಕೇವಲ ಶೇ. 13ರಷ್ಟು ಮಾತ್ರ ಬೈಸಿಕಲ್‌ನ್ನು ಸ್ವೀಕರಿಸಿದ್ದರು.  ಆಗಸ್ಟ್‌ನಲ್ಲಿ ಶೇ. 27ರಷ್ಟು ಬೈಸಿಕಲ್‌ ಪಡೆದಿದ್ದರು. ಶೈಕ್ಷಣಿಕ ವರ್ಷ ಪ್ರಾರಂಭವಾದ ಎರಡು ತಿಂಗಳ ನಂತರ ಉಳಿದವರು ಬೈಸಿಕಲ್‌ ಪಡೆದಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.

 

ವಿದ್ಯಾರ್ಥಿಗಳಿಗೆ ಒಂದು ವರ್ಷದ ಹಳೆಯ ಸೈಕಲ್‌ಗಳನ್ನು ನೀಡಿದ್ದರೇ ಬಹುತೇಕ ಸೈಕಲ್‌ಗಳು ಹಾನಿಗೊಳಗಾಗಿದ್ದವು. ಶೇ. 40ಕ್ಕಿಂತ ಹೆಚ್ಚು ಬಳಸಿದ ಸೈಕಲ್‌ಗಳಲ್ಲಿ ತುಕ್ಕು ಹಿಡಿದ ಚೌಕಟ್ಟು, ಹಾಳಾದ ಗೇರ್‌ಗಳು ಮತ್ತು ತುಕ್ಕು ಹಿಡಿದ ಪೋರ್ಕ್‌ನಂತಹ ನಿಯತಾಂಕಗಳಲ್ಲಿಯೇ ದೋಷಗಳನ್ನು ಹೊಂದಿದ್ದವು. ಬಳಸಿದ ಸೈಕಲ್‌ಗಳಲ್ಲಿ ತುಕ್ಕು ಹಿಡಿದ ಬ್ರೇಕ್‌ಗಳು ಮತ್ತು ಬೀಗಗಳು ಗುಣಮಟ್ಟದಲ್ಲಿನ ಸಾಮಾನ್ಯ ದೋಷಗಳಾಗಿವೆ ಎಂಬ ಸಂಗತಿಯನ್ನು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಯನ ವರದಿಯು ಹೊರಗೆಡವಿದೆ.

 

ಪ್ರಸ್ತುತ ಬೈಸಿಕಲ್‌ ಸಂಗ್ರಹಣೆ, ಬಿಡ್‌ ಮಾಡುವುದು ಅವುಗಳ ಮೌಲ್ಯಮಾಪನ ಮತ್ತು ಸರಬರಾಜುದಾರರ ಆಯ್ಕೆಗೆ ಸಂಬಂಧಿಸಿದಂತೆ ನಿಗದಿಗೊಳಿಸಿರುವ ದಿನಾಂಕಗಳು ವಿದ್ಯಾರ್ಥಿಗಳಿಗೆ ಸೈಕಲ್‌ಗಳ ಪೂರೈಕೆಗಳನ್ನು ಸಮಯೋಚಿತವಾಗಿ ಹಾಗೂ ಸಕಾಲಿಕವಾಗಿ ಖಚಿತಪಡಿಸಿಕೊಳ್ಳಲು ಅನುಕೂಲಕರವಾಗಿಲ್ಲ ಎಂಬುದು ಕಂಡುಬಂದಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

‘ಸರಬರಾಜುದಾರರಿಗೆ ವಿವಿಧ ಹಂತಗಳಲ್ಲಿ ಇತರ ಪ್ರಕ್ರಿಯೆಗಳನ್ನು ಒದಗಿಸಲು ಹಾಗೂ ಬೈಸಿಕಲ್‌ಗಳ ಜೋಡಣೆಗಳಲ್ಲಿ ಗುಣಮಟ್ಟದ ಪರಿಶೀಲನೆಯಂತಹ ಕಾರ್ಯವನ್ನು ಪೂರ್ಣಗೊಳಿಸಲು 90ರಿಂದ 120 ದಿನಗಳು ಬೇಕಾಗುತ್ತದೆ. ಅಲ್ಲದೆ ಅಧಿಕಾರಿಗಳು ಬೈಸಿಕಲ್‌ಗಳ ಬೇಡಿಕೆ ಪಟ್ಟಿಯನ್ನು ತಡವಾಗಿ ಸಲ್ಲಿಸುತ್ತಿದ್ದಾರೆ. ಇದು ಬೈಸಿಕಲ್‌ ವಿತರಣೆಯಲ್ಲಿನ ವಿಳಂಬವನ್ನು ಹೆಚ್ಚಿಸುತ್ತದೆ,’ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ಶೈಕ್ಷಣಿಕ ವರ್ಷದ ಮೊದಲ ತಿಂಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಪ್ರಾಂಶುಪಾಲರು ಇಂಡೆಂಟ್‌ ಸಲ್ಲಿಸುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆಯಲ್ಲದೆ ಉಳಿದವರು ಅದರ ಮುಂದಿನ ತಿಂಗಳುಗಳಲ್ಲಿ ಇಂಡೆಂಟ್‌ ನೀಡುತ್ತಾರೆ. ದಾಖಲಾತಿ ಅಥವಾ ಹಾಜರಾತಿಯ ಆಧಾರದ ಮೇಲೆ ಶೈಕ್ಷಣಿಕ ವರ್ಷದಲ್ಲಿ ಅಗತ್ಯವಿರುವ ಬೈಸಿಕಲ್‌ಗಳ ಬೇಡಿಕೆಯನ್ನು ನಿರ್ಧರಿಸಲು ಪ್ರಾಂಶುಪಾಲರು ವಿಳಂಬ ಮಾಡುತ್ತಿದ್ದಾರೆ ಎಂಬ ಅಂಶವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

ಬೈಸಿಕಲ್‌ಗಳ ಗುಣಮಟ್ಟದ ಪರೀಕ್ಷೆಗೆ ಪರೀಕ್ಷಾ ಭೌತಿಕ ಸೌಲಭ್ಯಗಳಿಲ್ಲ. ಅವುಗಳನ್ನು ಕಣ್ಣಿನಿಂದ ನೇರವಾಗಿ ನೋಡಿ ಪರಿಶೀಲನೆ ಮಾಡುವ ಆಧಾರದ ಮೇಲೆ ಗುಣಮಟ್ಟ ಪರಿಶೀಲನೆ ಮಾಡಲಾಗುತ್ತಿದೆ. ಬೈಸಿಕಲ್‌ ಸ್ವೀಕರಿಸಿದ ನಂತರ ವರ್ಷದಿಂದ ವರ್ಷಕ್ಕೆ ಗುಣಮಟ್ಟ ಹದಗೆಡುತ್ತದೆ. ಸ್ವೀಕರಿಸಿದ ಶೇ. 8ರಷ್ಟು ಸೈಕಲ್‌ಗಳು ಹಾನಿಗೊಳಗಾಗಿದ್ದರೆ, ಶೇ.24ರಷ್ಟು ಒಂದು ವರ್ಷದ ಹಳೆಯ ಸೈಕಲ್‌ ಗಳಾಗಿದ್ದವು. ನೇರ ವೀಕ್ಷಣೆ ಮೂಲಕ ಪರಿಶೀಲಿಸಿದಾಗ ಶೆ.33ರಷ್ಟು ಬೈಸಿಕಲ್‌ಗಳು ಎರಡು ವರ್ಷದ ಹಳೆಯದಾಗಿದ್ದವು ಮತ್ತು ಹಾನಿಗೊಳಗಾಗಿದ್ದವು.

 

‘ಪೋಷಕರ ಪ್ರಕಾರ ವಿದ್ಯಾರ್ಥಿಗಳು ಹತ್ತನೇ ತರಗತಿಯನ್ನು ತಲುಪುವ ಹೊತ್ತಿಗೆ ಸೈಕಲ್‌ಗಳು ನಿರುಪಯುಕ್ತಗಳಾಗುತ್ತವೆ. ಫಲಾನುಭವಿಗಳು ಮತ್ತು ಅವರ ಪೋಷಕರು ಹೊಸದಾಗಿ ಬೈಸಿಕಲ್‌ಗಳನ್ನು ಸ್ವೀಕರಿಸಿದ ನಂತರ ಸರಿಯಾಗಿ ಜೋಡಿಸದ ಬೈಸಿಕಲ್‌ಗಳನ್ನು ಮರು ಜೋಡಿಸಲು ನಂತರ ಬೈಸಿಕಲ್‌ ಗಳ ನಿರ್ವಹಣೆಗಾಗಿ ತಮ್ಮ ಕಡೆಯಿಂದ ಸಾಕಷ್ಟು ಸಂಪನ್ಮೂಲಗಣನ್ನು ಹೂಡಿಕೆ ಮಾಡಬೇಕಾಗುತ್ತದೆ,’ ಎಂದು ವರದಿಯಲ್ಲಿ ಹೇಳಲಾಗಿದೆ.

 

ಹೊಸ ಬೈಸಿಕಲ್‌ಗಳನ್ನು ಮರು ಜೋಡಿಸಲು 300ರಿಂದ 600 ರು.ಗಳವರೆಗೆ ಖರ್ಚು ಮಾಡಬೇಕಾಗಿದೆ. ಬೈಸಿಕಲ್‌ ನಿರ್ವಹಣೆಗಾಗಿ ಫಲಾನುಭವಿಗಳು ಸರಾಸರಿ 100 ರು. ಖರ್ಚು ಮಾಡುತ್ತಾರೆ. ಹೆಚ್ಚಿನ ಫಲಾನುಭವಿಗಳು ಬಿಪಿಎಲ್‌ ವಿಭಾಗಗಳಿಂದ ಬಂದವರಾಗಿರುವುದರಿಂದ ಇದು ಹೊರೆಯಾಗುತ್ತದೆ ಎಂಬುದನ್ನು ಅಧ್ಯಯನ ವರದಿಯು ಬಹಿರಂಗಗೊಳಿಸಿದೆ.

the fil favicon

SUPPORT THE FILE

Latest News

Related Posts