ಸ್ಯಾಂಟ್ರೋ ರವಿಗೆ ಕೊಠಡಿ ಹಂಚಿಕೆಯಾಗಿಲ್ಲ, ಸಿಸಿಟಿವಿ ಪರಿಶೀಲನೆಯೂ ನಡೆದಿಲ್ಲ; ಮುನ್ನೆಲೆಗೆ ಬಂದ ಪತ್ರ

ಬೆಂಗಳೂರು; ಸರ್ಕಾರಿ ಅತಿಥಿ ಗೃಹವಾದ ಕುಮಾರಕೃಪವೇ ಸ್ಯಾಂಟ್ರೋ ರವಿಯ ಹೆಡ್ಡಾಫೀಸ್ ಎಂದು ಪ್ರತಿಪಕ್ಷ ಕಾಂಗ್ರೆಸ್‌ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರು ಆರೋಪಿಸಿದ್ದರ ಬೆನ್ನಲ್ಲೇ ಸ್ಯಾಂಟ್ರೋ ರವಿಗೆ ಯಾವುದೇ ಕೊಠಡಿಗಳನ್ನು ಹಂಚಿಕೆ ಮಾಡಿರಲಿಲ್ಲ ಎಂದು ಹೊಸ ಕುಮಾರಕೃಪದ ವ್ಯವಸ್ಥಾಪಕ ಪತ್ರ ಬರೆದಿದ್ದಾರೆ.

 

ಯಾರ ಕೃಪೆಯಿಂದ ಆತನಿಗೆ ಕುಮಾರಕೃಪ ಸಿಕ್ಕಿದ್ದು, ಬೊಮ್ಮಾಯಿ ಕೃಪೆಯೇ, ಜ್ಞಾನೇಂದ್ರ ಕೃಪೆಯೇ ಎಂದು ಪ್ರತಿಪಕ್ಷ ಕಾಂಗ್ರೆಸ್‌ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರು ಪ್ರಶ್ನಿಸಿರುವ ಬೆನ್ನಲ್ಲೇ ಆತನಿಗೆ ಯಾವುದೇ ಕೊಠಡಿಯನ್ನೂ ಹಂಚಿಕೆ ಮಾಡಿಲ್ಲ ಎಂದು ಬರೆದಿರುವ ಪತ್ರವು ಮುನ್ನೆಲೆಗೆ ಬಂದಿದೆ.

 

ಹೊಸ ಕುಮಾರಕೃಪದ ವ್ಯವಸ್ಥಾಪಕರು ಸರ್ಕಾರಿ ಅತಿಥಿ ಗೃಹಗಳ ವಿಶೇಷಾಧಿಕಾರಿಗೆ 2023ರ ಜನವರಿ 19ರಂದು ಬರೆದಿರುವ ಪತ್ರವು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪತ್ರದಲ್ಲೇನಿದೆ?

 

ಹೊಸ ಕುಮಾರಕೃಪ ಅತಿಥಿ ಗೃಹಕ್ಕೆ ಕಳೆದ 1 ವರ್ಷದಲ್ಲಿ ಆಗಮಿಸಿರುವ ಅತಿಥಿಗಳ ಆಗಮನ ಮತ್ತು ನಿರ್ಗಮನದ ವಹಿಗಳನ್ನು ಪರಿಶೀಲಿಸಲಾಗಿದೆ. ಹೊಸ ಕುಮಾರಕೃಪ ಅತಿಥಿ ಗೃಹದಲ್ಲಿ ಮಂಜುನಾಥ ಅಲಿಯಾಸ್‌ ರವಿ, ಅಲಿಯಾಸ್‌ ಸ್ಯಾಂಟ್ರೋ ರವಿ ಅಲಿಯಾಸ್‌ ಕಿರಣ್‌ ಅಲಿಯಾಸ್‌ ಮಂಜ ಹೆಸರಿನಲ್ಲಿ ಯಾವುದೇ ರೀತಿಯಾಗಿ ಕೊಠಡಿಗಳನ್ನು ನೀಡಿರುವುದಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.

 

ಹಾಗೂ ಇಲ್ಲಿ ಅಳವಡಿಸಿರುವ ಸಿಸಿಟಿವಿಯು ತಮ್ಮ ಸುಪರ್ದಿಯಲ್ಲಲಿರುತ್ತದೆ. ಆದ್ದರಿಂದ ಒಂದು ತಂಡವನ್ನು ರಚಿಸಿ ಸಿಸಿಟಿವಿ ಪರಿಶೀಲನೆ ಕಾರ್ಯಕೈಗೊಳ್ಳಲು ಹಾಗೂ ಪ್ರತಿದಿನದ ಚಲನವಲನಗಳನ್ನು ಗಮನಿಸಲು ತಮ್ಮ ಇಲಾಖೆಯ ವತಿಯಿಂದ ಒಬ್ಬರು ಅಧಿಕಾರಿಯನ್ನು ಮತ್ತು ನಿಗಮದ ವತಿಯಿಂದ 3 ಜನ ಸಿಬ್ಬಂದಿಗಳನ್ನು ನಿಯೋಜಿಸಲು ಅನುಮತಿ ನೀಡಬೇಕು ಎಂದು ಹೊಸ ಕುಮಾರಕೃಪ ಅತಿಥಿಗೃಹದ ವ್ಯವಸ್ಥಾಪಕರು ಸರ್ಕಾರದ ಅತಿಥಿ ಗೃಹಗಳ ವಿಶೇಷಾಧಿಕಾರಿಗೆ ಬರೆದಿರುವ ಪತ್ರದಲ್ಲಿ ಕೋರಿದ್ದಾರೆ.

 

ಮಂಜುನಾಥ ಅಲಿಯಾಸ್‌ ರವಿ, ಅಲಿಯಾಸ್‌ ಸ್ಯಾಂಟ್ರೋ ರವಿ ಅಲಿಯಾಸ್‌ ಕಿರಣ್‌ ಅಲಿಯಾಸ್‌ ಮಂಜ ಎಂಬಾತ ಇತ್ತೀಚಿನ ದಿನಗಳವರೆಗೆ ಕುಮಾರಕೃಪ ಅತಿಥಿ ಗೃಹದಲ್ಲಿ ಕುಳಿತು ವರ್ಗಾವಣೆ ಹಾಗೂ ಮತ್ತಿತರ ಚಟುವಟಿಕೆಗಳಿಂದ ಕೋಟ್ಯಂತರ ರುಪಾಯಿ ವ್ಯವಹಾರ ನಡೆಸಿದ್ದಾರೆ. ಆತನಿಗೆ ಅಲ್ಲಿ ಕೊಠಡಿ ನೀಡಿದವರು ಯಾರು, ಅದಕ್ಕೆ ಶಿಫಾರಸ್ಸು ಮಾಡಿದ್ದವರು ಯಾರು ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದರು.

 

 

ಈ ಕುರಿತು ಸರ್ಕಾರಿ ಅತಿಥಿಗೃಹಗಳ ವಿಶೇಷಾಧಿಕಾರಿಗಳು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮದ ಉಸ್ತುವಾರಿಯಲ್ಲಿರುವ ಹೊಸ ಕುಮಾರಕೃಪದ ವ್ಯವಸ್ಥಾಪಕರಿಗೆ ವರದಿ ಕೇಳಿದ್ದರು. ಅಲ್ಲದೇ ಕೊಠಡಿಯನ್ನು ಅಥವಾ ಸ್ಥಳಾವಕಾಶ ಒದಗಿಸಿದವರ ವಿವರ, ಶಿಫಾರಸ್ಸು ಮಾಡಿದವರ ವಿವರಗಳನ್ನು ದಿನಾಂಕವಾರು ದೃಢೀಕೃತ ಮಾಹಿತಿ ಮತ್ತು ಸಿಸಿಟಿವಿಗಳ ತುಣುಕುಗಳ ಸಮೇತ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಗೆ ಸಲ್ಲಿಸಬೇಕು ಎಂದು ಸೂಚಿಸಿದ್ದರು.

 

ಬಿಜೆಪಿಯ ಎಲ್ಲಾ ಸಚಿವರೂ ವೇಶ್ಯಾವಾಟಿಕೆ ದಂಧೆ, ವರ್ಗಾವಣೆ ದಂಧೆಯ ಸ್ಯಾಂಟ್ರೋ ರವಿಯೊಂದಿಗೆ ಅತ್ಯಾಪ್ತ ಸಂಬಂಧ ಹೊಂದಿದ್ದಾರೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿತ್ತು. ಈ ಸಂಬಂಧ ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಸ್ಯಾಂಟ್ರೋ ರವಿ ಅವರ ಜೊತೆಗೆ ಅನೇಕ ಸಚಿವರು ಇರುವ ಫೋಟೋಗಳನ್ನು ಹಂಚಿಕೊಂಡಿತ್ತು.

 

ಹೊಸ ಕುಮಾರಕೃಪ ಅತಿಥಿ ಗೃಹದಲ್ಲಿ ಅನಧಿಕೃತ ವ್ಯಕ್ತಿಗಳು ತಂಗುತ್ತಿದ್ದರು ಮತ್ತು ಅಲ್ಲಿನ ಚಟುವಟಿಕೆಗಳಿಗೆ ಯಾವುದೇ ಲಂಗುಲಗಾಮು ಇರಲಿಲ್ಲ ಎಂದು ‘ದಿ ಫೈಲ್‌’ 2023ರ ಜನವರಿ 11ರಂದು ವರದಿ ಪ್ರಕಟಿಸಿತ್ತು.

ಹೊಸ ಕುಮಾರಕೃಪ; ಲಂಗುಲಗಾಮಿಲ್ಲ, ಸಿಸಿಟಿವಿ ಬಳಸುವ ತಂತ್ರಜ್ಞರಿಲ್ಲ, ಅತಿಥಿಗಳಲ್ಲದವರದ್ದೇ ದರ್ಬಾರು

2022ರ ಫೆಬ್ರುವರಿ ತಿಂಗಳಲ್ಲಿ ಹೊಸ ಕುಮಾರಕೃಪಾ ಅತಿಥಿ ಗೃಹದಲ್ಲಿ ಇಂತಹ ಅನುಮಾನಸ್ಪದ ಚಟುವಟಿಕೆಗಳು ನಡೆದಿದ್ದವು. ಅಲ್ಲಿನ ಸಿಬ್ಬಂದಿಯು ಹೊಸ ಕುಮಾರಕೃಪಾವನ್ನು ಹೇಗೆಲ್ಲಾ ದುರುಪಯೋಗಪಡಿಸಿಕೊಂಡಿದ್ದರು ಎಂಬ ಸ್ಫೋಟಕ ಮಾಹಿತಿಯನ್ನು ‘ದಿ ಫೈಲ್‌’ ದಾಖಲೆ ಸಹಿತ ಇದೀಗ ಆ ಎಲ್ಲಾ ಅನುಮಾನಸ್ಪದ ಚಟುವಟಿಕೆಗಳನ್ನು ಹೊರಗೆಡವಿತ್ತು.

‘ಮೀಟಿಂಗ್‌ ಹಾಲ್‌’ಗೆ ಪುರುಷ ಅಪರಿಚಿತರನ್ನು ಒಳಗೆ ಬಿಟ್ಟು ಮಹಿಳಾ ಸಿಬ್ಬಂದಿಯಿಂದಲೇ ಬೀಗ; ವರದಿ

 

ಹೊಸ ಕುಮಾರಕೃಪ ಅತಿಥಿ ಗೃಹದ ‘ಮೀಟಿಂಗ್‌ ಹಾಲ್‌ಗಳಿಗೆ ಮೂವರು ಪುರುಷ ಅಪರಿಚಿತರನ್ನು ಒಳಗೆ ಬಿಟ್ಟು ಮಹಿಳಾ ಸಿಬ್ಬಂದಿಗಳು ಬೀಗ ಹಾಕುತ್ತಿದ್ದರು. ಅವರಿಗೆ ಒಬ್ಬ ವೈಟರ್‌ ಜ್ಯೂಸ್‌ ಮತ್ತು ಮಹಿಳಾ ಸಿಬ್ಬಂದಿ ಜತೆ ಖಾಲಿ ಗ್ಲಾಸ್‌ನ್ನು ತೆಗೆದುಕೊಂಡು ಹೋಗಿದ್ದರು. ಹಾಗೆಯೇ ಮಹಿಳಾ ಸಿಬ್ಬಂದಿ ಅಪರಿಚಿತ ವ್ಯಕ್ತಿಗಳೊಂದಿಗೆ ತೆಗೆದುಕೊಂಡ ಹೋಗಿದ್ದ ಬ್ಯಾಗ್‌ನ್ನು ಕೈಯಲ್ಲಿ ಹಿಡಿದು ಬರುತ್ತಿದ್ದರು,’ ಎಂಬುದು ಸಹ ಬಹಿರಂಗವಾಗಿತ್ತು.

the fil favicon

SUPPORT THE FILE

Latest News

Related Posts