ಗಡಿವಿವಾದ; ರಾಜ್ಯದ ಪರ ಹಾಜರಾಗುವ ಕಾನೂನು ತಜ್ಞರ ತಂಡಕ್ಕೆ ಪ್ರತಿದಿನ 59.90 ಲಕ್ಷ ರು ಶುಲ್ಕ ನಿಗದಿ

ಬೆಂಗಳೂರು; ಕರ್ನಾಟಕ ಮತ್ತು ಮಹಾರಾಷ್ಟ್ರದ ಮಧ್ಯೆ ಕಿಡಿ ಹೊತ್ತಿಸಿ ಸಂಘರ್ಷಕ್ಕೆ ಕಾರಣವಾಗುತ್ತಿರುವ ಗಡಿ ವಿವಾದ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿರುವ ಅಸಲುದಾವೆ ಸಂಬಂಧ ರಾಜ್ಯದ ಪರವಾಗಿ ಪ್ರತಿನಿಧಿಸಲು  ದೇಶದ ಅಟಾರ್ನಿ ಜನರಲ್‌ ಆಗಿದ್ದ ಮುಕುಲ್‌ ರೋಹಟಗಿ, ರಾಜ್ಯದ ಅಡ್ವೋಕೇಟ್‌ ಜನರಲ್‌ ಸೇರಿದಂತೆ ಮತ್ತಿತರರನ್ನೊಳಗೊಂಡ  ಕಾನೂನು ತಜ್ಞರ ತಂಡಕ್ಕೆ  ದಿನವೊಂದಕ್ಕೆ  59.90 ಲಕ್ಷ ರು.ಗಳ ವೃತ್ತಿ ಶುಲ್ಕವನ್ನು ರಾಜ್ಯ ಸರ್ಕಾರವು ನಿಗದಿಗೊಳಿಸಿದೆ.

 

ಈ ಕುರಿತು ಕಾನೂನು ಇಲಾಖೆಯು  2023ರ ಜನವರಿ 18ರಂದು  (NO.LAW 319 LSP 2022 BENGALURU, DATED 18.01.2023) ಆದೇಶ ಹೊರಡಿಸಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ದೇಶದ ಅಟಾರ್ನಿ ಜನರಲ್‌ ಆಗಿದ್ದ ಮುಕುಲ್‌ ರೋಹಟಗಿ, ಹಿರಿಯ ವಕೀಲ ಶ್ಯಾಮ್‌ ದಿವಾನ್‌, ರಾಜ್ಯದ ಅಡ್ವೋಕೇಟ್‌ ಜನರಲ್‌, ರಾಜ್ಯದ ಹಿರಿಯ ವಕೀಲ ಉದಯ ಹೊಳ್ಳ, ಮಾರುತಿ ಬಿ ಝಿರಲಿ, ವಿ ಎನ್‌ ರಘುಪತಿ ಅವರನ್ನೊಳಗೊಂಡ ಕಾನೂನು ತಜ್ಞರ ತಂಡವನ್ನು ರಾಜ್ಯ ಸರ್ಕಾರವು ರಚಿಸಿರುವುದು ಆದೇಶದಿಂದ ಗೊತ್ತಾಗಿದೆ.

 

ಹಿಜಾಬ್‌ ಪ್ರಕರಣದಲ್ಲಿಯೂ ದೇಶದ ಸಾಲಿಸಿಟರ್‌ ಜನರಲ್‌ ಮತ್ತು ಅಡಿಷನಲ್‌ ಸಾಲಿಸಿಟರ್‌ ಜನರಲ್‌ ಅವರಿಗೆ 88 ಲಕ್ಷ ರು.ಗಳ ವೃತ್ತಿ ಶುಲ್ಕ ಭರಿಸಲು ಶಿಕ್ಷಣ ಇಲಾಖೆಯು ಪ್ರಸ್ತಾಪ ಸಲ್ಲಿಸಿದ್ದರ ಬೆನ್ನಲ್ಲೇ ಗಡಿ ವಿವಾದದ ಕುರಿತು ಅಸಲುದಾವೆ (O.S.NO 4/2004) ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕಾನೂನು ತಜ್ಞರ ತಂಡಕ್ಕೆ ದಿನವೊಂದಕ್ಕೆ  59.90 ಲಕ್ಷ ರು. ವೃತ್ತಿಪರ ಶುಲ್ಕ ನಿಗದಿಗೊಳಿಸಿ ಕಾನೂನು ಇಲಾಖೆ ಹೊರಡಿಸಿರುವ ಆದೇಶವು ಮುನ್ನೆಲೆಗೆ ಬಂದಿದೆ.

 

ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯದ ಪರವಾಗಿ ಪ್ರತಿನಿಧಿಸುವ ಮುಕುಲ್‌ ರೋಹಟಗಿ ಅವರಿಗೆ 22,00,000 ರು. ಮತ್ತು ಪ್ರಕರಣದ ಕುರಿತು ಕಾನ್ಫ್‌ರೆನ್ಸ್‌ ಮತ್ತಿತರ ಕೆಲಸಗಳಿಗೆ 5,50,000 ರು. ಸೇರಿ  ದಿನವೊಂದಕ್ಕೆ  ಒಟ್ಟು 27 ಲಕ್ಷ ರು.ಗಳನ್ನು  ಭರಿಸಲಿರುವುದು ಆದೇಶದಿಂದ ತಿಳಿದು ಬಂದಿದೆ.

 

ಶ್ಯಾಮ್‌ ದಿವಾನ್‌ ಅವರಿಗೆ ಪ್ರತಿ ವಿಚಾರಣೆಗೆ 6,00,000 ರು., ಕಾನ್ಫರೆನ್ಸ್‌ ಮತ್ತಿತರ ಕೆಲಸಗಳೀಗೆ 1,50,000 ರು., ನವ ದೆಹಲಿ ಹೊರತುಪಡಿಸಿ ಹೊರಸ್ಥಳಗಳ ಭೇಟಿಗೆ 10,00,000 ರು. ಸೇರಿ ಒಂದು ದಿನಕ್ಕೆ 17.50 ಲಕ್ಷ ರು. ರಾಜ್ಯದ ಅಡ್ವೋಕೇಟ್‌ ಜನರಲ್‌ ಅವರಿಗೆ 3,00,000 ರು., ಕಾನ್ಫರೆನ್ಸ್‌ ಇನ್ನಿತರೆ ಕೆಲಸಗಳಿಗೆ 1,25,000 ರು., ಬೆಂಗಳೂರು ಹೊರತುಪಡಿಸಿ ಹೊರ ಸ್ಥಳಕ್ಕೆ ಭೇಟಿಗಾಗಿ 2,00,000 ರು. ಸೇರಿದಂತೆ ದಿನವೊಂದಕ್ಕೆ 6.25 ಲಕ್ಷ ರು., ಮತ್ತೊಬ್ಬ ಹಿರಿಯ ವಕೀಲ ಉದಯ ಹೊಳ್ಳ ಅವರಿಗೆ 2,00,000 ರು., ಕಾನ್ಫ್‌ರೆನ್ಸ್‌ ಇನ್ನಿತರೆ ಕೆಲಸಗಳಿಗಾಗಿ 75,000, ಪ್ಲೀಡಿಂಗ್‌ ಮತ್ತಿತರ ವಿಚಾರಗಳಿಗೆ 1,50,000, ಹೊಸ ದೆಹಲಿ ಹೊರತುಪಡಿಸಿ ಹೊರಸ್ಥಳ ಭೇಟಿಗಾಗಿ 1,50,000 ರು ಸೇರಿ ದಿನವೊಂದಕ್ಕೆ 5.75 ಲಕ್ಷ ರು. ವೃತ್ತಿ ಶುಲ್ಕ ನಿಗದಿಪಡಿಸಿರುವುದು ಆದೇಶದಿಂದ ತಿಳಿದು ಬಂದಿದೆ.

 

ಅದೇ ರೀತಿ ಮಾರುತಿ ಬಿ ಝಿರಲಿ ಅವರಿಗೆ 1,00,000, ಕಾನ್ಫ್‌ರೆನ್ಸ್‌ ಇನ್ನಿತರೆ ಕೆಲಸಗಳಿಗಾಗಿ 60,000 ರು., ಹೊಸದೆಹಲಿ ಹೊರತುಪಡಿಸಿ ಹೊರಸ್ಥಳ ಭೇಟಿಗಾಗಿ 50,000 ರು ಸೇರಿ ದಿನವೊಂದಕ್ಕೆ ಒಟ್ಟು 2.10 ಲಕ್ಷ ರು. , ವಕೀಲ ವಿ ಎನ್‌ ರಘುಪತಿ ಅವರಿಗೆ 35,000, ಕಾನ್ಫ್‌ರೆನ್ಸ್‌ ಇನ್ನಿತರೆ ಕೆಲಸಗಳಿಗಾಗಿ 15,000, ಹೊಸ ದೆಹಲಿ ಹೊರತುಪಡಿಸಿ ಹೊರಸ್ಥಳ ಭೇಟಿಗಾಗಿ 30,000 ರು. ಸೇರಿ ದಿನವೊಂದಕ್ಕೆ 80,000 ರು. ಪಾವತಿಸಲು ಕಾನೂನು ಇಲಾಖೆ ಆದೇಶ ಹೊರಡಿಸಿದೆ.

 

ಅಕ್ಕಲಕೋಟೆ, ಜತ್ತ, ಸೊಲ್ಲಾಪುರ ಮಹಾರಾಷ್ಟ್ರದಲ್ಲೇ ಉಳಿದು ಹೋದವು. ಬೆಳಗಾವಿ ಜಿಲ್ಲೆ, ಬೀದರ್, ಕಾರವಾರ ಜಿಲ್ಲೆಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ವಾದವನ್ನು ಮಹಾರಾಷ್ಟ್ರ ಮುಂದಿಟ್ಟಿದೆ. ಗಡಿ ವಿವಾದ ಬಗೆಹರಿಸುವ ಸಂಬಂಧ ಹಲವು ಸಮಿತಿಗಳನ್ನು ರಚಿಸಲಾಗಿದೆಯಾದರೂ ಇದುವರೆಗೂ ಗಡಿ ಸಮಸ್ಯೆ ತಾರ್ಕಿಕ ಅಂತ್ಯಕ್ಕೆ ಮುಟ್ಟಿಲ್ಲ. ಹೀಗಾಗಿ ಕರ್ನಾಟಕ–ಮಹಾರಾಷ್ಟ್ರ ನಡುವಿನ ಗಡಿ ವಿವಾದವು ಬೂದಿಮುಚ್ಚಿದ ಕೆಂಡದಂತಾಗಿದೆ.

 

2004ರಲ್ಲಿ ಮಹಾರಾಷ್ಟ್ರ ಸರ್ಕಾರವು ‘ಬೆಳಗಾವಿ ಸೇರಿದಂತೆ ಕನ್ನಡ ಮಾತನಾಡುವ 814 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಹಸ್ತಾಂತರಿಸಬೇಕು’ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅಸಲುದಾವೆಯನ್ನು ಸಲ್ಲಿಸಿತ್ತು. ಆ ವೇಳೆ ಕರ್ನಾಟಕ ಮುಖ್ಯಮಂತ್ರಿಯಾಗಿದ್ದ ಎಸ್ ಎಂ ಕೃಷ್ಣ ಅವರು, ಎಚ್ ಬಿ ದಾತಾರ್ ಅವರ ಅಧ್ಯಕ್ಷತೆಯಲ್ಲಿ ಸಲಹಾ ಸಮಿತಿ ರಚಿಸಿದ್ದರು.

 

ಗಡಿ ವಿವಾದ ಕೋರ್ಟ್‌ನಲ್ಲಿ ವಿಚಾರಣೆಗೆ ಬಂದಾಗಲೆಲ್ಲಾ ದಾತಾರ್ ಸಮಿತಿ ಸಲಹೆ ನೀಡುತ್ತಿತ್ತು. 2009ರಲ್ಲಿ ದಾತಾರ್ ನಿಧನರಾದಾಗ ರಾಜ್ಯ ಕಾನೂನು ಆಯೋಗದ ಅಧ್ಯಕ್ಷರಾಗಿದ್ದ ನ್ಯಾಯಮೂರ್ತಿ ವಿ ಎಸ್ ಮಳಿಮಠ ಅವರಿಗೆ ಸಲಹಾ ಸಮಿತಿಯ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿತ್ತು. ಎರಡು ತಿಂಗಳ ಬಳಿಕ, ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಾಮಕೃಷ್ಣ ಅವರನ್ನು ಸಲಹಾ ಸಮಿತಿ ಅಧ್ಯಕ್ಷರಾಗಿ ಸರ್ಕಾರ ನೇಮಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts