‘ಮೀಟಿಂಗ್‌ ಹಾಲ್‌’ಗೆ ಪುರುಷ ಅಪರಿಚಿತರನ್ನು ಒಳಗೆ ಬಿಟ್ಟು ಮಹಿಳಾ ಸಿಬ್ಬಂದಿಯಿಂದಲೇ ಬೀಗ; ವರದಿ

ಬೆಂಗಳೂರು; ಹೊಸ ಕುಮಾರಕೃಪ ಅತಿಥಿ ಗೃಹದ ‘ಮೀಟಿಂಗ್‌ ಹಾಲ್‌ಗಳಿಗೆ ಮೂವರು ಪುರುಷ ಅಪರಿಚಿತರನ್ನು ಒಳಗೆ ಬಿಟ್ಟು ಮಹಿಳಾ ಸಿಬ್ಬಂದಿಗಳು ಗಂಟೆಗಟ್ಟಲೇ  ಬೀಗ ಹಾಕುತ್ತಿದ್ದರು. ಅವರಿಗೆ ಒಬ್ಬ ವೈಟರ್‌ ಜ್ಯೂಸ್‌ ಮತ್ತು ಮಹಿಳಾ ಸಿಬ್ಬಂದಿ ಜತೆ ಖಾಲಿ ಗ್ಲಾಸ್‌ನ್ನು ತೆಗೆದುಕೊಂಡು ಹೋಗುತ್ತಿದ್ದರು.  ಹಾಗೆಯೇ ಮಹಿಳಾ ಸಿಬ್ಬಂದಿ ಅಪರಿಚಿತ ವ್ಯಕ್ತಿಗಳೊಂದಿಗೆ ತೆಗೆದುಕೊಂಡ ಹೋಗಿದ್ದ ಬ್ಯಾಗ್‌ನ್ನು ಕೈಯಲ್ಲಿ ಹಿಡಿದು ಬರುತ್ತಿದ್ದರು,’

 

2022ರ ಫೆಬ್ರುವರಿ ತಿಂಗಳಲ್ಲಿ ಹೊಸ ಕುಮಾರಕೃಪಾ ಅತಿಥಿ ಗೃಹದಲ್ಲಿ ಇಂತಹ ಅನುಮಾನಸ್ಪದ ಚಟುವಟಿಕೆಗಳು ನಡೆದಿದ್ದವು. ಅಲ್ಲಿನ ಸಿಬ್ಬಂದಿಯು ಹೊಸ ಕುಮಾರಕೃಪಾವನ್ನು ಹೇಗೆಲ್ಲಾ ದುರುಪಯೋಗಪಡಿಸಿಕೊಂಡಿದ್ದರು ಎಂಬ ಸ್ಫೋಟಕ ಮಾಹಿತಿಯನ್ನು ‘ದಿ ಫೈಲ್‌’ ದಾಖಲೆ ಸಹಿತ ಇದೀಗ ಆ ಎಲ್ಲಾ ಅನುಮಾನಸ್ಪದ ಚಟುವಟಿಕೆಗಳನ್ನು ಹೊರಗೆಡವುತ್ತಿದೆ.

 

ಹೊಸ ಕುಮಾರಕೃಪದೊಂದಿಗೆ ತಳಕು ಹಾಕಿಕೊಂಡಿರುವ ಸ್ಯಾಂಟ್ರೋ ರವಿ ಪ್ರಕರಣವು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಎಬ್ಬಿಸಿರುವ ಬೆನ್ನಲ್ಲೇ ಹೊಸ ಕುಮಾರಕೃಪದ ಮೀಟಿಂಗ್‌ ಹಾಲ್‌ನಲ್ಲಿ ನಡೆದಿದೆ ಎನ್ನಲಾಗಿರುವ ಅನುಮಾನಸ್ಪದ ಚಟುವಟಿಕೆಗಳು ಇಡೀ ಪ್ರಕರಣವನ್ನು ಮತ್ತೊಂದು ಮಗ್ಗುಲಿಗೆ ಹೊರಳಿಸಿದೆ.

 

ಹೊಸ ಕುಮಾರಕೃಪ ಮೀಟಿಂಗ್‌ ಹಾಲ್‌ಗೆ ಅಪರಿಚಿತರ ಪ್ರವೇಶ ಮತ್ತು ಜ್ಯೂಸ್‌ ಸೇರಿದಂತೆ ವಿವಿಧ ಪದಾರ್ಥಗಳನ್ನು ಸರಬರಾಜು ಮಾಡಿರುವುದು ಮತ್ತು ಅಪರಿಚಿತರನ್ನು ಮೀಟಿಂಗ್‌ ಹಾಲ್‌ನ ಒಳಗೆ ಬಿಟ್ಟು ಬೀಗ ಹಾಕಿರುವುದು ಮತ್ತು Anti-Chamberನ ಬೀಗ ಹಾಕದೇ ಇರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ. ಅನಧಿಕೃತವಾಗಿ ಅಪರಿಚಿತರು ಮೀಟಿಂಗ್‌ ಹಾಲ್‌ ಪ್ರವೇಶಿಸಿರುವುದನ್ನು ರಾಜ್ಯ ಆತಿಥ್ಯ ಸಂಸ್ಥೆಯ ತಪಾಸಣೆ ತಂಡವು ಸಿಸಿಟಿವಿ ದೃಶ್ಯಾವಳಿಗಳ ಸಮೇತ ಹೊಸ ಕುಮಾರಕೃಪದಲ್ಲಿ ಅನಧಿಕೃತ ಚಟುವಟಿಕೆಗಳನ್ನು ಕಾಲಾನುಕ್ರಮದ ಮೂಲಕ ಬಹಿರಂಗಪಡಿಸಿದೆ.

 

ಈ ಕುರಿತು ಸಲ್ಲಿಕೆಯಾಗಿರುವ ತಪಾಸಣೆ ವರದಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ತಪಾಸಣೆ ವರದಿಯನ್ನು ಪರಿಶೀಲಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ರಾಜ್ಯ ಶಿಷ್ಟಾಚಾರ) ಪದನಿಮಿತ್ತ ಉಪ ಕಾರ್ಯದರ್ಶಿಗಳು ಹೊಸ ಕುಮಾರಕೃಪ ಅತಿಥಿ ಗೃಹದ ಸಿಬ್ಬಂದಿಗಳ ನಡವಳಿಕೆಯನ್ನು ಅನುಮಾನಸ್ಪದವಾಗಿದೆ ಎಂದು ಅಭಿಪ್ರಾಯಿಸಿದ್ದಾರೆ. ಈ ಕುರಿತು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ 2022ರ ಫೆಬ್ರುವರಿ 21ರಂದು ಪತ್ರ ಬರೆದಿದ್ದಾರೆ. ಇದೇ ಪತ್ರದಲ್ಲಿಯೇ 2022ರ ಫೆಬ್ರುವರಿ 16ರಂದು ನಡೆದಿದ್ದ ತಪಾಸಣೆ ವಿವರಣೆಗಳನ್ನೂ ಒದಗಿಸಿರುವುದು ತಿಳಿದು ಬಂದಿದೆ.

 

ತಪಾಸಣೆ ತಂಡವು 2022ರ ಫೆ.16ರಂದು ಮಧ್ಯಾಹ್ನ ಸುಮಾರು 03.15ಕ್ಕೆ ಹೊಸ ಕುಮಾರಕೃಪ ಅತಿಥಿ ಗೃಹಕ್ಕೆ ಭೇಟಿ ನೀಡಿ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ವೀಕ್ಷಣೆ ಮಾಡಿತ್ತು. ಈ ವೇಳೆಯಲ್ಲಿ ಮಹಿಳಾ ಸಿಬ್ಬಂದಿಗಳು ಮೀಟಿಂಗ್‌ ಹಾಲ್‌-(2)ಗೆ ಮೂರು ಜನ ಅಪರಿಚಿತರನ್ನು ಒಳಗೆ ಬಿಟ್ಟು ಬೀಗ ಹಾಕಿರುವುದು ಸೇರಿದಂತೆ ಇನ್ನಿತರೆ ಚಟುವಟಿಕೆಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

 

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳಲ್ಲೇನಿದೆ?

 

12.;47; ಹೊಸ ಕುಮಾರಕೃಪ ಅತಿಥಿ ಗೃಹದ ಇಬ್ಬರು ಮಹಿಳಾ ಸಿಬ್ಬಂದಿಗಳು ಮೀಟಿಂಗ್ ಹಾಲ್‌-2ರ Anti-Chamber ತೆಗೆದಿರುತ್ತಾರೆ.

 

12.48; ಹೊಸ ಕುಮಾರ ಕೃಪ ಅತಿಥಿ ಗೃಹದ ಇಬ್ಬರು ಮಹಿಳಾ ಸಿಬ್ಬಂದಿಗಳು ಮೀಟಿಂಗ್‌ ಹಾಲ್‌-2ರ ಬೀಗ ತೆಗೆದಿರುತ್ತಾರೆ.

 

12.48; ಹೊಸ ಕುಮಾರಕೃಪ ಅತಿಥಿ ಗೃಹದ ಇಬ್ಬರು ಮಹಿಳಾ ಸಿಬ್ಬಂದಿಗಳು ಮೂರು ಜನ ಪುರುಷ ಅಪರಿಚಿತರನ್ನು ಮೀಟಿಂಗ್‌ ಹಾಲ್‌-2ನ ಒಳಗೆ ಕರೆದುಕೊಂಡು ಹೋಗಿರುತ್ತಾರೆ.

 

12.49; ಆ ಇಬ್ಬರು ಮಹಿಳಾ ಸಿಬ್ಬಂದಿಗಳು ಮೂರು ಜನರನ್ನು ಮೀಟಿಂಗ್‌ ಹಾಲ್‌-2ನ ಒಳಗೇ ಬಿಟ್ಟು ಬೀಗ ಹಾಕಿರುತ್ತಾರೆ. ಆದರೆ Anti-Chamber ನ ಬೀಗ ಹಾಕಿರುವುದಿಲ್ಲ.

 

13.12; ಇನ್ನು ಒಬ್ಬ ಪುರುಷ, ಅಪರಿಚಿತ ವ್ಯಕ್ತಿ Anti-Chamber ನ ಒಳಗೆ ಹೋಗಿರುತ್ತಾರೆ.

 

ರಾಜ್ಯ ಆತಿಥ್ಯ ಸಂಸ್ಥೆಯ ನಿರ್ದೇಶಕರು ಬರೆದಿರುವ ಪತ್ರ

 

13.13; ಹೊಸ ಕುಮಾರಕೃಪ ಅತಿಥಿ ಗೃಹದ ಮತ್ತೊಬ್ಬ ಮಹಿಳಾ ಸಿಬ್ಬಂದಿ ಒಂದು ಬ್ಯಾಗ್‌ನ್ನು ಕೈಯಲ್ಲಿ ಹಿಡಿದು Anti-Chamber ನ ಒಳಗೆ ಹೋಗಿ ಬರೀ ಕೈಯಲ್ಲಿ ವಾಪಸ್ಸಾಗಿರುತ್ತಾರೆ.

 

13;17; ಹೊಸ ಕುಮಾರಕೃಪ ಅತಿಥಿ ಗೃಹದ ಒಬ್ಬ ವೈಟರ್‌ Anti-Chamber ನ ಒಳಗೆ ಜ್ಯೂಸ್‌ ತೆಗೆದುಕೊಂಡು ಹೋಗಿ ವಾಪಸ್‌ ಬಂದಿರುತ್ತಾರೆ.

 

13.31; ಅದೇ ವೈಟರ್‌ Anti-Chamber ನ ಒಳಗೆ ಹೋಗಿ ವಾಪಸ್‌ ಬಂದಿರುತ್ತಾರೆ.

 

13.52; ಆ ಮೂರನೇ ಮಹಿಳಾ ಸಿಬ್ಬಂದಿ ಮತ್ತೊಬ್ಬ ವೈಟರ್‌ ಜೊತೆ ನಾಲ್ಕು ಖಾಲಿ ಗ್ಲಾಸ್‌ನ್ನು Anti-Chamber ಒಳಗೆ ತೆಗೆದುಕೊಂಡು ಹೋಗಿ ಬರೀ ಕೈಯಲ್ಲಿ ವಾಪಸ್‌ ಬಂದಿರುತ್ತಾರೆ.

 

14;21; ಆ ಮೂರನೇ ಮಹಿಳಾ ಸಿಬ್ಬಂದಿ Anti-Chamberನ ಒಳಗೆ ಹೋಗಿ 14.30ಕ್ಕೆ ವಾಪಾಸ್ಸಾಗಿರುತ್ತಾರೆ.

 

14.30; ಆ ಮೂರನೇ ಮಹಿಳಾ ಸಿಬ್ಬಂದಿ ಮತ್ತೊಬ್ಬ ವೈಟರ್‌ ಜೊತೆ ನೀರಿನ ಜಗ್‌ನ್ನು Anti-Chamber ಒಳಗೆ ಹೋಗಿ ಬರಿ ಕೈಯಲ್ಲಿ ವಾಪಸ್‌ ಬಂದಿರುತ್ತಾರೆ.

 

14.36; ಆ ಮೂರನೇ ಮಹಿಳಾ ಸಿಬ್ಬಂದಿAnti-Chamber ನ ಒಳಗೆ ಹೋಗಿ ನಾಲ್ಕು ಜನ ಪುರುಷ ಅಪರಿಚಿತ ವ್ಯಕ್ತಿಗಳೊಂದಿಗೆ ಮುಂಚೆ ತೆಗೆದುಕೊಂಡು ಹೋಗಿದ್ದ ಬ್ಯಾಗ್‌ನ್ನು ಕೈಯಲ್ಲಿ ಹಿಡಿದುಕೊಂಡು ಹೊರಬಂದಿರುತ್ತಾರೆ.

 

14;38; ನಾಲ್ಕು ಜನ ಪುರುಷ ಅಪರಿಚಿತ ವ್ಯಕ್ತಿಗಳು ಕೆಎಸ್‌ಟಿಡಿಸಿಯ ಹಿರಿಯ ವ್ಯವಸ್ಥಾಪಕರ ಕೊಠಡಿಗೆ ತೆರಳಿ ವಿವಿಐಪಿ ಡೈನಿಂಗ್‌ ಹಾಲ್‌ಗೆ ಹೋಗುತ್ತಾರೆ. ಹಾಗೂ ಅಲ್ಲೇ ಆ ವ್ಯಕ್ತಿಗಳಿಗೆ ರೆಸ್ಟೋರೆಂಟ್‌ನಿಂದ ಊಟ ಸರಬರಾಜು ಮಾಡಲಾಗಿರುತ್ತದೆ.

 

15.12; ಆ ನಾಲ್ಕು ಜನ ಪುರುಷ ಅಪರಿಚಿತ ವ್ಯಕ್ತಿಗಳು ವಿವಿಐಪಿ ಡೈನಿಂಗ್‌ ಹಾಲ್‌ನಿಂದ ಹೊರಟು ಕೆಎಸ್‌ಟಿಡಿಸಿಯ ಹಿರಿಯ ವ್ಯವಸ್ಥಾಪಕರ ಕೊಠಡಿಗೆ ತೆರಳಿರುತ್ತಾರೆ.

 

15.28; ಆ ನಾಲ್ಕು ಜನ ಪುರುಷ ಅಪರಿಚಿತ ವ್ಯಕ್ತಿಗಳು ಕೆಎಸ್‌ಟಿಡಿಸಿಯ ಹಿರಿಯ ವ್ಯವಸ್ಥಾಪಕರ ಕೊಠಡಿಯಿಂದ ಹೊರಬಂದಿರುತ್ತಾರೆ. ಮತ್ತು ಅದರಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಸಾಯಂಕಾಲದವರೆಗೆ ಹೊಸ ಕುಮಾರಕೃಪ ಅತಿಥಿ ಗೃಹದ ಕಟ್ಟಡದಲ್ಲಿ ಮತ್ತು ಲೈಬ್ರೆರಿಯಲ್ಲಿ ಓಡಾಡುತ್ತಿರುತ್ತಾರೆ.

 

ಈ ಎಲ್ಲಾ ಪ್ರಕ್ರಿಯೆಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ರಾಜ್ಯ ಶಿಷ್ಟಾಚಾರ) ಪದನಿಮಿತ್ತ ಉಪ ಕಾರ್ಯದರ್ಶಿಯು ಪರಿಶೀಲಿಸಿ ಎರಡು ಮುಖ್ಯವಾದ ಅಂಶಗಳತ್ತ ಗಮನ ಸೆಳೆದಿದ್ದರು. ಅದನ್ನು ಈ ಕೆಳಗಿನಂತೆ ಕೊಡಲಾಗಿದೆ.

 

1. ಒಂದು ವೇಳೆ ಮೀಟಿಂಗ್‌ ಹಾಲ್‌ ತೋರಿಸಲು ಮೇಲಿನ ಪ್ರಕ್ರಿಯೆಗಳು ನಡೆದಿದ್ದರೆ ಸುಮಾರು ಎರಡು ಗಂಟೆಗಳ ಕಾಲ ಮೇಲಿನ ಪ್ರಕ್ರಿಯೆ ನಡೆದಿರುವುದು ಸರಿಯಾದ ಕ್ರಮವಾಗಿರುವುದಿಲ್ಲ.

2. ಮೀಟಿಂಗ್‌ ಹಾಲ್‌ ಒಳಗೆ ಪದಾರ್ಥಗಳನ್ನು ಸರಬರಾಜು ಮಾಡಿರುವುದು ಸರಿಯಾದ ಕ್ರಮವಾಗಿರುವುದಿಲ್ಲ.

 

‘ಈ ರೀತಿ ಮೀಟಿಂಗ್‌ ಹಾಲ್‌ನ ಕೊಠಡಿ ಹಾಗೂ Anti-Chamber ನ ಬೀಗ ತೆರೆದು ಅಪರಿಚಿತ ವ್ಯಕ್ತಿಗಳನ್ನು ಒಳಗೆ ಬಿಟ್ಟು ನಂತರ ಮೀಟಿಂಗ್‌ ಹಾಲ್‌ನ ಬೀಗ ಹಾಕಿ Anti-Chamber ಬೀಗ ಹಾಕದೇ ಹೊಸ ಕುಮಾರಕೃಪ ಅತಿಥಿ ಗೃಹದ ಸಿಬ್ಬಂದಿಗಳು ಮೀಟಿಂಗ್‌ ಹಾಲ್‌ ಒಳಗೆ ಪದಾರ್ಥಗಳನ್ನು ಸರಬರಾಜು ಮಾಡಿರುವುದು ಅನುಮಾನಸ್ಪದವಾಗಿದ್ದು ಮೀಟಿಂಗ್‌ ಹಾಲ್ ಮತ್ತು Anti-Chamber ನ ದುರುಪಯೋಗ ಮಾಡಿಕೊಂಡಿರುವುದು ಸ್ಪಷ್ಟವಾಗಿ ಕಂಡು ಬಂದಿರುತ್ತೆ,’ ಎಂದು ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.

 

ಅದೇ ರೀತಿ ಇಂತಹ ಪ್ರಕ್ರಿಯೆಗಳು ‘ರಾಜ್ಯ ಆತಿಥ್ಯ ಸಂಸ್ಥೆಯ ಮತ್ತುಕೆಎಸ್‌ಟಿಡಿಸಿಯ ಘನತೆಗೆ ಭಾರೀ ಧಕ್ಕೆ ತರುವ ಕೆಲಸವಾಗಿರುತ್ತದೆ. ಹಾಗೂ ಇದು ಸಿಆಸುಇ (ರಾ.ಶಿ) ಇಲಾಖೆ ಮತ್ತು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ನಡುವೆ ಆಗಿರುವ ಒಡಂಬಡಿಕೆಯ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ,’ ಎಂದೂ ಉಲ್ಲೇಖಿಸಿದ್ದಾರೆ.

 

ಈ ಘಟನೆಗಳನ್ನು ಅತೀ ಗಂಭೀರವಾಗಿ ಪರಿಗಣಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ರಾಜ್ಯ ಶಿಷ್ಟಾಚಾರ) ಪದನಿಮಿತ್ತ ಉಪ ಕಾರ್ಯದರ್ಶಿಯು ಈ ಸಂಬಂಧ ತನಿಖೆ ಮಾಡಿ ಸಂಬಂಧಪಟ್ಟ ಸಿಬ್ಬಂದಿಗಳ ಮೇಲೆ ತುರ್ತಾಗಿ ಶಿಸ್ತು ಕ್ರಮ ಜರುಗಿಸಿ ವರದಿ ನೀಡಬೇಕು ಎಂದು 2022ರ ಡಿಸೆಂಬರ್‌ 21ರಂದೇ ಸೂಚಿಸಿರುವುದು ಗೊತ್ತಾಗಿದೆ.

 

ಹೊಸ ಕುಮಾರಕೃಪ ಅತಿಥಿ ಗೃಹ ಆರಂಭವಾಗಿ 3 ವರ್ಷವಾದರೂ  ಮೇಲ್ವಿಚಾರಣೆ ಹೊತ್ತಿರುವ ಪ್ರವಾಸೋದ್ಯಮ ಅಭಿವೃದ್ದಿ ನಿಗಮವು  ಸಿಸಿಟಿವಿಗಳನ್ನು ಸದುಪಯೋಗಪಡಿಸಿಕೊಂಡಿಲ್ಲ,  ಸಿಬ್ಬಂದಿಗಳನ್ನೂ ನಿಯೋಜಿಸಿಲ್ಲ. ಹೀಗಾಗಿ ಹೊಸ ಕುಮಾರಕೃಪ ಅತಿಥಿ ಗೃಹಕ್ಕೆ ಇತರೆ ಸಾರ್ವಜನಿಕರು ಸುಲಭವಾಗಿ ಪ್ರವೇಶಿಸುತ್ತಾರಲ್ಲದೇ ಅತಿಥಿಗಳಲ್ಲದವರೂ ಜಮಾಯಿಸಿ ಗುಂಪುಗೂಡುತ್ತಿದ್ದಾರೆ ಎಂದು ಕಳೆದ ಎರಡು ದಿನದ ಹಿಂದೆಯೇ ರಾಜ್ಯ ಆತಿಥ್ಯ ಸಂಸ್ಥೆಯ ನಿರ್ದೇಶಕರು ಪತ್ರ ಬರೆದಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts