ಸಿಇಟಿ ಅಕ್ರಮ; ಕೆಳ ಹಂತದ ಅಧಿಕಾರಿಗಳಿಗೆ ವಿಚಾರಣೆ, ಕೆಎಎಸ್‌ ಅಧಿಕಾರಿಗೆ ದಂಡನೆ

ಬೆಂಗಳೂರು: 2013ನೇ ಸಾಲಿನ ಸಿಇಟಿ ಮತ್ತು ವೃತ್ತಿಪರ ಕೋರ್ಸ್‌ಗಳಿಗೆ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆಸಿರುವ ಆರೋಪಕ್ಕೆ ಗುರಿಯಾಗಿದ್ದ ತಳಹಂತದ ಅಧಿಕಾರಿಗಳ ವಿರುದ್ಧ ವಿಚಾರಣೆಯನ್ನು ಸಿಐಡಿಗೆ ವಹಿಸಿರುವ ರಾಜ್ಯ ಸರ್ಕಾರವು ಇದೇ ಪ್ರಕರಣದಲ್ಲಿ ಆರೋಪಕ್ಕೆ ಗುರಿಯಾಗಿ ಅಮಾನತುಗೊಂಡಿದ್ದ ಹಿರಿಯ ಕೆಎಎಸ್‌ ಅಧಿಕಾರಿ ಎಸ್‌ ಪಿ ಕುಲಕರ್ಣಿ ಅವರಿಗೆ ಕೇವಲ ದಂಡನೆಯನ್ನು ವಿಧಿಸಿ ಕೈತೊಳೆದುಕೊಂಡಿರುವುದು ಇದೀಗ ಬಹಿರಂಗವಾಗಿದೆ.

 

ವೈದ್ಯಕೀಯ, ಎಂಜಿನಿಯರಿಂಗ್‌ ಸೀಟು ಹಂಚಿಕೆಯಲ್ಲಿ ಅಕ್ರಮ ಎಸಗಿರುವ ಆರೋಪಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಎಸ್‌ ಪಿ ಕುಲಕರ್ಣಿ ಅವರನ್ನು ಸರ್ಕಾರ ಅಮಾನತುಗೊಳಿಸಿ ಆದೇಶಿಸಿತ್ತು. ಆದರೀಗ ಅವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಅವರ ವೇತನ ಶ್ರೇಣಿಯನ್ನಷ್ಟೇ ಕೆಳಗಿನ ಹಂತಕ್ಕೆ ಇಳಿಸಿದೆ.

 

ಈ ಸಂಬಂಧ ವಿಧಾನಪರಿಷತ್‌ ಅಧಿವೇಶನದಲ್ಲಿ ಸದಸ್ಯ ಡಾ ಕೆ ಗೋವಿಂದರಾಜ್‌ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರ ಒದಗಿಸಿದ್ದಾರೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ವಿಧಾನಪರಿಷತ್‌ ಸದಸ್ಯ ಗೋವಿಂದರಾಜ್‌ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿರುವ ಉತ್ತರದ ಪ್ರತಿ

 

2013–14ನೇ ಸಾಲಿನಲ್ಲಿ ನಡೆದ ಈ ಹಗರಣ­ವನ್ನು ಸಿಐಡಿ ತನಿಖೆಗೆ ವಹಿಸಲಾಗುವುದು ಎಂದು ಹಿಂದಿನ ಮುಖ್ಯ ಕಾರ್ಯದರ್ಶಿ ಕೌಶಿಕ್‌ ಮುಖರ್ಜಿ ನಿರ್ಧಾರ ಪ್ರಕಟಿಸಿದ್ದರು.  ಅವ್ಯವಹಾರ  ಸಾಬೀತಾದ ಬಳಿಕ ಕುಲಕರ್ಣಿ ಅವರನ್ನು  ರಜೆ ಮೇಲೆ ಕಳುಹಿಸಿ, ಷೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿತ್ತು. ಅಲ್ಲದೆ ಈ ಅಕ್ರಮಗಳು ನಡೆದಿರುವ ಸಂಬಂಧ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಡಾ. ರಾಮೇಗೌಡ ಅವರು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ  ರಜನೀಶ್‌ ಗೋಯಲ್‌ ಅವರಿಗೆ ವಿವರವಾದ ವರದಿ ನೀಡಿದ್ದರು. ಇದಾದ ನಂತರ ಗೋಯಲ್‌ ಅವರು ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಸಿಐಡಿ ತನಿಖೆಗೆ ಶಿಫಾರಸು ಮಾಡಿದ್ದನ್ನು ಸ್ಮರಿಸಬಹುದು.

 

ಪ್ರಕರಣದ ವಿವರ

 

ನಗರ ಪ್ರದೇಶದ ವಿದ್ಯಾರ್ಥಿನಿಯೊಬ್ಬಳಿಗೆ ಗ್ರಾಮೀಣ  ಕೋಟಾದಡಿ ಸೀಟು ನೀಡಿರುವ ವಿಷಯ ಗೊತ್ತಾಗುತ್ತಿದ್ದಂತೆಯೇ ವರದಿ ನೀಡಲು ಸರ್ಕಾರವು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಸೂಚನೆ ನೀಡಿತ್ತು. ದಾಖಲೆಗಳನ್ನು ಪರಿಶೀಲಿಸಿದಾಗ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮೀಸಲಾದ ಸೀಟು­ಗಳನ್ನು ವಾಮ ಮಾರ್ಗದ ಮೂಲಕ ನಗರ ಪ್ರದೇ­ಶದ ವಿದ್ಯಾರ್ಥಿಗಳಿಗೆ ನೀಡಿದ್ದ  70 ಪ್ರಕರಣಗಳು ಬೆಳಕಿಗೆ ಬಂದಿದ್ದವು.

 

ವಿದ್ಯಾರ್ಥಿಗಳು ನೀಡಿರುವ ಮೂಲ ದಾಖಲೆಗಳನ್ನು ಒಮ್ಮೆ ಪರಿಶೀಲಿಸಿದ ನಂತರ ಮೀಸಲಾತಿಯ ಪ್ರವರ್ಗ ಬದಲಾವಣೆ ಮಾಡಲು ಅವಕಾಶ ಇಲ್ಲ. ಆದರೆ, ನಿಯಮಗಳನ್ನು ಗಾಳಿಗೆ ತೂರಿ ಕೊನೆ ಕ್ಷಣದಲ್ಲಿ ಮೀಸಲಾತಿಯ ಪ್ರವರ್ಗಗಳನ್ನು ಬದಲಾಯಿಸಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು.

 

ಮೂಲ ಪ್ರಮಾಣಪತ್ರಗಳನ್ನು ನೀಡಿದ್ದ ತಹಸೀಲ್ದಾರ್‌, ಪ್ರವರ್ಗ ಹಾಗೂ ಮೀಸಲಾತಿ ಬದಲಾವಣೆ ಮಾಡಿಸಿಕೊಂಡು ಸೀಟು ಪಡೆದಿರುವ ವಿದ್ಯಾರ್ಥಿಗಳಿಗೆ ನೋಟಿಸ್‌ ಜಾರಿ ಮಾಡಲಾಗಿತ್ತು.  ಮೂಲದಾಖಲೆಗಳನ್ನು ಪರಿಶೀಲಿಸಿದ ನಂತರ ಪ್ರವರ್ಗ ಬದಲಾವಣೆ ಮಾಡುವುದು ವೃತ್ತಿಪರ ಕೋರ್ಸ್‌ಗಳ ಪ್ರವೇಶ ಕಾಯ್ದೆಯ ಉಲ್ಲಂಘನೆ ಆಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

 

ಪಿಯು ನಿವೃತ್ತ ಉಪ ನಿರ್ದೇಶಕಿ ವಿರುದ್ಧ ವಿಚಾರಣೆ

 

ಸುಳ್ಳು ಜಾತಿ ಮತ್ತು ಸುಳ್ಳು ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರಗಳನ್ನು ಪಡೆದು ಮೆಡಿಕಲ್‌, ಇಂಜಿನಿಯರಿಂಗ್‌, ಔಷಧ ವಿಜ್ಞಾನದಲ್ಲಿ ಸರ್ಕಾರಿ ಸೀಟು ನೀಡಿ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯವೆಸಗಿ ವಂಚನೆ ಮಾಡಿದ್ದ ಪ್ರಕರಣದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕಿ ಸಿ ಎಸ್‌ ಗೀತಾದೇವಿ ಅವರನ್ನು ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಲು ಸರ್ಕಾರವು ಸಿಐಡಿಗೆ ಅನುಮತಿ ನೀಡಿತ್ತು.

 

ಅರ್ಹ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಗಿರುವ ವಂಚನೆ ಕುರಿತು ಸಿಐಡಿ ಘಟಕವು ಕಳೆದ 7 ವರ್ಷದಿಂದಲೂ ತನಿಖೆ ನಡೆಸುತ್ತಿದೆಯಾದರೂ ಆರೋಪ ಸಾಬೀತಾಗಿರುವ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಲು ಸರ್ಕಾರವು ತ್ವರಿತಗತಿಯಲ್ಲಿ ಅನುಮತಿ ನೀಡುತ್ತಿಲ್ಲ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿದ್ದ ಎಸ್‌ ಸುರೇಶ್‌ಕುಮಾರ್‌ ಅವಧಿಯಲ್ಲಿ ವಿಚಾರಣೆಗೆ ಅನುಮತಿ ಕೋರಿ ಸಿಐಡಿ ಪತ್ರ ಬರೆದಿತ್ತಾದರೂ ವರ್ಷದಿಂದಲೂ ಅನುಮತಿ ದೊರೆತಿರಲಿಲ್ಲ. ಬಿ ಸಿ ನಾಗೇಶ್‌ ಅವರು ಇಲಾಖೆಗೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಾಲ್ಕೈದು ತಿಂಗಳ ಅನುಮತಿ ದೊರೆತಿತ್ತು.

 

ಸಿ ಎಸ್‌ ಗೀತಾದೇವಿ ಅವರ ಪ್ರಕರಣದಲ್ಲಿಯೂ ನ್ಯಾಯಾಲಯದಲ್ಲಿ ವಿಚಾರಣೆಗೆ ಅನುಮತಿ ಕೋರಿ ಸಿಐಡಿ ಘಟಕವು ಸಲ್ಲಿಸಿದ್ದ ಕೋರಿಕೆಗೆ ಒಂದು ವರ್ಷದ ಬಳಿಕ ಅನುಮತಿ ನೀಡಿದೆ. ಅನುಮತಿ ನೀಡಿರುವುದಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಆದೇಶ ಹೊರಡಿಸಲಿದೆ. ಈ ಸಂಬಂಧ ಕರಡು ಆದೇಶದ ಪ್ರತಿ ಮತ್ತು ನಡವಳಿಗಳನ್ನಾಧರಿಸಿ ‘ ದಿ ಫೈಲ್‌’ ವರದಿ ಪ್ರಕಟಿಸಿತ್ತು.

 

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆದೇಶದ ಉಲ್ಲಂಘನೆ ಮಾಡಿ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿ ಇಲಾಖೆಗೆ ವಂಚನೆ ಮಾಡಿರುವ ಕುರಿತಂತೆ ನ್ಯಾಯಾಲಯದಲ್ಲಿ ಅಭಿಯೋಜನೆಗೊಳಪಡಿಸಲು ಅಭಿಯೋಜನಾ ಮಂಜೂರಾತಿ ನೀಡಬೇಕು ಎಂದು ಸಿಐಡಿಯ ಪೊಲೀಸ್‌ ಮಹಾನಿರ್ದೇಶಕರು (ಆರ್ಥಿಕ ಅಪರಾಧ, ವಿಶೇಷ ಘಟಕಗಳು) 2021ರ ಜನವರಿ 28ರಂದು ಪದವಿಪೂರ್ವ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದರು.

 

ಪ್ರಕರಣದ ವಿವರ

 

ವೈದ್ಯಕೀಯ, ಇಂಜಿನಿಯರಿಂಗ್‌, ಔಷಧ ವಿಜ್ಞಾನ ಪ್ರವೇಶಕ್ಕೆ ಸಿಇಟಿ ಮೂಲಕ ಸರ್ಕಾರಿ ಸೀಟು ಹಂಚಿಕೆ ಪ್ರಕ್ರಿಯೆಯ ಭಾಗವಾಗಿ ದಾಖಲೆಗಳ ಪರಿಶೀಲನೆಗೆ 2013ರ ಜೂನ್‌ 23ರಂದು ಅಂತಿಮ ದಿನಾಂಕವೆಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಗೊತ್ತುಪಡಿಸಿತ್ತು. ಪ್ರಾಧಿಕಾರದ ಈ ಆದೇಶವನ್ನು ಉಲ್ಲಂಘಿಸಿ ವಿಶೇಷ ದಿನಾಂಕವನ್ನು ಗೊತ್ತುಪಡಿಸಲಾಗಿತ್ತಲ್ಲದೆ ಒಟ್ಟು 26 ಅಭ್ಯರ್ಥಿಗಳಿಂದ ಸುಳ್ಳು ಜಾತಿ ಪ್ರಮಾಣ ಪತ್ರ ಮತ್ತು ಸುಳ್ಳು ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರಗಳನ್ನು ಪಡೆದು ಮೆಡಿಕಲ್‌, ಇಂಜಿನಿಯರಿಂಗ್‌, ಔಷಧ ವಿಜ್ಞಾನ ಸೀಟು ಪಡೆಯಲು ಅವಕಾಶ ಮಾಡಿಕೊಟ್ಟಿದ್ದರು.

 

ಇದರಿಂದಾಗಿ ಪ್ರತಿಭಾವಂತ ಮತ್ತುಅರ್ಹ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆಯಲ್ಲದೆ ಇಲಾಖೆಗೂ ವಂಚನೆ ಆಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಎಸ್‌ ಎನ್‌ ಗಂಗಾಧರಯ್ಯ ಅವರು ಮಲ್ಲೇಶ್ವರಂ ಪೊಲಿಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಕುರಿತಂತೆ ಪ್ರಾಧಿಕಾರದ ಅಂದಿನ ಆಡಳಿತಾಧಿಕಾರಿ ಪಿ ಕುಲಕರ್ಣಿ ಮತ್ತಿತರರ ವಿರುದ್ಧ ಐಪಿಸಿ ಕಲಂ 468, 471, 119, 182, 420, 34 ಅಡಿ ಇದೇ ಠಾಣೆಯಲ್ಲಿ 2014ರ ಜುಲೈ 16ರಂದು ಸಲ್ಲಿಸಿದ್ದ ದೂರಿನ ಆಧರಿಸಿ ಸಿಐಡಿ ಘಟಕವು ತನಿಖೆಯನ್ನು ಕೈಗೊಂಡಿತ್ತು. ಈ ಪೈಕಿ ಕುಲಕರ್ಣಿ ಅವರ ವಿರುದ್ಧದ ಪ್ರಕರಣವನ್ನು 2014 ಸೆಪ್ಟಂಬರ್‌ 9ರಂದು ಸಿಐಡಿ ಘಟಕಕ್ಕೆ ವರ್ಗಾಯಿಸಲಾಗಿತ್ತು.

 

ತನಿಖೆ ವೇಳೆಯಲ್ಲಿ ಸಾಕ್ಷಿದಾರರ ಹೇಳಿಕೆ ಮತ್ತು ದಾಖಲಾತಿಗಳ ಪರಿಶೀಲನೆಯಿಂದ ಭೌತಶಾಸ್ತ್ರ ಉಪನ್ಯಾಸಕರಾಗಿದ್ದ ಎಂ ಬಿ ಅಶ್ವಥಲಕ್ಷ್ಮಿ, ಜೀವಶಾಸ್ತ್ರ ಉಪನ್ಯಾಸಕರಾಗಿದ್ದ ಕೆ ಗೀತಾ ಮತ್ತು ಸಹಾಯಕ ನಿರ್ದೇಶಕರಾಗಿದ್ದ ಸಿ ಎಸ್‌ ಗೀತಾದೇವಿ ಅವರನ್ನು ಸಿಆರ್‌ಪಿಸಿ ಕಲಂ 197ರ ಅನ್ವಯ ಅಭಿಯೋಜನೆಗೊಳಪಡಿಸಲು ತನಿಖಾಧಿಕಾರಿಗಳು ಅನುಮತಿ ಕೋರಿದ್ದರು.

 

ಸಿಐಡಿ ವರದಿಯಲ್ಲೇನಿದೆ?

 

ಅಭ್ಯರ್ಥಿ ಕುಮಾರಿ ಜಿ ನೇಹಾ ಕಾರಂತ 2013ರ ಜೂನ್‌ 6ರಂದು ಸಾಮಾನ್ಯ ವರ್ಗ (ಜಿಎಂ)ದಡಿ ದಾಖಲೆ ಪರಿಶೀಲಿಸಿಕೊಂಡಿದ್ದರು. ದಾಖಲಾತಿ ಪರಿಶೀಲನೆ ಕೊನೆಯ ದಿನಾಂಕ ಮುಗಿದಿದ್ದರೂ ಸಹ ಉದ್ದೇಶಪೂರ್ವಕವಾಗಿ ಎರಡನೇ ಬಾರಿಗೆ ದಾಖಲಾತಿ ಪರಿಶೀಲನೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಬೆಂಗಳೂರು ಕೇಂದ್ರದ ಸಿಇಟಿ ಕೌನ್ಸಲಿಂಗ್‌ ನ ಪರಿಶೀಲನಾ ಅಧಿಕಾರಿ ಅಶ್ವಥ ಲಕ್ಷ್ಮಿ ಅವರು ಮಾಡಿಕೊಟ್ಟಿದ್ದರು.

ವೈದ್ಯಕೀಯ ಸೀಟು ವಂಚನೆ; ತನಿಖೆ ವಿಳಂಬ, ಅಧಿಕಾರಿಗಳ ವಿರುದ್ಧ ವಿಚಾರಣೆಗೆ ವರ್ಷದ ಬಳಿಕ ಅನುಮತಿ

ನೇಹಾ ಕಾರಂತ ಅವರು ಓದಿರುವ ಶಾಲೆಗಳು ಗ್ರಾಮೀಣ ಪ್ರದೇಶಕ್ಕೆ ಒಳಪಡದಿದ್ದರೂಸಹ ಅವರ ದಾಖಲೆಗಳನ್ನು ದುರುದ್ಧೇಶದಿಂದ ಸರಿಯಾಗಿ ಪರಿಶೀಲಿಸದೇ ಮತ್ತು ಈ ಹಿಂದೆ ಕಂಪ್ಯೂಟರಿನಲ್ಲಿರುವ ದತ್ತಾಂಶಗಳೊಡನೆ ತಾಳೆ ಮಾಡಿರಲಿಲ್ಲ. ಮತ್ತು ಸಿಇಟಿ ಬ್ರೋಚರ್‌ನಲ್ಲಿ ನೀಡಲಾಗಿದ್ದ ಮಾಹಿತಿಗಳ ಪ್ರಕಾರ ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ನಡೆಸಿರಲಿಲ್ಲ. ಹೀಗಾಗಿ ನೇಹಾ ಕಾರಂತ ಅವರಿಂದ ಸುಳ್ಳು ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ ಪಡೆದು ಜಿಎಂ ಕೋಟಾದಿಂದ ಜಿಎಂಆರ್‌ ಕೋಟಾಕ್ಕೆ ಅಕ್ರಮ ವರ್ಗ ಬದಲಾವಣೆ ಮಾಡಿ ದಾಖಲೆ ಪರಿಶೀಲನೆ ಮಾಡಿ ಸ್ವೀಕೃತಿ ನೀಡಿದ್ದರು.

 

ಸುಳ್ಳು ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ ಪಡೆದ ಆಧಾರದ ಮೇಲೆ ನೇಹಾ ಕಾರಂತ ಅವರು ಮಂಗಳೂರಿನ ಎ ಜೆ ಇನ್ಸಿಟಿಟ್ಯೂಟ್‌ ಆಫ್ ಮೆಡಿಕಲ್‌ ಸೈನ್ಸ್‌ ಕಾಲೇಜಿನಲ್ಲಿ ಸೀಟು ಗಿಟ್ಟಿಸಿಕೊಂಡಿದ್ದರು. ಇದರಿಂದ ನೇಹಾ ಕಾರಂತ ಅವರಿಗೆ ಸಿಇಟಿ ಕೌನ್ಸಲಿಂಗ್‌ನಲ್ಲಿ ಸೀಟನ್ನು ಪಡೆಯಲು ಅನುಕೂಲ ಮಾಡಿಕೊಟ್ಟು ನಿಜವಾದ ಅಭ್ಯರ್ಥಿಗಳಿಗೆ ಸಿಗಬೇಕಿದ್ದ ಸೀಟನ್ನು ಪಡೆಯಲು ವಂಚಿತರನ್ನಾಗಿ ಮಾಡಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಲ್ಲದೆ ಸರ್ಕಾರಕ್ಕೆ ಮೋಸ ಮಾಡಿ ಐಪಿಸಿ ಕಲಂ 417, 465, 119, 468, 471, ಸಹ ಕಲಂ 34 ರೀತಿ ಅಪರಾಧ ಎಸಗಿರುವುದನ್ನು ತನಿಖೆ ವೇಳೆ ಸಾಬೀತುಪಡಿಸಲಾಗಿತ್ತು.

 

ಅದೇ ರೀತಿ ಗ್ರಾಮೀಣ ಶಾಲೆಯಲ್ಲಿ ವ್ಯಾಸಂಗ ಮಾಡದ ಎನ್‌ ವತ್ಸಲಾ ಎಂಬುವರು ಸಹ ಜಿ ಎಂ ಕೋಟಾದಡಿ ದಾಖಲೆ ಪರಿಶೀಲಿಸಿಕೊಂಡಿದ್ದರು. ದಾಖಲಾತಿ ಪರಿಶೀಲನೆ ಕೊನೆಯ ದಿನಾಂಕ ಮುಗಿದಿದ್ದರೂ ಉದ್ದೇಶಪೂರ್ವಕವಾಗಿ ಬೆಂಗಳೂರಿನಲ್ಲಿದ್ದ ಸಿಇಟಿ ಕೇಂದ್ರದಲ್ಲಿ ಪರಿಶೀಲನೆಗೆ ಅವಕಾಶ ಮಾಡಿಕೊಟ್ಟಿದ್ದರು. ಇವರನ್ನು ಜಿಎಂ ಕೋಟಾದಿಂದ ಜಿಎಂಆರ್‌ ಕೋಟಾಕ್ಕೆ ಮತ್ತು 3 ಎಜಿದಿಂದ 3ಎಆರ್‌ ಕೋಟಾಕ್ಕೆ ವರ್ಗ ಬದಲಾವಣೆ ಮಾಡಿ ಸ್ವೀಕೃತಿ ಪತ್ರ ನೀಡಿದ್ದರು. ಈ ಮೂಲಕ ಎನ್‌ ವತ್ಸಲಾ ಅವರು ಮಂಗಳೂರಿನ ಕೆ ಎಸ್‌ ಹೆಗ್ಗಡೆ ಮೆಡಿಕಲ್‌ ಅಕಾಡೆಮಿಯಲ್ಲಿ ಸೀಟು ಪಡೆಯಲು ಅನುಕೂಲ ಮಾಡಿಕೊಡಲಾಗಿತ್ತು ಎಂಬುದು ಸಿಐಡಿ ತನಿಖೆ ವರದಿಯಿಂದ ತಿಳಿದು ಬಂದಿದೆ.

 

ಮತ್ತೋರ್ವ ಅಭ್ಯರ್ಥಿ ಎನ್‌ ವಿಕಾಸ್‌ ಎಂಬಾತನು ಸಲ್ಲಿಸಿದ್ದ ದಾಖಲಾತಿಗಳನ್ನು ಸರಿಯಾಗಿ ಪರಿಶೀಲನೆ ನಡೆಸದೆಯೇ 3 ಎಜಿ ಕೋಟಾದಿಂದ 3 ಎಆರ್‌ ಕೋಟಾಕ್ಕೆ ವರ್ಗ ಬದಲಾವಣೆ ಮಾಡಿ ಸ್ವೀಕೃತಿ ನೀಡಲಾಗಿತ್ತು. ಈತ ಪಡೆದಿದ್ದ ಸುಳ್ಳು ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರದ ಆಧಾರದ ಮೇಲೆ ಸರ್ಕಾರಿ ಕೋಟಾದಡಿ ಆದಿಚುಂಚನಗಿರಿ ಇನ್ಸಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ಕಾಲೇಜಿನಲ್ಲಿ ಎಂಬಿಬಿಎಸ್‌ ಸೀಟು ಪಡೆದುಕೊಳ್ಳಲು ಅನುಕೂಲ ಮಾಡಿಕೊಡಲಾಗಿತ್ತು ಎಂಬುದು ವರದಿಯಿಂದ ಗೊತ್ತಾಗಿದೆ.

 

ಬಳ್ಳಾರಿಯ ಸಿಇಟಿ ಕೇಂದ್ರದಲ್ಲಿ ಪಿ ಸಾಯಿಕೃಷ್ಣ ಎಂಬಾತ 3ಎಆರ್‌ ಕೋಟಾದಡಿ ದಾಖಲೆ ಪರಿಶೀಲಿಸಿಕೊಂಡಿದ್ದ. ದಾಖಲಾತಿ ಪರಿಶೀಲನೆ ಕೊನೆ ದಿನಾಂಕ ಮುಗಿದ ನಂತರವೂ ಎರಡನೇ ಬಾರಿಗೆ ಬೆಂಗಳೂರಿನ ಸಿಇಟಿ ಕೇಂದ್ರದಲ್ಲಿ ಪರಿಶೀಲನೆಗೆ ಅವಕಾಶ ಮಾಡಿಕೊಟ್ಟು 2ಎ ಜಾತಿ ಪ್ರಮಾಣ ಪತ್ರವನ್ನು ಸರಿಯಾಗಿ ಪರಿಶೀಲನೆ ಮಾಡದೇ 3 ಎಜಿ ಕೋಟಾದಿಂದ 3ಎಆರ್‌ ಕೊಟಾಕ್ಕೆ ಮತ್ತು 3 ಎಆರ್ ಕೋಟಾದಿಂದ 2ಎಆರ್‌ ಕೋಟಾಕ್ಕೆ ವರ್ಗ ಬದಲಾವಣೆ ಮಾಡಿ ಸ್ವೀಕೃತಿ ನೀಡಲಾಗಿತ್ತು. 2ಎಆರ್‌ ಪ್ರಮಾಣ ಪತ್ರದ ಆಧಾರದ ಮೇಲೆ ಸರ್ಕಾರಿ ಕೋಟಾದಡಿ ಆರ್‌ ವಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಪಿ ಸಾಯಿಕೃಷ್ಣ ಎಂಬಾತನಿಗೆ ಸೀಟು ದೊರಕಿತ್ತು.

 

‘ಹೀಗೆ ಆರೋಪಿ ಕೆ ಗೀತಾ ಅವರು ಅಭ್ಯರ್ಥಿಗಳಾದ ಎನ್‌ ವತ್ಸಲಾ, ಮತ್ತು ಪಿ ಸಾಯಿಕೃಷ್ಣ ಅವರುಗಳು ಸಲ್ಲಿಸಿರುವ ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ಮಾಡದೇ ಸಿಇಟಿ ಕೌನ್ಸಲಿಂಗ್‌ನಲ್ಲಿ ಸೀಟು ಪಡೆಯಲು ಅನುಕೂಲ ಮಾಡಿಕೊಟ್ಟು ನಿಜವಾದ ಅಭ್ಯರ್ಥಿಗಳಿಗೆ ಸಿಗಬೇಕಾದ ಸೀಟನ್ನು ಪಡೆಯಲು ವಂಚಿತರನ್ನಾಗಿ ಮಾಡಿ ಅಧಿಕಾರ ದುರುಪಯೋಗಪಡಿಸಿಕೊಂಡು ಸರ್ಕಾರಕ್ಕೆ ಮೋಸ ಮಾಡಿ ಅಪರಾಧ ಎಸಗಿರುವುದು ತನಿಖೆಯಿಂದ ಸಾಬೀತಾಗಿದೆ,’ ಎಂಬ ವಿವರಣೆ ವರದಿಯಲ್ಲಿದೆ.

SUPPORT THE FILE

Latest News

Related Posts