ಬಿಮ್ಸ್‌ ಆಸ್ಪತ್ರೆ ಅವ್ಯವಸ್ಥೆ; ಕಟ್ಟಡದಲ್ಲಿ ನೀರು ಸೋರಿಕೆ, ರೋಗಿಗಳ ಅಸುರಕ್ಷತೆ, ಮೈಮರೆತ ಇಲಾಖೆ

ಬೆಂಗಳೂರು; ಬೀದರ್‌ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್‌) ಆಸ್ಪತ್ರೆಯ ಶೌಚಾಲಯಗಳಲ್ಲಿ ನಿರಂತರವಾಗಿ ನೀರು ಸೋರಿಕೆ, ಬಟ್ಟೆ ತುಂಡುಗಳು , ಹ್ಯಾಂಡ್‌ ಗ್ಲೌಸ್‌, ಪ್ಲಾಸ್ಟಿಕ್‌ಗಳು ಇತರೆ ತ್ಯಾಜ್ಯ ವಸ್ತುಗಳಿಂದ ತುಂಬಿ ತುಳುಕಾಡುತ್ತಿದೆ. ಆಸ್ಪತ್ರೆಯಲ್ಲಿ ಸ್ವಚ್ಚತೆಯೇ ಇಲ್ಲ.

 

ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೂ ಮುನ್ನ ಅಗ್ನಿಶಾಮಕ ಇಲಾಖೆಯಿಂದ ಅನುಮತಿಯನ್ನೇ ಪಡೆದಿಲ್ಲ. ಅಗ್ನಿ ಅವಘಡ ಸಂಭವಿಸಿದರೆ ರೋಗಿಗಳು ಇಳಿದು ಬರಲು ರ್ಯಾಂಪ್‌ಗಳೇ ಇಲ್ಲ. ಮೆಟ್ಟಿಲುಗಳನ್ನು ಇಳಿದೇ ಬರಬೇಕು ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯು ನಿರ್ದೇಶಕರು ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ವರದಿ ಸಲ್ಲಿಸಿದ್ದಾರೆ. ಆದರೆ ಈ ವರದಿಯನ್ನಾಧರಿಸಿ  ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್‌ ಅವರು ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.

 

 

ಆಸ್ಪತ್ರೆಯ ವಿಸ್ತರಣೆಗಾಗಿ ಅಳವಡಿಸಿರುವ ಬೀಮ್‌ಗಳಲ್ಲಿ ನೀರು ಸೋರಿಕೆಯಾಗುತ್ತಿರುವುದು ಸೇರಿದಂತೆ ಇನ್ನಿತರೆ ಕಾಮಗಾರಿಗಳೂ ಕಳಪೆಯಾಗಿವೆ ಎಂಬುದನ್ನು ಬೀದರ್‌ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪರಿವೀಕ್ಷಣೆ ನಡೆಸಿದ್ದ ತಂಡವು ಹಲವು ಲೋಪಗಳನ್ನು ಪತ್ತೆ ಹಚ್ಚಿದೆ. ಈ ಸಂಬಂಧ ವೈದ್ಯಕೀಯ ಶಿಕ್ಷಣ ಇಲಾಖೆಯು ಸರ್ಕಾರದ ಕಾರ್ಯದರ್ಶಿಗೆ 2022ರ ಡಿಸೆಂಬರ್‌ 15ರಂದು ಸಲ್ಲಿಸಿರುವ ವರದಿಯು ಈ ಸಂಸ್ಥೆಯು ಕೈಗೊಂಡಿರುವ ಕಾಮಗಾರಿಗಳ ಮತ್ತೊಂದು ಮುಖವನ್ನು ತೆರೆದಿಟ್ಟಿದೆ. ಈ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರು ನೀಡಿರುವ ವರದಿ ಪ್ರತಿ

 

 

ಬಿಮ್ಸ್‌ ಆಸ್ಪತ್ರೆ ಕಟ್ಟಡ ಕಾಮಗಾರಿಯೂ ಸೇರಿದಂತೆ ಇಲ್ಲಿನ ಅವ್ಯವಸ್ಥೆಗಳ ಕುರಿತು ಶಾಸಕ ಹಾಗೂ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಸದಸ್ಯರೂ ಆಗಿರುವ ಈಶ್ವರ್ ಬಿ ಖಂಡ್ರೆ ಅವರು ಹಲವು ದೂರುಗಳನ್ನು ಸಮಿತಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇವರ ನೇತೃತ್ವದಲ್ಲಿ 2022ರ ನವೆಂಬರ್‌ 9ರಂದು ಆಸ್ಪತ್ರೆಯ ಕಾಮಗಾರಿ ಮತ್ತು ವ್ಯವಸ್ಥೆಗಳನ್ನು ಪರಿವೀಕ್ಷಣೆ ನಡೆಸಲಾಗಿತ್ತು. ಪರಿವೀಕ್ಷಣೆ ವೇಳೆಯಲ್ಲಿ ಆಸ್ಪತ್ರೆ ಕಾಮಗಾರಿಯಲ್ಲಿನ ಹಲವು ಲೋಪಗಳು ಬೆಳಕಿಗೆ ಬಂದಿದ್ದವು. ಇದನ್ನಾಧರಿಸಿ ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರು ಸರ್ಕಾರಕ್ಕೆ ವರದಿ ಸಲ್ಲಿಸಿರುವುದು ಗೊತ್ತಾಗಿದೆ.

 

ಆಸ್ಪತ್ರೆಯ ಎಲ್ಲಾ ಶೌಚಾಲಯಗಳು ಸ್ವಚ್ಛತೆ ಇಲ್ಲದಿರುವುದು, ಸ್ಯಾನಿಟರಿ ಕಾಮಗಾರಿಯಲ್ಲಿನ ಲೋಪಗಳು, ಸಂಸ್ಥೆಯ ಸಿಬ್ಬಂದಿಗಳ ವಾಹನ ನಿಲುಗಡೆಗಾಗಿ ಮೀಸಲಿಟ್ಟಿರುವ ಆಸ್ಪತ್ರೆಯ ನೆಲಮಹಡಿಯಲ್ಲಿ ನೀರು ಸೋರಿಕೆಯಾಗುತ್ತಿರುವುದು, ಅಗ್ನಿಶಾಮಕ ಇಲಾಖೆಯವರು ವಿಧಿಸಿರುವ ದಂಡದ ಮೊತ್ತನ್ನು ಪಾವತಿಸಲು ವಿಫಲವಾಗಿರುವುದು, ಇಂಟರ್‌ನೆಟ್‌ ಸೇವೆ ಅಸಮರ್ಪಕವಾಗಿರುವುದು, ಆಸ್ಪತ್ರೆಯಲ್ಲಿ ಕ್ಯಾಥ್ ಲ್ಯಾಬ್‌ ಪ್ರಾರಂಭಿಸದೇ ಇರುವುದು, ಆಸ್ಪತ್ರೆಯ ಸಿವಿಲ್‌ ಕಾಮಗಾರಿಗಳಲ್ಲಿ ಆಗಿರುವ ಲೋಪಗಳ ಕುರಿತು ಕ್ರಮಕೈಗೊಳ್ಳದಿರುವುದು, ಆಸ್ಪತ್ರೆಗೆ ಲೆಕ್ಕಾಧಿಕಾರಿ, ಆರ್ಥಿಕ ಸಲಹೆಗಾರರನ್ನು ನೇಮಿಸದಿರುವುದು ಸೇರಿದಂತೆ ಹಲವು ಲೋಪಗಳನ್ನು ಪರಿವೀಕ್ಷಣೆ ವೇಳೆಯಲ್ಲಿ ಪತ್ತೆ ಹಚ್ಚಿದೆ.

 

‘ಆಸ್ಪತ್ರೆ ವಿಸ್ತರಣೆಗಾಗಿ ಅಳವಡಿಸಿರುವ ಬೀಮ್‌ಗಳಲ್ಲಿ ನೀರು ಸೋರಿಕೆಯಾಗುತ್ತಿದೆ. ಜಾಯಿಂಟ್‌ ಕೆಲಸಗಳು ಸರಿಯಾಗಿ ಆಗದೇ ಇರುವುದರಿಂದ ನೀರು ಸೋರಿಕೆಯಾಗುತ್ತಿದೆ. ಕಾಮಗಾರಿಯನ್ನು ಸಮರ್ಪಕವಾಗಿ ಮಾಡದೇ ಇರುವುದು ಮತ್ತು ಇದರ ದುರಸ್ತಿಗಾಗಿ ಅಂದಾಜು 150 ಲಕ್ಷ ರುಗಳು ಬೇಕಾಗಬಹುದು,’ ಎಂದು ತಿಳಿಸಿರುವ ವರದಿಯನ್ನು ಸಮಿತಿಯು ಗಂಭೀರವಾಗಿ ಪರಿಗಣಿಸಿರುವುದು ತಿಳಿದು ಬಂದಿದೆ.

 

ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರ ಮೇಲುಸ್ತುವಾರಿಯಲ್ಲಿ ಎನ್‌ಸಿಸಿ ಸಂಸ್ಥೆಯು ಕೈಗೆತ್ತಿಕೊಂಡಿದ್ದ ಆಸ್ಪತ್ರೆಯ ಕಾಮಗಾರಿಯ ಕಳಪೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರು ವರದಿಯಲ್ಲಿ ಉಲ್ಲೇಖಿಸಿದ್ದಾರಲ್ಲದೇ ಕಾಮಗಾರಿ ಗುಣಮಟ್ಟದ ಕುರಿತು ವರದಿಯನ್ನು ಸಲ್ಲಿಸದ ಪಿಡಬ್ಲ್ಯೂಡಿ ಇಲಾಖೆಯ ಕಾರ್ಯಪಾಲಕ ಅಭಿಯಂತರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವರದಿಯಲ್ಲಿ ಶಿಫಾರಸ್ಸು ಮಾಡಿದೆ.

 

‘ನಾಗಾರ್ಜುನ ಕನ್ಸ್‌ಟ್ರಕ್ಷನ್ಸ್‌ ಕಂಪನಿಯವರು ಎಲ್ಲಾ ಕಾಮಗಾರಿಗಳನ್ನು ಮುಗಿಸಿ 2020ನೇ ವರ್ಷದಲ್ಲಿ ಕಟ್ಟಡವನ್ನು ಆಸ್ಪತ್ರೆಗೆ ಹಸ್ತಾಂತರ ಮಾಡಿರುತ್ತಾರೆ. ಕಾಮಗಾರಿಗೆ ನಿಗದಿಪಡಿಸಿದ್ದ ಅನುದಾನದಲ್ಲಿ 105 ಕೋಟಿ ರುಗಳನ್ನು ಸಂಸ್ಥೆಗೆ ಪಾವತಿಸಲಾಗಿದೆ. ಬಾಕಿ ಪಾವತಿಸಬೇಕಾಗಿರುವ ಅನುದಾನವನ್ನು ಬಿಡುಗಡೆ ಮಾಡಿಲ್ಲ,’ ಎಂಬುದು ವರದಿಯಿಂದ ಗೊತ್ತಾಗಿದೆ.

 

ಆಸ್ಪತ್ರೆಯ ಶೌಚಾಲಯಗಳಲ್ಲಿ ನೀರು ಸೋರಿಕೆಯಾಗುತ್ತಿರುವುದು, ಬಟ್ಟೆ ತುಂಡುಗಳು , ಹ್ಯಾಂಡ್‌ ಗ್ಲೌಸ್‌, ಪ್ಲಾಸ್ಟಿಕ್‌ಗಳು ಇತರೆ ತ್ಯಾಜ್ಯ ವಸ್ತುಗಳಿಂದ ತುಂಬಿ ಸ್ವಚ್ಛತೆ ಇಲ್ಲದಿರುವುದು ಮತ್ತು ಆಸ್ಪತ್ರೆಯ ಕಟ್ಟಡವು ಸೋರಿಕೆಯಾಗಿ ಗೋಡೆಗಳು ಶಿಥಿಲಗೊಳ್ಳುತ್ತಿರುವುದಕ್ಕೆ ಸಮಿತಿಯು ಅಸಮಾಧಾನ ವ್ಯಕ್ತಪಡಿಸಿದೆ.
ಕಟ್ಟಡ ನಿರ್ಮಾಣ ಮಾಡುವ ಮುಂಚೆ ಅಗ್ನಿಶಾಮಕ ಇಲಾಖೆಯಿಂದ ಅನುಮತಿಯನ್ನೇ ಪಡೆದಿಲ್ಲ. ಹೀಗಾಗಿ ಅಗ್ನಿಶಾಮಕ ಇಲಾಖೆಯು 1, 36,94,400 ರು.ಗಳನ್ನು ವಿಧಿಸಿತ್ತು. ಆದರೆ ಬಿಮ್ಸ್‌ ಇನ್ನೂ ಪಾವತಿಸಿಲ್ಲ. ದಂಡದ ಮೊತ್ತವನ್ನು ಆಸ್ಪತ್ರೆಯಿಂದ ಅಥವಾ ಎನ್‌ಸಿಸಿ ಸಂಸ್ಥೆಯವರು ನೀಡಬೇಕೆ ಎಂಬ ಗೊಂದಲವನ್ನು ನಿವಾರಿಸಿಲ್ಲ.

 

ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ಇದುವರೆಗೂ ಆಸ್ಪತ್ರೆಯಲ್ಲಿ ಕ್ಯಾಥ್‌ಲ್ಯಾಬ್‌ ಪ್ರಾರಂಭಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಸಮಿತಿಯು ಈ ಕುರಿತು ಡಾ ರಾಜಶೇಖರ ಕೌಲಗಿ ಮತ್ತಿತರರನ್ನು ತರಾಟೆಗೆ ತೆಗೆದುಕೊಂಡಿತ್ತು ಎಂಬುದು ವರದಿಯಿಂದ ತಿಳಿದು ಬಂದಿದೆ.

 

ಅಲ್ಲದೇ ವೈದ್ಯಕೀಯ ಕಾಲೇಜು ಆರಂಭವಾಗಿ ಹಲವು ವರ್ಷಗಳು ಕಳೆದರೂ ಕಾಲೇಜಿಗೆ ಬೇಕಾದ ಸೌಲಭ್ಯಗಳಿದ್ದರೂ ಸಹ ಸ್ನಾತಕೋತ್ತರ ಸೀಟುಗಳನ್ನು ಪಡೆಯುವಲ್ಲಿ ಆಸ್ಪತ್ರೆ ಮಂಡಳಿಯು ವಿಫಲವಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

the fil favicon

SUPPORT THE FILE

Latest News

Related Posts