ಇಂಜನಿಯರ್‌ಗಳ ಆಯ್ಕೆ ಪಟ್ಟಿ ಪರಿಷ್ಕೃತ; 13 ಮಂದಿಗೆ ಅನರ್ಹ ಭೀತಿ, ಆದೇಶ ರದ್ದು?

photo credit;thehindu

ಬೆಂಗಳೂರು; ಬ್ಯಾಕ್‌ಲಾಗ್‌ ಸಹಾಯಕ ಇಂಜಿನಿಯರ್‌ಗಳ (ಸಿವಿಲ್‌) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗವು ಪ್ರಕಟಿಸಿರುವ ಪರಿಷ್ಕೃತ ಆಯ್ಕೆಪಟ್ಟಿ ಪ್ರಕಾರ 13 ಮಂದಿ ಅಭ್ಯರ್ಥಿಗಳಿಗೆ ಅನರ್ಹಗೊಳ್ಳುವ ಭೀತಿ ಎದುರಾಗಿದೆ. ಪರಿಷ್ಕೃತ ಪಟ್ಟಿಯಲ್ಲಿ ಸ್ಥಾನ ಪಡೆಯದೇ ಇರುವುದರಿಂದ ಈ 13 ಅಭ್ಯರ್ಥಿಗಳಿಗೆ ನೀಡಿರುವ ನೇಮಕಾತಿ ಆದೇಶವೂ ರದ್ದಾಗಲಿದೆ.

 

ಸಹಾಯಕ ಇಂಜಿನಿಯರ್‌ ವೃಂದದ ಬ್ಯಾಕ್‌ಲಾಗ್‌ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗವು ಪ್ರಕಟಿಸಿರುವ ಪರಿಷ್ಕೃತ ಪಟ್ಟಿಯನ್ನು ಜಾರಿಗೊಳಿಸಿದಲ್ಲಿ ಎದುರಾಗುವ ಕಾನೂನಾತ್ಮಕ ಪರಿಣಾಮಗಳ ಕುರಿತು ಕಾನೂನು ಇಲಾಖೆಯು ತನ್ನ ಅಭಿಪ್ರಾಯವನ್ನು 2022ರ ಡಿಸೆಂಬರ್‌ 12ರಂದು (ಲೋಇ 20 ಸೇಸಕಿ 2022, ಲಾ 323 ಅಭಿ 2022, ದಿನಾಂಕ 12-12-2022) ನೀಡಿದೆ. ಈ ಸಂಬಂಧ ಟಿಪ್ಪಣಿ ಹಾಳೆಯೊಂದು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕರ್ನಾಟಕ ಲೋಕಸೇವಾ ಆಯೋಗವು 2016ರ ಜನವರಿ 29ರಂದು ಪ್ರಕಟಿಸಿದ್ದ ಬ್ಯಾಕ್‌ಲಾಗ್‌ ಸಹಾಯಕ ಇಂಜನಿಯರ್‌ಗಳು (ಸಿವಿಲ್‌) ಹುದ್ದೆಗಳ ಆಯ್ಕೆ ಪಟ್ಟಿಯನ್ನು 2022ರ ಜೂನ್‌ 22ರಂದು ಪರಿಷ್ಕರಿಸಲಾಗಿತ್ತು. ಈ ಪರಿಷ್ಕೃತ ಪಟ್ಟಿಯನ್ನು ಜಾರಿಗೊಳಿಸಿದರೆ 13 ಅಭ್ಯರ್ಥಿಗಳಿಗೆ ನೇಮಕಾತಿಯನ್ನು ಹೊಸದಾಗಿ ನೀಡಬೇಕು. 2016ರ ಪಟ್ಟಿಯಲ್ಲಿ ಆಯ್ಕೆಯಾದ 13 ಅಭ್ಯರ್ಥಿಗಳನ್ನು ನೇಮಕಾತಿಯಿಂದ ಕೈ ಬಿಡಬೇಕು. ಅಲ್ಲದೇ ಹಲವು ಅಭ್ಯರ್ಥಿಗಳ ಜೇಷ್ಠತೆಯೂ ಬದಲಾಗಲಿದೆ ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಕರ್ನಾಟಕ ಲೋಕಸೇವಾ ಆಯೋಗದ ಪ್ರಕ್ರಿಯೆ ನಡೆದ ನಂತರ ವಿವಿಧ ಅಭ್ಯರ್ಥಿಗಳು ಕೆಎಟಿಗೆ ಅರ್ಜಿ ಸಲ್ಲಿಸಿದ್ದರು. ಕೆಎಟಿಯಲ್ಲಿ ಬಾಕಿ ಇರುವ ಅರ್ಜಿಗಳ ಸಂಬಂಧ ನೀಡುವ ತೀರ್ಪಿನ ಷರತ್ತಿಗೆ ಒಳಪಟ್ಟಿದೆ ಎಂದು ಈಗಾಗಲೇ ನೇಮಕಾತಿ ಆದೇಶದಲ್ಲಿಯೂ ತಿಳಿಸಿತ್ತು ಎಂದು ತಿಳಿದು ಬಂದಿದೆ.

 

ಕೆಎಟಿ ಅರ್ಜಿಗಳಪಟ್ಟಿಗೆ ಪ್ರಸ್ತುತ ಪರಿಷ್ಕರಣೆಗೆ ಒಳಪಟ್ಟಿರುವ ಅರ್ಜಿ (ಸಂಖ್ಯೆ 6188-6196/2016 ಮತ್ತು 6882-6883/2016)ಗಳನ್ನು ಉಲ್ಲೇಖಿಸಿದೆ. ಈ ಅರ್ಜಿಗಳಿಗೆ ಸಂಬಂಧಿಸಿದಂತೆ ನೀಡಿರುವ ತೀರ್ಪಿನ ಪ್ರಕಾರ ಆಯ್ಕೆಪಟ್ಟಿಯನ್ನು ಕೆಪಿಎಸ್‌ಸಿಯು ಪರಿಷ್ಕರಿಸಿದೆ. ಹೀಗಾಗಿ 2016ರಲ್ಲಿ ಪ್ರಕಟಿಸಿದ್ದ ಮುಖ್ಯಪಟ್ಟಿಯಿಂದ 13 ಅಭ್ಯರ್ಥಿಗಳು ಅನರ್ಹಗೊಳ್ಳಲಿದ್ದಾರೆ ಎಂದು ಗೊತ್ತಾಗಿದೆ.

 

‘ಈ ಅರ್ಜಿಗಳ ಸಂಬಂಧ ನೀಡಿದ ತೀರ್ಪಿನ ಮೇರೆಗೆ ಕೆಪಿಎಸ್‌ಸಿಯು ಆಯ್ಕೆಪಟ್ಟಿಯನ್ನು ಪರಿಷ್ಕರಿಸಿರುವುದರಿಂದ ಅನರ್ಹಗೊಂಡ ಅಭ್ಯರ್ಥಿಗಳ ಆಯ್ಕೆಯನ್ನು 2016ರ ಮುಖ್ಯಪಟ್ಟಿಯಿಂದ ಕೈಬಿಟ್ಟು ಕೆಲಸದಿಂದ ತೆಗೆದುಹಾಕಲು ಹಾಗೂ ಅಭ್ಯರ್ಥಿಗಳಿಗೆ ನೋಟೀಸ್‌ ನೀಡಬೇಕು,’ ಎಂದು ಕಾನೂನು ಇಲಾಖೆಯು ತನ್ನ ಅಭಿಪ್ರಾಯವನ್ನು ತಿಳಿಸಿದೆ ಎಂದು ತಿಳಿದು ಬಂದಿದೆ.

 

ಈಗಾಗಲೆ ಸಿವಿಲ್‌ ವಿಭಾಗದಲ್ಲಿ 755 ಅಭ್ಯರ್ಥಿಗಳಿಗೆ ನೇಕಾತಿ ಆದೇಶ ನೀಡಲಾಗಿದೆ. ಸಿವಿಲ್‌ ವಿಭಾಗದಲ್ಲಿಯೇ ಇನ್ನೂ 761 ಹುದ್ದೆಗಳು ಬ್ಯಾಕ್‌ಲಾಗ್‌ ಅಡಿ ನೇಮಕಾತಿಗೆ ಲಭ್ಯವಿದೆ. ಈ ಹಿನ್ನೆಲೆಯಲ್ಲಿ ಪರಿಷ್ಕೃತ ಪಟ್ಟಿ ಅನುಸಾರ ಹೊಸದಾಗಿ ಆಯ್ಕೆ ಹೊಂದಿರುವ (ಮುಖ್ಯ ಪಟ್ಟಿ ಅನುಸಾರ 10 ಅಭ್ಯರ್ಥಿಗಳು, ಹೆಚ್ಚುವರಿ ಪಟ್ಟಿ ಅನುಸಾರ 03 ಅಭ್ಯರ್ಥಿಗಳು, ಹೊಸದಾಗಿ ಆಯ್ಕೆಗೊಂಡ 05 ಮತ್ತು ಸೂಪರ್‌ ನ್ಯೂಮರರಿ 08 ಅಭ್ಯರ್ಥಿಗಳು) ಒಟ್ಟು 13 ಅಭ್ಯರ್ಥಿಗಳಿಗೆ ನೇಮಕಾತಿ ನೀಡಲು ಪರಿಶೀಲಿಸುತ್ತಿದೆ.

 

ಪರಿಷ್ಕೃತ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆಯದೇ ಇರುವುದರಿಂದ ಒಟ್ಟು 13 ಅಭ್ಯರ್ಥಿಗಳಿಗೆ ಈಗಾಗಲೇ ನೇಮಕಾತಿ ಆದೇಶ ನೀಡಿರುವುದನ್ನು ರದ್ದುಗೊಳಿಸಲಾಗುತ್ತದೆ ಎಂದು ಗೊತ್ತಾಗಿದೆ.

SUPPORT THE FILE

Latest News

Related Posts