ಬೆಂಗಳೂರು; ಕೆಐಎಡಿಬಿಯ ಭೂ ಹಗರಣ ಮತ್ತು ಡಿ ನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಮುರುಗೇಶ್ ನಿರಾಣಿ, , ಶೋಭಾ ಕರಂದ್ಲಾಜೆ, ಬಿ ವೈ ರಾಘವೇಂದ್ರ, ಕೆ ಎಸ್ ಈಶ್ವರಪ್ಪ, , ಆರ್ ಅಶೋಕ್, ಕೃಷ್ಣಯ್ಯ ಶೆಟ್ಟಿ, ಭಾರತಿ ಶೆಟ್ಟಿ ಸೇರಿದಂತೆ ಹಲವರ ವಿರುದ್ಧ ಅಧಿಕಾರ ದುರುಪಯೋಗ ಆರೋಪವನ್ನು ಹೊರಿಸಿ ಲೋಕಾಯುಕ್ತಕ್ಕೆ ಕಳೆದ 10 ವರ್ಷಗಳ ಹಿಂದೆಯೇ ಸಲ್ಲಿಸಿದ್ದ ಲಿಖಿತ ದೂರನ್ನೇ ವಿಧಾನಪರಿಷತ್‌ನ ಪ್ರತಿಪಕ್ಷ ನಾಯಕರಾಗಿದ್ದ ವಿ ಎಸ್ ಉಗ್ರಪ್ಪ, ಕಾಂಗ್ರೆಸ್ ಮುಖಂಡ ಬಿ ಎಲ್ ಶಂಕರ್ ಅವರು ಅಲ್ಲಗಳೆದಿರುವುದು ಇದೀಗ ಬಹಿರಂಗವಾಗಿದೆ.
ನೈಜ ಹೋರಾಟಗಾರರ ವೇದಿಕೆಯ ಹೆಚ್ ಎಂ ವೆಂಕಟೇಶ್ ಎಂಬುವರು ನೇರವಾಗಿ ವಿ ಎಸ್ ಉಗ್ರಪ್ಪ ಮತ್ತು ಬಿ ಎಲ್ ಶಂಕರ್ ಅವರಿಗೆ ನೇರವಾಗಿ ದೂರವಾಣಿ ಕರೆ ಮಾಡಿದ್ದ ಸಂದರ್ಭದಲ್ಲಿ ಬಿ ಎಸ್ ಯಡಿಯೂರಪ್ಪ ಮತ್ತಿತರರ ವಿರುದ್ಧ ಲೋಕಾಯುಕ್ತಕ್ಕೆ ದೂರು ದಾಖಲಿಸಿರುವ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದು ಹೇಳುವ ಮೂಲಕ ಜಾರಿಕೊಂಡಿದ್ದಾರೆ. ಇವರಿಬ್ಬರ ನಡುವೆ ನಡೆದಿರುವ ಸಂಭಾಷಣೆಯ ಧ್ವನಿಮುದ್ರಿಕೆ ತುಣುಕು ‘ದಿ ಫೈಲ್’ಗೆ ಲಭ್ಯವಾಗಿದೆ.
2010ರ ಡಿಸೆಂಬರ್ 3ರಂದು ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದ ಕಾಂಗ್ರೆಸ್ಸಿನ ನಾಯಕರಾದ ವಿ.ಎಸ್ ಉಗ್ರಪ್ಪ, ಬಿ ಎಲ್ ಶಂಕರ್, ಅಪ್ಪಾಜಿ ಚೆನ್ನಬಸವರಾಜ ಶಂಕರ ರಾವ್ ನಾಡಗೌಡ ಅವರು 2010ರ ಡಿಸೆಂಬರ್ 4ರಂದು ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದರು. ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಮತ್ತಿತರರ ವಿರುದ್ಧ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ಈ ಸಂಬಂಧ ಲೋಕಾಯುಕ್ತದಲ್ಲಿ ದೂರು ದಾಖಲಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ಒದಗಿಸಿದ್ದರು. ಈ ಕುರಿತು ಪತ್ರಿಕೆಗಳು ವರದಿಯನ್ನೂ ಪ್ರಕಟಿಸಿದ್ದವು.
ಈ ಕುರಿತು ‘ದಿ ಫೈಲ್’ ಕೂಡ ಪರೀಕ್ಷೆಗೊಳಪಡಿಸಿತಲ್ಲದೇ ಲೋಕಾಯುಕ್ತ ಸಂಸ್ಥೆಯ ಅಧಿಕೃತ ಜಾಲತಾಣಕ್ಕೆ ಭೇಟಿ ಕೊಟ್ಟಿತು. 2010ರ ಡಿಸೆಂಬರ್ 3ರಂದು ವಿಧಾನಪರಿಷತ್‌ನ ಪ್ರತಿಪಕ್ಷ ನಾಯಕರಾಗಿದ್ದ ವಿ ಎಸ್ ಉಗ್ರಪ್ಪ, ಬಿ ಎಲ್ ಶಂಕರ್, ಅಪ್ಪಾಜಿ ಚನ್ನಬಸವರಾಜ ನಾಡಗೌಡ ಅವರು ದೂರು ದಾಖಲಿಸಿರುವುದನ್ನು ಲೋಕಾಯುಕ್ತ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಿರುವುದು ತಿಳಿದು ಬಂದಿದೆ.
ಲೋಕಾಯುಕ್ತಕ್ಕೆ ಕಳೆದ 10 ವರ್ಷಗಳ ಹಿಂದೆಯೇ ಸಲ್ಲಿಸಿದ್ದ ದೂರಿನ ವಿಚಾರಣೆ ಪ್ರಗತಿಯನ್ನು ಬೆನ್ನೆತ್ತಿರುವ ನೈಜ ಹೋರಾಟಗಾರರ ವೇದಿಕೆಯ ಹೆಚ್ ಎಂ ವೆಂಕಟೇಶ್ ಮತ್ತಿತರರು ವಿ ಎಸ್ ಉಗ್ರಪ್ಪ ಮತ್ತು ಬಿ ಎಲ್ ಶಂಕರ್ ಅವರನ್ನು ಈಚೆಗೆ ಪ್ರಶ್ನಿಸಿದ್ದರು. ಆದರೆ ಕಾಂಗ್ರೆಸ್‌ನ ಈ ಇಬ್ಬರು ಮುಖಂಡರು ‘ದೂರಿನ ಬಗ್ಗೆ ತಮಗೇ ಗೊತ್ತಿಲ್ಲ, ದೂರನ್ನೇ ದಾಖಲಿಸಿಲ್ಲ, ಮಾಹಿತಿಯೇ ಇಲ್ಲ, ದೂರಿನ ಮಾಹಿತಿ ಇದ್ದರೆ ನಮಗೆ ಕೊಡಿ,’ ಎಂದು ಪ್ರಶ್ನಿಸಿದವರನ್ನೇ ಕೇಳಿರುವುದು ಸಂಭಾಷಣೆಯ ತುಣುಕಿನಿಂದ ಗೊತ್ತಾಗಿದೆ. ಅಲ್ಲದೆ ವಿ ಎಸ್ ಉಗ್ರಪ್ಪ ಅವರು ಹೆಚ್ ಎಂ ವೆಂಕಟೇಶ್ ವಿರುದ್ಧ ಕುಪಿತಗೊಂಡು ಮಾತನಾಡಿರುವುದು ಸಂಭಾಷಣೆಯ ತುಣುಕಿನಿಂದ ತಿಳಿದು ಬಂದಿದೆ.
ಬಿ ಎಲ್ ಶಂಕರ್ ಹೇಳಿರುವುದೇನು?
ಯಾವಾಗ ಅದು, ಹೌದಾ, ನೆನಪಿಲ್ಲ, ಉಗ್ರಪ್ಪನ್ನು ಕೇಳ್ತೀನಿ, ನನಗೆ ನೆನಪಿಲ್ಲ. ನಿಜ ಹೇಳಬೇಕೆಂದರೆ ನಾನು ಮಾಡಿರುವುದು ನೆನಪೇ ಇಲ್ಲ. ಬೆಂಗಳೂರಿಗೆ ಬಂದ ಕೂಡಲೇ ನೋಡ್ತಿನಿ ಎಂದು ಹೇಳಿದ್ದಾರೆ.
ವಿ ಎಸ್ ಉಗ್ರಪ್ಪ ಹೇಳಿರುವುದೇನು?
ನನಗೆ ಯಾವುದೆನ್ನುವುದೇ ಗೊತ್ತಿಲ್ಲ. ನನಗೆ ಹೇಗೆ, ಯಾವ ಕಾಂಟ್ಸಾಕ್ಟ್‌ನಲ್ಲಿ ಕೇಳ್ತಿದಿದೋರು ಗೊತ್ತಿಲ್ಲ. ನೋಡಿ ಏನೋ ಮಾತನಾಡೋಕೇ ಹೋಗಬೇಡಿ, 10-12 ವರ್ಷದ ಹಿಂದೆ ಇದ್ದದ್ದು ಗೊತ್ತಿಲ್ಲಾರಿ, ಇವರೇ.. ಹೌದಪ್ಪ… ದೂರು ಏನೆಂಬುದೇ ಗೊತ್ತಿಲ್ಲ. ನೀವು ಹಿಂಗ್ ಮಾತಾಡಿರೋದು…ಇಂತದ್ದು ಅಂತ ಹೇಳಿ. ನನ್ನ ಕಂಪ್ಲೇಟ್ ಅಂದ್ರೆ ನಾನು ಲಾಯರ್ ಹಿಡ್ಕೊಳ್ತಿನಿ. ನಾನು ಲಾಯರ್ ಇದ್ದೀನಿ. ಅದು ಏನು ಅನ್ನೋದೇ ಗೊತ್ತಿಲ್ಲ.
ಮತ್ತೆ ಏನ್ರೀ ಮಾತಾಡೋದು. ಬಾಯಿಗ್ ಬಂದಂಗೆ ಮಾತಾಡ್ತೀರಿ. ನಾನು ಎಮರ್ಜೆನ್ಸಿಲಿ ಜೈಲಿಗೆ ಹೋಗಿ ಬಂದಿದ್ದೇನೆ, ಮಾತಿನ ಧಾಟಿ ಹೇಗಿದೆ ಅಂದರೆ, ಮಿಸ್ಟರ್ ವೆಂಕಟೇಶ್‌ಮೂರ್ತಿ ನೀವು ಯಾರು ಅಂತ ಗೊತ್ತಿಲ್ಲ, ಏನಕ್ಕೆ ಕೇಳ್ತೀರಿ ಗೊತ್ತಿಲ್ಲ, 12 ವರ್ಷದ ಹಿಂದೆ ಹೇಗೆ ಗೊತ್ತಿರುತ್ತೇ. ನಾನೇನು ಸರ್ವಜ್ಞನೇ. ಸೈನ್ ಯಾರಾದರೂ ತಗೊಂಡು ಹೋಗಿರಬಹುದು. ರೀ ಇವರೇ ಇಲ್ಲಿ ಕೇಳಿ…ನನಗೆ ಜ್ಞಾಪಕ ಇದ್ದಿದ್ದರೇ ಹೇಳ್ತಿದ್ದೆ. ಆಯ್ತಪ್ಪ, ಈಗ ಅದು ಯಾವ್ದು ಅಂತ ಗೊತ್ತಿಲ್ಲ. ಮಿಸ್ಟರ್ ವೆಂಕಟೇಶ್‌ಮೂರ್ತಿ, ನೀವು ಯಾರು ಅನ್ನೋದು ಅದು ಏನು ಅನ್ನೋದು ಗೊತ್ತಿಲ್ಲ. ಡೀಟೈಲ್ಸ್ ತರ್ಸಿ, ನಮ್ ಜ್ಯೂನಿಯರ್‌ಗೆ ಹೇಳಿ ತರಿಸ್ತೀನಿ ಎಂದು ಹೇಳಿರುವುದು ಸಂಭಾಷಣೆಯ ತುಣುಕಿನಿಂದ ಗೊತ್ತಾಗಿದೆ.
ಏನದು ಪ್ರಕರಣ?
ಕೆಐಎಡಿಬಿಯ ಉನ್ನತ ಅಧಿಕಾರಸ್ಥ ಸಮಿತಿಯಿಂದ 2008ರ ನವೆಂಬರ್‌ನಲ್ಲಿ ಬಾಗಲಕೋಟೆಯ ಮುಧೋಳದಲ್ಲಿ ಸಿಮೆಂಟ್ ಕೈಗಾರಿಕೆಗಾಗಿ 200 ಎಕರೆಯನ್ನು ಮುರುಗೇಶ್ ಆರ್ ನಿರಾಣಿ ಅವರು ಹಂಚಿಕೆ ಮಾಡಿಸಿಕೊಂಡು ಅಧಿಕಾರ ದುರಪಯೋಗಪಡಿಸಿಕೊಂಡಿದ್ದರು ಎಂದು ವಿ ಎಸ್ ಉಗ್ರಪ್ಪ, ಬಿ ಎಲ್ ಶಂಕರ್ ಅವರು ಲೋಕಾಯುಕ್ತ ಮೆಟ್ಟಿಲೇರಿದ್ದರು. ಈ ಸಂಬಂಧ ತಮ್ಮ ಬಳಿ ದಾಖಲೆಗಳಿವೆ ಎಂದೂ ವಿ ಎಸ್ ಉಗ್ರಪ್ಪ, ಬಿ ಎಲ್ ಶಂಕರ್ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.
ಅಲ್ಲದೇ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಮಂಗಳೂರಿನ ತಣ್ಣೀರುಬಾವಿಯಲ್ಲಿ 56 ಎಕರೆ ಭೂಮಿಯನ್ನು ಪ್ರಕಾಶ್ ಶೆಟ್ಟಿ ಅವರ ಹೆಸರಿಗೆ ಡಿ ನೋಟಿಫಿಕೇಷನ್ ಮಾಡಿದ್ದರು. ಈ ಪ್ರಕರಣದಲ್ಲಿ ಇಂಧನ ಸಚಿವರಾಗಿದ್ದ ಹಾಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ವಿರುದ್ಧವೂ ದೂರು ಸಲ್ಲಿಸಿದ್ದ ವಿ ಎಸ್ ಉಗ್ರಪ್ಪ, ಬಿ ಎಲ್ ಶಂಕರ್, ಅಪ್ಪಾಜಿನಾಡಗೌಡ ಅವರು ಶೋಭಾ ಕರಂದ್ಲಾಜೆ ಅವರನ್ನೂ ಪ್ರತಿವಾದಿಯನ್ನಾಗಿಸಿದ್ದರು. ಈ ಕುರಿತು ಟೈಮ್ಸ್ ಆಫ್ ಇಂಡಿಯಾ ಸೇರಿದಂತೆ ಹಲವು ಪತ್ರಿಕೆಗಳಲ್ಲಿ 2010ರ ಡಿಸೆಂಬರ್ 4ರಂದು ವರದಿ ಪ್ರಕಟವಾಗಿದ್ದನ್ನು ಸ್ಮರಿಸಬಹುದು.
ಬಿಎಸ್‌ವೈ,ಶೋಭಾ,ನಿರಾಣಿ,ಈಶ್ವರಪ್ಪ,ಅಶೋಕ್ ವಿರುದ್ಧದ ದೂರು; ಹತ್ತು ವರ್ಷವಾದರೂ ಮುಗಿಯದ ಲೋಕಾ ತನಿಖೆ
‘ವಿದ್ಯಾವಂತರಾದ ಬಿ ಎಲ್ ಶಂಕರ್, ವಕೀಲರಾದ ಉಗ್ರಪ್ಪನವರು ದೂರನ್ನು ದಾಖಲಿಸಿ ನಂತರ ಅದನ್ನು ಕಡೆಗಣಿಸಿರುವುದು ಅಥವಾ ಆ ಬಗ್ಗೆ ತಿಳಿಯದಂತೆ ಇರುವುದನ್ನು ಅವಲೋಕಿಸಿದರೆ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವಲ್ಲಿ ನಿರಾಸಕ್ತಿಯನ್ನು ಹೊಂದಿದ್ದಾರೆ ಎಂಬ ಸಂಶಯ ಈಗ ನಮ್ಮಲ್ಲಿ ಮೂಡಿದೆ. ಇವರ ಬದ್ಧತೆ, ಪ್ರಾಮಾಣಿಕತೆ, ಪಾರದರ್ಶಕತೆ, ನಂಬಿಕೆ ಮತ್ತು ವಿಶ್ವಾಸಕ್ಕೆ ಇವರು ಕೊಡಲಿ ಪೆಟ್ಟನ್ನು ನೀಡಿದ್ದಾರೆ. ಸಮಯ ಮತ್ತು ಸಂದರ್ಭಕ್ಕೆ ತಕ್ಕಂತೆ ಪತ್ರಿಕಾಗೋಷ್ಠಿಗಳನ್ನು ನಡೆಸುವುದು ಮತ್ತು ತನಿಖಾ ಸಂಸ್ಥೆಗಳಿಗೆ ದೂರನ್ನು ನೀಡುವುದು ಇವರ ಹವ್ಯಾಸವಾಗಿದೆ. ಇವರ ದೂರುಗಳು ಮತ್ತು ನಡೆಸುವ ಪತ್ರಿಕಾಗೋಷ್ಠಿಗಳು ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ ಎಂಬ ಮಾತುಗಳಿಗೆ ಇವರ ವರ್ತನೆಯು ಪುಷ್ಠಿ ನೀಡುತ್ತದೆ,’ ಎಂದು ನೈಜ ಹೋರಾಟಗಾರರ ವೇದಿಕೆಯ ಹೆಚ್ ಎಂ ವೆಂಕಟೇಶ್ ಅವರು ‘ದಿ ಫೈಲ್’ಗೆ ಪ್ರತಿಕ್ರಿಯೆ ನೀಡಿದ್ದಾರೆ.