ಎನ್‌ಒಸಿಯಿಲ್ಲ, ಮಂಜೂರಿಗೆ ಸಕಾರಣವೂ ಇಲ್ಲ, ಆದರೂ ರಾಷ್ಟ್ರೋತ್ಥಾನಕ್ಕೆ 6 ಎಕರೆ ಮಂಜೂರು

ಬೆಂಗಳೂರು; ನಗರಸಭೆ ನಿರಾಕ್ಷೇಪಣೆ ಪತ್ರವನ್ನು ನೀಡದಿದ್ದರೂ ಕರ್ನಾಟಕ ಭೂ ಮಂಜೂರಾತಿ ನಿಯಮಗಳನ್ನು ಸಡಿಲಿಸಲು ಸಕಾರಣಗಳಿಲ್ಲದಿದ್ದರೂ ರಾಷ್ಟ್ರೊತ್ಥಾನ ಪರಿಷತ್‌ಗಾಗಿಯೇ ನಿಯಮಗಳನ್ನು ಸಡಿಲಿಸುವ ಮೂಲಕ ಚಿಕ್ಕಮಗಳೂರು ಜಿಲ್ಲೆಯಲ್ಲಿ 6 ಎಕರೆ ಜಮೀನನ್ನು ಮಂಜೂರು ಮಾಡಲು ಕಂದಾಯ ಇಲಾಖೆಯು ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು ಇದೀಗ ಬಹಿರಂಗವಾಗಿದೆ.

 

ಬೆಂಗಳೂರು ನಗರ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರಾಷ್ಟ್ರೋತ್ಥಾನ ಪರಿಷತ್‌ಗೆ ಗೋಮಾಳ ಜಮೀನು ಮಂಜೂರು ಮಾಡುತ್ತಿರುವ ರಾಜ್ಯ ಬಿಜೆಪಿ ಸರ್ಕಾರವು ಚಿಕ್ಕಮಗಳೂರಿನ ಹಿರೇಮಗಳೂರಿನಲ್ಲಿ 330.00 ಲಕ್ಷ ರು. ಮೌಲ್ಯದ ಜಮೀನನ್ನು ಮಂಜೂರು ಮಾಡಲು ಕಾನೂನು ಇಲಾಖೆಯ ಅಸಮ್ಮತಿ ನಡುವೆಯೂ ಸಚಿವ ಸಂಪುಟಕ್ಕೆ ಮಂಡಿಸಿರುವುದು ವಿವಾದಕ್ಕೆ ದಾರಿಮಾಡಿಕೊಟ್ಟಿದೆ. ಈ ಸಂಬಂಧ ಕೆಲ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಚಿಕ್ಕಮಗಳೂರು ಜಿಲ್ಲೆ ಚಿಕ್ಕಮಗಳೂರು ತಾಲೂಕಿನ ಕಸಬಾ ಹೋಬಳಿ ಹಿರೇಮಗಳೂರು ಗ್ರಾಮದ ಸರ್ವೆ ನಂಬರ್‌ 544ರಲ್ಲಿ 6 ಎಕರೆ ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ರಾಷ್ಟ್ರೋತ್ಥಾನ ಪರಿಷತ್‌ಗೆ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕಂದಾಯ ಇಲಾಖೆಯು ಸಚಿವ ಸಂಪುಟಕ್ಕೆ (ಸಂಖ್ಯೆ; ಕಂಇ 22 ಎಲ್‌ ಜಿ ಯು 2022- ವಿಷಯ ಸಂಖ್ಯೆ; ಸಿ/659/2022) ಸಲ್ಲಿಸಿತ್ತು ಎಂದು ಗೊತ್ತಾಗಿದೆ.

 

ಈ ಜಮೀನು ಚಿಕ್ಕಮಗಳೂರು ನಗರಸಭಾ ವ್ಯಾಪ್ತಿಯೊಳಗಿದೆ. ಹೀಗಾಗಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22ಎ(2) ಅನ್ವಯ ನಗರ ವ್ಯಾಪ್ತಿಯೊಳಗಿನ ಜಮೀನುಗಳನ್ನು ಯಾವುದೇ ಸರ್ಕಾರಿ ಜಮೀನುಗಳನ್ನು ಯಾವುದೇ ವ್ಯಕ್ತಿ ಅಥವಾ ಖಾಸಗಿ ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಲು ಅಥವಾ ಗುತ್ತಿಗೆ ಆಧಾರದ ಮೇಲೆ ನೀಡಲು ಅವಕಾಶವಿಲ್ಲ. ಅಲ್ಲದೇ ಈ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ರಾಷ್ಟ್ರೋತ್ಥಾನ ಪರಿಷತ್‌ಗೆ ನೀಡಲು ನಿರಾಕ್ಷೇಪಣಾ ಪತ್ರವನ್ನು ನೀಡಿಲ್ಲ ಎಂದು ತಿಳಿದು ಬಂದಿದೆ.

 

ಆದರೂ ರಾಷ್ಟ್ರೋತ್ಥಾನ ಪರಿಷತ್‌ಗೆ 6 ಎಕರೆ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡುವ ಏಕೈಕ ಉದ್ದೇಶದಿಂದಲೇ ಕರ್ನಾಟಕ ಭೂ ಮಂಜೂರಾತಿ ನಿಯಮಗಳನ್ನು ಸಡಿಲಿಸಿರುವ ಸರ್ಕಾರವು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22ಎ(1)(i)(2)ನ್ನು ಬಳಸಿಕೊಂಡಿರುವುದು ಗೊತ್ತಾಗಿದೆ.

 

‘ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಕೋರುತ್ತಿರುವುದರಿಂದ ಸುತ್ತಮುತ್ತಲ ಗ್ರಾಮಗಳ ಮಕ್ಕಳ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 27ರಲ್ಲಿ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ನಿಯಮ 22ಎ(2)ನ್ನು ಸಡಿಲಿಸಿ ಹಿರೇಮಗಳೂರು ಗ್ರಾಮದ ಸರ್ವೆ ನಂಬರ್‌ 544ರಲ್ಲಿ 6.00 ಎಕರೆ ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22ಎ(1)(i)(2)ನ್ನು ಅನ್ವಯ ಜಮೀನಿನ ಪ್ರಚಲಿತ ಮಾರುಕಟ್ಟೆ ಮೌಲ್ಯದ ಶೇ.2.50ರಷ್ಟು ವಾರ್ಷಿಕ ಗುತ್ತಿಗೆ ಮೊತ್ತವನ್ನು ವಿಧಿಸಿ ಈ ಗುತ್ತಿಗೆ ಮೊತ್ತವನ್ನು ಎರಡು ವರ್ಷಗಳಿಗೊಮ್ಮೆ ಶೇ. 10ರಷ್ಟು ಹೆಚ್ಚಿಸುವ ಷರತ್ತಿಗೊಳಪಟ್ಟು ನಿಯಮ 19(3)(ಬಿ) ಅನ್ವಯ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೀಡುವ ಪ್ರಸ್ತಾವನೆಯನ್ನು ಸಚಿವ ಸಂಪುಟದ ಸೂಕ್ತ ನಿರ್ಣಯಕ್ಕಾಗಿ,’ ಎಂದು ಕಂದಾಯ ಇಲಾಖೆಯು ಮಂಡಿಸಿತ್ತು ಎಂದು ತಿಳಿದು ಬಂದಿದೆ.

 

ಕಾನೂನು ಇಲಾಖೆ ಅಸಮ್ಮತಿ

 

ಕಂದಾಯ ಇಲಾಖೆಯು ಪ್ರಸ್ತಾಪಿಸಿದ್ದ ಜಮೀನು ಮಂಜೂರಾತಿಗೆ ನಗರಸಭೆಯು ನಿರಾಕ್ಷೇಪಣ ಪತ್ರ ನೀಡಿಲ್ಲ. ಕರ್ನಾಟಕ ಭೂ ಮಂಜೂರಾತಿ ನಿಯಮಗಳ, 1969ರ ನಿಯಮ 22ಎ(2) ಅನ್ವಯ ನಗರಸಭೆ ವ್ಯಾಪ್ತಿಯಲ್ಲಿರುವ ಕಾರಣ ಈ ಜಮೀನನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿರಿಸಬೇಕು ಎಂದು ಕಾನೂನು ಇಲಾಖೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿತ್ತು.

 

ಕೆ ಸಿ ತಿಮ್ಮಯ್ಯ ಮತ್ತು ಎಂ ಎಂ ಸೋಮಯ್ಯ ಪ್ರಕರಣದಲ್ಲಿ ಉಚ್ಛ ನ್ಯಾಯಾಲಯ ನೀಡಿರುವ ತೀರ್ಪಿನ ಅನ್ವಯ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 27ರ ಅನ್ವಯ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಯಾವುದೇ ನಿಯಮಗಳನ್ನು ಸರ್ಕಾರವು ಸಡಿಲಿಸಬೇಕಾದರೆ ಸಡಿಲಿಕೆಗೆ ಸಕಾರಣಗಳನ್ನು ನೀಡಬೇಕಾಗುತ್ತದೆ. ಯಾವ ಕಾರಣಕ್ಕಾಗಿ ನಿಯಮವನ್ನು ಸಡಿಲಿಕೆ ಮಾಡಲಾಗುತ್ತಿದೆ ಎಂಬ ಅಂಶವನ್ನು ವಿವರಿಸಬೇಕಾಗುತ್ತದೆ ಎಂದು ಹೇಳಿತ್ತು.

 

ಅಲ್ಲದೇ ‘ಪ್ರಸ್ತುತ ಪ್ರಕರಣದಲ್ಲಿ ಆಡಳಿತ ಇಲಾಖೆಯು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರನಿಯಮ 27ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ನಿಯಮ 22ಎ(2) ಅನ್ನು ಸಡಿಲಿಸುವ ಬಗ್ಗೆ ಪ್ರಸ್ತಾಪಿಸಿದೆಯೇ ಹೊರತು ಯಾವ ಕಾರಣಕ್ಕಾಗಿ ಸದರಿ ನಿಯಮಾವಳಿಗಳನ್ನು ಸಡಿಲಿಸಿ ಚಿಕ್ಕಮಗಳೂರು ಜಿಲ್ಲೆ ಚಿಕ್ಕಮಗಳೂರು ತಾಲೂಕು ಕಸಬಾ ಹೋಬಳಿ ಹಿರೇಮಗಳೂರು ಗ್ರಾಮದ ಸರ್ವೆ ನಂಬರ್‌ 544ರಲ್ಲಿ 6 ಎಕರೆ ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ರಾಷ್ಟ್ರೋತ್ಥಾನ ಪರಿಷತ್‌ಗೆ ನೀಡಬೇಕು ಎಂಬ ಬಗ್ಗೆ ಸಕಾರಣಗಳನ್ನು ಆಡಳಿತ ಇಲಾಖೆಯು ಕಡತದಲ್ಲಿ ತಿಳಿಸಿಲ್ಲ. ಹೀಗಾಗಿ ರಾಷ್ಟ್ರೋತ್ಥಾನ ಪರಿಷತ್‌ಗೆ ಶೈಕ್ಷಣಿಕ ಉದ್ದೇಶಕ್ಕಾಗಿ ಮಂಜೂರು ಮಾಡಲು ಅವಕಾಶವಿರುವುದಿಲ್ಲ,’ ಎಂದು ಕಾನೂನು ಇಲಾಖೆಯು ತನ್ನ ಅಭಿಪ್ರಾಯದಲ್ಲಿ ಸ್ಪಷ್ಟವಾಗಿ ತಿಳಿಸಿತ್ತು ಎಂಬುದು ಗೊತ್ತಾಗಿದೆ.

 

ಆದರೂ ಕಂದಾಯ ಇಲಾಖೆಯು ರಾಷ್ಟ್ರೋತ್ಥಾನ ಪರಿಷತ್‌ಗೆ ಜಮೀನು ಮಂಜೂರು ಮಾಡಲು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಸಚಿವ ಆರ್‌ ಅಶೋಕ್‌ ಅವರು ಅನುಮೋದಿಸಿದ್ದರು. ಅಲ್ಲದೆ ಸಚಿವ ಸಂಪುಟದ ಮುಂದೆ ಮಂಡಿಸಲಾಗಿತ್ತು.

SUPPORT THE FILE

Latest News

Related Posts