ಲಂಚ;ಗೃಹ ಇಲಾಖೆ ಪ್ರಭಾವಿ ಅಧಿಕಾರಿಯ ಹುದ್ದೆಯನ್ನು ಎಫ್‌ಐಆರ್‌ನಲ್ಲಿ ಮರೆಮಾಚಿದ ಪೊಲೀಸರು

photo credit;deccanheralad

ಬೆಂಗಳೂರು; ನಿವೃತ್ತ ಪೊಲೀಸ್‌ ಇನ್ಸ್‌ಪೆಕ್ಟರ್‌ ಪಿ ಎನ್‌ ಗಣೇಶ್‌ ಎಂಬುವರಿಗೆ ವೈದ್ಯಕೀಯ ಚಿಕಿತ್ಸೆ ವೆಚ್ಚ ಮರುಪಾವತಿಸುವ ಸಂಬಂಧ ವಿಧಾನಸೌಧದ ಎರಡನೇ ಮಹಡಿಯಲ್ಲಿರುವ ಒಳಾಡಳಿತ ಇಲಾಖೆಯ ಹಿರಿಯ ಅಧಿಕಾರಿಗಳೇ 20 ಸಾವಿರ ರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾದ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಅಧಿಕಾರಿಯ ಅವರ ಪೂರ್ಣ ಹೆಸರು, ಹುದ್ದೆ ಪದನಾಮವನ್ನು ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ನಲ್ಲಿ ಉಲ್ಲೇಖಿಸದಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಲೋಕಾಯುಕ್ತ ಪೊಲೀಸರ ಕಾರ್ಯವೈಖರಿ ಕುರಿತು ಇತ್ತೀಚೆಗಷ್ಟೇ ಸಭೆ ನಡೆಸಿದ್ದ ಲೋಕಾಯುಕ್ತ ಬಿ ಎಸ್‌ ಪಾಟೀಲ್‌ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದರ ಬೆನ್ನಲ್ಲೇ ಎಫ್‌ಐಆರ್‌ನಲ್ಲಿ ಪ್ರಭಾವಿ ಅಧಿಕಾರಿಯ ಹುದ್ದೆ, ಪದನಾಮವನ್ನೂ ಪೊಲೀಸ್‌ ಠಾಣಾಧಿಕಾರಿ ಮರೆ ಮಾಚಿರುವುದು ಮುನ್ನೆಲೆಗೆ ಬಂದಿದೆ. ಈ ಸಂಬಂಧ ದಾಖಲಾಗಿರುವ ಎಫ್‌ಐಆರ್‌ ಮತ್ತು ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ವಿಧಾನಸೌಧದ ಎರಡನೇ ಮಹಡಿಯಲ್ಲಿ ಒಳಾಡಳಿತ ಇಲಾಖೆಯಲ್ಲಿ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದ ಗೃಹ ರಕ್ಷಕ ದಳ ಸಿಬ್ಬಂದಿ ಸತೀಶ್‌ ಎಂಬುವರು ನಿವೃತ್ತ ಪೊಲೀಸ್‌ ಇನ್ಸ್‌ಪೆಕ್ಟರ್‌ರಿಂದ ಲಂಚದ ಹಣವನ್ನು ಸ್ವೀಕರಿಸಿದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರ ದಾಳಿಗೆ ಒಳಗಾಗಿದ್ದರು. ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಸತೀಶ್‌ ಎಂಬಾತನನ್ನು ಪ್ರಕರಣದಲ್ಲಿ ಮೊದಲನೇ ಆರೋಪಿ ಎಂದು ಗುರುತಿಸಲಾಗಿತ್ತು.

 

ಅಲ್ಲದೇ ಆತನ ಹೇಳಿಕೆ ಮೇರೆಗೆ ಒಳಾಡಳಿತ ಇಲಾಖೆಯ ಗೀತಾ ಎಂಬುವರನ್ನು ಎರಡನೇ ಆರೋಪಿಯನ್ನಾಗಿಸಲಾಗಿದೆ. ಆದರೆ ಗೀತಾ ಎಂಬುವರು ಒಳಾಡಳಿತ ಇಲಾಖೆಯಲ್ಲಿ ಯಾವ ಶ್ರೇಣಿಯ ಅಧಿಕಾರಿ, ಸದ್ಯ ಯಾವ ಹುದ್ದೆ, ಪದನಾಮದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಬಗ್ಗೆ ಎಫ್‌ಐಆರ್‌ನಲ್ಲಿ ಉಲ್ಲೇಖಿಸದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

ಅದೇ ರೀತಿ ಲೋಕಾಯುಕ್ತ ದಾಳಿಯಲ್ಲಿ ಸಿಕ್ಕುಬೀಳುವ ಪ್ರಭಾವಿ ಅಧಿಕಾರಿಗಳ ಹೆಸರು, ಹುದ್ದೆ, ಪದನಾಮವನ್ನೂ ಎಫ್‌ಐಆರ್‌ನಲ್ಲಿ ಮರೆಮಾಚುತ್ತಿರುವುದು ಲೋಕಾಯುಕ್ತ ಪೊಲೀಸ್‌ ಠಾಣಾಧಿಕಾರಿಗಳ ಕರ್ತವ್ಯಲೋಪಕ್ಕೆ ಕೈಗನ್ನಡಿ ಹಿಡಿದಂತಾಗಿದೆ.

 

ಎಫ್‌ಐಆರ್‌ನಲ್ಲಿ ಎರಡನೇ ಆರೋಪಿ ಎಂದು ಉಲ್ಲೇಖಿಸಲಾಗಿರುವ ಗೀತಾ ಎಂಬುವರ ಪೂರ್ಣ ಹೆಸರು ಡಾ ಎಲ್‌ ಗೀತಾ ಎಂದು ತಿಳಿದು ಬಂದಿದೆ. ಇವರು ವಿಧಾನಸೌಧದ ಎರಡನೇ ಮಹಡಿಯಲ್ಲಿರುವ ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿಯಾಗಿ (ಕೊಠಡಿ ಸಂಖ್ಯೆ 220) ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಗೊತ್ತಾಗಿದೆ.

 

ಸಾಮಾನ್ಯವಾಗಿ ಎಫ್‌ಐಆರ್‌ನಲ್ಲಿ ಅಧಿಕಾರಿ, ಸಿಬ್ಬಂದಿ, ಸದ್ಯ ಎಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ವಿವರಗಳನ್ನು ನಮೂದಿಸಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಗೀತಾ ಎಂಬುವರು ಒಳಾಡಳಿತ ಇಲಾಖೆಯಲ್ಲಿ ಯಾವ ಹುದ್ದೆ, ಪದನಾಮದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ವಿವರಗಳನ್ನು ನಮೂದಿಸದೇ ಕೇವಲ ಗೀತಾ ಎಂದು ನಮೂದಿಸುವ ಮೂಲಕ ಲೋಕಾಯುಕ್ತ ಪೊಲೀಸರು ಪ್ರಭಾವಕ್ಕೆ ಮಣಿದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಎಫ್‌ಐಆರ್‌ನಲ್ಲೇನಿದೆ?

 

ಈ ಹಿಂದೆ ಪೊಲೀಸ್‌ ಇಲಾಖೆಯಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪಿ ಎನ್‌ ಗಣೇಶ್‌ ಅವರು ಲಿವರ್‌ ಸಂಬಂಧಿತ ಅನಾರೋಗ್ಯಕ್ಕೆ ಒಳಗಾಗಿ ಖಾಸಗಿ ಆಸ್ಪತ್ರೆಯೊಂದರಲ್ಲಿ 2017ರ ಆಗಸ್ಟ್‌ 18ರಿಂದ ಸೆ.4ರವರೆಗೆ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಆರೋಗ್ಯ ಭಾಗ್ಯ ಯೋಜನೆಗೆ ಒಳಪಡುವುದಿಲ್ಲ ಎಂದು ತಿಳಿದ ನಂತರ ವೈದ್ಯಕೀಯ ಚಿಕಿತ್ಸೆಗೆ ತಗುಲಿದ ಒಟ್ಟು 6,24,000 ರು.ಗಳನ್ನು ತಮ್ಮ ಸ್ವಂತ ಹಣದಿಂದ ಭರಿಸಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

 

ಅನಾರೋಗ್ಯದಿಂದ ಚೇತರಿಸಿಕೊಂಡ ನಂತರ ಚಿಕಿತ್ಸೆಗೆ ಭರಿಸಿದ್ದ ವೆಚ್ಚವನ್ನು ಮರು ಪಾವತಿಸುವಂತೆ ಮೇಲಾಧಿಕಾರಿಗಳ ಮೂಲಕ ಡಿಜಿ ಮತ್ತು ಐಜಿಪಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. 6.24 ಲಕ್ಷ ರು ಪೈಕಿ 2.76 ಲಕ್ಷ ರು.ಗಳನ್ನು ಚಿಕಿತ್ಸಾ ವೆಚ್ಚವನ್ನಾಗಿ ಮಂಜೂರು ಮಾಡಬಹುದು ಎಂದು ಶಿಫಾರಸ್ಸು ಮಾಡಿದ್ದ ಮೇಲಾಧಿಕಾರಿಗಳು ಕಡತವನ್ನು ವಿಧಾನಸೌಧದಲ್ಲಿರುವ ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಪೊಲೀಸ್‌ ಸೇವೆಗಳು-1) ಕಚೇರಿಗೆ ಸಲ್ಲಿಸಿದ್ದರು ಎಂದು ಎಫ್‌ಐಆರ್‌ನಿಂದ ತಿಳಿದು ಬಂದಿದೆ.

 

ಆದರೆ ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಕಚೇರಿಯು ಚಿಕಿತ್ಸೆಯ ವೆಚ್ಚದ ಮರುಪಾವತಿಯ ಆದೇಶ ಮಾಡಿಲ್ಲ. ಅನಾರೋಗ್ಯದಲ್ಲಿದ್ದರೂ ಪಿ ಎಸ್‌ ಗಣೇಶ್‌ ಅವರು ಒಳಾಡಳಿತ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗೃಹ ರಕ್ಷಕ ದಳದ ಸಿಬ್ಬಂದಿ ಸತೀಶ್‌ ಎಂಬುವರನ್ನು ಸಂಪರ್ಕಿಸಿದ್ದರು.

 

ಅದಕ್ಕೆ ಸತೀಶ್‌ ಎಂಬಾತ ‘ ನಿಮ್ಮಕೆಲಸ ಆಗಲು ಒಳಾಡಳಿತ ಇಲಾಖೆಯಲ್ಲಿ ಕೆಲಸ ಮಾಡುವ ಗೀತಾ ಎನ್ನುವವರಿಗೆ ಹಾಗೂ ಸಂಬಂಧಿತ ಅಲ್ಲಿನ ಇತರೆ ಸಿಬ್ಬಂದಿಗಳಿಗೆ ಸೇರಿದಂತೆ 20,000 ರು.ಗಳನ್ನು ನೀಡಬೇಕು, ಇಲ್ಲವಾದರೆ ಬಾಕಿ ಬಿಲ್ ಮರುಪಾವತಿ ಆದೇಶ ಆಗುವುದಿಲ್ಲ,’ ಎಂದು ಲಂಚದ ಹಣವನ್ನು ಕೇಳಿದ್ದರು ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.

 

ಇದಕ್ಕೆ ಆಕ್ಷೇಪ ಎತ್ತಿದ್ದ ಪಿ ಎಸ್‌ ಗಣೇಶ್‌ ಅವರು ‘ಎಲ್ಲಾ ಸರಿಯಾಗಿರುವ ದಾಖಲೆಗಳಿಗೆ ಲಂಚದ ಹಣವನ್ನು ಏಕೆ ಕೊಡಬೇಕೆಂದಾಗ, ಆತ ‘ನೀವು ಕೇಳಿದ ಹಣವನ್ನು ಕೊಡದಿದ್ದರೇ ಒಳಾಡಳಿತ ಇಲಾಖೆಯವರು ಯಾವುದಾದರೊಂದು ಕಾರಣ ಹೇಳಿ ಡಿಜಿ ಆಫೀಸ್‌ಗೆ ಕಡತವನ್ನು ವಾಪಸ್‌ ಕಳಿಸುತ್ತಾರೆ. ಈಗಾಗಲೇ ಈ ಕಡತವು 5 ವರ್ಷ ಆಗಿದೆ. ಇನ್ನಷ್ಟು ವಿಳಂಬವಾಗುತ್ತದೆ,’ ಎಂದು ಗಣೇಶ್‌ ಅವರು ಲೋಕಾಯುಕ್ತ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ವಿವರಿಸಿದ್ದಾರೆ.

 

ಅದೇ ರೀತಿ 2022ರ ನವಂಬರ್‌ 21ರಂದು ಸುಮಾರು 15.50 ಸಮಯದಲ್ಲಿ ಸತೀಶ್‌ ಎಂಬಾತನೇ ತನ್ನ ಮೊಬೈಲ್‌ನಿಂದ ಪಿ ಎಸ್‌ ಗಣೇಶ್‌ ಮೊಬೈಲ್‌ಗೆ ಕರೆ ಮಾಡಿ ಈ ಹಿಂದೆ ಹೇಳಿದ್ದ ದುಡ್ಡು ಕೊಡದಿದ್ದರೆ ನಿಮ್ಮ ಮೆಡಿಕಲ್‌ ಬಿಲ್‌ ಪಾಸ್‌ ಆಗುವುದಿಲ್ಲವೆಂದು ಹೇಳಿ ಸರ್ಕಾರಿ ಕೆಲಸ ಮಾಡಿಕೊಡಲು ಒಳಾಡಳಿತ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಗೀತಾ ಹಾಗೂ ಸಂಬಂಧಿತ ಇತರರ ಪರವಾಗಿ 20,000 ರು. ಲಂಚದ ಹಣವನ್ನು ನೀಡಬೇಕು ಎಂದು ಒತ್ತಾಯಪಡಿಸಿದ್ದರು, ‘ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

the fil favicon

SUPPORT THE FILE

Latest News

Related Posts