ಠಾಣೆ ಮೆಟ್ಟಿಲೇರಿದ ಸಿಎಂ ಪಿಎ ಹನಿಟ್ರ್ಯಾಪ್‌ ಪ್ರಕರಣ; ವಕೀಲರು ನೀಡಿದ ದೂರಿನಲ್ಲಿ ಹೆಸರು ಬಹಿರಂಗ

ಬೆಂಗಳೂರು; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಪ್ತ ಸಹಾಯಕನನ್ನು ಹನಿಟ್ರ್ಯಾಪ್‌ ಬಲೆಗೆ ಕೆಡವಲಾಗಿತ್ತು ಎಂದು ಹೇಳಲಾಗಿದ್ದ ಪ್ರಕರಣವನ್ನು ಜನ್ಮಭೂಮಿ ಫೌಂಡೇಷನ್‌  ಇದೀಗ ವಿಧಾನಸೌಧ ಪೊಲೀಸ್‌ ಠಾಣೆ ಮೆಟ್ಟಿಲೇರಿಸಿದೆ. ಈ ಪ್ರಕರಣವನ್ನು ತನಿಖೆಗೊಳಪಡಿಸಬೇಕು ಎಂದು ಪೊಲೀಸ್‌ ಇನ್ಸ್‌ಪೆಕ್ಟರ್‌ಗೆ ದೂರು ನೀಡಿದೆ.

 

ಈ ಪ್ರಕರಣವನ್ನು ವಿಧಾನಪರಿಷತ್‌ ಸದಸ್ಯ ಎನ್‌ ರವಿಕುಮಾರ್‌ ಮತ್ತು ಮುಖ್ಯಮಂತ್ರಿ ಕಚೇರಿಯ ಮತ್ತೊಬ್ಬ ಉನ್ನತ ಅಧಿಕಾರಿಯೊಬ್ಬರು ಮುಚ್ಚಿಹಾಕಿದ್ದಾರೆ ಎಂದು ಗುರುತವಾದ ಆರೋಪ ಕೇಳಿ ಬಂದಿರುವ ನಡುವೆಯೇ ಜನ್ಮಭೂಮಿ ಫೌಂಡೇಷನ್‌ ಪೊಲೀಸ್‌ ಠಾಣೆ ಮೆಟ್ಟಿಲೇರಿರುವುದು ಪ್ರಕರಣವನ್ನು ವಿಸ್ತರಿಸಿದಂತಾಗಿದೆ. ಪೊಲೀಸ್‌ ಠಾಣೆ ಸಲ್ಲಿಸಿರುವ ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಹನಿಟ್ರ್ಯಾಪ್‌ ರೀತಿಯ ಕಾರ್ಯಕ್ರಮಗಳನ್ನು ಹಲವು ವೈಯಕ್ತಿಕ ಲಾಭ ಮತ್ತು ಹಣ ವಸೂಲಿ ಮಾಡಲು ವಿಧಾನಸೌಧದಲ್ಲಿ ಒಂದು ಜಾಲವೇ ಇದೆ. ಇವರು ಹಲವು ವರ್ಷಗಳಿಂದ ಇಲ್ಲಿನ ಅಧಿಕಾರಿವರ್ಗ, ರಾಜಕೀಯ ನಾಯಕರುಗಳನ್ನು ತಮ್ಮ ಮಧು ಸಮ್ಮೋಹನ ಕ್ರಿಯೆಗೆ ಬಳಸಿಕೊಂಡು ಹಿಂದಿಎಯೂ ಸಹ ಬೆದರಿಸಿ ಹಣ ಮತ್ತುಇ ತಮ್ಮ ಕೆಲಸಗಳನ್ನು ಮಾಡಿಸಿಕೊಂಡಿರುತ್ತಾರೆ,’ ಎಂದು ಫೌಂಡೇಷನ್‌ನ ಟ್ರಸ್ಟಿಯೂ ಮತ್ತು ವಕೀಲರೂ ಆಗಿರುವ ನಟರಾಜ್‌ ಶರ್ಮಾ ಅವರು ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ.

 

ಹನಿಟ್ರ್ಯಾಪ್‌ಗೆ ಒಳಗಾಗಿದ್ದಾರೆ ಎಂದು ಹೇಳಲಾಗಿದ್ದ ಸಿಎಂ ಆಪ್ತ ಸಹಾಯಕ ಮತ್ತು ವಿಧಾನಪರಿಷತ್‌ನ ಡಿ ಗ್ರೂಪ್‌ ಮಹಿಳಾ ನೌಕರಳ ಹೆಸರನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ‘ ವಿಧಾನಸೌಧದಲ್ಲಿ ಡಿ ದರ್ಜೆ ನೌಕರಳಾಗಿ ಕೆಲಸ ಮಾಡುತ್ತಿರುವ ವರದ ಎಂಬ ಮಹಿಳೆ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಹರೀಶ್‌ ಎಂಬುವರನ್ನು ಹನಿಟ್ರ್ಯಾಪ್‌ಗೆ ಬಳಸಿಕೊಂಡು ಮಹತ್ವದ ದಾಖಲೆಗಳನ್ನು ಮೊಬೈಲ್‌ಗೆ ತರಿಸಿಕೊಂಡು ವಿರೋಧ ಪಕ್ಷದ ನಾಯಕರಿಗೆ ವರ್ಗಾವಣೆ ಮಾಡುತ್ತಿದ್ದ  ಎಂಬ ಬಗ್ಗೆ ಮಾಹಿತಿ ದೊರೆತಿರುತ್ತದೆ,’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

 

ಅದೇ ರೀತಿ ‘ಹರೀಶ್‌ ಎಂಬುವರು ಈ ಮಹಿಳೆ ಹೆಸರಿನಲ್ಲಿ ಕನಕಪುರ ರಸ್ತೆಯಲ್ಲಿ 13 ಎಕರೆ ಕೃಷಿಭೂಮಿಯನ್ನು ಕ್ರಯ ಮಾಡಲಾಗಿದೆ ಎಂಬ ಮಾಹಿತಿ ಇದ್ದು ಹರೀಶ್‌ ಬಳಿ ಇಷ್ಟು ದೊಡ್ಡ ಮೊತ್ತದ ಹಣ ಹೇಗೆ ಬಂತು ಎಂಬುದು ತನಿಖೆಯಿಂದ ಹೊರಬರಬೇಕಾಗಿದೆ. ಈ ವಿಷಯದಲ್ಲಿ ಹಲವು ಪ್ರಭಾವಿ ವ್ಯಕ್ತಿಗಳು ವಿಧಾನಪರಿಷತ್‌ ಸದಸ್ಯರು ಮಧ್ಯ ಪ್ರವೇಶಿಸಿ ಮುಚ್ಚಿ ಹಾಕುವ ಪ್ರಯತ್ನಕ್ಕೆ ಕೈ ಹಾಕಿರುವುದು ತಿಳಿದು ಬಂದಿದೆ. ಅತೀ ಮುಖ್ಯವಾಗಿ ಭಾರತೀಯ ಜನತಾಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್‌ ಸದಸ್ಯ ರವಿಕುಮಾರ್‌ ಅವರ ಹೆಸರು ಕೇಳಿಬಂದಿದ್ದು ಇವರು ಸಂಧಾನದ ಮಾತುಕತೆ ನಡೆಸಿದ್ದರು,’ ಎಂದು ದೂರಿನಲ್ಲಿ ವಿವರಿಸಿದ್ದಾರೆ.

 

ಹಾಗೆಯೇ ‘ ದೀಪಾವಳಿ ಕೊಡುಗೆಯಾಗಿ ಮಾಧ್ಯಮದವರಿಗೆ ಸ್ವೀಟ್‌ ಬಾಕ್ಸ್‌ನಲ್ಲಿ ಎರಡು ಲಕ್ಷ ರು.ಗಳನ್ನು ಇಟ್ಟಿದ್ದರು ಎಂಬ ಆಂತರಿಕ ಮಾತುಕತೆಯನ್ನು ಈ ವ್ಯಕ್ತಿಗಳಿಂದ ವರ್ಗಾವಣೆ ಆಗಿದೆ ಎಂದು ತಿಳಿದುಬಂದಿರುತ್ತದೆ. ಆಡಳಿತ ಸರ್ಕಾರದ ಮತ್ತು ಆಡಳಿತ ಪಕ್ಷದವರ ವಿರುದ್ಧ ಇದೊಂದು ರೀತಿಯ ಷಡ್ಯಂತ್ರ ಮತ್ತು ನಂಬಿಕೆ ದ್ರೋಹ. ಹೀಗಾಗಿ ಈ ಕುರಿತು ತನಿಕೆ ನಡೆಸಿ ಈ ವ್ಯಕ್ತಿಗಳ ಮೊಬೈಲ್‌, ವರ್ಗಾವಣೆ ಆಗಿರುವ ದಾಖಲೆಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕು. ಇದರ ಹಿಂದೆ ಇರುವ ಜಾಲವನ್ನು ಪತ್ತೆ ಹಚ್ಚಿ ಶಿಕ್ಷೆಗೆ ಒಳಪಡಿಸಬೇಕು,’ ಎಂದು ದೂರಿನಲ್ಲಿ ಕೋರಿದ್ದಾರೆ.

 

ವಿಧಾನಸೌಧದ ಮೊದಲನೇ ಮಹಡಿಯಲ್ಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯ ಗುತ್ತಿಗೆ ನೌಕರ ಮತ್ತು ವಿಧಾನ ಪರಿಷತ್‌ ಸಚಿವಾಲಯದ ಡಿ ಗ್ರೂಪ್‌ ಮಹಿಳಾ ನೌಕರೊಬ್ಬಳು ಶಾಮೀಲಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಪ್ತ ಸಹಾಯಕನನ್ನೇ ಹನಿಟ್ರ್ಯಾಪ್‌ ಬಲೆಗೆ ಕೆಡವಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು.

ಸಿಎಂ ಆಪ್ತ ಸಹಾಯಕನನ್ನೇ ಹನಿಟ್ರ್ಯಾಪ್‌ ಬಲೆಗೆ ಕೆಡವಿತ್ತೇ, ಬಿಜೆಪಿ ಶಾಸಕಾಂಗ ಕಚೇರಿಯ ಗುತ್ತಿಗೆ ನೌಕರನ ಕೂಟ?

ಮುಖ್ಯಮಂತ್ರಿಯ ಆಪ್ತ ಸಹಾಯಕನನ್ನು ಹನಿಟ್ರ್ಯಾಪ್‌ ಬಲೆಗೆ ಕೆಡವಲಾಗಿದೆ ಎಂಬ ಮಾಹಿತಿ ದೊರಕುತ್ತಿದ್ದಂತೆ ಪ್ರವಾಸದಲ್ಲಿದ್ದರೂ ಅದನ್ನು ಮೊಟಕುಗೊಳಿಸಿ ಎನ್‌ ರವಿಕುಮಾರ್‌ ಅವರು ದೌಡಾಯಿಸಿದ್ದರು ಎಂದು ಗೊತ್ತಾಗಿದೆ.

 

ಈ ಪ್ರಕರಣವು ಬಹಿರಂಗಗೊಂಡಲ್ಲಿ ಸಾರ್ವಜನಿಕವಾಗಿ ಪಕ್ಷದ ವರ್ಚಸ್ಸು ಮತ್ತು ಸರ್ಕಾರದ ಘನತೆಗೆ ಧಕ್ಕ ತರಬಹುದು ಎಂಬ ಭೀತಿಯಿಂದ ಅವರೇ ಪ್ರಕರಣವನ್ನು ಸುಸೂತ್ರವಾಗಿ ಇತ್ಯರ್ಥಗೊಳಿಸಲು ವಿಧಾನಪರಿಷತ್‌ ಸದಸ್ಯ ಎನ್‌ ರವಿಕುಮಾರ್‌ ಅವರು ಸಂಧಾನ ನಡೆಸಿದ್ದರು ಎಂದು ಹೇಳಲಾಗಿತ್ತು.

ಸಿಎಂ ಆಪ್ತಸಹಾಯಕನ ಹನಿಟ್ರ್ಯಾಪ್‌; ಸಂಧಾನ ನಡೆಸಿ ಮುಚ್ಚಿ ಹಾಕಿದರೇ ಎನ್‌ ರವಿಕುಮಾರ್‌?

ಕಾರ್ಯದರ್ಶಿ ಮಹಾಲಕ್ಷ್ಮಿ ಅವರನ್ನು ಭೇಟಿ ಮಾಡಿದ್ದ ಎನ್‌ ರವಿಕುಮಾರ್‌ ಮತ್ತು ಮುಖ್ಯಮಂತ್ರಿ ಕಚೇರಿಯ ಉನ್ನತ ಅಧಿಕಾರಿಯು ಕಾರ್ಯದರ್ಶಿ ಕಚೇರಿಗೇ ಡಿ ಗ್ರೂಪ್‌ ಮಹಿಳಾ ನೌಕರಳನ್ನೂ ಕರೆಸಿಕೊಂಡು ಪ್ರಕರಣದ ಬಗ್ಗೆ ಮಾಹಿತಿಯನ್ನೂ ಪಡೆದಿದ್ದಾರೆ. ಹಾಗೆಯೇ ಆಕೆ ಬಳಿ ಇದ್ದ ಮೊಬೈಲ್‌, ವಾಟ್ಸಾಪ್‌ ಚಾಟ್‌ಗಳನ್ನು ವೀಕ್ಷಿಸಿದ್ದರು. ಮತ್ತು ಮುಖ್ಯಮಂತ್ರಿ ಆಪ್ತ ಸಹಾಯಕ ಮತ್ತು ಡಿ ಗ್ರೂಪ್‌ ಮಹಿಳಾ ನೌಕರಳಿಂದ ಯಾವುದೇ ದೂರು ದಾಖಲಾಗದಂತೆ ಸಂಧಾನ ನಡೆಸಿದ್ದರು ಎಂದು ಹೇಳಲಾಗಿತ್ತು.

 

‘ಅದರೊಳಗೆ ತಲೆಹಾಕಿಲ್ಲ. ಆ ವಿಷಯ ಗೊತ್ತಿಲ್ಲ. ಪ್ರಕರರಣದ ಮಾಹಿತಿಯೇ ಇಲ್ಲ. ನಾನು ಟೂರ್‌ನಲ್ಲಿದ್ದೇನೆ. ಸಿಎಂ ಜತೆಯಲ್ಲಿಯೇ ಇದ್ದೇನೆ. ಖಂಡಿತವಾಗಿಯೂ ಈ ಯಾವ ಮಾಹಿತಿಯೂ ಇಲ್ಲ.,’ ಎಂದು ವಿಧಾನಪರಿಷತ್‌ ಸದಸ್ಯ ಎನ್‌ ರವಿಕುಮಾರ್‌ ಅವರು ಪ್ರತಿಕ್ರಿಯೆ ನೀಡಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts