ಕಂದಾಯ ಆಯುಕ್ತಾಲಯ ರಚನೆಗೆ ಪ್ರಾದೇಶಿಕ ಆಯುಕ್ತರ ವಿರೋಧ;ವಿಕೇಂದ್ರೀಕರಣದ ಮೇಲೆ ಅಡ್ಡ ಪರಿಣಾಮ

ಬೆಂಗಳೂರು; ಕಂದಾಯ ಆಯುಕ್ತಾಲಯ ಸ್ಥಾಪನೆಗೆ ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್‌ ಅವರ ನೇತೃತ್ವದ ಆಡಳಿತ ಸುಧಾರಣೆ ಆಯೋಗವು ಮಾಡಿದ್ದ ಶಿಫಾರಸ್ಸಿಗೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ವಿರೋಧ ವ್ಯಕ್ತಪಡಿಸಿದ್ದಾರೆ.  ಕಂದಾಯ ಆಯುಕ್ತಾಲಯ ಸ್ಥಾಪಿಸಿದಲ್ಲಿ ವಿಕೇಂದ್ರೀಕರಣದ ಮೇಲೆ ಅಡ್ಡ ಪರಿಣಾಮ ಬೀರಲಿರುವ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನೇ ಮುಂದುವರೆಸಬೇಕು ಎಂದು ನೀಡಿರುವ ಸಮರ್ಥನೆಯು ಆಡಳಿತ ಸುಧಾರಣೆ ಅಯೋಗದ ಶಿಫಾರಸ್ಸಿನ ಅನುಷ್ಠಾನಕ್ಕೆ ಹಿನ್ನಡೆಯಾದಂತಿದೆ.

 

ಈ ಸಂಬಂಧ ಕಂದಾಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ 2022ರ ಅಕ್ಟೋಬರ್‌ 15ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಕಂದಾಯ ಆಯುಕ್ತಾಲಯ ಸ್ಥಾಪಿಸುವ ಬದಲಾಗಿ ವಿಭಾಗ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ಮುಂದುವರೆಸಿ ಬಲಪಡಿಸಬೇಕು ಎಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಪತ್ರದಲ್ಲಿ ಬಲವಾದ ಕಾರಣಗಳನ್ನು ಒದಗಿಸಿದ್ದಾರೆ.

 

ಪ್ರಾದೇಶಿಕ ಆಯುಕ್ತರ ಪತ್ರದಲ್ಲೇನಿದೆ?

 

1892ನೇ ಸಾಲಿನಲ್ಲಿ ಈಸ್ಟ್‌ ಇಂಡಿಯಾ ಕಂಪನಿಯು ಆಂಗ್ಲರ ಆಡಳಿತ ವ್ಯಾಪ್ತಿಯು ಹೆಚ್ಚಾದ ಕಾರಣ ಬಹಳ ಅಂತರವಿರುವ ಜಿಲ್ಲೆಗಳ ಸುಗಮ ಆಡಳಿತದ ಸಲುವಾಗಿ ಆಡಳಿತ ಮಟ್ಟದಲ್ಲಿ ವಿಭಾಗವನ್ನು ಸ್ಥಾಪಿಸಿದೆ. ವಿಕೇಂದ್ರಿಕರಣಕ್ಕಾಗಿ ರಚಿಸಲಾಗಿದ್ದ 1907ರ ರಾಯಲ್‌ ಕಮಿಷನ್‌ ಸಹ ವಿಭಾಗ ಮಟ್ಟದ ಆಡಳಿತವನ್ನು ಉಳಿಸಲು ಶಿಫಾರಸ್ಸು ಮಾಡಿದೆ. ಭಾರತ ಸ್ವಾತಂತ್ರ್ಯಗೊಂಡ ನಂತರ ಗುಜರಾತ್‌, ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ, ಸಿಕ್ಕೀಂ, ಮಣಿಪುರ, ತ್ರಿಪುರ, ಮಿಜೋರಾಂ, ಜಮ್ಮು ಕಾಶ್ಮೀರ, ಲಡಾಕ್‌ ರಾಜ್ಯಗಳು ಸಾಂಪ್ರದಾಯಿಕವಾದ ಕಂದಾಯ ವ್ಯವಸ್ಥೆಯು ಮುಂದುವರೆದಿದೆ ಎಂದು ಐತಿಹಾಸಿಕ ಕಾರಣಗಳನ್ನು ಮುಂದಿರಿಸಿರುವುದು ಪತ್ರದಿಂದ ತಿಳಿದು ಬಂದಿದೆ.

 

ಪ್ರಾದೇಶಿಕ ಆಯುಕ್ತರು ವಿವಿಧ ಇಲಾಖೆಗಳ ಅಧಿಕಾರಿಗಳ ಆದೇಶ, ನಿರ್ಣಯಗಳ ವಿರುದ್ಧ ಮೇಲ್ಮನವಿ ಪ್ರಾಧಿಕಾರ ಆಗಿದ್ದಾರೆ. ಜಿಲ್ಲಾ ಮತ್ತು ವಿಭಾಗ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುವ ರಾಜ್ಯ ಸರ್ಕಾರಿ ನೌಕರರಿಗೆ ಶಿಸ್ತು ಪ್ರಾಧಿಕಾರವಾಗಿದ್ದಾರೆ. ವಿಭಾಗ ಮಟ್ಟದ ಕಂದಾಯ ಆಡಳಿತದ ಮೇಲೆ ನಿಯಂತ್ರಣ ಹೊಂದಿರುವ ಪ್ರಾದೇಶಿಕ ಆಯುಕ್ತರು ವಿವಾದಾಸ್ಪದ ಪ್ರಕರಣಗಳಲ್ಲಿ ಕಂದಾಯ ನ್ಯಾಯಾಲಯದ ಕಲಾಪಗಳನ್ನೂ ನಡೆಸುವ ಪ್ರಾಧಿಕಾರವಾಗಿದ್ದಾರೆ ಎಂದು ಸಮರ್ಥನೆ ಒದಗಿಸಲಾಗಿದೆ.

 

ಸರ್ಕಾರದ ಹಲವು ಸಾರ್ವಜನಿಕ ಅಂಗಸಂಸ್ಥೆಗಳೊಂದಿಗೆ ಸರಿಯಾಗಿ ಮತ್ತು ಪರಿಣಾಮಕಾರಿಯಾಗಿ ಸಮನ್ವಯ ಅಧಿಕಾರಿ, ವಿಬಾಗದ ವಿವಿಧ ಕಚೇರಿಗಳ ಮೇಲ್ವಿಚಾರಣೆ, ಮಾರ್ಗದರ್ಶನ, ನಿಯಂತ್ರಣ, ವಿಭಾಗದ ಎಲ್ಲಾ ಇಲಾಖೆಗಳ ಸಮನ್ವಯ ಮತ್ತು ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ, ನಿವಾರಣೆ, ನಗರ, ಗ್ರಾಮೀಣ ಸ್ಥಳೀಯ ಸಂಸ್ಥೆಗಳು, ಅಭಿವೃದ್ಧಿ ಪ್ರಾಧಿಕಾರ, ಇತರೆ ಇಲಾಖೆಗಳ ಆಯವ್ಯಯದ ಮೇಲೆ ಆರ್ಥಿಕ ನಿಯಂತ್ರಣ ಹೊಂದಿದ್ದಾರೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

 

ಜಿಲ್ಲೆ ಮತ್ತು ರಾಜ್ಯ ಸರ್ಕಾರದೊಂದಿಗೆ ಸಂವಹನ ಸೇತುವಾಗಿ ಕಾರ್ಯನಿರ್ವಹಿಸಲಾಗುತ್ತಿದೆಯಲ್ಲದೆ ತಾಂತ್ರಿಕ ಇಲಾಖೆಗಳಿಗೆ ವಿಭಾಗೀಯ ಸಮನ್ವಯ ಪ್ರಾಧಿಕಾರವಾಗಿದ್ದಾರೆ. ವಿಭಾಗ ಮಟ್ಟದಲ್ಲಿ ಉಪ ತಹಶೀಲ್ದಾರ್‌ ಮತ್ತು ಕೆಳಮಟ್ಟದ ಕಂದಾಯ ಅಧಿಕಾರಿಗಳ ವರ್ಗಾವಣೆ, ಶಿಸ್ತುಪ್ರಾಧಿಕಾರವಾಗಿಯೂ ಕಾರ್ಯನಿರ್ವಹಿಸಲಾಗುತ್ತಿದೆ.

 

ಕರ್ನಾಟಕ ನೀರಾವರಿ ಕಾಯ್ದೆ 1965, ಕರ್ನಾಟಕ ಬಾಡಿಗೆ ನಿಯಂತ್ರಣ ಕಾಯ್ದೆ (1999), ಕರ್ನಾಟಕ ಭೂ ಕಂದಾಯ ಕಾಯ್ದೆ (1964), ಕರ್ನಾಟಕ ಭೂ ಸುಧಾರಣೆ ಕಾಯ್ದೆ (1961), ಕರ್ನಾಟಕ ಭೂ ಮಂಜೂರಾತಿ ನಿಯಮಾವಳಿಗಳು (1969), ಕರ್ನಾಟಕ ಪೌರಸಭೆಗಳ ಕಾಯ್ದೆ (1964), ಕರ್ನಾಟಕ ಇನಾಂ ರದ್ದಿಯಾತಿ ಮತ್ತು ಹಲವು ಇನಾಂಗಳ ರದ್ದಿಯಾಯಿತಿ ಕಾಯ್ದೆ, ಕರ್ನಾಟಕ ಪ.ಜಾ, ಪ.ಪಂ. ಮತ್ತು ಓಬಿಸಿ ನೇಮಕಾತಿ ಮತ್ತುಮೀಸಲಾತಿಕಾಯ್ದೆ (1994), ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುನರ್‌ ವಸತಿ ಹಾಗೂ ಪುನರ್‌ ನಿರ್ಮಾಣ ಕಾಯ್ದೆ 2013 ಸೇರಿದಂತೆ ಇನ್ನಿತರೆ ಕಾನೂನು ಮತ್ತು ನಿಯಮಗಳಡಿಯಲ್ಲಿ ಪ್ರಾದೇಶಿಕ ಆಯುಕ್ತರು ಮೇಲ್ಮನವಿ ಮತ್ತು ಪುನರ್‌ ಪರಿಶೀಲನೆ ಪ್ರಾಧಿಕಾರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಸೂಕ್ತ ಕಾರಣಗಳನ್ನು ಪತ್ರದಲ್ಲಿ ಒದಗಿಸಿದ್ದಾರೆ.

 

 

ಟಿ ಎಂ ವಿಜಯಭಾಸ್ಕರ್‌ ಅವರು ನೀಡಿದ್ದ ವರದಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಪ್ಪಿಗೆ ನೀಡಿದ್ದರು.  ಆಯೋಗದ ಶಿಫಾರಸು ಅಂಗೀಕರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಮತ್ತು ಪ್ರಾದೇಶಿಕ ಆಯುಕ್ತರ ಕಚೇರಿಗಳು ಬಿಳಿಯಾನೆಗಳಾಗಿವೆ’ ಎಂಬ ಕಂದಾಯ ಸಚಿವ ಆರ್.ಅಶೋಕ ಹೇಳಿಕೆ ನೀಡಿದ್ದರು. ಇದಕ್ಕೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿತ್ತು.

‘ಈ ಹಿಂದೆ ಅಸ್ತಿತ್ವದಲ್ಲಿದ್ದ ವಿಭಾಗಾಧಿಕಾರಿಗಳ ಕಚೇರಿಗಳನ್ನು ರದ್ದುಗೊಳಿಸಲಾಗಿತ್ತು. ನಂತರ ಉದ್ಭವಿಸಿದ ಸಮಸ್ಯೆಗಳ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ಅಸ್ತಿತ್ವಕ್ಕೆ ತರಲಾಗಿತ್ತು. ಈಗ ಮತ್ತೆ ರದ್ದುಗೊಳಿಸುವುದು ಜನವಿರೋಧಿ ಕ್ರಮವಾಗಿದೆ’ ಎಂದು ಹೋರಾಟಗಾರರು ಆಕ್ಷೇಪಿಸಿದ್ದರು.
ಕಚೇರಿಗಳು ರದ್ದಾಗುವುದರಿಂದ ಸಾಮಾನ್ಯ ಜನರು ಬೆಂಗಳೂರಿಗೆ ದೌಡಾಯಿಸುವ ಪರಿಸ್ಥಿತಿ ಉಂಟಾಗುತ್ತದೆ. ಇಂತಹ ಜನವಿರೋಧಿ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಳ್ಳಬಾರದು’ ಎಂದು ಆಗ್ರಹಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts