ಪರಿಶಿಷ್ಟರ ಹಾಸ್ಟೆಲ್‌ ನಿವೇಶನದ ಮೇಲೆ ಬಿಜೆಪಿ ಕಣ್ಣು; ಸಮಾಜ ಕಲ್ಯಾಣ ಇಲಾಖೆ ಅಭಿಪ್ರಾಯಕ್ಕಿಲ್ಲ ಮನ್ನಣೆ

ಬೆಂಗಳೂರು; ಪರಿಶಿಷ್ಟ ಜಾತಿಯ ಸರ್ಕಾರಿ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣಕ್ಕೆ ಕಾಯ್ದಿರಿಸಲಾಗಿರುವ ನಿವೇಶನವನ್ನು ರಾಜಕೀಯ ಪಕ್ಷದ ಕಚೇರಿ ಕಟ್ಟಡ ನಿರ್ಮಾಣಕ್ಕೆ ಮಂಜೂರು ಮಾಡಲು ಅವಕಾಶಗಳಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆಯು ಒಂದು ವರ್ಷದ ಹಿಂದೆಯೇ ಸಲ್ಲಿಸಿರುವ ವರದಿಯನ್ನು ಬದಿಗಿರಿಸಲು ಹೊರಟಿರುವ ರಾಜ್ಯ ಬಿಜೆಪಿ ಸರ್ಕಾರವು ಭಾರತೀಯ ಬಿಜೆಪಿ ಪಕ್ಷದ ಕಟ್ಟಡ ನಿರ್ಮಾಣ ಮಾಡಲು ನಿವೇಶನಕ್ಕಾಗಿ ಜಿಲ್ಲಾಡಳಿತದ ಮೇಲೆ ಒತ್ತಡ ಮುಂದುವರೆಸಿದೆ.

 

ಹಾಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಪ್ರತಿನಿಧಿಸಿರುವ ಮುಧೋಳ ನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಶದಲ್ಲಿರುವ ನಿವೇಶನದಲ್ಲಿ ಭಾರತೀಯ ಜನತಾ ಪಕ್ಷದ ಕಚೇರಿ ಕಟ್ಟಡ ನಿರ್ಮಾಣ ಸಂಬಂಧ ನಿವೇಶನ ಮಂಜೂರು ಮಾಡಬೇಕು ಎಂಬ ಅರ್ಜಿ ಸಲ್ಲಿಕೆಯಾಗಿತ್ತು. ಈ ಪ್ರಸ್ತಾವನೆ ಕುರಿತು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು 2021ರ ಡಿಸೆಂಬರ್‌ 28ರಂದೇ ವರದಿ ಸಲ್ಲಿಸಿದ್ದರು.

 

ಆಯುಕ್ತರ ಪತ್ರದಲ್ಲೇನಿದೆ?

 

ಮುಧೋಳ ನಗರದ ಮಂಟೂರು ರಸ್ತೆಯಲ್ಲಿ ಲಭ್ಯವಿರುವ ಸಮಾಜ ಕಲ್ಯಾಣ ಇಲಾಖೆಯ ಖಾಲಿ ನಿವೇಶನವನ್ನು (ಆರ್‌ಎಸ್‌ ನಂ 212 ಮತ್ತು ಸಿಟಿಎಸ್‌ 2588, 134.00 ಚ ಮೀ) ಮಂಜೂರು ಮಾಡಲು ಕೋರಲಾಗಿದೆ. ಈ ನಿವೇಶನವು ಇಲಾಖೆಯ ಹೆಸರಿನಲ್ಲಿದೆ. ಅಲ್ಲದೆ ಇದನ್ನು ಇಲಾಖೆಯ ವಿದ್ಯಾರ್ಥಿ ನಿಲಯದ ಕಟ್ಟಡ ನಿರ್ಮಾಣಕ್ಕೆ ಕಾಯ್ದಿರಿಸಲಾಗಿದೆ. ಇಲಾಖೆಯು ನಡೆಸುತ್ತಿರುವ ಪರಿಶಿಷ್ಟ ಜಾತಿಯ ಸರ್ಕಾರಿ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣ ಸಂಬಂಧವಾಗಿ ಕಾಯ್ದಿರಿಸಿರುವ ನಿವೇಶನವನ್ನು ರಾಜಕೀಯ ಪಕ್ಷದ ಕಚೇರಿ ಕಟ್ಟಡ ನಿರ್ಮಾಣಕ್ಕಾಗಿ ಮಂಜೂರು ಮಾಡಲು ಅವಕಾಶಗಳಿಲ್ಲ,’ ಎಂದು ಪತ್ರದಲ್ಲಿ ತಿಳಿಸಿದ್ದರು.

 

ಇದಷ್ಟೇ ಅಲ್ಲ 2022ರ ಮಾರ್ಚ್‌ 24ರಂದೂ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳಿಗೂ ದಾಖಲೆ ಸಮೇತ ಪತ್ರ ಬರೆದಿದ್ದರು. ‘ಸರ್ಕಾರಿ ಭೂಮಿಯನ್ನು ಯಾವುದೇ ರಾಜಕೀಯ ಪಕ್ಷದ ಕಚೇರಿ ಕಟ್ಟಡ ನಿರ್ಮಾಣಕ್ಕಾಗಿ ಮಂಜೂರು ಮಾಡಿರುವ ನಿದರ್ಶನಗಳಿಲ್ಲ. ಸರ್ಕಾರಿ ಭೂಮಿಯನ್ನು ಖಾಸಗಿ ಸಂಸ್ಥೆಗಳಿಗೆ ಮಂಜೂರು ಮಾಡುವ ಕುರಿತು ಯಾವುದೇ ಮಾರ್ಗಸೂಚಿಗಳು ಲಭ್ಯವಿರುವುದಿಲ್ಲ,’ ಎಂದು ಸ್ಪಷ್ಟವಾಗಿ ಇಲಾಖೆಯ ಕಾರ್ಯದರ್ಶಿಗೆ ಆಯುಕ್ತರು ಪತ್ರದಲ್ಲಿ ವಿವರಿಸಿದ್ದರು.

 

 

 

ಅಲ್ಲದೇ 2022ರ ಮಾರ್ಚ್‌ 24ರಂದೂ ಸಮಾಜ ಕಲ್ಯಾಣ ಇಲಾಖೆಯು ಸರ್ಕಾರದ ಕಾರ್ಯದರ್ಶಿಗೆ ಎರಡನೇ ಪತ್ರ ಬರೆದಿತ್ತು.

 

ಆದರೂ ಮತ್ತೊಂದು ವರದಿ ಸಲ್ಲಿಸಬೇಕು ಎಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು 2022ರ ಜೂನ್‌ 9ರಂದು ಬಾಗಲಕೋಟೆ ಜಿಲ್ಲಾಧಿಕಾರಿಗೆ ಪತ್ರ ಬರೆದು ವರದಿ ಸಲ್ಲಿಸಲು ಸೂಚಿಸುವ ಮೂಲಕ ಜಿಲ್ಲಾಡಳಿತ ಮೇಲೆ ಒತ್ತಡ ಹೇರುತ್ತಿದೆ ಎಂದು ತಿಳಿದು ಬಂದಿದೆ. ಈ ಕುರಿತು ‘ದಿ ಫೈಲ್‌’ 2022ರ ಜುಲೈ 18ರಂದೇ ವರದಿ ಪ್ರಕಟಿಸಿತ್ತು.

 

ಬಿಜೆಪಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಪರಿಶಿಷ್ಟರ ವಿದ್ಯಾರ್ಥಿ ನಿಲಯಕ್ಕೆ ಮೀಸಲಾದ ನಿವೇಶನ!; ಕಾರಜೋಳರ ಒತ್ತಡ?

 

2019-20ನೇ ಸಾಲಿನಲ್ಲಿ ಬಿಜೆಪಿ ರಾಷ್ಟ್ರೀಯ ಘಟಕವು 4,848 ಕೋಟಿ ರು.ಮೌಲ್ಯದ ಆಸ್ತಿ ಹೊಂದಿರುವುದನ್ನು ಪ್ರಕಟಿಸಿತ್ತು. ಅದೇ ರೀತಿ 2020-21ರಲ್ಲಿ ಬಿಜೆಪಿಯ ಕರ್ನಾಟಕ ಘಟಕವು 22.44 ಕೋಟಿ ರು.ನಷ್ಟು ದೇಣಿಗೆ ಸಂಗ್ರಹಿಸಿತ್ತು ಎಂದು ಎಡಿಆರ್‌ ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.

 

ಸಾವಿರಾರು ಕೋಟಿ ರುಪಾಯಿ ದೇಣಿಗೆ ಪಡೆಯುತ್ತಿರುವ ಭಾರತೀಯ ಜನತಾ ಪಾರ್ಟಿಯು ತಾಲೂಕು ಪ್ರದೇಶಗಳಲ್ಲಿ ಸ್ವಂತ ಕಚೇರಿಗಾಗಿ ಕಟ್ಟಡ ನಿರ್ಮಾಣ ಮಾಡಲು ಪರಿಶಿಷ್ಟ ಜಾತಿಯ ಸರ್ಕಾರಿ ವಿದ್ಯಾರ್ಥಿ ನಿಲಯಗಳೂ ಸೇರಿದಂತೆ ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಿರುವ ನಿವೇಶನ, ಜಮೀನುಗಳನ್ನು ಮಂಜೂರು ಮಾಡಿಸಿಕೊಳ್ಳಲು ಭಗೀರಥ ಪ್ರಯತ್ನ ಮುಂದುವರೆಸಿದೆ.

 

ಸಾರ್ವಜನಿಕ ಉದ್ದೇಶಕ್ಕಾಗಿ ಕಾಯ್ದಿರಿಸಿದ್ದ ನಿವೇಶನಗಳನ್ನು ಪಕ್ಷದ ಸ್ವಂತ ಕಚೇರಿಗಾಗಿ ಮಂಜೂರು ಮಾಡಿಸಿಕೊಳ್ಳಲು ಕಂದಾಯ ಇಲಾಖೆಗೆ ವಿವಿಧ ಜಿಲ್ಲೆಗಳಿಂದ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ.

 

ಕಾನೂನು ಇಲಾಖೆಯ ಅಸಮ್ಮತಿ ನಡುವೆಯೂ ರಾಷ್ಟ್ರೋತ್ಥಾನ ಪರಿಷತ್‌ಗೆ ಗೋಮಾಳ ಮಂಜೂರು ಮಾಡಲಾಗಿದೆ. ಇದರ ಬೆನ್ನಲ್ಲೇ ಹಲವು ಸಚಿವರು ತಾಲೂಕು ಪ್ರದೇಶಗಳಲ್ಲಿ ಪಕ್ಷಕ್ಕೆ ಸ್ವಂತ ಕಚೇರಿಗಾಗಿ ನಾಗರಿಕ ನಿವೇಶನ, ಇತರೆ ಇಲಾಖೆಗಳು ಸಾರ್ವಜನಿಕ ಉದ್ದೇಶಕ್ಕಾಗಿ ಕಾಯ್ದಿರಿಸಿರುವ, ಮೀಸಲಿರಿಸಿರುವ ನಿವೇಶನಗಳನ್ನು ಮಂಜೂರು ಮಾಡಲು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಬಗ್ಗೆ ಅತ್ಯುತ್ಸಾಹ ವಹಿಸಿರುವ ಕಂದಾಯ ಸಚಿವ ಆರ್‌ ಅಶೋಕ್‌ ಅವರು ಬಿಜೆಪಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಪೂರಕವಾಗಿ ವರದಿ ಸಲ್ಲಿಸಬೇಕು ಎಂದು ತಾಕೀತು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts