ಸರ್ಕಾರಿ ಆಡಳಿತದಲ್ಲಿ ಭ್ರಷ್ಟರಿಗಿಲ್ಲ ಅಂಕುಶ; 72 ಕೆಎಎಸ್‌ ಅಧಿಕಾರಿಗಳ ವಿರುದ್ಧ ಕ್ರಮವಹಿಸದ ಸರ್ಕಾರ

ಬೆಂಗಳೂರು; ಭೂಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ ಪರಿಹಾರ, ಅಧಿಕಾರ ವ್ಯಾಪ್ತಿ ಮೀರಿ ಖಾತೆ ಬದಲಾವಣೆ, ಅನಧಿಕೃತವಾಗಿ ಹೆಚ್ಚುವರಿ ಹೆಸರು ಸೇರ್ಪಡೆ, ನಿಯಮಬಾಹಿರವಾಗಿ ಜಮೀನು ಮಂಜೂರು, ಸರ್ಕಾರದ ಮಾರ್ಗಸೂಚಿ ಮತ್ತು ನಿಯಮಗಳನ್ನು ಉಲ್ಲಂಘನೆ, ದಾಖಲೆಗಳನ್ನು ಪರಿಶೀಲಿಸದೇ ನೇರವಾಗಿ ಹಕ್ಕು ಬದಲಾವಣೆ, ಸರ್ಕಾರಿ ಜಮೀನಿಗೆ ಸಂಬಂಧಿಸಿದಂತೆ ಖಾಸಗಿ ಮತ್ತು ಸರ್ಕಾರದ ಪರ ಒಂದೇ ದಿನ ಎರಡು ಆದೇಶ, ಮುಜುರಾಯಿ ದೇವಸ್ಥಾನಗಳ ಹಣದ ಬಗೆಗಿನ ದಾಖಲೆಗಳನ್ನು ನಿರ್ವಹಿಸದಿರುವುದು, ನಿಯಮಬಾಹಿರವಾಗಿ ಖಾತೆ ವರ್ಗಾವಣೆ ಮಾಡಿರುವುದು ಸೇರಿದಂತೆ ಇನ್ನಿತರೆ ಗಂಭೀರ ಆರೋಪಗಳ ಸಂಬಂಧ ಕರ್ನಾಟಕ ಆಡಳಿತ ಸೇವೆ (ಕೆಎಎಸ್‌) ಅಧಿಕಾರಿಗಳ ವಿರುದ್ಧ ಸರ್ಕಾರವು ಯಾವುದೇ ಕ್ರಮಕೈಗೊಂಡಿಲ್ಲ.

 

ಆಪಾದನೆಗೆ ಗುರಿಯಾಗಿರುವ ಬಹುತೇಕ ಅಧಿಕಾರಿಗಳು ತಮ್ಮ ಆರೋಪಗಳ ಸಂಬಂಧ ನೀಡಿರುವ ಪ್ರತಿರಕ್ಷಣೆಯ ಲಿಖಿತ ಹೇಳಿಕೆಗಳನ್ನಾಧರಿಸಿ ಅವರನ್ನು ಆರೋಪ ಮುಕ್ತಾಯಗೊಳಿಸಲಾಗಿದೆ. ಹಲವು ಅಧಿಕಾರಿಗಳಿಗೆ ಇನ್ನೂ ದೋಷಾರೋಪಣೆ ಪಟ್ಟಿ ಜಾರಿಗೊಳಿಸಿಲ್ಲ. ಕೆಲವು ಅಧಿಕಾರಿಗಳಿಗೆ ದೋಷಾರೋಪಣೆಪಟ್ಟಿ ಜಾರಿಗೊಳಿಸಲಾಗಿದ್ದರೂ ಅದಕ್ಕೆ ಆಪಾದಿತ ಅಧಿಕಾರಿಗಳಿಂದ ವಿವರಣೆ ಪಡೆಯುವುದರಲ್ಲಿಯೇ ಇಲಾಖೆಯು ಕಾಲಹರಣ ಮಾಡುತ್ತಿದೆ. ಆಪಾದಿತ ಅಧಿಕಾರಿಗಳು ಇದನ್ನೇ ಮುಂದಿರಿಸಿಕೊಂಡು ನ್ಯಾಯಾಲಯಗಳಿಂದ ತಡೆಯಾಜ್ಞೆ ತರುವ ಮೂಲಕ ಯಾವ ಶಿಸ್ತು ಕ್ರಮವೂ ಇಲ್ಲದೆಯೆ ಅಧಿಕಾರ ಅನುಭವಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಕಳೆದ 5 ವರ್ಷಗಳಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧೀನದಲ್ಲಿ ಗ್ರೂಪ್‌ ಎ ಅಧಿಕಾರಿಗಳ ವಿರುದ್ಧ ಒಟ್ಟು 162 ಪ್ರಕರಣಗಳಲ್ಲಿ ಶಿಸ್ತು ಕ್ರಮ ಜರುಗಿಸಲಾಗಿತ್ತು. ಈ ಪೈಕಿ ಇನ್ನೂ 70 ಪ್ರಕರಣಗಳು ತೀರ್ಮಾನವಾಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಪರಿಷತ್‌ಗೆ ಅಧಿಕಾರಿಗಳ ಸಮಗ್ರ ವಿವರಣೆಗಳನ್ನು ಒದಗಿಸಿದ್ದಾರೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

‘ಶಿಸ್ತು ಕ್ರಮ ಪ್ರಾರಂಭವಾದ ನಂತರದಲ್ಲಿ ಕೆಲವು ಪ್ರಕರಣಗಳಲ್ಲಿ ಅಧಿಕಾರಿಗಳು ಸಂಬಂಧಿಸಿದ ನ್ಯಾಯಾಲಯಗಳಲ್ಲಿ ತಡೆಯಾಜ್ಞೆ ತಂದಿದ್ದಾರೆ. ಹಾಗೂ ಪ್ರತಿರಕ್ಷಣಾ ಹೇಳಿಕೆ ಸಲ್ಲಿಕೆ, ವಿಚಾರಣೆ ವರದಿ ಸಲ್ಲಿಕೆ ನಂತರ ಆಡಳಿತ ಇಲಾಖೆಯ ಸ್ಪಷ್ಟೀಕರಣ ಮತ್ತು ಅಭಿಪ್ರಾಯ ಕೋರಿರುವ ಪ್ರಕರಣಗಳಲ್ಲಿ ಆಡಳಿತ ಇಲಾಖೆಯ ಮಾಹಿತಿ ಪಡೆದು ಅಭಿಪ್ರಾಯ ವರದಿ ನೀಡಬೇಕಾದ ಪ್ರಕರಣಗಳಲ್ಲಿ ಆಡಳಿತಾತ್ಮಕವಾಗಿ ವಿವಿಧ ಹಂತದಲ್ಲಿ ಪ್ರಗತಿಯಲ್ಲಿದೆ,’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಹಿತಿ ಒದಗಿಸಿದ್ದಾರೆ.

 

 

ಪ್ರಕರಣಗಳ ಸಮಗ್ರ ವಿವರ

 

2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರ್ಸ್‌ ನೇಮಕಾತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗದ ಇಂದಿನ ಕಾರ್ಯದರ್ಶಿ ಕೆ ಆರ್‌ ಸುಂದರ್‌ (ಈಗ ನಿವೃತ್ತ) ವಿರುದ್ಧ ಶಿಸ್ತು ಕ್ರಮವನ್ನು 2017ರ ಅಕ್ಟೋಬರ್‌ 4ರಂದು ಪ್ರಾರಂಭಿಸಲಾಗಿತ್ತು. ಇವರ ವಿರುದ್ಧ ಇಲಾಖೆ ವಿಚಾರಣೆ ನಡೆಸಲು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಪಿಜಿಎಂ ಪಾಟೀಲ್‌ ಅವರನ್ನು ವಿಚಾರಣಾಧಿಕಾರಿಯನ್ನಾಗಿ 2020ರ ಜುಲೈ 10ರಂದು ಆದೇಶ ಹೊರಡಿಸಿತ್ತು. ಆದರೆ ಇವರು ಇಲಾಖೆ ವಿಚಾರಣೆ ನಡೆಸಲು ಒಪ್ಪಿಗೆ ನೀಡಿರಲಿಲ್ಲ. ಹೀಗಾಗಿ ಐಎಎಸ್‌ ನಿವೃತ್ತ ಅಧಿಕಾರಿ ಎನ್‌ ಸಿ ಮುನಿಯಪ್ಪ ಅವರನ್ನು 2022ರ ಮಾರ್ಚ್‌ 5ರಂದು ನೇಮಿಸಿದೆ.

 

ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿ ವಳಗೇರಹಳ್ಳಿ ಗ್ರಾಮದ ಸರ್ವೆ ನಂಬರ್‌ 43ರಲ್ಲಿ 6-20 ಎಕರೆ ಗುಂಟೆ ಜಮೀನನ್ನು ಖಾತೆ ಮಾಡುವ ಸಂಬಂಧ ಉಚ್ಛ ನ್ಯಾಯಾಲಯ ಆರ್‌ಎಫ್‌ಎ ಸಂಖ್ಯೆ 358/2020 ರ 2014ರ ಜುಲೈ 1ರಂದು ನೀಡಿರುವ ತೀರ್ಪಿನ ವಿರುದ್ಧ ಸರ್ವೋಚ್ಛ ನ್ಯಾಯಾಲಯದಲ್ಲಿ ದಾಖಲಾಗಿದ್ದ ಎಸ್‌ಎಲ್‌ಪಿ 2017ರ ಆಗಸ್ಟ್‌ 4ರಂದು ನೀಡಿದ್ದ ಆದೇಶದಂತೆ ಆರ್‌ಎಫ್‌ಎ ದಾಖಲಿಸಲು 3,965 ದಿನಗಳು ಮತ್ತು ಸರ್ವೋಚ್ಛ ನ್ಯಾಯಾಲಯದಲ್ಲಿ ಎಸ್‌ಎಲ್‌ಪಿ ದಾಖಲಿಸಲು 3 ವರ್ಷ ವಿಳಂಬ ಮಾಡಿದ್ದ ಬೆಂಗಳೂರು ನಗರ ಜಿಲ್ಲೆಯ ಅಂದಿನ ವಿಶೇಷ ಜಿಲ್ಲಾಧಿಕಾರಿಯಾಗಿದ್ದ ನೀಲಾ ಮಂಜುನಾಥ್‌ ಮತ್ತಿತರ ವಿರುದ್ಧ 2018ರ ಜೂನ್‌ 30ರಂದು ಶಿಸ್ತು ಕ್ರಮ ಆರಂಭಿಸಿರುವುದು ಮಾಹಿತಿಯಿಂದ ತಿಳಿದು ಬಂದಿದೆ.

 

ಈ ಕುರಿತು ವಿಚಾರಣೆ ನಡೆಸಿದ್ದ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿದ್ದ ಜಿತೇಂದ್ರನಾಥ ವಿ ಅಂಗಡಿ ಹಿರೇಮಠ ಅವರನ್ನು ಆರೋಪಿತ ಅಧಿಕಾರಿಯನ್ನು ವಿಚಾರಣೆ ಮುಗಿಸಿ ದೋಷಮುಕ್ತ ಎಂದು ವಿಚಾರಣೆ ವರದಿ ಸಲ್ಲಿಸಿದ್ದರು. ಇದನ್ನಾಧರಿಸಿ ನೀಲಾ ಮಂಜುನಾಥ್‌ ಅವರನ್ನು ಆರೋಪ ಮುಕ್ತಗೊಳಿಸಿರುವುದು ಗೊತ್ತಾಗಿದೆ.

 

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಜೋಡಿಆಲಹಳ್ಳಿ ಗ್ರಾಮದ ಬಸವನಕೆರೆ ನಿರ್ಮಾಣಕ್ಕೆ ಭೂಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ ಪರಿಹಾರ ನೀಡುವ ಸಂಬಂಧ ನ್ಯಾಯಾಲಯಕ್ಕೆ ಸರಿಯಾಗಿ ಮನವರಿಕೆ ಮಾಡಿಕೊಡದ ಕಾರಣ ಪರಿಹಾರ ಮೊತ್ತ ಮೂರು ಪಟ್ಟುಹೆಚ್ಚಲು ಕಾರಣರಾಗಿ ಸರ್ಕಾರಕ್ಕೆ ತೀವ್ರ ಆರ್ಥಿಕ ನಷ್ಟ ಉಂಟಾಗಿತ್ತು. ಈ ಸಂಬಂಧ ಕರ್ತವ್ಯ ಲೋಪ ಆರೋಪದಡಿಯಲ್ಲಿ 2020ರ ಜುಲೈ 27ರಂದು ಮಂಡ್ಯ ಜಿಲ್ಲೆಯ ವಿಶೇಷ ಭೂ ಸ್ವಾಧೀನಾಧಿಕಾರಿ ಸಿ ಪಿ ಶೈಲಜಾ ಮತ್ತು ಆರ್‌ ಲತಾ ಮತ್ತಿತರರ ಅಧಿಕಾರಿಗಳ ವಿರುದ್ಧ ಶಿಸ್ತು ಪ್ರಕ್ರಿಯೆ ಆರಂಭಿಸಲಾಗಿತ್ತು. ಆದರೆ ಈ ಪ್ರಕರಣ ಸಂಬಂಧ ಅಧಿಕಾರಿಗಳು ತಮ್ಮ ವಿರುದ್ಧದ ಆರೋಪಗಳಿಗೆ ನೀಡಿದ್ದ ಲಿಖಿತ ಹೇಳಿಕೆಯನ್ನು ಅಂಗೀಕರಿಸಿ 2021ರ ಫೆ.8ರಂದು ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ.

 

ಅಧಿಕಾರ ವ್ಯಾಪ್ತಿ ಮೀರಿ ಖಾತೆ ಬದಲಾವಣೆ ಮಾಡಿರುವ ಆರೋಪ ಸಂಬಂಧ ಕೆಎಎಸ್‌ (ಆಯ್ಕೆಶ್ರೇಣಿ) ನಿವೃತ್ತ ಅಧಿಕಾರಿ ಜಿ ವಿ ಸೀನಪಪ್ ಅವರಿಗೆ ದಂಡನೆ ವಿಧಿಸಲಾಗಿದೆ. ಡಿಸಿಆರ್‌ಜಿ ಮತ್ತು ರಜೆ ನಗದೀಕರಣ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

 

ವಸತಿ ಶಾಲೆಗಳಿಗೆ ಹಾಸಿಗೆ ದಿಂಬು ಖರೀದಿಯಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಎಎಸ್‌ (ಎಸ್‌ಟಿಎಸ್‌) ನಿವೃತ್ತ ಅಧಿಕಾರಿ ನಾಗಾನಾಯಕ್‌ ಅವರ ವಿರುದ್ಧ ವಿಚಾರಣಾಧಿಕಾರಿಯನ್ನು ನೇಮಿಸಲಾಗಿದೆ. ಸರ್ಕಾರಿ ಜಮೀನಿನ ಸಂಬಂಧ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವಲ್ಲಿ ವಿಳಂಬ ಎಸಗಿರುವ ಕೆಎಎಸ್‌ ಅಧಿಕಾರಿ ಸಿ ಮಂಜುನಾಥ್‌, ಎಚ್‌ಎಸ್‌ ಸತೀಶ್‌ಬಾಬು, ಸಿ ಗಂಗಾಧರಯ್ಯ, ಬಿ ಆರ್‌ ದಯಾನಂದ್‌, ಎಸ್‌ ಎಂ ಶಿವಕುಮಾರ್‌ ವಿರುದ್ಧ ವಿಚಾರಣೆ ವರದಿ ಸರ್ಕಾರದ ಕೈ ಸೇರಿದೆ. ಅದಿನ್ನೂ ಸರ್ಕಾರದ ಪರಿಶೀಲನೆಯಲ್ಲಿದೆ ಎಂಬುದು ಮಾಹಿತಿಯಿಂದ ತಿಳಿದು ಬಂದಿದೆ.

 

ಅನಧಿಕೃತವಾಗಿ ಹೆಚ್ಚುವರಿ ಹೆಸರುಗಳನ್ನು ಸೇರ್ಪಡೆಗೊಳಿಸಿ ಮ್ಯುಟೇಷನ್‌ ಅಂಗೀಕರಿಸಿರುವ ಆರೋಪಗಳಿಗೆ ಸಂಬಂಧಿಸಿದಂತೆ ಕೆಎಎಸ್‌ (ಆಯ್ಕೆ ಶ್ರೇಣಿ) ದಯಾನಂದ ಭಂಡಾರಿ ಅವರು ನೀಡಿದ್ದ ಲಿಖಿತ ಹೇಳಿಕೆಯನ್ನು ಒಪ್ಪಿ ಆರೋಪ ಮುಕ್ತಗೊಳಿಸಲಾಗಿದೆ. ನಿಯಮಬಾಹಿರವಾಗಿ ಜಮೀನು ಮಂಜೂರು ಮಾಡಿರುವ ಪ್ರಕರಣ ಸಂಬಂಧ ಕೆಎಎಸ್‌ (ಹಿರಿಯ ಶ್ರೇಣಿ) ಜಿ ವಿ ನಾಗರಾಜು ಅವರ ಲಿಖಿತ ಹೇಳಿಕೆ ಆಧರಿಸಿ ಆರೋಪವನ್ನು ಮುಕ್ತಗೊಳಿಸಲಾಗಿದೆ. ಅದೇ ರೀತಿ ಜಮೀನಿನ ಭೂ ಉಪಯೋಗ ಪರಿವರ್ತನೆ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸದಿರುವ ಆರೋಪ ಸಂಬಂಧ ಕೆಎಎಸ್‌ ಅಧಿಕಾರಿ ಎನ್‌ ವೆಂಕಟಾಚಲಪತಿ ಅವರ ಲಿಖಿತ ಹೇಳಿಕೆಯ ಮೇಲೆ ಆರೋಪ ಮುಕ್ತಗೊಳಿಸಲಾಗಿದೆ.

 

ಬಳ್ಳಾರಿ ಜಿಲ್ಲಾ ಪಂಚಾಯತ್‌ ಇಂಜಿನಿಯರಿಂಗ್‌ ವಿಭಾಗದ ಉಗ್ರಾಣ ಖರೀದಿಯಲ್ಲಿನ ಅವ್ಯವಹಾರ ಸಂಬಂಧ ಲಿಖಿತ ಹೇಳಿಕೆಯ ಮೇರೆಗೆ ಕೆಎಎಸ್‌ ನಿವೃತ್ತ ಅಧಿಕಾರಿ ಎಸ್‌ ರಾಜಾರಾಂ ಅವರನ್ನು ಆರೋಪ ಮುಕ್ತಗೊಳಿಸಲಾಗಿದೆ. ಪಹಣಿ ಕಲಂ 11ರಲ್ಲಿ ನ್ಯಾಯಾಲಯದ ತಡೆಯಾಜ್ಞೆ ನಮೂದು ಮಾಡಿ ಕರ್ತವ್ಯಲೋಪ ಎಸಗಿರುವ ಬಗ್ಗೆ ಕೆಎಎಸ್‌ ಅಧಿಕಾರಿ ಜಿ ಆರ್‌ ಹರಿಶಿಲ್ಪ ಅವರ ವಿರುದ್ದ ವಿಚಾರಣಾಧಿಕಾರಿ ನೇಮಿಸಲಾಗಿದೆ.

 

ಕರ್ನಾಟಕ ಭೂ ಕಂದಾಯ ಕಾಯ್ದೆ ಕಲಂ 136(3) ಅಡಿಯ ವಿಚಾರಣೆಗಳನ್ನು ಜಿಲ್ಲಾಧಿಕಾರಿಗಳಿಗೆ ಪ್ರತ್ಯಾಯೋಜಿಸಿದ್ದರೂ ತಾವೇ ವಿಚಾರಣೆ ಕೈಗೊಂಡು ಆದೇಶ ಹೊರಡಿಸಿರುವ ಆರೋಪ ಸಂಬಂಧ ಕೆಎಎಸ್‌ ಅಧಿಕಾರಿಗಳಾದ ಜಿ ವಿ ಸೀನಪ್ಪ, ಜಿ ಸಿ ಅನಿಲ್‌ಕುಮಾರ್‌, ಇ ರಾಧಾಕೃಷ್ಣ, ಮಹಮ್ಮದ್‌ ಖಲೀಮುಲ್ಲಾ, ನಾಗಾನಾಯಕ್‌, ಎಸ್‌ ಎನ್‌ ಗಂಗಾಧರಯ್ಯ ಅವರ ವಿರುದ್ಧ ವಿಚಾರಣೆ ವರದಿ ಇನ್ನೂ ಸರ್ಕಾರದ ಕೈಸೇರಿಲ್ಲ.

 

ಸರ್ಕಾರದ ಮಾರ್ಗಸೂಚಿ ಮತ್ತು ನಿಯಮಗಳನ್ನು ಉಲ್ಲಂಘಿಸಿ ದಾಖಲೆಗಳನ್ನು ಪರಿಶೀಲಿಸದೇ ನೇರವಾಗಿ ಹಕ್ಕು ಬದಲಾವಣೆ ಮಂಜೂರು ಮಾಡಿರುವ ಆರೋಪ ಸಂಬಂಧ ಕೆಎಎಸ್‌ ಅಧಿಕಾರಿ ಜಗದೀಶ್‌ ಕೆ ನಾಯಕ್‌ ಅವರ ವಿರುದ್ಧದ ವಿಚಾರಣೆಗೆ ಕೆಎಟಿ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಅವರನ್ನು ಆರೋಪ ಮುಕ್ತಗೊಳಿಸಿ ಆದೇಶಿಸಲಾಗಿದೆ. ಮುಳಬಾಗಿಲು ತಾಲೂಕು ಕಚೇರಿಯಲ್ಲಿ ಪೀಠೋಪಕರಣ , ಲೇಖನ ಸಾಮಗ್ರಿ ಹಾಗೂ ಇತರೆ ಖರೀದಿಯಲ್ಲಿ ಎಸಗಿರುವ ಆರೋಪ ಸಂಬಂಧ ಕೆಎಎಸ್‌ ಅಧಿಕಾರಿ ಪಿ ಜಯಮಾಧವ ಅವರ ವಿರುದ್ಧ ವಿಚಾರಣೆಗೆ ನ್ಯಾಯಾಲಯದ ತಡೆಯಾಜ್ಞೆ ಇದೆ. ಹೀಗಾಗಿ ವಿಚಾರಣೆ ವರದಿ ಬಾಕಿ ಇದೆ.

 

ಜಮೀನು ಒತ್ತುವರಿಯಲ್ಲಿ ಖಾತೆದಾರರಿಗೆ ಕಾಲವಕಾಶ ನೀಡದೇ ಕಟ್ಟಡವನ್ನು ತೆರವುಗೊಳಿಸಿರುವ ಆರೋಪ ಸಂಬಂಧ ಕೆಎಎಸ್‌ ಅಧಿಕಾರಿ ಡಿ ಬಿ ನಟೇಶ್‌ ಅವರ ವಿರುದ್ಧದ ಆರೋಪವನ್ನು ಮುಕ್ತಗೊಳಿಸಿ ಆದೇಶಿಸಲಾಗಿದೆ. ಸರ್ಕಾರದ ಜಮೀನನ್ನು ಮಾರುಕಟ್ಟೆ ಜಮೀನಿಗಿಂತ ಪರಭಾರೆ ಮಾಡಿ ಆದೇಶಿಸಿರುವ ಬಗ್ಗೆ ಕೆಎಎಸ್‌ ನಿವೃತ್ತ ಅಧಿಕಾರಿ ಸಿ ನಾಗಯ್ಯ ಅವರ ವಿರುದ್ಧ ಆರೋಪಗಳಿಗೆ ಸಂಬಂಧಿಸಿದಂತೆ 2ನೇ ಕಾರಣ ಕೇಳುವ ನೋಟೀಸ್‌ ನೀಡಲಾಗಿದೆ.

 

ಸರ್ಕಾರಿ ಜಮೀನಿಗೆ ಸಂಬಂಧಿಸಿದಂತೆ ಖಾಸಗಿ ಮತ್ತು ಸರ್ಕಾರದ ಪರ ಒಂದೇ ದಿನ ಎರಡು ಆದೇಶಗಳನ್ನು ಮಾಡಿರುವ ಆರೋಪ ಸಂಬಂಧ ಕೆಎಎಸ್‌ (ಹಿರಿಯ ಶ್ರೇಣಿ) ಎನ್‌ ಮಹೇಶ್‌ಬಾಬು ಅವರ ವಿರುದ್ಧ ದೋಷಾರೋಪಣೆ ಜಾರಿಗೊಳಿಸಲಾಗಿದೆ. ಅದಕ್ಕೆ ಉಚ್ಛ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ. ಏಕಪಕ್ಷೀಯವಾಗಿ ಅಪೀಲು ಪ್ರಕರಣವನ್ನು ತೀರ್ಮಾನ ಮಾಡಿರುವ ಆರೋಪ ಸಂಬಂಧ ಕೆಎಎಸ್‌ ಅಧಿಕಾರಿ ಎಸ್‌ ಎಸ್‌ ಮಧುಕೇಶ್ವರ್‌ ಅವರ ವಿರುದ್ಧದ ಆರೋಪಗಳ ಸಂಬಂಧ ವಿಚಾರಣಾಧಿಕಾರಿ ನೇಮಿಸಲಾಗಿದೆ.

 

ಸ್ಥಳ ತನಿಖೆ ನಡೆಸದೆಯೇ ಗುಲ್ಬರ್ಗಾ ನಗರಾಭಿವೃದ್ಧಿ ಪ್ರಾಧಿಕಾರವು ಗುತ್ತಿಗೆದಾರರಿಗೆ ಹಣ ಪಾವತಿಸಿರುವ ಸಂಬಂಧ ಕೆಎಎಸ್‌ ಅಧಿಕಾರಿ ಸಿರಸಗಿ ನಾಗಪ್ಪ (ನಿವೃತ್ತ) ವಿರುದ್ದ ಆರೋಪವನ್ನು ಮುಕ್ತಾಯಗೊಳಿಸಲಾಗಿದೆ. ಭೂ ಪರಿಹಾರ ಧನ ವಿತರಣೆಯಲ್ಲಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಎಎಸ್‌ (ಕಿರಿಯ ಶ್ರೇಣಿ) ಅಧಿಕಾರಿ ಒ ಕಿಶನ್‌ ಚಂದ್‌ ಅವರಿಗೆ ದಂಡನೆ ವಿಧಿಸಿ ಕೈತೊಳೆದುಕೊಂಡಿದೆ. ನಿವೇಶನ ಹಂಚಿಕೆಯಲ್ಲಿ ಕರ್ತವ್ಯಲೋಪ ಎಸಗಿದ ಆರೋಪ ಸಂಬಂಧ ಕೆಎಎಸ್‌ ಅಧಿಕಾರಿ ನಂಜುಂಡೇಗೌಡ ಅವರಿಗೆ ದಂಡನೆ ವಿಧಿಸಲಾಗಿದೆ.

 

ಭೂ ಪರಿಹಾರಕ್ಕೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಕೆಯಾಗದ ಮೇಲ್ಮನವಿಗೆ ಸಕಾಲದಲ್ಲಿ ದಾಖಲೆಗಳನ್ನು ಸಲ್ಲಿಸದಿರುವ ಆರೋಪ ಸಂಬಂಧ ಕೆಎಎಸ್‌ (ಆಯ್ಕೆಶ್ರೇಣಿ) ಅಧಿಕಾರಿ ಬಿ ಆರ್‌ ಪೂರ್ಣಿಮಾ, ಎಸ್‌ ರಂಗಪ್ಪ, ಶಾಂತಾ ಎಸ್‌ ಹುಲ್ಮನಿ, ಎಂ ದಾಸೇಗೌಡ ಅವರ ವಿರುದ್ಧ ದೋಷಾರೋಪಣೆ ಪಟ್ಟಿ ಜಾರಿಗೊಳಿಸಲಾಗಿತ್ತಾದರೂ ಆ ನಂತರ ಆಪಾದಿತ ಅಧಿಕಾರಿಗಳ ಹೇಳಿಕೆಯನ್ನು ಪರಿಶೀಲಿಸಿ ಆರೋಪ ಮುಕ್ತಗೊಳಿಸಲಾಗಿದೆ.

 

ಮುಜುರಾಯಿ ದೇವಸ್ಥಾನಗಳ ಹಣದ ಬಗೆಗಿನ ದಾಖಲೆಗಳನ್ನು ನಿರ್ವಹಿಸದ ಆರೋಪ ಸಂಬಂಧ ಕೆಎಎಸ್‌ ಅಧಿಕಾರಿ ಶಂಕರಪ್ಪ ಮತ್ತು ಸರ್ಕಾರಿ ಜಮೀನನ್ನು ರಕ್ಷಿಸುವಲ್ಲಿ ಕರ್ತವ್ಯಲೋಪ ಎಸಗಿದ ಆರೋಪಕ್ಕೆ ಗುರಿಯಾಗಿರುವ ಕೆಎಎಸ್‌ ಅಧಿಕಾರಿ ವಿ ಪ್ರಸನ್ನ , ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ನಿಯಮಬಾಹಿರವಾಗಿ ಹಂಚಿಕೆ ಮಾಡಿರುವ ಆರೋಪ ಸಂಬಂಧ ಕೆಎಎಸ್‌ ಹಿರಿಯ ಶ್ರೇಣಿ ಅಧಿಕಾರಿ ಎಂ ಸತೀಶ್‌ಕುಮಾರ್‌, ಸರ್ಕಾರಿ ಜಮೀನನ್ನು ಖಾಸಗಿಯವರಿಗೆ ನೀಡಲು ಕಾರಣರಾಗಿರುವ ಆರೋಪ ಸಂಬಂಧ ಶ್ರೀಹರ್ಷ ಎಸ್‌ ಶೆಟ್ಟಿ, ಅರಣ್ಯ ಭೂಮಿಯನ್ನು ಅರಣ್ಯೇತರ ಭೂಮಿಯನ್ನಾಗಿ ಹಂಚಿಕೆ ಮಾಡಿರುವ ಆರೋಪ ಸಂಬಂಧ ಆರ್‌ ವೆಂಕಟೇಶ್‌ ಅವರ ವಿರುದ್ದ ವಿಚಾರಣಾಧಿಕಾರಿ ನೇಮಿಸಲಾಗಿದೆ. ಈ ಪೈಕಿ ಆರ್‌ ವೆಂಕಟೇಶ್‌ ಅವರ ಪ್ರಕರಣದಲ್ಲಿ ನ್ಯಾಯಮಂಡಳಿ ಆದೇಶದ ಹಿನ್ನೆಲೆಯಲ್ಲಿ ಮರು ವಿಚಾರಣೆಗೆ ಆದೇಶಿಸಲಾಗಿದೆ.

 

ಅಕ್ರಮ ಮರುಗಳು ಗಣಿಗಾರಿಕೆ ತಡೆಯುವಲ್ಲಿ ವಿಫಲರಾಗಿರುವ ಆರೋಪ ಸಂಬಂಧ ಕೆಎಎಸ್‌ ಅಧಿಕಾರಿ ಶಶಿಧರ ಬಗಲಿ, ಎಸ್‌ ಎಸ್‌ ಸೋಮಾಣಳ, ಸಿದ್ದುಪರಪ್ಪ ಹುಲ್ಲೋಳ್ಳಿ, ಅವರ ವಿರುದ್ಧ ವಿಚಾರಣಾಧಿಕಾರಿಯನ್ನು ನೇಮಿಸಲಾಗಿತ್ತು. ಆದರೆ ವಿಚಾರಣೆ ವರದಿಯನ್ನು ಒಪ್ಪಿ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ. ವಿಚಾರಣೆ ವರದಿಯಲ್ಲಿನ ಶಿಫಾರಸ್ಸುಗಳನ್ನು ಉತ್ತರದಲ್ಲಿ ಬಹಿರಂಗಪಡಿಸಿಲ್ಲ.
ಐ ತೀರ್ಪು ರಚಿಸುವಲ್ಲಿ ಹಾಗೂ ಭೂ ಪರಿಹಾರ ಧನ ಪಾವತಿಸುವಲ್ಲಿ ಕರ್ತವ್ಯಲೋಪ ಎಸಗಿದ ಆರೋಪ ಸಂಬಂಧ ಪದ್ಮಬಸವಂತಪ್ಪ, ಮೊಹಮ್ಮದ್‌ ಎನ್‌ ಝುಬೇರ್ ಅವರ ವಿರುದ್ಧ ದೋಷಾರೋಪಣೆ ಪಟ್ಟಿ ಜಾರಿಗೊಳಿಸಲಾಗಿತ್ತು. ಅಧಿಕಾರಿಯವರ ಲಿಖಿತ ಹೇಳಿಕೆ ಒಪ್ಪಿ ಪ್ರಕರಣವನ್ನು ಮುಕ್ತಗೊಳಿಸಿ ಆದೇಶಿಸಿದೆ.

 

 

ಶ್ರೀರಾಮನಹಳ್ಳಿ ಮತ್ತು ಅದ್ದೇವಿಶ್ವನಾಥಪುರ ಗ್ರಾಮಗಳಲ್ಲಿ ವಸತಿ ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೆ ಅಸಿಂಧುಗೊಳ್ಳಲು ಕಾರಣರಾಗಿದ್ದಾರೆ ಎಂಬ ಆರೋಪ ಕುರಿತು ರಾಜಮ್ಮ ಎ ಚೌಡಾರೆಡ್ಡಿ ಅವರ ವಿರುದ್ಧ ದೋಷಾರೋಪಣೆ ಪಟ್ಟಿ ಜಾರಿಗೊಳಿಸಲಾಗಿತ್ತಾದರೂ ಆ ನಂತರ ಅವರ ಹೇಳಿಕೆ ಪಡೆದು ಪ್ರಕರಣವನ್ನೇ ಮುಕ್ತಾಯಗೊಳಿಸಲಾಗಿದೆ.

 

ಪ್ರೌಢಶಾಲಾ ಶಿಕ್ಷಕರು ಮತ್ತು ಪದವಿಪೂವ್ ಕಾಲೇಜು ಉಪನ್ಯಾಸಕರ ಆಯ್ಕೆ ಪರೀಕ್ಷೆ ಪ್ರಶ್ನೆ ಪತ್ರಿಕೆ ಮುದ್ರಣದಲ್ಲಿ ಕರ್ತವ್ಯಲೋಪ ಸಂಬಂಧ ವಿ ಜಿ ದಿವಾಕರ್‌ ಅವರ ವಿರುದ್ಧ ವಿಚಾರಣಾಧಿಕಾರಿ ನೇಮಿಸಲಾಗಿತ್ತಾದರೂ ಆ ನಂತರ ಆರೋಪಮುಕ್ತಗೊಳಿಸಿ ಆದೇಶ ಹೊರಡಿಸಿದೆ. ಹಾಗೆಯೆ ನಿಯಮಬಾಹಿರವಾಗಿ ಆದೇಶ ಹೊರಡಿಸಿ ಆರೋಪ ಎಸಗಿರುವ ಪ್ರಕರಣದಲ್ಲಿ ಬಿ ವಿ ವಾಸಂತಿ ಅಮರ್‌ ಅವರ ವಿರುದ್ಧ ದೋಷಾರೋಪಣೆ ಪಟ್ಟಿ ಜಾರಿಗೊಳಿಸಲಾಗಿತ್ತಾದರೂ ಆ ನಂತರ ಅವರ ಲಿಖಿತ ಹೇಳಿಕೆಯನ್ನು ಒಪ್ಪಿ ಪ್ರಕರಣವನ್ನು ಮುಕ್ತಾಯಗೊಳಿಸಿ ಆದೇಶಿಸಿದೆ.

 

ನಿಯಮಬಾಹಿರವಾಗಿ ಖಾತೆ ವರ್ಗಾವಣೆ ಮಾಡಿರುವ ಆರೋಪ ಸಂಬಂಧ ಕೆಎಎಸ್‌ ಅಧಿಕಾರಿ ಬಿ ಆರ್‌ ಹರೀಶ್‌ ಅವರ ವಿರುದ್ಧ ದೋಷಾರೋಪಣೆ ಪಟ್ಟಿ ಜಾರಿಗೊಳಿಸಲಾಗಿದೆ. ಅದೇ ರೀತಿ ಇದೇ ಬಿ ಆರ್‌ ಹರೀಶ್‌ ಅವರ ವಿರುದ್ಧ ಜಿಲ್ಲಾ ನ್ಯಾಯಾಲಯದ ಆದೇಶವನ್ನು ತಿರಸ್ಕರಿಸಿ ತಪ್ಪು ವರದಿ ನೀಡಿ ಪೋಡಿ ಮತ್ತು ಖಾತೆ ವರ್ಗಾವಣೆ ಮಾಡಿರುವ ಆರೋಪ ಸಂಬಂಧ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ. ಈ ಅಧಿಕಾರಿಯು ನೀಡಿರುವ ಲಿಖಿತ ಹೇಳಿಕೆಯು ಪರಿಶೀಲನೆಯಲ್ಲಿದೆ.

 

ಅಮಾನತುಗೊಳಿಸಿರುವ ಹುದ್ದೆಯ ಕರ್ತವ್ಯಕ್ಕೆ ನೇರವಾಗಿ ವರದಿ ಮಾಡಿಕೊಂಡಿರುವ ಆರೋಪ ಸಂಬಂಧ ನಾಗರಾಜ್‌ ಆರ್‌ ಸಿಂಗ್ರೇರ್‌ ಅವರ ವಿರುದ್ಧ ನಿಯಮ 12 ಅಡಿ ನೋಟೀಸ್‌ ಜಾರಿಗೊಳಿಸಲಾಗಿತ್ತು. ಆ ನಂತರ ಲಿಖಿತ ಹೇಳಿಕೆಯನ್ನು ಪರಿಗಣಿಸಿ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ.

 

ತಪ್ಪು ಲೆಕ್ಕಾಚಾರ ಮಾಡಿ ಐತೀರ್ಪನ್ನು ಸಲ್ಲಿಸಿರುವ ಆರೋಪ ಸಂಬಂಧ ಪಿ ಎಸ್‌ ಮಂಜುನಾಥ್‌, ಇಸ್ಮಾಯಿಲ್‌ ಸಾಹೇಬ್‌ ಶಿರಹಟ್ಟಿ ಅವರ ವಿರುದ್ಧ ವಿಚಾರಣಾಧಿಕಾರಿಯನ್ನು ನೇಮಿಸಲಾಗಿದೆ. ಸರ್ಕಾರಿ ಜಮೀನನ್ನು ಸಂರಕ್ಷಿಸುವಲ್ಲಿ ಕರ್ತವ್ಯಲೋಪ ಎಸಗಿರುವ ಆರೋಪ ಸಂಬಂಧ ಕೆಎಎಸ್‌ ಅಧಿಕಾರಿ ರಾಜಶ್ರೀ ಜೈನಾಪುರ ಅವರ ವಿರುದ್ಧ ವಿಚಾರಣೆ ವರದಿ ಇನ್ನೂ ಪರಿಶೀಲನೆಯಲ್ಲಿದೆ.

 

ಜಮೀನಿನ ಪರಿಹಾರದ ಧನವನ್ನು ಜಮೀನು ಮಾಲೀಕರಿಗೆ ಪಾವತಿಸದೇ ಹಾಗೂ ನ್ಯಾಯಾಲಯದಲ್ಲಿ ಠೇವಣಿಕರಿಸದೇ ಕರ್ತವ್ಯಲೋಪ ಎಸಗಿದ ಆರೋಪ ಸಂಬಂಧ ಸಿ ನಾಗರಾಜ್‌ ಅವರ ವಿರುದ್ಧ ವಿಚಾರಣಾಧಿಕಾರಿ ನೇಮಿಸಲಾಗಿದೆ. ಭೂ ಪರಿಹಾರ ಪಾವತಿಯಲ್ಲಿ ಎಸಗಿರುವ ಕರ್ತವ್ಯಲೋಪ ಸಂಬಂಧ ಕುಸುಮಕುಮಾರಿ ಅವರ ವಿರುದ್ಧ ವಿಚಾರಣಾಧಿಕಾರಿ ನೇಮಿಸಲಾಗಿದೆ. ವರ್ಗಾವಣೆಗೊಂಡಿದ್ದರೂ ಕಡತಗಳನ್ನು ಹಸ್ತಾಂತರಿಸದಿರುವ ಕುರಿತು ಕೆಎಎಸ್‌ ಅಧಿಕಾರಿ ಎಸ್‌ ಎಸ್‌ ಮಧುಕೇಶ್ವರ್‌ ಅವರ ವಿರುದ್ಧ ವಿಚಾರಣಾಧಿಕಾರಿ ನೇಮಿಸುವ ಹಂತದಲ್ಲಿದೆ.

the fil favicon

SUPPORT THE FILE

Latest News

Related Posts