ಬೆಂಗಳೂರು; ಪಿಎಸ್‌ಐ ಪರೀಕ್ಷೆಯಲ್ಲಿ ಒಎಂಆರ್ ಶೀಟ್‌ಗಳನ್ನು ತಿದ್ದಿದ ಪ್ರಕರಣದ ಕುರಿತು ತನಿಖೆ ನಡೆಯುತ್ತಿರುವ ಬೆನ್ನಲ್ಲೇ ವಿವಿಧ ವಿಶ್ವವಿದ್ಯಾಲಯಗಳ ಪಿಎಚ್‌ಡಿ ಪ್ರವೇಶ ಪರೀಕ್ಷೆಗೆ ಸಂಬಂಧಿಸಿದ ಒಎಂಆರ್ ಉತ್ತರ ಪತ್ರಿಕೆಗಳನ್ನು ಖರೀದಿಸಿ ಅಕ್ರಮ ನಡೆದಿರುವ ಬಲವಾದ ಆರೋಪ ಕೇಳಿ ಬಂದಿದೆ.
ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ದೂರು, ಗುಪ್ತವಾಗಿ ಕಾರ್ಯಾಚರಿಸುತ್ತಿರುವ ಪರೀಕ್ಷಾ ಅವ್ಯವಹಾರಗಳ ಜಾಲವನ್ನು ಬಹಿರಂಗಗೊಳಿಸಿದಂತಾಗಿದೆಯಲ್ಲದೆ ಇದೇ ಜಾಲವು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪರೀಕ್ಷಾ ಅಕ್ರಮದಲ್ಲಿಯೂ ಭಾಗಿಯಾಗಿದೆ ಎಂಬ ಅನುಮಾನಗಳು ವ್ಯಕ್ತವಾಗಿವೆ.
ಈ ಕುರಿತು ಎಂ ಆರ್ ಉಮಾಮಹೇಶ್ವರಿ ಎಂಬುವರು ಬೆಂಗಳೂರು ವಿಶ್ವವಿದ್ಯಾಲಯ ಕುಲಸಚಿವರು ಮತ್ತು ಉನ್ನತ ಶಿಕ್ಷಣ ಇಲಾಖೆಗೆ ಕುಮಾರ್ ಟಿ ಎಸ್ ಎಂಬುವರ ವಿರುದ್ಧ 2021ರಲ್ಲಿಯೇ ದೂರು ನೀಡಿದ್ದರೂ ಸಚಿವ ಅಶ್ವಥ್‌ನಾರಾಯಣ್ ಮತ್ತು ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಒಂದು ವರ್ಷದ ಬಳಿಕ ಈ ದೂರನ್ನು ಕೈಗೆತ್ತಿಕೊಂಡಿರುವ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ವರದಿ ನೀಡಲು ಬೆಂಗಳೂರು ವಿವಿ ಕುಲಸಚಿವರಿಗೆ ನಿರ್ದೇಶನ ನೀಡಿದ್ದಾರೆ.
ಎಂ ಆರ್ ಉಮಾಮಹೇಶ್ವರಿ ಅವರು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ 2022ರ ಜೂನ್ 30ರಂದು ದೂರು ಸಲ್ಲಿಸಿದ್ದಾರೆ. ಈ ದೂರನ್ನಾಧರಿಸಿ ಇಲಾಖೆಯ ಸಕಾರ್ಶರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ವರದಿ ಕೇಳಿ 2022ರ ಸೆ.5ರಂದು ನಿರ್ದೇಶನ ನೀಡಿದ್ದಾರೆ. ದೂರು ಮತ್ತು ಇಲಾಖೆಯು ಬರೆದಿರುವ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
‘ಕುಮಾರ್ ಟಿ ಎಸ್ ಇವರ ವಿರುದ್ಧ ಪಿಎಸ್‌ಐ ನೇಮಕಾತಿಯ ಓಎಂಆರ್ ಪರೀಕ್ಷೆ ಹಗರಣದ ಕುರಿತು ತನಿಖೆ ನಡೆಸುವ ಕುರಿತು ಸಲ್ಲಿಕೆಯಾಗಿರುವ ಸ್ವಯಂ ವೇದ್ಯ ಮನವಿ ಕುರಿತು ನಿಯಮಾನುಸಾರ ಪರಿಶೀಲಿಸಿ ಒಂದು ವಾರದೊಳಗೆ ವರದಿ/ಮಾಹಿತಿಯನ್ನು ಒದಗಿಸಬೇಕು,’ ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಿಗೆ 2022ರ ಸೆ.9ರಂದು ನಿರ್ದೇಶಿಸಿದ್ದಾರೆ.
‘2019ರ ಡಿಸೆಂಬರ್‌ನಲ್ಲಿ ನಡೆದ ಪಿಹೆಚ್‌ಡಿ ಪ್ರವೇಶ ಪರೀಕ್ಷೆಗೆ ಸಂಬಂಧಿಸಿದಂತೆ ಅಕ್ರಮವಾಗಿ ಒಎಂಆರ್ ಶೀಟ್‌ಗಳನ್ನು ಧಾರವಾಡ ವಿಶ್ವವಿದ್ಯಾಲಯದ ಡಾ ಆರ್ ಆರ್ ಮದನಕರ್ ಅವರಿಂದ ಖರೀದಿಸಿದ್ದರು.ಇದಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಡಾ ನಾರಾಯಣಸ್ವಾಮಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಡಾ ಎನ್ ಲಕ್ಷ್ಮಿ ಇವರು ನೆರವಾಗಿದ್ದಾರೆ,’ ಎಂದು ಉಮಾಮಹೇಶ್ವರಿ ಅವರು ದೂರಿನಲ್ಲಿ ಪ್ರಸ್ತಾಪಿಸಿದ್ಧಾರೆ.
ಪಿಎಚ್‌ಡಿ ಪ್ರವೇಶ ಪತ್ರಿಕೆಯ ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆಯನ್ನು ಡಾ ಆರ್ ಆರ್ ಮದನಕರ್ ಅವರಿಂದ ಖರೀದಿಸಿರುವ ಕುರಿತು ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಕೋರಿರುವ ಉಮಾಮಹೇಶ್ವರಿ ಎಂಬುವರು ಈ ಕುರಿತು ಕುಮಾರ್ ಟಿ ಎಸ್ ಮತ್ತು ಮದನಕರ್ ಅವರ ಕರೆಗಳ ಮಾಹಿತಿ (ಸಿಡಿಆರ್) ಪಡೆದು ವಿಸ್ತೃತವಾಗಿ ತನಿಖೆ ನಡೆಸಬೇಕು ಎಂದು ಕೋರಿದ್ದಾರೆ.
ಅಲ್ಲದೆ ಕುಮಾರ ಟಿ ಎಸ್ ಎಂಬುವರು ಪರೀಕ್ಷಾ ಅವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು ಅಕ್ರಮವಾಗಿ ಹಣ ಸಂಪಾದನೆ ಮಾಡಿದ್ದಾರೆ. ನೂರಾರು ವಿದ್ಯಾರ್ಥಿಗಳನ್ನು ಮನೆಗೆ ಕರೆತಂದು ಬಿಎ, ಎಂಎ, ಎಂಎಡ್ ಪದವಿ ಕೊಡಿಸುವುದಾಗಿ ನಂಬಿಸುತ್ತಿದ್ದಾನೆ. ಗಣೇಶ್ ಎಂಬಾತನನ್ನು ಬಳಸಿಕೊಂಡು ಮನೆಯಲ್ಲಿಯೇ ಈ ಎಲ್ಲಾ ಪರೀಕ್ಷೆಗಳನ್ನು ಬರೆಸುತ್ತಿದ್ದ. ಪ್ರತಿಯೊಬ್ಬ ವಿದ್ಯಾರ್ಥಿಯಿಂದ ಪಡೆದಿರುವ ಹಣದ ವಿಚಾರಗಳನ್ನು ಡೈರಿಯಲ್ಲಿ ಬರೆದಿಟ್ಟಿದ್ದಾನೆ ಎಂದು ಉಮಾಮಹೇಶ್ವರಿ ಎಂಬವರು ದೂರಿನೊಂದಿಗೆ ಡೈರಿಯ ಹಾಳೆಗಳನ್ನೂ ಸಲ್ಲಿಸಿದ್ದಾರೆ.
‘ಇಂತಹ ನೂರಾರು ಪರೀಕ್ಷಾ ಅವ್ಯವಹಾರಗಳನ್ನು ಮಾಡಿದ್ದಾನೆ. ಈತನ ವಿರುದ್ಧ ಕರ್ನಾಟಕ ಎಜುಕೇಷನ್ ಕಾಯ್ದೆ ಮತ್ತು ಕರ್ನಾಟಕ ಸಂಘಟಿತ ಅಪರಾಧ ಕಾಯ್ದೆ(ಕೋಕಾ), ಐಪಿಸಿ 120(ಬಿ) ಸೇರಿ ಐಪಿಸಿ ಇತರ ಕಲಂಳಡಿಯಲ್ಲಿ ಕಾನೂನು ರೀತಿ ಕ್ರಮ ಜರುಗಿಸಬೇಕು’ ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.