ಬೆಂಗಳೂರು; ಪೋಕ್ಸೋ ಕಾಯ್ದೆಯಡಿ ಮುರುಘಾ ಶರಣರ ವಿರುದ್ಧ ಮೊಕದ್ದಮೆ ದಾಖಲಾಗಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಪೊಲೀಸ್ ಇಲಾಖೆಯು ಮೀನಮೇಷ ಎಣಿಸುತ್ತಿದ್ದರೆ ಅತ್ತ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗವು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ.
ಲೈಂಗಿಕ ಕಿರುಕುಳ ನೀಡಿದ ಆರೋಪ ಕುರಿತಂತೆ ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಮುರುಘಾ ಮಠದ ಶಿವಮೂರ್ತಿ ಶರಣರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿರುವ ಬೆನ್ನಲ್ಲೇ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ನೀಡಿರುವ ನೋಟೀಸ್ ಮುನ್ನೆಲೆಗೆ ಬಂದಿದೆ.
ಪ್ರಕರಣ ಕುರಿತಂತೆ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗವು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಅವರಿಗೆ ನೋಟೀಸ್ ನೀಡಿದೆ. ಎಫ್‌ಐಆರ್ ದಾಖಲಾದ ದಿನದಿಂದ ಇಲ್ಲಿಯವರೆಗೆ ಕೈಗೊಂಡಿರುವ ಕ್ರಮಗಳ ಕುರಿತು 7 ದಿನದೊಳಗೆ ವಿವರವಾದ ಮಾಹಿತಿಯೊಂದಿಗೆ ಉತ್ತರಿಸಬೇಕು ಎಂದು ನೋಟೀಸ್‌ನಲ್ಲಿ ಸೂಚಿಸಿದೆ.
ಲೈಂಗಿಕ ದೌರ್ಜನಕ್ಕೆ ಒಳಗಾಗಿದ್ದಾರೆ ಎನ್ನಲಾಗಿರುವ ಅಪ್ತಾಪ್ತ ಬಾಲಕಿಯರಿಂದ ಸಿಆರ್‌ಪಿಸಿ 164 ಅಡಿ ಹೇಳಿಕೆ ದಾಖಲಿಸಿಕೊಳ್ಳುವಲ್ಲಿ ಜಿಲ್ಲಾ ಪೊಲೀಸರು ವಿಳಂಬ ಮಾಡಿದ್ದರು. ಎಫ್‌ಐಆರ್ ದಾಖಲಾಗಿ 48 ಗಂಟೆಗಳ ನಂತರ ಹೇಳಿಕೆ ದಾಖಲಿಸಿಕೊಂಡಿದ್ದರು. ಈ ಬೆಳವಣಿಗೆ ನಡುವೆಯೇ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ನೀಡಿರುವ ನೋಟೀಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಚಾಟಿ ಬೀಸಿದಂತಾಗಿದೆ.
ಅಪ್ರಾಪ್ತ ಮಕ್ಕಳ ಮೇಲೆ ತೀವ್ರ ರೀತಿಯ ಲೈಂಗಿಕ ದೌರ್ಜನ್ಯ ಎಸಗಿರುವ ಗುರುತರ ಆರೋಪಗಳಿದ್ದರೂ ಪ್ರಕರಣದ ಒಂದನೆ ಆರೋಪಿ ಮುರುಘಾ ಶರಣರನ್ನು ಬಂಧಿಸುವಲ್ಲಿನ ವೈಫಲ್ಯತೆ ಮಾತ್ರವಲ್ಲದೇ ನ್ಯಾಯವನ್ನು ಅತಿ ಕೆಟ್ಟದಾಗಿ ಅವಹೇಳನ ಮಾಡಿರುವ ಗಂಭೀರ ಆರೋಪಕ್ಕೆ ಚಿತ್ರದುರ್ಗ ಜಿಲ್ಲಾ ಪೊಲೀಸರು ಗುರಿಯಾಗಿದ್ದರು.
ಈ ಅಪರಾಧಗಳು ಜಾಮೀನುರಹಿತವಾದ ಸಂಜ್ಞೇಯ ಅಪರಾಧಗಳಾಗಿವೆ. ಅಲ್ಲದೆ ಮಕ್ಕಳು ಬಹಳ ಕಾಲ ಆರೋಪಿಗಳ ಅಧೀನದಲ್ಲಿದ್ದು ಅವರಿಂದ ಬೆದರಿಕೆಗೆ ಒಳಗಾಗುವ ಸ್ಥಿತಿಯಲ್ಲಿದ್ದಾರೆ, ಆರೋಪಿಗಳು ಸಾಕ್ಷ್ಯಗಳನ್ನು ನಾಶ ಮಾಡಬಲ್ಲ ಪ್ರಭಾವಿಗಳಾಗಿದ್ದಾರೂ ಆರೋಪಿಗಳನ್ನು ಬಂಧಿಸದೇ ಇರುವುದಕ್ಕೆ ಜನವಾದಿ ಸೇರಿದಂತೆ ಇನ್ನಿತರೆ ಮಹಿಳಾ ಸಂಘಟನೆಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಜಂಟಿ ಮನವಿ ಸಲ್ಲಿಸಿದ್ದಾರೆ.
‘ಮೈನರ್ ಮಕ್ಕಳ ಮೇಲೆ ತೀವ್ರ ರೀತಿಯ ಲೈಂಗಿಕ ದೌರ್ಜನ್ಯ ಎಸಗಿರುವ ಗಂಭೀರ ಆರೋಪ ಅವರ ಮೇಲೆ ಇದ್ದಾಗ್ಯೂ ಸಹ ಅವರನ್ನು ಬಂಧಿಸಲು ಪೊಲೀಸರು ವಿಫಲರಾಗಿರುವುದು ನ್ಯಾಯದ ಅತಿಕೆಟ್ಟ ಅವಹೇಳನವಾಗಿದೆ. ಈ ಅಪರಾಧಗಳು ಜಾಮೀನುರಹಿತವಾದ ಸಂಜ್ಞೇಯ ಅಪರಾಧಗಳಾಗಿವೆ; ಮಕ್ಕಳು ಬಹಳ ಕಾಲ ಆರೋಪಿಗಳ ಅಧೀನದಲ್ಲಿದ್ದು ಅವರಿಂದ ಬೆದರಿಕೆಗೆ ಒಳಗಾಗುವ ಸ್ಥಿತಿಯಲ್ಲಿದ್ದಾರೆ, ಆರೋಪಿಗಳು ಸಾಕ್ಷ್ಯಗಳನ್ನು ನಾಶ ಮಾಡಬಲ್ಲ ಪ್ರಭಾವಿಗಳಾಗಿದ್ದಾರೆ,’ ಎಂದು ಮನವಿಯಲ್ಲಿ ಸಂಘಟನೆಗಳು ಪ್ರಸ್ತಾಪಿಸಿರುವುದನ್ನು ಸ್ಮರಿಸಬಹುದು.