ಬಯೋ ಮೆಡಿಕಲ್‌ ಉಪಕರಣ ಖರೀದಿಯಲ್ಲಿನ 47 ಕೋಟಿ ಅವ್ಯವಹಾರದ ಸುತ್ತ ‘ದಿ ಫೈಲ್‌’ನ 5 ವರದಿಗಳು

ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಬಯೋ ಮೆಡಿಕಲ್‌ ಉಪಕರಣ ನಿರ್ವಹಣೆ ಸೇರಿದಂತೆ ಹಲವು ಉಪಕರಣಗಳ ಖರೀದಿಯಲ್ಲಿ ಹಲವು ನಿಯಮಾವಳಿಗಳನ್ನು ಅಧಿಕಾರಿಗಳು ಗಾಳಿಗೆ ತೂರಿ ಸರ್ಕಾರದ ಬೊಕ್ಕಸಕ್ಕೆ ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿರುವ ಕುರಿತು ‘ದಿ ಫೈಲ್‌’ ಕಳೆದ 2 ವರ್ಷಗಳ ಹಿಂದೆಯೇ ಹೊರಗೆಡವಿದ್ದ ಪ್ರಕರಣದ ಕುರಿತು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ವರದಿ ಸಲ್ಲಿಸಿದ್ದಾರೆ.

 

ಬಯೋ ಮೆಡಿಕಲ್‌ ಉಪಕರಣಗಳ ನಿರ್ವಹಣೆ ಮಾಡಲು ಗುತ್ತಿಗೆ ನೀಡಿರುವ ಕಂಪನಿ ಜತೆ ಅಧಿಕಾರಿಗಳು ಶಾಮೀಲಾಗಿರುವ ಕಾರಣ ಸರ್ಕಾರಕ್ಕೆ ಅಂದಾಜು 47.07 ಕೋಟಿ ನಷ್ಟ ಸಂಭವಿಸಿರುವುದೂ ಸೇರಿದಂತೆ ಇಡೀ ಪ್ರಕರಣದ ಸುತ್ತ ‘ದಿ ಫೈಲ್‌’ ದಾಖಲೆ ಸಮೇತ 5 ವರದಿಗಳನ್ನು ಪ್ರಕಟಿಸಿತ್ತು.

 

ಸರ್ಕಾರಕ್ಕೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ವರದಿ ಸಲ್ಲಿಸಿ ತನಿಖಾ ಸಂಸ್ಥೆಗೆ ಪ್ರಕರಣವನ್ನು ವಹಿಸುವುದು ಸೂಕ್ತವೆಂದು ಹೇಳಿರುವುದು ‘ದಿ ಫೈಲ್‌’ ವರದಿಯನ್ನು ಮತ್ತೊಮ್ಮೆ ಬಲಪಡಿಸಿದಂತಾಗಿದೆ. ಈ ಪ್ರಕರಣದ ಸುತ್ತ ಪ್ರಕಟಿಸಿದ್ದ ವರದಿಗಳನ್ನು ಕ್ರೋಢೀಕರಿಸಿ ಇಲ್ಲಿ ಕೊಡಲಾಗಿದೆ.

 

 

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರ ಆಪ್ತ ಕಾರ್ಯದರ್ಶಿಯಾಗಿರುವ ಸಿ ನಾಗರಾಜ್‌ ಅವರು (ಕೆಡಿಎಲ್‌ಡಬ್ಲ್ಯೂಎಸ್‌ನ ಹೆಚ್ಚುವರಿ ನಿರ್ದೇಶಕರಗಾಗಿದ್ದ ಅವಧಿ), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜಕುಮಾರ್‌ ಪಾಂಡೆ ಮತ್ತು ಕಾರ್ಯಾಕ್ರಮಾಧಿಕಾರಿಯೂ ಆಗಿದ್ದ ಉಪ ನಿರ್ದೇಶಕ ಸ್ವತಂತ್ರಕುಮಾರ್‌ ಬಣಕರ್‌ ಅವರು 47.07 ಕೋಟಿ ನಷ್ಟಕ್ಕೆ ಕಾರಣರಾಗಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ. ಈ ಬಗ್ಗೆ ‘ದಿ ಫೈಲ್‌’ ಡಿಸೆಂಬರ್‌ 14, 2020 ರಂದು ವರದಿ ಪ್ರಕಟಿಸಿತ್ತು.

ಬಯೋ ಮೆಡಿಕಲ್‌ ಉಪಕರಣ ನಿರ್ವಹಣೆ;ಲಂಚಕೋರ ಅಧಿಕಾರಿಗಳ ಪಿತೂರಿಗೆ 47.07 ಕೋಟಿ ನಷ್ಟ

ಬಯೋ ಮೆಡಿಕಲ್‌ ಉಪಕರಣ ನಿರ್ವಹಣೆ ಸಂಬಂಧ ನಡೆದಿದ್ದ ಟೆಂಡರ್‌ ಪರಿಶೀಲನಾ ಸಭೆ, ಮೌಲ್ಯಮಾಪನ ಪ್ರಕ್ರಿಯೆ ಮತ್ತು ಅಂಕ ನೀಡಿಕೆಯಲ್ಲೇ ಸಂಚು ಹೂಡಿದ್ದರು ಎಂಬ ಆರೋಪಕ್ಕೆ ಗುರಿಯಾಗಿರುವ ಆಯುಕ್ತ ಪಂಕಜಕುಮಾರ್‌ ಪಾಂಡೆ ಮತ್ತು ಉಪ ನಿರ್ದೇಶಕ ಡಾ ಸ್ವತಂತ್ರಕುಮಾರ್‌ ಬಣಕರ್‌ ಅವರು ಟಿವಿಎಸ್‌ ಲಾಜಿಸ್ಟಿಕ್ಸ್‌ ಸರ್ವಿಸ್‌ ಕಂಪನಿಗೆ ಲಾಭ ಮಾಡಿಕೊಟ್ಟಿದ್ದರು. ಈ ಕುರಿತು ಡಿಸೆಂಬರ್‌ 15, 2020ರಂದು ವರದಿ ಪ್ರಕಟಿಸಿತ್ತು.

ಟಿವಿಎಸ್‌ ಕಂಪನಿಗೆ 47.70 ಕೋಟಿ ಅಕ್ರಮ ಲಾಭ?; ಮೌಲ್ಯಮಾಪನದಲ್ಲೇ ನಿಯಮೋಲ್ಲಂಘನೆ

ಬಯೋಮೆಡಿಕಲ್‌ ಉಪಕರಣ ನಿರ್ವಹಣೆ ಸಂಬಂಧ ಆರೋಗ್ಯ ಇಲಾಖೆ ಆಹ್ವಾನಿಸಿದ್ದ ಟೆಂಡರ್‌ನಲ್ಲಿ ಲಂಚಕೋರ ಅಧಿಕಾರಿಗಳಿಂದ ಸರ್ಕಾರಕ್ಕೆ ಆಗಿರುವ ನಷ್ಟದ ವಿವರಗಳು ಬಹಿರಂಗವಾಗುತ್ತಿರುವ ಬೆನ್ನಲ್ಲೇ ಹಲವು ಅಧಿಕಾರಿಗಳ ಚಾಣಾಕ್ಷತೆಯಿಂದ ಕೂಡಿದ್ದ ಲೋಪಗಳು ಬಯಲಾಗಿವೆ. ಟೆಂಡರ್‌ ಪರಿಶೀಲನಾ ಸಮಿತಿಯ ಸದಸ್ಯರು ಸಭೆ ನಡವಳಿಗಳ ಕೊನೆಯ 5 ಮತ್ತು 6ನೇ ಪುಟಗಳಿಗಷ್ಟೇ ಸಹಿ ಮಾಡಿದ್ದಾರೆಯೇ ವಿನಃ, ಉಳಿದ ನಿರ್ಣಯಗಳಿಗೆ ಯಾರೂ ಸಹಿ ಮಾಡದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ. ಈ ಕುರಿತು ಡಿಸೆಂಬರ್‌ 16, 2020ರಂದು ವರದಿ ಪ್ರಕಟಿಸಿತ್ತು.

ಬಯೋಮೆಡಿಕಲ್‌ ನಿರ್ವಹಣೆ; 21 ಕೋಟಿ ಹೆಚ್ಚಳದ ಹಿಂದೆ ಅಧಿಕಾರಿಗಳ ಚಾಣಾಕ್ಷ ನಡೆ

 

ಉಪಕರಣಗಳ ನಿರ್ವಹಣೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದ ಮೊತ್ತ ಮತ್ತು ಕರಾರಿಗೆ ಸಹಿ ಹಾಕುವಾಗ 47.7 ಕೋಟಿ ಹೆಚ್ಚಳ ಮಾಡಿದ್ದ ಅಧಿಕಾರಿಗಳು ಉಪಕರಣಗಳ ಆಸ್ತಿ ಮೌಲ್ಯದಲ್ಲಿಯೂ ಹೆಚ್ಚಳ ಮಾಡಿ ಕಂಪನಿಗೆ ಮತ್ತಷ್ಟು ಲಾಭ ಮಾಡಿಕೊಟ್ಟಿರುವುದು ಇದೀಗ ಮುನ್ನೆಲೆಗೆ ಬಂದಿತ್ತು. ಈ ಕುರಿತು ಡಿಸೆಂಬರ್‌ 17,2020ರಂದು ವರದಿ ಪ್ರಕಟಿಸಿತ್ತು.

ಬಯೋ ಮೆಡಿಕಲ್‌ ಉಪಕರಣದ ಆಸ್ತಿ ಮೌಲ್ಯದಲ್ಲೂ ಹೆಚ್ಚಳ; ಟಿವಿಎಸ್‌ ಕಂಪನಿಗೆ ಮತ್ತಷ್ಟು ಲಾಭ?

 

 

ಬಯೋ ಮೆಡಿಕಲ್‌ ಉಪಕರಣಗಳ ನಿರ್ವಹಣೆ ಸಂಬಂಧ ಕೆಡಿಎಲ್‌ಡಬ್ಲ್ಯೂಎಸ್‌ನ ಅಧಿಕಾರಿಗಳು ಹೆಜ್ಜೆ ಹೆಜ್ಜೆಯಲ್ಲೂ ಅಕ್ರಮ ನಡೆಸಿದ್ದಾರೆ ಎಂಬ ಬಲವಾದ ಆರೋಪಕ್ಕೆ ಗುರಿಯಾಗಿದ್ದಾರೆ. ಟಿವಿಎಸ್‌ ಲಾಜಿಸ್ಟಿಕ್ಸ್‌ ಸರ್ವಿಸ್‌ ಸಲ್ಲಿಸಿದ್ದ ಪ್ರೊಫ್ರಾಮಾ ಇನ್‌ವಾಯ್ಸ್‌ನಲ್ಲಿ ಒದಗಿಸಿದ್ದ ಜಿಎಸ್‌ಟಿ ನಂಬರ್‌ ನಕಲಿಯಾಗಿದ್ದರೂ ಪರಿಶೀಲಿಸದ ಅಧಿಕಾರಿಗಳಿಂದ ಸರ್ಕಾರಕ್ಕೆ ನಷ್ಟ ಉಂಟಾಗಿದೆ.

 

ಉಪಕರಣಗಳ ನಿರ್ವಹಣೆ ಗುತ್ತಿಗೆ ಪಡೆದಿರುವ ಟಿವಿಎಸ್‌ ಲಾಜಿಸ್ಟಿಕ್ಸ್‌ ಸರ್ವಿಸ್‌ಗೆ ನೀಡಿರುವ ಮುಂಗಡದಲ್ಲೂ ಅವ್ಯವಹಾರದ ವಾಸನೆ ಹಬ್ಬಿದೆ. ನೋಟಿಫಿಕೇಷನ್‌ ಅವಾರ್ಡ್‌ನ ಆಧಾರದ ಮೇಲೆ 5.41 ಕೋಟಿ ರು. ಮುಂಗಡ ನೀಡಿರುವ ಇಲಾಖೆ, ಕಂಪನಿ ನೀಡಿದ್ದ ಜಿಎಸ್‌ಟಿ ನಂಬರ್‌ನ್ನು ಪರಿಶೀಲಿಸದೆಯೇ ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಇದರಿಂದ ಸರ್ಕಾರಕ್ಕೆ ಜಿಎಸ್‌ಟಿಯೂ ವಂಚನೆಯಾಗಿದೆ ಎಂದು ತಿಳಿದು ಬಂದಿತ್ತು. ಈ ಕುರಿತು ಡಿಸೆಂಬರ್‌ 18,2020ರಂದು ವರದಿ ಪ್ರಕಟಿಸಿತ್ತು.

ಬಯೋ ಮೆಡಿಕಲ್‌; ಮುಂಗಡ ನೀಡಿಕೆಯಲ್ಲೂ ಅವ್ಯವಹಾರ, ಜಿಎಸ್‌ಟಿಯಲ್ಲೂ ವಂಚನೆ

ಒಟ್ಟಾರೆ ಈ ಪ್ರಕರಣದಲ್ಲಿ 47 ಕೋಟಿ ರೂ.ಗೂ ಅಧಿಕ ಮೊತ್ತದಲ್ಲಿ ನಷ್ಟವಾಗಿತ್ತು. ಆದರೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ನೀಡಿರುವ ವರದಿ ಪ್ರಕಾರ ಕೇವಲ 12.51 ಕೋಟಿ ಮಾತ್ರ ಎಂದು ಹೇಳಲಾಗಿದೆ. ಈ ಕುರಿತು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್‌ ಅವರು ಇದು ಹಿಂದಿ ಸರ್ಕಾರದ ಅವಧಿಯಲ್ಲಿ ನೀಡಿದ್ದ ಗುತ್ತಿಗೆ ಪ್ರಕರಣ. ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸದ ಕಾರಣಕ್ಕೆ ಕಂಪನಿಗೆ ನೀಡಬೇಕಾದ ಹಣವನ್ನು ತಡೆಹಿಡಿಯಲಾಗಿದೆ ಎಂದು ಪ್ರಜಾವಾಣಿಗೆ ಅಭಿಪ್ರಾಯ ನೀಡಿದ್ದಾರೆ.

the fil favicon

SUPPORT THE FILE

Latest News

Related Posts