ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ; ಹೆಚ್ಚಿನ ಭೂಪರಿಹಾರ ಆದೇಶಗಳಿಂದ ಆರ್ಥಿಕ ಹೊರೆ?

ಬೆಂಗಳೂರು; ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿಗಳನ್ನು ಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ ಒಪ್ಪಂದದ ಐ ತೀರ್ಪಿನಲ್ಲಿ ಕಲಂ 23(ಎ) ರಂತೆ ಪರಿಹಾರ ಧನದ ಮೊತ್ತವು ನಿಗದಿಪಡಿಸಬೇಕಿದ್ದ ಪ್ರಾಧಿಕಾರವು ಭೂಸ್ವಾಧೀನಾಧಿಕಾರಿಗಳ ಐತೀರ್ಪಿಗಿಂತ ಶೇ. 20ರಿಂದ 30 ಪಟ್ಟು ಹೆಚ್ಚಿನ ಭೂ ಪರಿಹಾರ ನಿಗದಿಪಡಿಸುತ್ತಿದೆ. ಇದರ ಬೆನ್ನಲ್ಲೇ ಪ್ರಾಧಿಕಾರದ ನ್ಯಾಯಾಲಯಗಳೂ ಅತೀ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ಧನ ಹೆಚ್ಚಳ ಮಾಡುತ್ತಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ಹೊರೆ ಉಂಟಾಗುತ್ತಿದೆ ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.

 

ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ 2022ರ ಆಗಸ್ಟ್‌ 12ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ  ನಡೆಯಲಿರುವ ಸಚಿವ ಸಂಪುಟದ ಉಪ ಸಮಿತಿಯ ಪರಿಶೀಲನಾ ಸಭೆಗೆ ಅಧಿಕಾರಿಗಳು ಸಲ್ಲಿಸಿರುವ ವಿಸ್ತೃತವಾದ ಟಿಪ್ಪಣಿಯು ಈ ಅಂಶವನ್ನು ಹೊರಗೆಡವಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಶೇ.30ರವರೆಗೆ ಪರಿಹಾರ ನೀಡಿದರೂ ಇದನ್ನು ಒಪ್ಪದ ರೈತರು ನ್ಯಾಯಾಲಯದ ಕಟಕಟೆ ಏರುತ್ತಿದ್ದಾರೆ. ಹೀಗಾಗಿ ಇದನ್ನು ತಪ್ಪಿಸಲು ಪರಿಹಾರ ಧನದ ಮೊತ್ತವನ್ನು ಶೇ. 50ರವರೆಗೆ ಹೆಚ್ಚಿಸುವುದೇ ಸೂಕ್ತ ಎಂದು ಅಧಿಕಾರಿಗಳು ಸರ್ಕಾರಕ್ಕೆ ನೀಡಿರುವ ಸಲಹೆಯು ಮುನ್ನೆಲೆಗೆ ಬಂದಿದೆ.

 

ಯೋಜನೆಯ ಮೂರನೇ ಹಂತಕ್ಕೆ 73,000 ಎಕರೆ ಜಮೀನು, 23,000 ಕಟ್ಟಡಗಳಿಗೆ ಭೂ ಸ್ವಾಧೀನ ಮಾಡಿಕೊಳ್ಳಲು ಮುಂದಾಗಿರುವ ಹೊತ್ತಿನಲ್ಲೇ ಪ್ರಾಧಿಕಾರದಲ್ಲೇ ಶೇ.20ರಿಂದ ಶೇ.30 ಪಟ್ಟು ಹೆಚ್ಚಿನ ಭೂ ಪರಿಹಾರ ನಿಗದಿಪಡಿಸುತ್ತಿರುವುದು ತಿಳಿದು ಬಂದಿದೆ.

 

ಒಪ್ಪಂದದ ಐತೀರ್ಪಿನಲ್ಲಿ ಕಲಂ 23(ಎ) ರಡಿ ನೀಡುವ ಪರಿಹಾರ ಧನದ ಮೊತ್ತವು ಕಲಂ 26ರಿಂದ 30 ಅನ್ವಯ ನಿಗದಿಪಡಿಸುವ ಒಟ್ಟು ಮೊತ್ತದ ಮೇಲೆ ಶೇ. 5ಕ್ಕಿಂತ ಕಡಿಮೆ ಇಲ್ಲದಷ್ಟು ಅಥವಾ ಶೇ.10ರಷ್ಟನ್ನು ಮೀರದಂತಿರಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಇದರ ಪ್ರಕಾರ ಒಂದು ಎಕರೆಗೆ 10.00 ಲಕ್ಷ ಪರಿಹಾರ ನೀಡಲು ಕಲಂ 26ರಡಿ ನಿಗದಿಯಾಗಿದ್ದರೆ ಈ ಮೊತ್ತಕ್ಕೆ ಶೇ.10ರಷ್ಟನ್ನು ಸೇರಿಸಿದರೆ ಒಟ್ಟು 11.00 ಲಕ್ಷ ರು. ಆಗಲಿದೆ. ಇದಕ್ಕೆ ರೈತರು ಒಪ್ಪಂದದ ಐ ತೀರ್ಪು ರಚಿಸಲು ಮುಂದೆ ಬರುವುದಿಲ್ಲ. ಹೀಗಾಗಿ ಶೇ. 10ರಷ್ಟು ಇದ್ದದ್ದನ್ನು ಶೇ.50ರವರೆಗೆ ಹೆಚ್ಚಿಸಿದಲ್ಲಿ ಒಂದು ಎಕರೆಗೆ 15 ಲಕ್ಷ ರು. ನಿಗದಿಪಡಿಸಿದರೆ ರೈತರು ಒಪ್ಪಬಹುದು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.

 

ಸಚಿವ ಸಂಪುಟ ಉಪ ಸಮಿತಿ ಪರಿಶೀಲನಾ ಸಭೆಗೆ ಮಂಡನೆಯಾಗಿರುವ ವಿವರಣಾತ್ಮಕ ಟಿಪ್ಪಣಿ

 

ಪ್ರತಿ ಎಕರೆಗೆ 15 ಲಕ್ಷದಂತೆ ನಿಗದಿಪಡಿಸಿದರೆ ಹೆಚ್ಚುವರಿ ಪರಿಹಾರ ಕೋರಿ ಪ್ರಾಧಿಕಾರಕ್ಕೆ ದಾಖಲಾಗುವ ಪ್ರಕರಣಗಳು ಕಡಿಮೆಯಾಗಲಿವೆ. ಹಾಗೆಯೇ ರೈತರಿಗೆ ಏಕಕಾಲಕ್ಕೆ ಪರಿಹಾರವೂ ದೊರಕುತ್ತದೆ ಎಂದು ಅಧಿಕಾರಿಗಳು ವಿವರಿಸಿರುವುದು ಟಿಪ್ಪಣಿಯಿಂದ ಗೊತ್ತಾಗಿದೆ.

 

ಪ್ರಾಧಿಕಾರದ ನ್ಯಾಯಾಲಯಗಳಲ್ಲಿ 16,000 ಕ್ಕಿಂತ ಹೆಚ್ಚಿನ ಪ್ರಕರಣಗಳಿವೆ. ಹೆಚ್ಚಿನ ಪರಿಹಾರಕ್ಕಾಗಿ ವಿಚಾರಣೆ ಹಂತದಲ್ಲಿವೆ. ಕೆಲವು ಪ್ರಕರಣಗಳಲ್ಲಿ ಜಮೀನಿನ ಮಾರುಕಟ್ಟೆ ಬೆಲೆಯನ್ನು ನಿಗದಿಪಡಿಸಿ ಆದೇಶ ಮಾಡಿದೆ. ಗ್ರಾಮೀಣ ಪ್ರದೇಶದಲ್ಲಿ ಖುಷ್ಕಿ ಜಮೀನಿನ ಪ್ರತಿ ಎಕರೆಗೆ 9,66, 000 ರು. ಮಾರುಕಟ್ಟೆ ಬೆಲೆ ನಿಗದಿಪಡಿಸಿದೆ. ಅದರ ನಾಲ್ಕು ಪಟ್ಟು ಹೆಚ್ಚಳ ಮಾಡಿದಾಗ ಶೇ. 12ರಷ್ಟು ಹೆಚ್ಚುವರಿ ಮಾರುಕಟ್ಟೆ ಬೆಲೆ ಸೇರಿದರೆ ಪ್ರತಿ ಎಕರೆಗೆ 40.00 ಲಕ್ಷ ರು. ಹೆಚ್ಚಳವಾಗಿರುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

 

ಅದೇ ರೀತಿ ಗ್ರಾಮೀಣ ಪ್ರದೇಶದಲ್ಲಿ ನೀರಾವರಿ ಜಮೀನಿನ ಪ್ರತಿ ಎಕರೆಗೆ 14,49,000ರು. ಮಾರುಕಟ್ಟೆ ಬೆಲೆ ನಿಗದಿಪಡಿಸಿದ್ದು, ಅದರ ನಾಲ್ಕು ಪಟ್ಟು ಹೆಚ್ಚಳ ಮಾಡಿದಾಗ ಶೇ. 12ರ ಹೆಚ್ಚುವರಿ ಮಾರುಕಟ್ಟೆ ಬೆಲೆ ಸೇರಿದರೆ ಪ್ರತಿ ಎಕರೆಗೆ 60.00 ಲಕ್ಷ ರು. ಹೆಚ್ಚಳವಾಗುತ್ತದೆ. ನಗರ ಪ್ರದೇಶದಲ್ಲಿನ (ವಿಜಯಪುರ) ಜಮೀನಿನ ಪ್ರತಿ ಎಕರೆಗೆ 1,01,17,140 ರು. ಮಾರುಕಟ್ಟೆ ಬೆಲೆ ನಿಗದಿಪಡಿಸಿದ್ದು, ಶೇ.12ರಷ್ಟು ಹೆಚ್ಚುವರಿ ಮಾರುಕಟ್ಟೆ ಮತ್ತು ನಷ್ಟ ಭರ್ತಿ ಸೇರಿ ಪ್ರತಿ ಎಕರೆಗೆ 2.51 ಕೋಟಿ ರು. ಹೆಚ್ಚಳವಾಗುತ್ತದೆ. ಹಾಗೆಯೇ ನಗರ ಪ್ರದೇಶದ (ಮುಧೋಳ)ಲ್ಲಿ ಜಮೀನಿನ ಪ್ರತಿ ಎಕರೆಗೆ 2,12,00,000 ಮಾರುಕಟ್ಟೆ ಬೆಲೆ ನಿಗದಿಪಡಿಸಿದ್ದು ಶೇ.12ರಷ್ಟು ಹೆಚ್ಚುವರಿ ಮಾರುಕಟ್ಟೆ ಬೆಲೆ ಹಾಗೂ ನಷ್ಟ ಭರ್ತಿ ಸೇರಿ ಪ್ರತಿ ಎಕರೆಗೆ 5.00 ಕೋಟಿ ಹೆಚ್ಚಳವಾಗುತ್ತದೆ ಎಂದು ಅಧಿಕಾರಿಗಳು ಲೆಕ್ಕಾಚಾರ ಮಂಡಿಸಿದ್ದಾರೆ.

 

‘ಆರ್ಥಿಕ ಹೊರೆಯನ್ನು ತಪ್ಪಿಸಿಕೊಳ್ಳಬೇಕಾದರೆ ಸರ್ಕಾರವೇ ಪರಿಹಾರ ಮೊತ್ತವನ್ನು ಶೇ. 50ರಷ್ಟಕ್ಕೆ ಏರಿಸಬೇಕು. ಆಗ ರೈತರು ಇದನ್ನು ಒಪ್ಪಬಹುದು. ಇದರಿಂದ ಹೆಚ್ಚುವರಿ ಪರಿಹಾರ ಕೋರಿ ಪ್ರಾಧಿಕಾರಕ್ಕೆ ದಾಖಲಾಗುವ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತೆವೆ. ಮತ್ತು ರೈತರಿಗೆ ಏಕಕಾಲಕಕೆ ಪರಿಹಾರವು ದೊರಕುತ್ತದೆ,’ ಎಂದು ಸಲಹೆ ನೀಡಿದ್ದಾರೆ.

 

ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತವನ್ನು ಅನುಷ್ಠಾನಗೊಳಿಸಿದ ನಂತರ ಪುನರ್‌ ವಸತಿ, ಪುನರ್‌ ನಿರ್ಮಾಣ ಕೇಂದ್ರ, ಭೂ ಸ್ವಾಧೀನ, ಕಟ್ಟಡಗಳ ನಿರ್ಮಾಣಕ್ಕೆ ಒಟ್ಟಾರೆ 3,161.41 ಕೋಟಿ ರು. ಅನುದಾನ ಅವಶ್ಯಕತೆ ಇದೆ.

 

ಪ್ರಸಕ್ತ ಆರ್ಥಿಕ ಸಾಲಿನ ಅಂತ್ಯದವರೆಗೆ ಪುನರ್‌ ವಸತಿಗಾಗಿ 1,986 ಎಕರೆ ಕ್ಷೇತ್ರಕ್ಕೆ ಭೂ ಸ್ವಾಧೀನಪಡಿಸಿಕೊಳ್ಳಲು ಗುರಿ ನಿಗದಿಪಡಿಸಿಕೊಳ್ಳಲಾಗಿದೆ. ಇದಕ್ಕಾಗಿ ಅಂದಾಜು 297.90 ಕೋಟಿ ರು., ಮುಳುಗಡೆ ಜಮೀನು 8,459 ಎಕರೆ ಕ್ಷೇತ್ರಕ್ಕೆ ಭೂ ಸ್ವಾಧೀನಪಡಿಸಿಕೊಳ್ಳಲು 1,268.85 ಕೋಟಿ ರು., ಕಾಲುವೆ ಜಮೀನು 7,752.34 ಎಕರೆ ಕ್ಷೇತ್ರಕ್ಕೆ ಭೂ ಸ್ವಾಧೀನಪಡಿಸಿಕೊಳ್ಳಲು 620.16 ಕೋಟಿ ರು., 6,495 ಕಟ್ಟಡಗಳನ್ನು ಸ್ವಾಧೀನಪಡಿಸಿಕೊಳ್ಳಲು 799.50 ಕೋಟಿ, ಪುನರ್‌ ವಸತಿ, ಪುನರ್‌ ನಿರ್ಮಾಣ ಕೇಂದ್ರಗಳಿಗಾಗಿ 175 ಕೋಟಿ ರು ಸೇರಿದಂತೆ ಒಟ್ಟಾರೆ 3,161.41 ಕೋಟಿ ರು ಅನುದಾನದ ಅವಶ್ಯಕತೆ ಇದೆ ಎಂದು ಟಿಪ್ಪಣಿಯಿಂದ ತಿಳಿದು ಬಂದಿದೆ.

 

ಐತೀರ್ಪಿನ ತಿದ್ದುಪಡಿ ನಿಯಮಾವಳಿಗಳಲ್ಲಿ ಒಪ್ಪಂದ ಐ ತೀರ್ಪಿಗೆ ಅನುಮತಿ ಕೊಡಲಾಗಿದೆ. ಪ್ರಸ್ತುತ ಮೂರನೇ ಹಂತದಲ್ಲಿ ಇನ್ನೂ 73,000 ಎಕರೆ ಜಮೀನು, 23,000 ಕಟ್ಟಡಗಳಿಗೆ ಭೂ ಸ್ವಾಧೀನ ಮಾಡಿಕೊಳ್ಳಬೇಕಿದೆ. ಹೀಗಾಗಿ ಇನ್ನೂ ಹೆಚ್ಚಿನ ವ್ಯಾಜ್ಯಗಳು ನ್ಯಾಯಾಲಯಗಳಲ್ಲಿ ದಾಖಲಾಗುವ ಸಂಭವವಿದೆ ಎಂದೂ ಅಧಿಕಾರಿಗಳು ವಿವರಿಸಿದ್ದಾರೆ.

the fil favicon

SUPPORT THE FILE

Latest News

Related Posts