ಟಿವಿಎಸ್‌ ಕಂಪನಿಗೆ 47.70 ಕೋಟಿ ಅಕ್ರಮ ಲಾಭ?; ಮೌಲ್ಯಮಾಪನದಲ್ಲೇ ನಿಯಮೋಲ್ಲಂಘನೆ

ಬೆಂಗಳೂರು; ಬಯೋ ಮೆಡಿಕಲ್‌ ಉಪಕರಣ ನಿರ್ವಹಣೆ ಸಂಬಂಧ ನಡೆದಿದ್ದ ಟೆಂಡರ್‌ ಪರಿಶೀಲನಾ ಸಭೆ, ಮೌಲ್ಯಮಾಪನ ಪ್ರಕ್ರಿಯೆ ಮತ್ತು ಅಂಕ ನೀಡಿಕೆಯಲ್ಲೇ ಸಂಚು ಹೂಡಿದ್ದರು ಎಂಬ ಆರೋಪಕ್ಕೆ ಗುರಿಯಾಗಿರುವ ಆಯುಕ್ತ ಪಂಕಜಕುಮಾರ್‌ ಪಾಂಡೆ ಮತ್ತು ಉಪ ನಿರ್ದೇಶಕ ಡಾ ಸ್ವತಂತ್ರಕುಮಾರ್‌ ಬಣಕರ್‌ ಅವರು ಟಿವಿಎಸ್‌ ಲಾಜಿಸ್ಟಿಕ್ಸ್‌ ಸರ್ವಿಸ್‌ ಕಂಪನಿಗೆ ಲಾಭ ಮಾಡಿಕೊಟ್ಟಿದ್ದರು!

ಕೋಟ್ಯಂತರ ರುಪಾಯಿ ಮೊತ್ತದ ಉಪಕರಣಗಳ ಖರೀದಿ ಮತ್ತು ನಿರ್ವಹಣೆ ಸಂಬಂಧ ಟೆಂಡರ್‌ ಪ್ರಕ್ರಿಯೆ ನಡೆಸುವಾಗ ಕೆಟಿಪಿಪಿ ಕಾಯ್ದೆಯನ್ನು ಅನುಸರಿಸಬೇಕು. ಆದರೆ ಬಯೋ ಮೆಡಿಕಲ್‌ ಉಪಕರಣ ನಿರ್ವಹಣೆ ಟೆಂಡರ್‌ ಪ್ರಕ್ರಿಯೆಯಲ್ಲಿ ಕೆಟಿಪಿಪಿ ಕಾಯ್ದೆಯಲ್ಲಿನ ಹಲವು ನಿಯಮಗಳನ್ನು ಉಲ್ಲಂಘಿಸಿರುವುದು ದಾಖಲೆಯಿಂದ ತಿಳಿದು ಬಂದಿದೆ.

ಈ ಉಪಕರಣಗಳ ನಿರ್ವಹಣೆ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು 2018ರ ನವೆಂಬರ್‌ 9 ರಂದು ಆಹ್ವಾನಿಸಿದ್ದ ಮರು ಟೆಂಡರ್‌ನಲ್ಲಿ (2ನೇ ಕರೆ) 2 ಬಿಡ್‌ಗಳು ಮಾತ್ರ ಸಲ್ಲಿಕೆಯಾಗಿದ್ದವು. ಟೆಂಡರ್‌ ಪರಿಶೀಲನಾ ಸಮಿತಿಯ ಆರ್‌ಎಫ್‌ಪಿ ಸೆಕ್ಷನ್‌ 2 ಮತ್ತು 5.3 ಪ್ರಕಾರ ಪರಿಶೀಲನೆಯನ್ನೇ ನಡೆಸಿಲ್ಲ. ತಾಂತ್ರಿಕ ಪ್ರಸ್ತಾವನೆ ಪರಿಶೀಲನೆಯನ್ನು ಟೆಂಡರ್‌ ಪರಿಶೀಲನಾ ಸಮಿತಿಯ (ಟಿಎಸ್‌ಸಿ) ಸಮಿತಿಯ ಪ್ರತಿಯೊಬ್ಬ ಸದಸ್ಯ ಪ್ರತ್ಯೇಕವಾಗಿ ಮೌಲ್ಯಮಾಪನ ಮಾಡಿ ಅವರು ನೀಡುವ ಅಂಕಗಳನ್ನು ದಾಖಲಿಸಬೇಕು. ಅಲ್ಲದೆ ಕಡ್ಡಾಯವಾಗಿ ಎಲ್ಲಾ ಸದಸ್ಯರೂ ಒಟ್ಟಾಗಿ ಮೌಲ್ಯಮಾಪನ ಮಾಡಬೇಕು.

ಸಮಿತಿಯ ಸದಸ್ಯರು ಮನಬಂದಂತೆ ಅಂಕ ನೀಡಲು ಅವಕಾಶವಿಲ್ಲ ಮತ್ತು ತಿರಸ್ಕರಿಸಲು ಸೂಕ್ತ ಕಾರಣಗಳನ್ನು ದಾಖಲಿಸಬೇಕು. ಆದರೆ ಈ ಪ್ರಕರಣದಲ್ಲಿ ಸಮಿತಿ ಸದಸ್ಯರೊಬ್ಬರನ್ನು ಹೊರತುಪಡಿಸಿ ಉಳಿದ 13 ಸದಸ್ಯರು ಪ್ರತ್ಯೇಕ ಮತ್ತು ಒಟ್ಟಾರೆಯಾಗಿ ತಾಂತ್ರಿಕ ಪ್ರಸ್ತಾವನೆಯನ್ನು ಮೌಲ್ಯಮಾಪನ ನಡೆಸಿಲ್ಲ.  ಟೆಂಡರ್‌ ಗಿಟ್ಟಿಸಿಕೊಂಡಿರುವ ಟಿವಿಎಸ್‌ ಲಾಜಿಸ್ಟಿಕ್ಸ್‌ ಸರ್ವಿಸ್‌ ಕಂಪನಿ ಪರವಾಗಿ ಸಮಿತಿಯ ಒಬ್ಬ ಸದಸ್ಯ 100 ಅಂಕಗಳಿಗೆ 80 ಅಂಕಗಳನ್ನು ನೀಡಿದ್ದರು ಎಂದು ಗೊತ್ತಾಗಿದೆ.

ಹಾಗೆಯೇ ಟಿಬಿಎಸ್‌ ಇಂಡಿಯಾ ಟೆಲಿಮೆಟಿಕ್‌ ಮತ್ತು ಬಯೋ ಮೆಡಿಕಲ್‌ ಸರ್ವಿಸ್‌ ಪ್ರೈವೈಟ್‌ ಲಿಮಿಟೆಡ್‌ನ ತಾಂತ್ರಿಕ ಪ್ರಸ್ತಾವನೆಗೆ 100ಕ್ಕೆ 76 ಅಂಕಗಳನ್ನು ನೀಡಿ ಅರ್ಹವನ್ನಾಗಿಸಿದ್ದರು. ಮರು ಟೆಂಡರ್‌ ಆಹ್ವಾನ ತಪ್ಪಿಸುವ ಒಂದೇ ಉದ್ದೇಶದಿಂದ 2 ಅರ್ಹ ಬಿಡ್‌ಗಳನ್ನು ಆಯ್ಕೆ ಮಾಡಲಾಗಿತ್ತು. ಅಚ್ಚರಿಯ ಸಂಗತಿ ಎಂದರೆ ಟಿಬಿಎಸ್‌ ಇಂಡಿಯಾ ಟೆಲಿಮೆಟಿಕ್‌ ಬಯೋ ಮೆಡಿಕಲ್‌ ಸರ್ವಿಸ್‌ ಪ್ರೈವೈಟ್‌ ಲಿಮಿಟೆಡ್‌ ಎಲ್ಲಿಯೂ ಯಾವ ತರಹದಲ್ಲಿಯೂ ಚಕಾರ ಎತ್ತಿರಲಿಲ್ಲ.

ಇನ್ನು, ತಾಂತ್ರಿಕ ಪ್ರಸ್ತಾವನೆ ಮೌಲ್ಯಮಾಪನ ಮಾಡುವ ವೇಳೆ ಪ್ರತಿಯೊಬ್ಬ ಸದಸ್ಯ ಎಲ್ಲಾ ಪುಟಗಳಿಗೆ ಕಡ್ಡಾಯವಾಗಿ ತನ್ನ ಪದನಾಮ ಮತ್ತು ಸಹಿ ಮಾಡಲೇಬೇಕು. ಅದೇ ರೀತಿ ಸಮಿತಿಯು ಸಾಮೂಹಿಕವಾಗಿ ಮೌಲ್ಯಮಾಪನ ಮಾಡಿದ ಎಲ್ಲಾ ಪುಟಗಳ ಮೇಲೆ ಅವರ ಪದನಾಮ ಬರೆದು ಸಹಿ ಹಾಕಬೇಕು. ಆದರೆ ಈ ಪ್ರಕರಣದಲ್ಲಿ ಈ ಯಾವ ನಿಯಮಗಳೂ ಪಾಲನೆಯಾಗಿಲ್ಲ ಎಂದು ಗೊತ್ತಾಗಿದೆ.

ನಿಯಮಗಳನ್ನು ಪಾಲಿಸದೆಯೇ ತಾಂತ್ರಿಕ ಸಮಿತಿಯು ಮಾಡಿರುವ ಮೌಲ್ಯಮಾಪನ ಕಾನೂನುಬಾಹಿರವಾಗಿದೆಯಲ್ಲದೆ ಆರ್‌ಎಫ್‌ಪಿ, ಸೆಕ್ಷನ್‌ 5.3 ಮತ್ತು ಕೆಟಿಪಿಪಿ ನಿಯಮದ ಉಲ್ಲಂಘನೆಯೂ ಆಗಿದೆ. ಹೀಗಾಗಿ ಟೆಂಡರ್‌ ಪರಿಶೀಲನಾ ಸಮಿತಿಯು ಕೈಗೊಂಡ ನಿರ್ಧಾರವೇ ಅಸಿಂಧುವಾಗಿದೆ. ಆದರೂ ಲಂಚಕೋರ ಅಧಿಕಾರಿಗಳು ಟಿವಿಎಸ್‌ ಲಾಜಿಸ್ಟಿಕ್ಸ್‌ ಸರ್ವಿಸ್‌ ಕಂಪನಿ ಪರವಾಗಿ ಟೆಂಡರ್‌ ಅನುಮೋದಿಸಿದ್ದಾರೆ ಎಂಬ ಗಂಭೀರ ಆರೋಪಕ್ಕೂ ಗುರಿಯಾಗಿದ್ದಾರೆ.

‘ತಾಂತ್ರಿಕ ಪ್ರಸ್ತಾವನೆಯಲ್ಲಿ ಟೆಂಡರ್‌ ಮೌಲ್ಯಮಾಪನಕ್ಕೆ ಗರಿಷ್ಠ 100 ಅಂಕಗಳನ್ನು ನಿಗದಿಪಡಿಸಲಾಗಿದೆ. ಈ ಪೈಕಿ ಟೋಲ್‌ ಫ್ರೀ ಸರ್ವಿಸ್‌, ಕಾಲ್‌ ಸೆಂಟರ್‌ ಸೇರಿದಂತೆ ಇನ್ನಿತರೆ ಸೇವೆಗಳಿಗೆ 60 ಅಂಕಗಳನ್ನು ನಿಗದಿಪಡಿಸಲಾಗಿತ್ತು. ಆದರೆ ಅವುಗಳ ತಾಂತ್ರಿಕ ವೈಶಿಷ್ಠ್ಯತೆ ನಿಗದಿಪಡಿಸಿ ಟೆಂಡರ್‌ ದಾಖಲೆಗಳನ್ನು ಪ್ರಚುರಪಡಿಸಿಲ್ಲ. ಇದಾವುದೂ ಇಲ್ಲದೆಯೇ ಟೆಂಡರ್‌ ಪರಿಶೀಲನಾ ಸಮಿತಿಯು ಯಾವ ಆಧಾರದ ಮೇಲೆ ಮೌಲ್ಯಮಾಪನ ಮಾಡಿದೆ, ಮೌಲ್ಯಮಾಪನ ಮಾಡಿರುವ ಒಬ್ಬ ಸದಸ್ಯ ಅವರಿಗೆ ಮನಬಂದಂತೆ ಅಂಕಗಳನ್ನು ನೀಡಿ 2 ತಾಂತ್ರಿಕ ಪ್ರಸ್ತಾವನೆಗಳನ್ನೂ ಅರ್ಹಗೊಳಿಸಿರುವುದರ ಹಿಂದೆ ಕೋಟ್ಯಂತರ ರುಪಾಯಿ ಅಕ್ರಮ ನಡೆದಿದೆ,’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು.

the fil favicon

SUPPORT THE FILE

Latest News

Related Posts