ಭೂಮಂಜೂರಾತಿ ನಿಯಮ ಉಲ್ಲಂಘನೆ;11 ಕೋಟಿ ರು. ಮೌಲ್ಯದ ಸರ್ಕಾರಿ ಜಮೀನು ಖಾಸಗಿ ಕಂಪನಿಗೆ ಪರಭಾರೆ?

ಬೆಂಗಳೂರು; ಸರ್ಕಾರಿ ಕೆರೆ, ಕಟ್ಟೆ ಕುಂಟೆ, ಮತ್ತು ಹಳ್ಳ ಸೇರಿದಂತೆ ಜಲಮೂಲ ಪ್ರದೇಶಗಳನ್ನು ಸಂರಕ್ಷಿಸಬೇಕಾದ ಸರ್ಕಾರ ಇದೀಗ ಬೆಂಗಳೂರು ಪೂರ್ವ ತಾಲೂಕಿನ ಕೆ ಆರ್‌ ಪುರ ಹೋಬಳಿಯಲ್ಲಿ ಖಾಸಗಿ ಕಂಪನಿಯೊಂದಕ್ಕೆ 11 ಕೋಟಿ ರು. ಬೆಲೆ ಬಾಳುವ 0-01.08 ಗುಂಟೆ ವಿಸ್ತೀರ್ಣದ ಜಮೀನನ್ನು ಮಂಜೂರು ಮಾಡಲು ಹೊರಟಿರುವುದು ಇದೀಗ ಬಹಿರಂಗವಾಗಿದೆ.

 

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರು ಪ್ರತಿನಿಧಿಸುತ್ತಿರುವ ಕೆ ಆರ್‌ ಪುರಂ ವಿಧಾನಸಭೆ ಕ್ಷೇತ್ರದಲ್ಲಿರುವ ಭರೂಕಾ ಪಾರ್ಕ್‌ ಪ್ರೈ ಲಿ.ಗೆ ಹಳ್ಳ ಹಾದು ಹೋಗಿರುವ ಜಮೀನನ್ನು ಮಂಜೂರು ಮಾಡಲು ಕಂದಾಯ ಇಲಾಖೆಯು ಸಚಿವ ಸಂಪುಟಕ್ಕೆ ಪ್ರಸ್ತಾವನೆ (ಸಂಖ್ಯೆ; ಆರ್‌ಡಿ 292 ಎಲ್‌ಜಿಬಿ 2021 (ಇ) 2022) ಸಲ್ಲಿಸಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪ್ರಸ್ತಾಪಿತ ಜಮೀನು ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕಾರಣ ಯಾವುದೇ ಖಾಸಗಿ ಸಂಘ, ಸಂಸ್ಥೆ,ವ್ಯಕ್ತಿಗಳಿಗೆ ಮಂಜೂರು ಮಾಡಲು ನಿಯಮಗಳಲ್ಲಿ ಅವಕಾಶವಿಲ್ಲ. ಅಲ್ಲದೇ 2018ರ ಜೂನ್‌ 14ರಂದು ಹೊರಡಿಸಿರುವ ಸರ್ಕಾರದ ಸುತ್ತೋಲೆ ಪ್ರಕಾರ ಸರ್ಕಾರಿ ಕೆರೆ, ಕುಂಟೆ, ಹಳ್ಳ, ಜಲಮೂಲ ಪ್ರದೇಶಗಳನ್ನು ಸಂರಕ್ಷಿಸಬೇಕು. ಆದರೆ ಖರಾಬು ಪ್ರದೇಶವು ಹಳ್ಳದ ಅಸ್ತಿತ್ವ ಕಳೆದುಕೊಂಡಿದೆ ಎಂಬುದನ್ನೇ ನೆಪವಾಗಿರಿಸಿಕೊಂಡಿರುವ ಸರ್ಕಾರವು ಅಂದಾಜು 10 ರಿಂದ 11 ಕೋಟಿ ರು. ಬೆಲೆಬಾಳುವ ಜಾಗವನ್ನು ಭರೂಕ ಪಾರ್ಕ್‌ ಪ್ರೈ ಲಿ.,ಗೆ ಮಂಜೂರು ಮಾಡಲು ಹೊರಟಿರುವುದು ಸಚಿವ ಸಂಪುಟಕ್ಕೆ ಸಲ್ಲಿಸಿರುವ ಪ್ರಸ್ತಾವನೆ ಪ್ರತಿಯಿಂದ ತಿಳಿದು ಬಂದಿದೆ.

 

ಈ ಜಮೀನಿನ ಮಾರ್ಗಸೂಚಿ ಬೆಲೆ ಎಕರೆಯೊಂದಕ್ಕೆ 6 ಕೋಟಿ 20 ಲಕ್ಷ ರು.ಇದೆ. ಮಾರುಕಟ್ಟೆ ಬೆಲೆಯು ಎಕರೆಯೊಂದಕ್ಕೆ 10ರಿಂದ 11 ಕೋಟಿ ರು.ಗಳಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕಂದಾಯ ಇಲಾಖೆಗೆ ವರದಿ ಮಾಡಿದ್ದಾರೆ.

 

ಭೂ ಮಂಜೂರಾತಿ ನಿಯಮಗಳಲ್ಲಿ ಹಳ್ಳವನ್ನು ಮಂಜೂರು ಮಾಡಲು ಯಾವುದೇ ಅವಕಾಶಗಳಿಲ್ಲದಿದ್ದರೂ ಕಂದಾಯ ಇಲಾಖೆಯು ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

ಮಂಜೂರು ಮಾಡಲು ನಿಯಮಗಳಲ್ಲಿ ಅವಕಾಶ ಇಲ್ಲವೆಂದು ಸ್ಪಷ್ಟವಾಗಿ ಕಂದಾಯ ದಾಖಲಾತಿಗಳಲ್ಲಿ ಉಲ್ಲೇಖಿಸಿದ್ದರೂ ಪ್ರಸ್ತಾವನೆಯನ್ನು ಇಲಾಖಾ ಹಂತದಲ್ಲೇ ತಿರಸ್ಕರಿಸಬೇಕಿತ್ತು. ಆದರೆ ಕಂದಾಯ ಇಲಾಖೆಯ ಸಚಿವರ ಅನುಮೋದನೆ ಮೇರೆಗೆ ಮಂಜೂರಾತಿ ಪ್ರಸ್ತಾವನೆಯನ್ನು ಸಚಿವ ಸಂಪುಟಕ್ಕೆ ಸಲ್ಲಿಸಲಾಗಿದೆ ಎಂದು ಗೊತ್ತಾಗಿದೆ.

 

‘ಪ್ರಸ್ತಾಪಿತ ಬೆಂಗಳೂರು ಪೂರ್ವ ತಾಲೂಕು ಕೆ ಆರ್ ಪುರ ಹೋಬಳಿಯಯ ಹೂಡಿ ಗ್ರಾಮದ ಸರ್ವೆ ನಂಬರ್‌ 31ರಲ್ಲಿ 12-26ಎಕರೆ ವಿಸ್ತಿರ್ಣದ ಜಮೀನಿನಲ್ಲಿ ಹಾದು ಹೋಗುತ್ತಿರುವ 0-01.08 ಗುಂಟೆ ಸರವು (ಹಳ್ಳ) ಜಮೀನಾಗಿರುವುದರಿಂದ ಭೂ ಮಂಜೂರಾತಿ ನಿಯಮಗಳಲ್ಲಿ ಮಂಜೂರು ಮಾಡಲು ಅವಕಾಶವಿರುವುದಿಲ್ಲ. ಆದ್ದರಿಂದ ಪ್ರಸ್ತಾವನೆಯನ್ನು ತಿರಸ್ಕರಿಸಬಹುದು,’ ಎಂದು ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದೆ.

 

ಇದೇ ಪ್ರಸ್ತಾವನೆಯಲ್ಲಿ ‘ ಪ್ರಸ್ತಾಪಿತ ಬೆಂಗಳೂರು ಪೂರ್ವ ತಾಲೂಕು ಕೆ ಆರ್‌ ಪುರ ಹೋಬಳಿಯ ಹೂಡಿ ಗ್ರಾಮದ ಸರ್ವೆ ನಂಬರ್‌ 31ರಲ್ಲಿನ 0-01.08 ಗುಂಟೆ ಸರವು ಜಮೀನಾಗಿರುವುದರಿಂದ ಕರ್ನಾಟಕ ಭೂ ಮಂಜೂರಾತಿ ನಿಯಮಗಳೂ, 1969ರ ನಿಯಮ 27ರ ಅನ್ವಯ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ನಿಯಮ 22ಎ(2)ನ್ನು ಸಡಿಲಿಸಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 68(1) ಮತ್ತು 68(5) ರಡಿ ಸಾರ್ವಜನಿಕ ಹಕ್ಕಿನಿಂದ ವಿಹಿತಗೊಳಿಸುವ ಷರತ್ತುಗೊಳಪಡಿಸಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22-2 ಎ ಅನ್ವಯ ಪ್ರಚಲಿತ ಮಾರುಕಟ್ಟೆ ದರ ಹಾಗೂ ಇತರೆ ಶಾಸನಬದ್ಧ ಶುಲ್ಕಗಳನ್ನು ವಿಧಿಸಿ ಮಂಜೂರು ಮಾಡಬಹುದು,’ ಎಂದು ಸರ್ಕಾರದ ವಿವೇಚನೆಗೆ ಬಿಟ್ಟಿರುವುದು ಗೊತ್ತಾಗಿದೆ.

 

ಇನ್ಫೋಸಿಸ್‌ ಕಂಪನಿಯು ಸರ್ಜಾಪುರ ಹೋಬಳಿಯಲ್ಲಿ ಖರೀದಿಸಿದ್ದ ಜಮೀನಿನಲ್ಲಿಯೂ ಹದ್ದಿಗಿಡಿದ ಹಳ್ಳ ಹಾದು ಹೋಗಿತ್ತು. ಹೀಗಾಗಿ ಹಿಂದಿನ ಸರ್ಕಾರವು ಬದಲಿ ಜಮೀನು ಪಡೆದುಕೊಂಡು ಕಂಪನಿ ಹಿತ ಕಾಯ್ದಿದ್ದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts