ಬೆಂಗಳೂರು; ರಾಜ್ಯದ ನಗರ, ಪಟ್ಟಣ ಮತ್ತು ಗ್ರಾಮಗಳಲ್ಲಿರುವ ಗೋಮಾಳ, ಸರ್ಕಾರಿ ಜಮೀನಿನ ಮೇಲೆ ಕಣ್ಣು ಹಾಕಿ ಈಗಾಗಲೇ ಹಲವೆಡೆ ಜಮೀನು ಮಂಜೂರು ಮಾಡಿಸಿಕೊಂಡಿರುವ ರಾಷ್ಟ್ರೋತ್ಥಾನ ಪರಿಷತ್ ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಯಲ್ಲಿಯೂ 10 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನನ್ನು ಮಂಜೂರು ಮಾಡಿಸಿಕೊಳ್ಳಲು ಪ್ರಸ್ತಾವನೆ ಸಲ್ಲಿಸಿದೆ.
ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಹುರುಳಿಚಿಕ್ಕನಹಳ್ಳಿ ಗ್ರಾಮದಲ್ಲಿ 9.32 ಎಕರೆ ಗೋಮಾಳ, ಬಳ್ಳಾರಿ ನಗರದ ಕುವೆಂಪು ನಗರ ಬಡಾವಣೆಯಲ್ಲಿ ಸಿ ಎ ನಿವೇಶನ ಮಂಜೂರು ಮಾಡಿಸಿಕೊಂಡಿರುವ ಬೆನ್ನಲ್ಲೇ ಹೊಸಪೇಟೆಯ ಜಂಬೂನಾಥನಹಳ್ಳಿಯಲ್ಲಿ 5 ಎಕರೆ ಜಮೀನನ್ನು ಮಂಜೂರು ಮಾಡಿಸಿಕೊಳ್ಳಲು ಸಲ್ಲಿಸಿರುವ ಪ್ರಸ್ತಾವನೆ ಚಾಲನೆಯಲ್ಲಿದೆ. ಈ ಮಧ್ಯೆ ಹಾವೇರಿಯಲ್ಲಿಯೂ 10 ಎಕರೆ ಮಂಜೂರಾತಿ ಸಂಬಂಧ ಪ್ರಸ್ತಾವನೆ ಸಲ್ಲಿಸಬೇಕು ಎಂದು ಹಾವೇರಿ ಜಿಲ್ಲಾಧಿಕಾರಿಗೆ 2022ರ ಆಗಸ್ಟ್ 8ರಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
‘ಬೆಂಗಳೂರಿನ ಕೆಂಪೆಗೌಡ ನಗರದ ಕೇಶವ ಶಿಲ್ಪದಲ್ಲಿರುವ ರಾಷ್ಟ್ರೋತ್ಥಾನ ಟ್ರಸ್ಟ್‌ನ ಮ್ಯಾನೆಜಿಂಗ್ ಟ್ರಸ್ಟಿ ನಾ. ದಿನೇಶ್ ಹೆಗ್ಡೆ ಅವರು ಮುಖ್ಯಮಂತ್ರಿಯವರಿಗೆ ಸಲ್ಲಿಸಿರುವ ಮನವಿಯಲ್ಲಿ ಹಾವೇರಿ ಜಿಲ್ಲೆ ಹಾವೇರಿ ತಾಲೂಕು ಹಾವೇರಿ ಹೋಬಳಿಯ ದೇವಗಿರಿ ಗ್ರಾಮದ ಸರ್ವೆ ನಂಬರ್ 140ರಲ್ಲಿ 10.00 ಎಕರೆ ಜಮೀನನ್ನು ರಾಷ್ಟ್ರೋತ್ಥಾನ ಟ್ರಸ್ಟ್‌ಗೆ ಶೈಕ್ಷಣಿಕ ಚಟುವಟಿಕೆಗಳಿಗಾಗಿ ಮಂಜೂರು ಮಾಡುವಂತೆ ಕೋರಿರುತ್ತಾರೆ. ಆದ್ದರಿಂದ ಪತ್ರದಲ್ಲಿನ ಅಂಶಗಳ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳಿಸಬೇಕು,’ ಎಂದು ಹಾವೇರಿ ಜಿಲ್ಲಾಧಿಕಾರಿಗೆ (ಆರ್‌ಡಿ 28 ಎಲ್‌ಜಿಡಿ 2021; ಉಲ್ಲೇಖ ಪತ್ರ ಸಂಖ್ಯೆ F-CM/4412056/2022 DATED 14.07.2022) ನಿರ್ದೇಶಿಸಿದ್ದಾರೆ.
ಹಾವೇರಿ ಜಿಲ್ಲೆ ಹಾವೇರಿ ತಾಲೂಕಿನ ದೇವಗಿರಿ ಗ್ರಾಮದ ಸರ್ವೆ ನಂಬರ್ 140ರಲ್ಲಿ 20.31 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನಿದೆ. ಈ ಪೈಕಿ 1 ಎಕರೆ ಜಮೀನನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದ ಸ್ಮಶಾನಕ್ಕೆ 1 ಎಕರೆ ಜಮೀನನ್ನು ಮಂಜೂರು ಮಾಡಿ ಕಾಯ್ದಿರಿಸಿರುವುದು ಭೂಮಿ ದಾಖಲೆಗಳಿಂದ ತಿಳಿದು ಬಂದಿದೆ.
ಶಾಲಾ ಶುಲ್ಕದಿಂದ ಸಂಗ್ರಹವಾದ ಆದಾಯವೂ ಸೇರಿದಂತೆ ಇನ್ನಿತರೆ ಮೂಲಗಳಿಂದ ಕಳೆದ 5 ವರ್ಷಗಳಲ್ಲಿ 401.86 ಕೋಟಿ ರು. ಆದಾಯ ಮತ್ತು ಇದೇ ಅವಧಿಯಲ್ಲಿ 63.64 ಕೋಟಿ ರು. ಲಾಭಾಂಶ ಹೊಂದಿದೆ. ಮುಕ್ತ ಮಾರುಕಟ್ಟೆಯಲ್ಲಿ ಜಮೀನು ಖರೀದಿಸುವ ಆರ್ಥಿಕ ಸಾಮರ್ಥ್ಯವೂ ರಾಷ್ಟ್ರೋತ್ಥಾನ ಪರಿಷತ್‌ಗಿದೆ.
ಆದರೂ ಮಾರುಕಟ್ಟೆ ಶುಲ್ಕದಲ್ಲೇ ಶೇ. 25ರಷ್ಟು ರಿಯಾಯಿತಿ ದರದಲ್ಲಿ ಹುರುಳಿ ಚಿಕ್ಕನಹಳ್ಳಿ ಗ್ರಾಮದಲ್ಲಿ ಸರ್ವೆ ನಂಬರ್ 69ರಲ್ಲಿ 9-32 ಎಕರೆ ಜಮೀನನ್ನು ಗೋಮಾಳ ಮಂಜೂರು ಮಾಡಿತ್ತು. ಶೈಕ್ಷಣಿಕ ಚಟುವಟಿಕೆಗಳಿಗಾಗಿ ರಾಷ್ಟ್ರೋತ್ಥಾನ ಪರಿಷತ್‌ಗೆ ಮಂಜೂರು ಮಾಡುವ ಪ್ರಸ್ತಾವನೆಯನ್ನು ಆರ್ಥಿಕ ಮತ್ತು ಕಾನೂನು ಇಲಾಖೆಯು ಒಪ್ಪಿರಲಿಲ್ಲ. ಈ ಕುರಿತು ‘ದಿ ಫೈಲ್’ ಸರಣಿ ವರದಿಗಳನ್ನು ಪ್ರಕಟಿಸಿದನ್ನು ಸ್ಮರಿಸಬಹುದು.
ರಾಷ್ಟ್ರೋತ್ಥಾನ ಪರಿಷತ್, ಬಿಜೆಪಿ ಕಚೇರಿಗೆ ಗೋಮಾಳ, ಜಮೀನು ಹಂಚಿಕೆ ಸುತ್ತ ‘ದಿ ಫೈಲ್’ನ 13 ವರದಿಗಳು
ಹುರುಳಿಚಿಕ್ಕನಹಳ್ಳಿ ಗ್ರಾಮದ ರೈತರು ತಮ್ಮ ಸ್ವಂತ ಹೊಲದಲ್ಲಿ ಬೆಳೆದಿರುವ ಹುಲ್ಲು, ಬೂಸಾ ಹಿಂಡಿ ಕೊಟ್ಟು ರಾಸುಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ ಎಂಬ ಕಾರಣವನ್ನು ಮುಂದಿರಿಸಿ ಗೋಮಾಳವನ್ನು ಕಾಯ್ದಿರಿಸುವ ಅವಶ್ಯಕತೆಯೇ ಇಲ್ಲವೆಂದು ಪಶು ವೈದ್ಯಾಧಿಕಾರಿಗಳು ರಾಷ್ಟ್ರೋತ್ಥಾನ ಪರಿಷತ್‌ಗೆ ಗೋಮಾಳ ಜಮೀನು ಮಂಜೂರು ಮಾಡಲು ದಾರಿಮಾಡಿಕೊಟ್ಟಿದ್ದರು.