ದರಪಟ್ಟಿ ಆಹ್ವಾನಿಸದೇ ಪೂರ್ವ ನಿರ್ಧರಿತ ಕಂಪನಿಗೆ ವಹಿಸಿದ್ದ ಮಂಡಳಿ; ಕಮಿಷನ್‌ ವ್ಯವಹಾರವೇ?

ಬೆಂಗಳೂರು; ಸಚಿವ ಬಿ ಸಿ ನಾಗೇಶ್‌ ಅವರ ಫೇಸ್‌ಬುಕ್‌, ಟ್ವಿಟರ್‌, ಯೂಟ್ಯೂಬ್‌ ಸೇರಿದಂತೆ ಇನ್ನಿತರೆ ಸಾಮಾಜಿಕ ಜಾಲತಾಣ ನಿರ್ವಹಣೆ ಸಂಬಂಧ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಯಾವುದೇ ದರ ಪಟ್ಟಿಯನ್ನು ಆಹ್ವಾನಿಸಿರಲಿಲ್ಲ!

 

ಯಾವುದೇ ಅನುದಾನ ನಿಗದಿಪಡಿಸದಿದ್ದರೂ ಇದೇ ಮೊದಲ ಬಾರಿಗೆ ಲಕ್ಷಾಂತರ ರೂಪಾಯಿಗಳನ್ನು ಸಚಿವ ಬಿ ಸಿ ನಾಗೇಶ್‌ ಅವರ ಸಾಮಾಜಿಕ ಜಾಲತಾಣಕ್ಕೆ ವೆಚ್ಚ ಮಾಡಿರುವ ಬೆನ್ನಲ್ಲೇ ದರಪಟ್ಟಿಯನ್ನೂ ಆಹ್ವಾನಿಸದೇ ಪೂರ್ವ ನಿರ್ಧರಿತ ನಿರ್ದಿಷ್ಟ ಕಂಪನಿಗೇ ವಹಿಸಲಾಗಿತ್ತು ಎಂಬುದು ಆರ್‌ಟಿಐ ದಾಖಲೆಗಳಿಂದ ಬಹಿರಂಗವಾಗಿದೆ. ಈ ಸಂಬಂಧ ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಸಮಗ್ರ ದಾಖಲೆಗಳನ್ನು ಪಡೆದುಕೊಂಡಿದೆ.

 

ಸಚಿವ ಬಿ ಸಿ ನಾಗೇಶ್‌ ಅವರ ದೈನಂದಿನ ಸರ್ಕಾರಿ ಕೆಲಸ ಕಾರ್ಯಗಳನ್ನು ಸಾರ್ವಜನಿಕರಿಗೆ ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ಟ್ವಿಟರ್‌, ಯೂಟ್ಯೂಬ್‌, ಫೇಸ್‌ಬುಕ್‌ ಹಾಗೂ ಇನ್ನಿತರೆ ಸಾಮಾಜಿಕ ಜಾಲತಾಣಗಳ ನಿರ್ವಹಣೆಗೆ ಉನ್ನತಮಟ್ಟದ ಏಜೆನ್ಸಿ ನೇಮಿಸಬೇಕು ಎಂದು ಸಚಿವರ ಆಪ್ತ ಕಾರ್ಯದರ್ಶಿ ಎ ಅರ್‌ ರವಿ ಅವರು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಗೆ 2021ರ ಅಕ್ಟೋಬರ್‌ 1ರಂದು ಟಿಪ್ಪಣಿಯಲ್ಲಿ ಕೋರಿದ್ದರು ಎಂಬುದು ಆರ್‌ಟಿಐ ದಾಖಲೆಯಿಂದ ತಿಳಿದು ಬಂದಿದೆ.

 

ಈ ಟಿಪ್ಪಣಿಯನ್ನು ಪರಿಶೀಲಿಸಿದ್ದ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಮೂರು ತಿಂಗಳ ಅವಧಿಯವರೆಗೆ ಖಾಸಗಿ ಸಂಸ್ಥೆಯನ್ನು ಗುರುತಿಸುವ ಸಂಬಂಧ ದರಪಟ್ಟಿ ಆಹ್ವಾನಿಸಬೇಕು ಎಂದು ಕಡತ ಮಂಡಿಸಿತ್ತು.

 

‘ಉಲ್ಲೇಖಿತ ಟಿಪ್ಪಣಿಯಲ್ಲಿ ತಿಳಿಸಿರುವಂತೆ ಪ್ರಾಥಮಿಕ, ಪ್ರೌಢ ಮತ್ತು ಸಕಾಲ ಸಚಿವರ ಟ್ವಿಟರ್‌, ಯೂಟ್ಯೂಬ್‌, ಫೇಸ್‌ಬುಕ್‌ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳ ನಿರ್ವಹಣೆಗೆ ಖಾಸಗಿ ಸಂಸ್ಥೆಯನ್ನು ಗುರುತಿಸುವ ಸಂಬಂಧ ಪ್ರಾಥಮಿಕ ಹಂತವಾಗಿ ಮೂರು ತಿಂಗಳ ಅವಧಿಯ ಕಾರ್ಯನಿರ್ವಹಣೆಗಾಗಿ ದರಪಟ್ಟಿ ಆಹ್ವಾನಿಸಿ ಅರ್ಹ ಸಂಸ್ಥೆಯನ್ನು ಗುರುತಿಸಬಹುದು,’ ಎಂದು ಸಚಿವರ ಅನುಮೋದನೆಗೆ ಮಂಡಳಿಯು ಕಡತವನ್ನು ಮಂಡಿಸಿತ್ತು ಎಂಬುದು ದಾಖಲೆಯಿಂದ ಗೊತ್ತಾಗಿದೆ.

 

ದರಪಟ್ಟಿ ಆಹ್ವಾನಿಸಬೇಕು ಎಂಬ ಉಲ್ಲೇಖವಿರುವ ಟಿಪ್ಪಣಿ ಹಾಳೆ

 

ಆದರೆ ಆರ್‌ಟಿಐ ಅಡಿಯಲ್ಲಿ ನೀಡಿರುವ ಸಮಗ್ರ ಕಡತದಲ್ಲಿ ದರಪಟ್ಟಿ ಆಹ್ವಾನಿಸಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಇಂತಹ ಸೇವೆ ನೀಡುವ ಸಂಸ್ಥೆಗಳನ್ನು ಪರಿಶೀಲಿಸಲಾಗಿದೆ ಎಂದು ಮಂಡಳಿಯು ಟಿಪ್ಪಣಿ ಹಾಳೆಗಳಲ್ಲಿ ಉಲ್ಲೇಖಿಸಿದೆಯಾದರೂ ಯಾವ್ಯಾವ ಸಂಸ್ಥೆಗಳಿಂದ ದರಪಟ್ಟಿ ಆಹ್ವಾನಿಸಿದೆ, ದರಪಟ್ಟಿಯಲ್ಲಿ ಎಷ್ಟು ಮೊತ್ತವನ್ನು ನಮೂದಿಸಲಾಗಿದೆ ಎಂಬ ಬಗ್ಗೆ ಯಾವುದೇ ವಿವರಗಳಿಲ್ಲ. ಬದಲಿಗೆ ಬೆಂಗಳೂರಿನ ಜೆ ಪಿ ನಗರದಲ್ಲಿರುವ ಪಿ-ಪೋಲ್‌ ಅನಾಲಿಟಿಕ್ಸ್‌ ಕಂಪನಿಯಿಂದಲೇ ನೇರವಾಗಿ ತಾಂತ್ರಿಕ ಹಾಗೂ ಆರ್ಥಿಕ ಪ್ರಸ್ತಾವನೆಯನ್ನು ಪಡೆದಿತ್ತು ಎಂಬುದು ದಾಖಲೆಯಿಂದ ತಿಳಿದು ಬಂದಿದೆ.

 

ಅದರಂತೆ ಪಿ ಪೋಲ್‌ ಅನಾಲಿಟಿಕ್ಸ್‌ ಕಂಪನಿಯು ಸಲ್ಲಿಸಿದ್ದ ತಾಂತ್ರಿಕ ಮತ್ತು ಆರ್ಥಿಕ ಪ್ರಸ್ತಾವನೆಯನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು 2021ರ ಅಕ್ಟೋಬರ್‌ 18ರಂದು ಅನುಮೋದಿಸಿತ್ತು. ಪ್ರತಿ ತಿಂಗಳು 94,400 ರು. ಲೆಕ್ಕಾಚಾರದಂತೆ ಮೂರು ತಿಂಗಳ ಅವಧಿಗೆ ಎಲ್ಲಾ ತೆರಿಗೆಗಳನ್ನೂ ಒಳಗೊಂಡಂತೆ 2,83,200 ರು.ಗಳನ್ನು ನಮೂದಿಸಿತ್ತು ಎಂಬುದು ಗೊತ್ತಾಗಿದೆ.

 

ಇದು 5 ಲಕ್ಷ ರು.ಗಳಿಗಿಂತ ಕಡಿಮೆ ಇದ್ದುದ್ದರಿಂದ ದರಪಟ್ಟಿ ಆಹ್ವಾನ ಪ್ರಕ್ರಿಯೆ ಮೂಲಕ ಸಚಿವರ ಸಾಮಾಜಿಕ ಜಾಲತಾಣಗಳ ನಿರ್ವಹಣೆಗೆ ಖಾಸಗಿ ಏಜೆನ್ಸಿಯನ್ನು ನೇಮಿಸಬೇಕು ಎಂದು ಟಿಪ್ಪಣಿ ಹಾಳೆಯಲ್ಲಿ ನಮೂದಿಸಲಾಗಿದೆ. ಇದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಗಮನದಲ್ಲಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts