ಸಾಮಾಜಿಕ ಜಾಲತಾಣ; 5 ಲಕ್ಷ ಮಿತಿ ದಾಟಿದ್ದರೂ ಇ-ಟೆಂಡರ್‌ ಕರೆಯದೇ 11 ತಿಂಗಳವರೆಗೆ ಏಜೆನ್ಸಿ ವಿಸ್ತರಣೆ

ಬೆಂಗಳೂರು; ಸಚಿವ ಬಿ ಸಿ ನಾಗೇಶ್‌ ಅವರ ಸಾಮಾಜಿಕ ಜಾಲತಾಣವನ್ನು ನಿರ್ವಹಿಸಲು ಪಿ-ಪೋಲ್‌ ಅನಾಲಿಟಿಕ್ಸ್‌ ಕಂಪನಿಗೇ 3 ತಿಂಗಳು ಅವಧಿಗೆ ಮುಂದುವರೆಸಬೇಕಾದಲ್ಲಿ 5 ಲಕ್ಷ ರು. ಮಿತಿ ದಾಟುವ ಕಾರಣ ಇ-ಟೆಂಡರ್‌ ಕರೆಯಬೇಕು ಎಂದು ಅಧಿಕಾರಿಗಳು ಹೇಳಿದ್ದನ್ನು ಬದಿಗಿರಿಸಿ ಸಚಿವರ ಅಧಿಕಾರವಾಧಿವರೆಗೆ (2023ರ ಮಾರ್ಚ್‌ವರೆಗೂ) ಯಾವುದೇ ಇ-ಟೆಂಡರ್‌ ಕರೆಯದೇ 4(ಜಿ) ವಿನಾಯಿತಿ ಆದೇಶ ಪಡೆದಿರುವುದು ಆರ್‌ಟಿಐ ದಾಖಲೆಗಳಿಂದ ಬಹಿರಂಗವಾಗಿದೆ.

 

ದರಪಟ್ಟಿ ಕರೆಯದೇ ಈಗಾಗಲೇ ಪಿ-ಪೋಲ್‌ ಅನಾಲಿಟಿಕ್ಸ್‌ ಕಂಪನಿಗೆ ಸಚಿವ ಬಿ ಸಿ ನಾಗೇಶ್‌ ಅವರ ಸಾಮಾಜಿಕ ಜಾಲತಾಣ ನಿರ್ವಹಿಸಲು ಆದೇಶ ಹೊರಡಿಸಿದ್ದರ ಬೆನ್ನಲ್ಲೇ   ಇ-ಟೆಂಡರ್‌  ಆಹ್ವಾನಿಸದೆಯೇ 4(ಜಿ) ವಿನಾಯಿತಿ ನೀಡಿರುವುದು ಮುನ್ನೆಲೆಗೆ ಬಂದಿದೆ. ಈ ಸಂಬಂಧ ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಕಡತವನ್ನು ಪಡೆದುಕೊಂಡಿದೆ.

 

‘ಸಚಿವರ ಟ್ವಿಟರ್‌, ಫೇಸ್‌ಬುಕ್‌, ಯೂಟ್ಯೂಬ್‌ ಸೇರಿದಂತೆ ಇನ್ನಿತರೆ ಸಾಮಾಜಿಕ ಜಾಲತಾಣಗಳ ನಿರ್ವಹಣೆಗೆ ಸೇವೆಯನ್ನು ಕೆಟಿಪಿಪಿ ಕಾಯ್ದೆಯಡಿ 3 ತಿಂಗಳು ಮುಂದುವರೆಸಿದ್ದಲ್ಲಿ 5 ಲಕ್ಷ ರು. ಮಿತಿ ದಾಟಲಿದ್ದು, ನಿಯಮಾನುಸಾರ ಇ-ಟೆಂಡರ್‌ ಕರೆಯಬೇಕಾಗಿದೆ,’ ಎಂದು ಅಧಿಕಾರಿಗಳು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿದ್ದಾರೆ.

 

ಇ-ಟೆಂಡರ್‌ ಕರೆಯುವ ಕುರಿತು ಪ್ರಸ್ತಾಪಿಸಿರುವ ಟಿಪ್ಪಣಿ ಹಾಳೆಯ ಪ್ರತಿ

 

ಆದರೆ ಇದನ್ನು ಬದಿಗಿರಿಸಿರುವ ಪ್ರಾಥಮಿಕ, ಪ್ರೌಢಶಿಕ್ಷಣ ಇಲಾಖೆಯು ಪಿ-ಪೋಲ್‌ ಅನಾಲಿಟಿಕ್ಸ್‌ ಕಂಪನಿ ಸೇವೆಯನ್ನು ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999ರ ಕಲಂ (ಜೆ) ವಿನಾಯಿತಿಯನ್ನು 2022ರ ಜೂನ್‌ 20ರಂದು ಆರ್ಥಿಕ ಇಲಾಖೆಯಿಂದ ಪಡೆದಿದೆ. ಈ ಸಂಬಂಧ 2022ರ ಜೂನ್‌ 21ರಂದು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕರಿಗೆ 2022ರ ಜೂನ್‌ 21ರಂದು ಪತ್ರ ಬರೆದಿರುವುದು ಆರ್‌ಟಿಐ ದಾಖಲೆಗಳಿಂದ ಗೊತ್ತಾಗಿದೆ.

 

‘ಸಚಿವರ ಸಾಮಾಜಿಕ ಜಾಲತಾಣಗಳ ನಿರ್ವಹಣೆ ಕಾರ್ಯಕ್ಕೆ  ಪ್ರತಿ ತಿಂಗಳು 94,400 ರು.ನಂತೆ 2022ರ ಏಪ್ರಿಲ್‌ನಿಂದ 2023ರ ಮಾರ್ಚ್‌ವರೆಗೆ ಒಂದು ವರ್ಷದ ಅವಧಿಗೆ ಒಟ್ಟು 11,32,800 ರು.ಗಳ ವೆಚ್ಚದಲ್ಲಿ ಪಿ-ಪೋಲ್‌ ಅನಾಲಿಟಿಕ್ಸ್‌ ಕಂಪನಿಯ ಸೇವೆ ಪಡೆಯಲು 4 (ಜಿ) ವಿನಾಯಿತಿ ನೀಡಲಾಗಿದೆ. ಆದ್ದರಿಂದ ಸಚಿವರ ಸಾಮಾಜಿಕ ಜಾಲತಾಣಗಳ ನಿರ್ವಹಣೆ ಕಾರ್ಯಕ್ಕೆ  ಈ ಸಂಸ್ಥೆಯಿಂದ  ಪಡೆಯಬೇಕು,’ ಎಂದು ಶಿಕ್ಷಣ ಇಲಾಖೆಯು 2022ರ ಜೂನ್‌ 21ರಂದು ಬರೆದಿರುವ ಪತ್ರದಲ್ಲಿ ನಿರ್ದೇಶಿಸಿದ್ದಾರೆ.

 

ಅಲ್ಲದೆ ಪಿ-ಪೋಲ್‌ ಅನಾಲಿಟಿಕ್ಸ್‌ ಕಂಪನಿಗೆ 2022ರಿಂದ ಏಪ್ರಿಲ್‌ 2022ರವರೆಗೆ 3 ತಿಂಗಳ ಅವಧಿಗೆ ವಿಸ್ತರಿಸಬೇಕು ಎಂದು ಸಚಿವರ ಆಪ್ತ ಕಾರ್ಯದರ್ಶಿ 2022ರ ಮಾರ್ಚ್‌ 15ರಂದು ಪತ್ರ ಬರೆದಿದ್ದರು.

 

‘ಪಿ-ಪೋಲ್‌ ಅನಾಲಿಟಿಕ್ಸ್‌ಗೆ ಪ್ರಾಥಮಿಕ, ಪ್ರೌಢಶಿಕ್ಷಣ, ಸಕಾಲ ಸಚಿವರ ಸಾಮಾಜಿಕ ಜಾಲತಾಣವಾದ ಟ್ವಿಟರ್‌, ಯೂಟ್ಯೂಬ್‌, ಫೇಸ್‌ಬುಕ್‌ ಹಾಗೂ ಇನ್ನಿತರೆ ಖಾತೆಗಳನ್ನು  3 ತಿಂಗಳ ಅವಧಿಗೆ 2021ರ ಅಕ್ಟೊಬರ್‌ 26ರಂದು ಕಾರ್ಯಾದೇಶ ನೀಡಿದ್ದು ಈ ಆದೇಶವು 2022ರ ಜನವರಿಗೆ ಮುಕ್ತಾಯಗೊಂಡಿದೆ. ಆದ್ದರಿಂದ ಸದರಿ ಆದೇಶವನ್ನು 2022ರ ಫೆಬ್ರುವರಿಯಿಂದ ಏಪ್ರಿಲ್‌ 2022ರವರೆಗೆ 3 ತಿಂಗಳ ಅವಧಿಗೆ ವಿಸ್ತರಿಸಬೇಕು,’ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ಪತ್ರದಲ್ಲಿ ನಿರ್ದೇಶಿಸಿದ್ದರು. ಆದರೆ ಮಂಡಳಿ ಮತ್ತು ಶಿಕ್ಷಣ ಇಲಾಖೆಯು ಸಚಿವ ಬಿ ಸಿ ನಾಗೇಶ್‌ ಅವರ ಅಧಿಕಾರಾವಧಿವರೆಗೆ 4 (ಜಿ) ವಿನಾಯಿತಿ ಪಡೆದು ಆದೇಶ ಹೊರಡಿಸಿದೆ.

 

ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯಲ್ಲಿ ಯಾವುದೇ ಅನುದಾನ ನಿಗದಿಪಡಿಸದಿದ್ದರೂ ಇದೇ ಮೊದಲ ಬಾರಿಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದೆ. ಸಾಮಾಜಿಕ ಜಾಲತಾಣ ನಿರ್ವಹಣೆ ಸಂಬಂಧ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಯಾವುದೇ ದರ ಪಟ್ಟಿಯನ್ನು ಆಹ್ವಾನಿಸಿರಲಿಲ್ಲ ಎಂಬುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts