ಬೆಂಗಳೂರು; ರಾಜ್ಯದ ವಿವಿಧೆಡೆ 13,800 ಸರ್ಕಾರಿ ಶಾಲೆಗಳ ವಿಲೀನಗೊಳಿಸಲಾಗುವುದು ಎಂದು ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ನೀಡಿದ್ದ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದ ರಾಯಭಾಗದ ನಿಡಗುಂದಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ-ಶಿಕ್ಷಕ ವೀರಣ್ಣ ಮಡಿವಾಳರ ಎಂಬುವರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯು ನೋಟೀಸ್ ಜಾರಿಗೊಳಿಸಿದೆ.
ಶಾಲೆಗಳ ವಿಲೀನ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಶಿಕ್ಷಕರಿಗೆ ನೋಟೀಸ್ ಜಾರಿಗೊಳಿಸುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ ಎಂಬ ಟೀಕೆಗಳು ಇದೀಗ ಮುನ್ನೆಲೆಗೆ ಬಂದಿವೆ.
ಕವಿಯೂ ಆಗಿರುವ ವೀರಣ್ಣ ಮಡಿವಾಳರ ಅವರು ಸರ್ಕಾರಿ ಶಾಲೆಯಲ್ಲಿದ್ದ ಮೂಲ ಸೌಕರ್ಯಗಳ ಕೊರತೆ ನೀಗಿಸಿ ಶಾಲೆಗೆ ಮಕ್ಕಳನ್ನು ಆಕರ್ಷಿಸಿದ್ದರು. ಇವರ ಪರಿಶ್ರಮ ಮತ್ತು ಆಸಕ್ತಿ ಫಲವಾಗಿ ನಿಡಗುಂದಿಯ ಈ ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ದಾಖಲಾಗಿದ್ದರು. ಇವರ ಕಾರ್ಯವೈಖರಿಯನ್ನು ಮೆಚ್ಚಿದ್ದ ಹಿಂದಿನ ಶಿಕ್ಷಣ ಸಚಿವ ಎಸ್ ಸುರೇಶ್‌ಕುಮಾರ್ ಅವರು ಅಭಿನಂದಿಸಿದ್ದರು.
ಆದರೀಗ ಶಾಲೆಗಳ ವಿಲೀನ ಕುರಿತು ಹಾಲಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ನೀಡಿದ್ದ ಹೇಳಿಕೆಗೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದನ್ನು ಮುಂದಿರಿಸಿ ನೋಟೀಸ್ ನೀಡಿರುವುದು ಸರ್ಕಾರದ ನೀತಿಯನ್ನು ಟೀಕಿಸಿಬಾರದು ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನಿಸಿದಂತಾಗಿದೆ. ನೋಟೀಸ್‌ನ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ನೋಟೀಸ್‌ನಲ್ಲೇನಿದೆ?
13,800 ಸರ್ಕಾರಿ ಶಾಲೆ ವಿಲೀನ ಎಂಬ ತಲೆಬರಹದಡಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ನೀಡಿದ್ದ ಹೇಳಿಕೆಗೆ 13800 ಶಾಲೆ ವಿಲೀನ ಅಲ್ಲ ಅಷ್ಟು ಶಾಲೆಗಳ ಹತ್ಯಾಕಾಂಡ, ಸರ್ಕಾರಿ ಶಾಲಾ ಮಕ್ಕಳ ಮಾರಣ ಹೋಮ ಎಂದು ಸರ್ಕಾರದ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ ನಿಮ್ಮ ಅಭಿಪ್ರಾಯವನ್ನು ಸಾಮಾಜಿಕ ಅಂತರ್ಜಾಲದಲ್ಲಿ ಹರಿಬಿಟ್ಟಿದ್ದು ಇದು ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ನೇಲ್ಮನವಿ) ನಿಯಮಗಳು 1957ಕ್ಕೆ ವ್ಯತಿರಿಕ್ತವಾಗಿದ್ದು ಅಲ್ಲದೆ ನಡತೆ ನಿಯಮಗಳು 1966ರ ನಿಯಮ 3ನ್ನು ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿದ್ದು ಈ ಕುರಿತು ನಿಮ್ಮ ಮೇಲೆ ಶಿಸ್ತು ಕ್ರಮ ಏಕೆ ಜರುಗಿಸಬಾರದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಚಿಕ್ಕೋಡಿ ವಿಭಾಗದ ಉಪ ನಿರ್ದೇಶಕ ಎಂ ಎಲ್ ಹಂಚಾಟೆ ಅವರು 2022ರ ಜುಲೈ 22ರಂದು ನೋಟೀಸ್ ಜಾರಿಗೊಳಿಸಿದ್ದಾರೆ.
ಈ ಕಾರಣ ಕೇಳಿ ನೋಟೀಸ್‌ಗೆ ಯಾವುದೇ ಉತ್ತರ ಬಾರದೇ ಇದ್ದಲ್ಲಿ ನಿಮ್ಮ ಹೇಳಿಕೆ ಏನೂ ಇಲ್ಲವೆಂದು ಭಾವಿಸಿ ನಿಮ್ಮ ಮೇಲೆ ಶಿಸ್ತು ಕ್ರಮ ಜರುಗಿಸಬಲಾಗುವುದು ಎಂದೂ ಎಚ್ಚರಿಕೆ ನೀಡಿದ್ದಾರೆ.
ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿಯೇ ಮತ್ತೊಂದು ಅಭಿಪ್ರಾಯವನ್ನು ಹಂಚಿಕೊಂಡಿರುವ ವೀರಣ್ಣ ಮಡಿವಾಳರ ಅವರು ‘ಯಾವುದೇ ಶಾಲೆಯನ್ನ ಮುಚ್ಚಿದಾಗ ಒಬ್ಬ ಪ್ರಾಮಾಣಿಕ ಶಿಕ್ಷಕನಿಗೆ ಸಂತೋಷವಾಗುವುದಿಲ್ಲ, ಬೇಸರವಾಗುತ್ತದೆ, ದುಃಖವಾಗುತ್ತದೆ. ಹದಿಮೂರು ಸಾವಿರದ ಎಂಟುನೂರು ಶಾಲೆಗಳನ್ನ ವಿಲೀನ ಮಾಡುತ್ತೇವೆ ಎಂದಾಗ ನಾನೂ ಕೂಡ ವ್ಯಥೆ ಪಟ್ಟೆ, ಆಳದಿಂದ ನೊಂದೆ, ಎರಡು ಸಾಲು ಬರೆದೆ. ಅದೀಗ ಅಪರಾಧವಾಗಿದೆ. ನನಗೆ ಕಾರಣ ಕೇಳಿ ನೋಟೀಸ್ ನೀಡಿದ್ದಾರೆ,’ ಎಂದು ಹೇಳಿದ್ದಾರೆ.
ಅಲ್ಲದೆ ಕಳೆದ ಹದಿನೈದು ವರ್ಷಗಳಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಸಾಹಿತ್ಯಿಕವಾಗಿ ಆತ್ಮಪೂರ್ವಕ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವೆ. ಫೇಸ್‌ಬುಕ್, ವಾಟ್ಸಪ್ ಮುಂತಾದ ಸಾಮಾಜಿಕ ಜಾಲತಾಣದಿಂದ ಶಿಕ್ಷಣಪ್ರೇಮಿಗಳನ್ನ ಸಂಪರ್ಕಿಸಿ ಹಲವಾರು ಮಕ್ಕಳಿಗೆ, ನೊಂದವರಿಗೆ ಸಹಾಯ ಮಾಡಿದ್ದೇವೆ ಎಂಬ ವಿವರಣೆಯ ಬರಹವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
‘ಅನೇಕ ಸಾರ್ಥಕ ಕೆಲಸ ಮಾಡಿದ್ದೇವೆ. ಸಮಯದ ಹಂಗಿಲ್ಲದೆ ಕನಸಿನ ಶಾಲೆ ರೂಪಿಸಲು ಶ್ರಮಿಸಿದ್ದೇವೆ, ಇಂದು ನನಸಾಗಿಸಿಕೊಂಡಿದ್ದೇವೆ. ನಮ್ಮ ಅಂಬೇಡ್ಕರ್ ನಗರಕ್ಕೆ ಶಾಲೆಯ ಅಭಿವೃದ್ಧಿ ಮನಗಂಡ ನಂತರವೇ ಮೊದಲ ಬಾರಿಗೆ ಬೀದಿ ದೀಪಗಳು ಬೆಳಗಿದವು, ಮನೆ ಮನೆಗೂ ನಲ್ಲಿ ನೀರು ಬಂತು, ನಿಡಗುಂದಿ ಯಿಂದ ನಮ್ಮ ಶಾಲೆವರೆಗೂ ಪಕ್ಕಾ ರಸ್ತೆ ಬಂತು, ಕಳೆದ ಐದು ವರ್ಷಗಳಲ್ಲಿ ಮಕ್ಕಳ ಸಂಖ್ಯೆ ದುಪ್ಪಟ್ಟಾಯಿತು. ಒಬ್ಬ ಮಾಸ್ತರನಿಗೆ ಇದಕ್ಕಿಂತ ಸಂತೋಷ ಸಾರ್ಥಕತೆ ಸಂಭ್ರಮ ಬೇರೆಲ್ಲಿತಾನೆ ಸಿಕ್ಕೀತು,’ ಎಂದೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.